ರಾಷ್ಟ್ರೀಯ

ಜೈಲಿಗೆ ಬಂದ ಪತ್ನಿ, ಪುತ್ರಿಗೆ ಪಾತಕಿ ಯಾಕುಬ್‌ ಮೆಮನ್‌ ಸಾಂತ್ವನ

Pinterest LinkedIn Tumblr

vemonನಾಗ್ಪುರ: ಪತ್ನಿ ರಹಿನ್‌, ಮಗಳು ಜುಬೇದಾ ಹಾಗೂ ಕುಟುಂಬದ ಇತರೆ ಸದಸ್ಯರ ಕಣ್ಣೀರು ಕಂಡು ಮುಂಬಯಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಯಾಕುಬ್‌ ಮೆಮನ್‌ ಸಾಂತ್ವನ ಹೇಳಿದ್ದಾನೆ.

ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಯಾಕುಬ್‌ನನ್ನು ಜುಲೈ 30ರಂದು ಗಲ್ಲಿಗೇರಿಸಲಾಗುತ್ತದೆ ಎಂಬ ಸುದ್ದಿ ಕೇಳಿ ಕಂಗಾಲಾಗಿರುವ ಕುಟುಂಬದ ಸದಸ್ಯರು ನಾಗ್ಪುರದ ಕೇಂದ್ರ ಕಾರಾಗೃಹಕ್ಕೆ ಗುರುವಾರ ಧಾವಿಸಿದ್ದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ ಕುಟುಂಬದ ಸದಸ್ಯರ ಜತೆ ಅರ್ಧ ಗಂಟೆ ಕಾಲ ಮಾತನಾಡಿದ ಯಾಕುಬ್‌ ಮೆಮನ್‌ ಕುಟುಂಬದ ಸದಸ್ಯರಿಗೆ ಅಲ್ಲಾನ ಮೇಲೆ ಭರವಸೆ ಇಡಿ ಎಂದು ಸಾಂತ್ವನ ಹೇಳಿದ್ದಾನೆ.

ಮುಂಬಯಿನಿಂದ ತುರಂತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಾಗ್ಪುರಕ್ಕೆ ಬೆಳಕ್ಕೆ 7ಕ್ಕೆ ಆಗಮಿಸಿದ 42 ವರ್ಷದ ಪತ್ನಿ, 21 ವರ್ಷದ ಪುತ್ರಿ ಹಾಗೂ ಭಾವ ಮೊಹಮ್ಮದ್‌ ಸೊಹೈಲ್‌, ಅತ್ತಿಗೆ ರಿಜ್ವಾನ್‌ ಕಡವಾಲಾ ಮತ್ತು ಇನ್ನೊಬ್ಬ ಸಂಬಂಧಿಕ ಯಾಕುಬ್‌ನನ್ನು ಗುರುವಾರ ಬೆಳಗ್ಗೆ ಭೇಟಿಯಾದರು. ಬಳಿಕ ದುಃಖತಪ್ತರಾಗಿದ್ದ ಕುಟಂಬದ ಸದಸ್ಯರು ಬೆಳಗ್ಗೆ 11.15ಕ್ಕೆ ತಮಗಾಗಿ ಕಾಯುತ್ತಿದ್ದ ಖಾಸಗಿ ವಾಹನವನ್ನೇರಿ ಹಿಂತಿರುಗಿದರು. ಆಗ ಮಾಧ್ಯಮದ ಮಂದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಹೀನ್‌, ಅಲ್ಲಾನ ಮೇಲೆ ಭರವಸೆ ಇದೆ ಎಂದು ಹೇಳಿ ಕಾರನ್ನೇರಿದರು.

ತನ್ನನ್ನು ಕುಟುಂಬದವರು ಭೇಟಿಯಾಗಲು ಬಂದಾಗ ಧೈರ್ಯದಿಂದ ಇರುವಂತೆ ವರ್ತಿಸಿದ್ದ ಯಾಕುಬ್‌, ಹೆಂಡತಿ, ಮಗಳು, ಕುಟುಂಬದವರನ್ನು ಬೀಳ್ಕೊಟ್ಟ ಮೇಲೆ ತನ್ನ ಗಲ್ಲು ಶಿಕ್ಷೆಯ ಕೊಠಡಿಗೆ ವಾಪಸಾದಾಗ ಆತನ ಕಂಗಳಲ್ಲಿ ಕಂಬನಿ ಧಾರಾಕಾರವಿತ್ತು ಎಂದು ಬಂಧೀಖಾನೆಯ ಮೂಲಗಳು ತಿಳಿಸಿವೆ.

ಆತನ ಗಲ್ಲು ಶಿಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿರುವ ವಿಚಾರವನ್ನು ಯಾಕುಬ್‌ ಪರ ವಕೀಲ ಅನಿಲ್‌ ಗೆದಂ ಹೇಳಿದ ಮೇಲೆ ಒಂದಿಷ್ಟು ಆತ್ಮವಿಶ್ವಾಸ ಪಾತಕಿಗೆ ಬಂದಿದೆ ಎನ್ನಲಾಗಿದೆ. ಆತ ಆತ್ಮವಿಶ್ವಾಸದಿಂದ ಇದ್ದಾನೆ ಎಂದು ಅನಿಲ್‌ ಕೂಡ ಸ್ಪಷ್ಟಪಡಿಸಿದ್ದಾರೆ.

Write A Comment