ಮನೋರಂಜನೆ

25 ಲಕ್ಷ ಕನ್ನಡಿಗರೂ ಕನ್ನಡ ಚಿತ್ರ ನೋಡುವುದಿಲ್ಲ: ಸಮೀಕ್ಷೆ ಬೆಳಕಿಗೆ ತಂದ ಅಚ್ಚರಿ ಸತ್ಯ

Pinterest LinkedIn Tumblr

raಹೊಸದಿಲ್ಲಿ: ಬಾಹುಬಲಿ ಚಿತ್ರದ ಅಬ್ಬರದಲ್ಲಿ ಭಾರತದ ಇತರ ಎಲ್ಲ ಭಾಷೆಗಳ ಚಿತ್ರಗಳೂ ಬದಿಗೆ ಸರಿದಿವೆ. ಇದಕ್ಕೆ ಕನ್ನಡವೂ ಹೊರತಲ್ಲ. ರಾಜ್ಯದಲ್ಲಿ ಮುಂದಿನ ಒಂದು ವಾರದವರೆಗೆ ಬಾಹುಬಲಿ ಚಿತ್ರದ ಟಿಕೆಟ್ ಬುಕ್ ಆಗಿವೆ. ಆದರೆ, ಕನ್ನಡದ ವಿಷಯಕ್ಕೆ ಬಂದರೆ ಬೆಚ್ಚಿ ಬೀಳಿಸುವ ಅಂಶವೊಂದು ಬೆಳಕಿಗೆ ಬಂದಿದೆ. ಆರೂಕಾಲು ಕೋಟಿ ಕನ್ನಡಿಗರ ಪೈಕಿ ಥಿಯೇಟರುಗಳಿಗೆ ಹೋಗಿ ಕನ್ನಡ ಸಿನೆಮಾ ನೋಡುವವರ ಸಂಖ್ಯೆ 25 ಲಕ್ಷವನ್ನೂ ಮೀರುವುದಿಲ್ಲ!. ಇದು ಅವರಿವರು ಹೇಳಿದ ಮಾತಲ್ಲ. ಮ್ಯಾನೇಜ್ಮೆಂಟ್ ಪಾಠ ಹೇಳುವ ಮಣಿಪಾಲದ ಖಾಸಗಿ ಸಂಸ್ಥೆಯಿಂದ ನಡೆಸಿರುವ ಸಮೀಕ್ಷೆಯಲ್ಲಿ ಹೊರಬಿದ್ದಿರುವ ಕಟುಸತ್ಯವಿದು. ಈ ಕುರಿತ ಸಂಪೂರ್ಣ ವರದಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಮತ್ತು ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಸರಕಾರವೇ ಆರಂಭ ಮಾಡತೊಡಗಿರುವ ಅಗ್ಗದ ಟಿಕೆಟು ದರಗಳ ಅಮ್ಮ ಚಿತ್ರಮಂದಿರಗಳು ನಮ್ಮ ರಾಜ್ಯಕ್ಕೆ ಮಾದರಿಯಾಗಬೇಕು. ಜನತೆಗೆ ಅಗ್ಗದ ದರದಲ್ಲಿ ಸಾಮೂಹಿಕ ಮನರಂಜನೆ ದೊರೆಯುವ ಜೊತೆಗೆ ಸರಕಾರಕ್ಕೆ ತೆರಿಗೆಯೂ ಹರಿದು ಬರಲಿದೆ ಎಂದು ಅವರು ಸಲಹೆ ಮಾಡಿದ್ದಾರೆ.

ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳೇ ಇಲ್ಲ ಇನ್ನು ದುಬಾರಿ ಟಿಕೆಟ್ ದರ ತೆತ್ತು ಸಿನೆಮಾ ನೋಡುವ ಅರ್ಥಿಕ ಅನುಕೂಲ ಬಹುಸಂಖ್ಯೆಯ ಜನರಿಗೆ ಇಲ್ಲ. ಒಂದು ಟಿಕೆಟಿಗೆ ನಾನ್ನೂರು ರುಪಾಯಿ ಪೀಕಬೇಕಿರುವ ಮಲ್ಟಿಪ್ಲೆಕ್ಸುಗಳತ್ತ ಜನಸಾಮಾನ್ಯರು ತಿರುಗಿ ನೋಡುವಂತೆಯೂ ಇಲ್ಲ. ರಾಜ್ಯಾದ್ಯಂತ ಲಭ್ಯವಿರುವ ಒಟ್ಟು ಥಿಯೇಟರುಗಳು ಕೇವಲ 600. ಕನ್ನಡ ಚಿತ್ರಗಳು ವರ್ಷಕ್ಕೆ 180 ತಯಾರಾದರೆ ಹೆಚ್ಚು ಕಡಿಮೆ 700 ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿವೆ. ತಮಿಳು, ತೆಲುಗು, ಹಿಂದೀ ತಲಾ 150 ಚಿತ್ರಗಳು ಬಿಡುಗಡೆಯಾದರೆ ಇಂಗ್ಲಿಷ್ ಚಿತ್ರಗಳ ಸಂಖ್ಯೆಯೂ ಹೆಚ್ಚುತ್ತ ನಡೆದಿದೆ. ಪಂಜಾಬಿ ಮತ್ತು ಮರಾಠಿ ಚಿತ್ರಗಳೂ ಪ್ರವೇಶ ಪಡೆದಿವೆ.

