ಅಂತರಾಷ್ಟ್ರೀಯ

ಮೋದಿ-ಷರೀಫ್ ಮಾತುಕತೆ ಫಲಪ್ರದ:ಲಖ್ವಿ ಶಿಕ್ಷಿಸಲು ಪಾಕ್ ಸಮ್ಮತಿ

Pinterest LinkedIn Tumblr

mo-ಮೋದಿ-ಷರೀಫ್ ಮಾತುಕತೆ ಫಲಪ್ರದ; ಮುಂಬಯಿ ದಾಳಿ ಸಂಚುಕೋರ ಧ್ವನಿ ಮಾದರಿ ನೀಡಲು ಒಪ್ಪಿಗೆ-

ಯೂಫಾ (ರಷ್ಯಾ): ನಾನಾ ಕಾರಣಗಳಿಂದಾಗಿ ಹಲವು ತಿಂಗಳುಗಳಿಂದ ಮುರಿದು ಬಿದ್ದಿದ್ದ ಭಾರತ-ಪಾಕಿಸ್ತಾನ ಬಾಂಧವ್ಯದಲ್ಲಿ ಹೊಸ ಆಶಾಕಿರಣ ಮೂಡಿದೆ. ಇಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ಯಶಸ್ವಿಯಾಗಿದ್ದು, ರೆಹಮಾನ್ ಲಖ್ವಿ ಸೇರಿ 2008ರ ಮುಂಬಯಿ ದಾಳಿಯ ಎಲ್ಲ ಸಂಚುಕೋರರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಪಾಕ್ ಭರವಸೆ ನೀಡಿದೆ.

ಹಾಗೆಯೇ, ಲಖ್ವಿ ಧ್ವನಿ ಮಾದರಿಯನ್ನು ಭಾರತಕ್ಕೆ ನೀಡಲು, ಭಾರತದ ಬಳಿಯಿರುವ ಲಖ್ವಿ ಧ್ವನಿಮುದ್ರಿಕೆಯನ್ನು ಪಾಕ್‌ಗೆ ನೀಡಲು ಪರಸ್ಪರ ಸಮ್ಮತಿಸಿದ್ದಾರೆ. ಮುಂಬಯಿ ದಾಳಿಯ ವೇಳೆ ದಾಳಿಕೋರರಿಗೆ ಪಾಕ್‌ನಿಂದಲೇ ಸ್ಯಾಟಲೈಟ್ ಫೋನ್ ಮೂಲಕ ದಾಳಿಕೋರರಿಗೆ ಲಖ್ವಿ ನೀಡುತ್ತಿದ್ದ ಆದೇಶಗಳ ಧ್ವನಿಮುದ್ರಿಕೆ ಭಾರತದ ಬಳಿಯಿದ್ದು, ಇದರೊಂದಿಗೆ ಪಾಕ್ ನೀಡುವ ಲಖ್ವಿ ಧ್ವನಿ ಮಾದರಿಯನ್ನು ಹೋಲಿಸಿ ಆತನಿಗೆ ಅತ್ಯುಗ್ರ ಶಿಕ್ಷೆ ಕೊಡಿಸಲು ಸಹಾಯವಾಗಲಿದೆ. ಇಷ್ಟು ದಿನ ಪ್ರಬಲ ಸಾಕ್ಷ್ಯವಿಲ್ಲ ಎಂದು ನುಣುಚಿಕೊಳ್ಳುತ್ತಿದ್ದ ಪಾಕ್, ಈಗ ಧ್ವನಿ ಮಾದರಿ ಖಚಿತವಾದ ಬಳಿಕ ಲಖ್ವಿಗೆ ಉಗ್ರ ಶಿಕ್ಷೆ ನೀಡಲೇಬೇಕಾಗುತ್ತದೆ. ಆದ್ದರಿಂದ, ಇದೊಂದು ಎನ್‌ಡಿಎ ಸರಕಾರದ ವಿಕ್ರಮ ಹೆಜ್ಜೆ ಎಂದೇ ಹೇಳಲಾಗುತ್ತಿದೆ.

ಈ ನಡುವೆ, ಮೋದಿ ಮತ್ತು ಷರೀಫ್ ನಡುವೆ ನಿಗದಿತ ಒಂದು ಗಂಟೆಗೂ ಮೀರಿ ನಡೆದ ಚರ್ಚೆ ವೇಳೆ ಶಾಂತಿ ಸೌಹಾರ್ಧತೆ ಕಾಪಾಡಲು, ಎಲ್ಲ ಬಗೆಯ ಭಯೋತ್ಪಾದನೆ ವಿರುದ್ಧ ಹೋರಾಡಲು ಮತ್ತು ಅಭಿವೃದ್ಧಿಗಾಗಿ ಸಾಮೂಹಿಕ ಹೊಣೆಗಾರಿಕೆ ಹೊರಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.