ನೆರೆ ರಾಜ್ಯಗಳ ಅರ್ಧದಷ್ಟೂ ಇಲ್ಲ ವಿಭಜನಾ ಪೂರ್ವ ಆಂಧ್ರಪ್ರದೇಶದಲ್ಲಿ 2,700 ಮತ್ತು ತಮಿಳುನಾಡಿನಲ್ಲಿ 2,600 ಸಿನೆಮಾ ಥಿಯೇಟರುಗಳಿವೆ. ನಮ್ಮಲ್ಲಿ ಇರೋದೇ 600 ಥಿಯೇಟರುಗಳು. ಇವುಗಳ ಮೇಲೆ ಪರಭಾಷಾ ಚಿತ್ರಗಳದೇ ಪಾರುಪತ್ಯ. ಈ ಥಿಯೇಟರುಗಳಿಗಾಗಿ ಐದಾರು ಪರಭಾಷಾ ಚಿತ್ರಗಳ ಜೊತೆಗೆ ಕನ್ನಡ ಚಿತ್ರಗಳು ಹೊಡೆದಾಡಬೇಕಿರುವ ದುಸ್ಥಿತಿ ನೆಲೆಸಿದೆ. ಈ ಹಿಂದೆ ಒಂದು ಸಾವಿರದಷ್ಟು ಸಿನೆಮಾ ಟೆಂಟುಗಳಿದ್ದವು. ಅವುಗಳಿಂದ ಕನ್ನಡ ಚಿತ್ರಗಳಿಗೆ ಭಾರಿ ಪ್ರೋತ್ಸಾಹ ದೊರೆಯುತ್ತಿತ್ತು. ಬೆಂಕಿ ಅನಾಹುತ ತಡೆಯುವ ಕಾಯಿದೆಯ ಕಾರಣ ಈ ಟೆಂಟುಗಳನ್ನು ಮುಚ್ಚಬೇಕಾಯಿತು.

ಬಾಹುಬಲಿಗೆ ಬಲಿ ಪರಭಾಷಾ ಚಿತ್ರಗಳ ಬಿಡುಗಡೆಗಳ ನಡುವೆ ಕಾದು ಕಾದು ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಬೇಕಿದೆ. ಉದಾಹರಣೆಗೆ ಶುಕ್ರವಾರದಿಂದ ಆರಂಭಗೊಂಡಿರುವ ಬಾಹುಬಲಿ ರಾಜ್ಯದ 400ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿದೆ. ಇದರ ಬೆನ್ನಿಗೆ ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಅಪ್ಪಳಿಸಲಿದೆ. ಬಾಹುಬಲಿ ಅಬ್ಬರಕ್ಕೆ ಹೆದರಿ ಕನ್ನಡ ಚಿತ್ರಗಳು ಮೂಲೆಗೆ ಸೇರಿವೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರಗಳಿಗೂ ಅಸ್ತಿತ್ವದ ಭೀತಿ ಎದುರಾಗಿದೆ.

ಎರಡು ವರ್ಷಗಳ ಕೋರ್ಸ್ ಮುಂದಿನ ಐದು ವರ್ಷಗಳ ಅವಧಿಗೆ ಚಲನಚಿತ್ರ ನೀತಿಯನ್ನು ರೂಪಿಸುವ ಕೆಲಸ ಅಕಾಡೆಮಿಯಿಂದ ಆರಂಭ ಆಗುತ್ತಿದೆ. ನಿರ್ಮಾಪಕರು, ನಿರ್ದೇಶಕರು ಹಾಗೂ ಪ್ರದರ್ಶಕರಿರುವ ಸಮಿತಿ ಈ ನೀತಿಯನ್ನು ರೂಪಿಸಲಿದೆ ಎಂದರು. ಚಲನಚಿತ್ರ ನಟನೆ, ನಿರ್ದೇಶನ, ಚಿತ್ರನಾಟಕ ರಚನೆ ಮುಂತಾದ ವಿಷಯಗಳ ಕುರಿತು ಎರಡು ವರ್ಷಗಳ ಕೋರ್ಸನ್ನು ಮೈಸೂರು ವಿ.ವಿ.ಸಹಯೋಗದೊಡನೆ ಆರಂಭಿಸುವ ಸಿದ್ಧತೆಗಳು ನಡೆದಿವೆ.

ಮೂರು ದಿನಗಳ ಉತ್ಸವ ಕನ್ನಡದ ಇತ್ತೀಚಿನ ಅತ್ಯುತ್ತಮ ಚಲನಚಿತ್ರಗಳ ಮೂರು ದಿನಗಳ ಉತ್ಸವವೊಂದು ಇದೇ ಸೆಪ್ಟಂಬರ್ ಇಲ್ಲವೇ ಡಿಸೆಂಬರಿನಲ್ಲಿ ದಿಲ್ಲಿಯಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯು ಹಮ್ಮಿಕೊಂಡಿರುವ ಈ ಉತ್ಸವದ ಉದ್ದೇಶ ದೇಶದ ರಾಜಧಾನಿಯ ಜನತೆಯಲ್ಲಿ ಕನ್ನಡ ಚಿತ್ರಗಳ ಕುರಿತು ಅರಿವು- ಅಭಿರುಚಿ ಬೆಳೆಸುವುದು ಎಂದು ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.

Write A Comment