ಮೋದಿ ಖಡಕ್ ಸೂಚನೆ: ಜಂಟಿ ಹೇಳಿಕೆ ವೇಳೆ ಮುಂಬಯಿ ದಾಳಿ ಪ್ರಕರಣವನ್ನು ಪ್ರಸ್ತಾಪಿಸಿದ ಮೋದಿ, ಪಾಕಿಸ್ತಾನದಲ್ಲಿ ಕೋರ್ಟ್ ವಿಚಾರಣೆ ಎದುರಿಸುತ್ತಿರುವ ಲಖ್ವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು. ಈ ವಿಷಯದಲ್ಲಿ ಪಾಕ್‌ನ ಮೃದು ಧೋರಣೆಯನ್ನು ಖಂಡಿಸಿದರು. ಎರಡೂ ರಾಷ್ಟ್ರಗಳ ನಡುವೆ ಶಾಂತಿಯುತ ಮತ್ತು ಸೌಹಾರ್ಧಯುತ ಬಾಂಧವ್ಯಕ್ಕಾಗಿ ಈ ಕ್ರಮಕ್ಕೆ ಮುಂದಾಗುವಂತೆ ಮೋದಿ ಮನವಿ ಮಾಡಿದರು.

ಕಳೆದ ಏಪ್ರಿಲ್‌ನಲ್ಲಿ ಉಗ್ರ ಲಖ್ವಿಗೆ ಪಾಕ್ ನ್ಯಾಯಾಲಯ ಜಾಮೀನು ನೀಡಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯ ಮತ್ತಷ್ಟು ಹಳಸಿತ್ತು. ಅಲ್ಲದೆ, ಲಖ್ವಿಯನ್ನು ಮತ್ತೆ ಬಂಧಿಸುವವರೆಗೂ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಖಡಕ್ ಆಗಿ ಪಾಕಿಸ್ತಾನಕ್ಕೆ ಹೇಳಿತ್ತು.

ಈ ಹಿಂದೆ 2014ರ ಮೇನಲ್ಲಿ ಮೋದಿ ಪದಗ್ರಹಣ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಬಂದಾಗ ದಿಲ್ಲಿಯಲ್ಲಿ ನವಾಜ್ ಷರೀಪ್ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಆ ನಂತರ ಕಳೆದ ನವೆಂಬರ್‌ನಲ್ಲಿ ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ಶೃಂಗಸಭೆಯಲ್ಲಿ ಉಭಯ ನಾಯಕರು ಭೇಟಿಯಾಗಿದ್ದರಾದರೂ, ಹಳಸಿದ ಸಂಬಂಧದ ಹಿನ್ನೆಲೆಯಲ್ಲಿ ಯಾವುದೇ ಮಾತುಕತೆ ನಡೆಸಿರಲಿಲ್ಲ. ಈ ಬಾರಿ ಮಾತುಕತೆ ವೇಳೆಯೂ ಕಾಶ್ಮೀರ ವಿಚಾರ ಚರ್ಚಾಸ್ಪದವಾಗಿಲ್ಲ ಎಂಬುದು ಗಮನಾರ್ಹ. —

ಪಾಕ್ ಭೇಟಿಗೆ ಒಪ್ಪಿದ ಮೋದಿ: ಇದೇ ವೇಳೆ 2016ರಲ್ಲಿ ಪಾಕ್‌ನಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ಷರೀಫ್ ನೀಡಿದ ಆಹ್ವಾನವನ್ನು ಮೋದಿ ಸ್ವೀಕರಿಸಿದ್ದಾರೆ. ಪ್ರಧಾನಿಯಾದ ಬಳಿಕ ನೆರೆ ಇದು ಮೋದಿ ಅವರ ಚೊಚ್ಚಲ ಪಾಕ್ ಭೇಟಿಯಾಗಲಿದೆ.

ಅಧಿಕಾರಿಗಳ ಮಟ್ಟದ ಸಭೆ: ಜತೆಗೆ ಬಾಂಧವ್ಯ ಬೆಸುಗೆಯ ಭಾಗವಾಗಿ ಸದ್ಯದಲ್ಲೇ ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ದಿಲ್ಲಿಯಲ್ಲಿ ಸಭೆ ನಡೆಸಲಿದ್ದಾರೆ. ಈ ವೇಳೆ ಭಯೋತ್ಪಾದನೆ ನಿಗ್ರಹದ ಸಂಬಂಧ ಮಾತುಕತೆ ನಡೆಸಲಿದ್ದಾರೆ. ಇದಲ್ಲದೆ, ಎರಡೂ ದೇಶಗಳ ಗಡಿ ರಕ್ಷಣಾ ಪಡೆ ಡಿಜಿಗಳು ಮತ್ತು ಮಿಲಿಟರಿ ಕಾರ್ಯಾಚರಣೆ ಮಹಾ ನಿರ್ದೇಶಕರು (ಡಿಜಿಎಂಓ) ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಮೀನುಗಾರರ ಬಿಡುಗಡೆ: ಮಾತುಕತೆಯ ಫಲವಾಗಿ ಎರಡೂ ರಾಷ್ಟ್ರಗಳು ತಮ್ಮ ಅಧೀನದಲ್ಲಿರುವ ಎಲ್ಲಾ ಮೀನುಗಾರರನ್ನೂ ದೋಣಿಗಳ ಸಮೇತ ಬಿಡುಗಡೆಗೊಳಿಸಲು ಒಪ್ಪಿವೆ. ಮುಂದಿನ 15 ದಿನದೊಳಗೆ ಈ ಮೀನುಗಾರರ ಬಿಡುಗಡೆ ಪ್ರಕ್ರಿಯೆ ನಡೆಯಲಿದೆ.

ಭಾರತಕ್ಕೆ ಖಾಯಂ ಸದಸ್ಯತ್ವ: ಭಾರತದ ಬಹುದಿನಗಳ ನಿರೀಕ್ಷೆ ಈಡೇರುವ ಸಮಯ ಸನ್ನಿಹಿತವಾಗಿದೆ. ರಷ್ಯಾ, ಚೀನಾ ಹಾಗೂ ಮಧ್ಯ ಏಷ್ಯಾದ ನಾಲ್ಕು ರಾಷ್ಟ್ರಗಳ ಒಕ್ಕೂಟವಾದ ಶಾಂಘೈ ಸಹಕಾರ ಒಕ್ಕೂಟದಲ್ಲಿ (ಎಸ್‌ಸಿಓ) ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಲಿದೆ. ಮೋದಿ ಸಂಧಾನದಿಂದ ಈ ನಿರೀಕ್ಷೆ ಸಾಕಾರಗೊಳ್ಳುತ್ತಿದೆ.

ಪಾಕಿಸ್ತಾನದಲ್ಲಿ ಅಸಮಾಧಾನದ ಹೊಗೆ: ಈ ಮಧ್ಯೆ, ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಜಂಟಿ ಹೇಳಿಕೆ ವೇಳೆ ಕಾಶ್ಮೀರ ವಿಷಯ ಪ್ರಸ್ತಾಪಿಸದ ನವಾಜ್ ಷರೀಫ್ ವಿರುದ್ಧ ಪಾಕ್ ರಾಜಕಾರಣಿಗಳು ಹಾಗೂ ಮಾಧ್ಯಮಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮೊದಲಿಗೆ ಉಭಯ ದೇಶಗಳನ್ನು ಮಾತುಕತೆಯನ್ನು ಸ್ವಾಗತಿಸಿದ ಪಾಕ್ ನಾಯಕರು ನಂತರ ಮೋದಿ-ಷರೀಫ್ ಸುದ್ದಿಗೋಷ್ಠಿಯಲ್ಲಿ ಕಾಶ್ಮೀರ ಪ್ರಸ್ತಾಪವೇ ಇಲ್ಲದ್ದನ್ನು ಕಂಡು ಕಿಡಿಕಾರಿದ್ದಾರೆ. ಇದೇ ವೇಳೆ ವೇದಿಕೆ ಬಳಿ ಮೋದಿಯ ವರ್ತನೆ ವಿರುದ್ಧವೂ ಗುಡುಗಿದ್ದಾರೆ. ಮೋದಿ ನಡೆಯನ್ನು ಖಂಡಿಸಿರುವ ಪಾಕ್ ಸಂಸದ ರೆಹ್ಮಾನ್ ಮಲಿಕ್, ”ಷರೀಫ್‌ರನ್ನು ಬರಮಾಡಿಕೊಳ್ಳಲು ಮೋದಿ ಎರಡು ಹೆಜ್ಜೆಯಾದರೂ ಮುಂದಿಡಬಹುದಿತ್ತು. ಪಾಕ್ ಪ್ರಧಾನಿ ಬಗ್ಗೆ ಅವರು ರಾಜತಾಂತ್ರಿಕವಾಗಿಯಾದರೂ ಕೊಂಚ ಸೌಜನ್ಯ ತೋರಲಿಲ್ಲ” ಎಂದು ಟೀಕಿಸಿದ್ದಾರೆ. —

ಪಾಕ್‌ನೊಂದಿಗೆ ಮಾತುಕತೆ ಒಂದು ಮಹತ್ವದ ಸಾಧನೆ. ಇದೇ ಮೊದಲ ಬಾರಿಗೆ ಪಾಕಿಸ್ತಾನ ಎಲ್ಲ ವಿಧದ ಭಯೋತ್ಪಾದನೆ ದಮನಕ್ಕೆ ಸಮ್ಮತಿಸಿದೆ. ಎಂ.ಜೆ. ಅಕ್ಬರ್ ಬಿಜೆಪಿ ಮುಖಂಡ —

ಪಾಕ್ ಜತೆಗಿನ ಮಾತುಕತೆಯನ್ನು ಮಹತ್ವದ ಸಾಧನೆ ಎನ್ನುತ್ತಿರುವ ಸರಕಾರದ ಹೇಳಿಕೆ ಹಾಸ್ಯಾಸ್ಪದ. ಭಾರತ ಈಗಾಗಲೇ ಪಾಕ್‌ಗೆ ಲಖ್ವಿ ವಾಯ್ಸ್ ಸ್ಯಾಂಪಲ್ ನೀಡಿದೆ. – ಆನಂದ್ ಶರ್ಮಾ ಕಾಂಗ್ರೆಸ್ ವಕ್ತಾರ

Write A Comment