ಕರ್ನಾಟಕ

ಕಳ್ಳರು ಪೊಲೀಸ್ ಬಲೆಗೆ, ಅಪಾರ ಮಾಲು ವಶ

Pinterest LinkedIn Tumblr

police

ಬೆಂಗಳೂರು, ಜು.11: ಒಂಟಿ ಮಹಿಳೆಯರ ಚಿನ್ನದ ಸರಗಳವು, ಮನೆಕಳ್ಳತನ, ಸುಲಿಗೆ ಮಾಡುತ್ತಿದ್ದ 10 ಮಂದಿ ಕಳ್ಳರನ್ನು ಬಂಧಿಸಿರುವ ಕೇಂದ್ರ ವಿಭಾಗದ ಪೊಲೀಸರು 443 ಗ್ರಾಂ ತೂಕದ ಚಿನ್ನದ ಸರಗಳು ಹಾಗೂ 31 ಮೊಬೈಲ್ ಫೋನ್‌ಗಳು, 1 ಇಂಡಿಕಾ ಕಾರು ಸೇರಿ ಒಟ್ಟು 20 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ 13 ಸರಗಳ್ಳತನ ಸೇರಿ 21 ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ತಿಳಿಸಿದ್ದಾರೆ.

ಈಜಿಪುರದ ಜೆ.ಜೆ. ಚರ್ಚ್ ಸಮೀಪ ಕಳೆದ ಮೇ.11 ರಂದು ನಡೆದುಕೊಂಡು ಹೋಗುತ್ತಿದ್ದ ವೃದ್ದೆ ರಾಜಲಕ್ಷ್ಮಿ ಅವರ ಚಿನ್ನದ ಸರವನ್ನು ಹೋಂಡಾ ಆಕ್ಟೀವಾದಲ್ಲಿ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದರು.

ಆಕ್ಟೀವಾ ಮೋಟಾರ್ ಸೈಕಲ್‍ನ ನಂಬರ್ ಪ್ಲೇಟ್‍ನ ಕೊನೆಯ ನಾಲ್ಕು ಸಂಖ್ಯೆಗಳನ್ನು ಮಹಿಳೆಯ ಜೊತೆಗಿದ್ದ ಮತ್ತೊಬ್ಬ ಮಹಿಳೆಯು ಗುರುತಿಸಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಅಕ್ಟಿವಾದ ಮಾಲೀಕ ಜಯನಗರದ ಮಹಮದ್ ಮೆಹತಾಬ್(25) ಸಿಕ್ಕಿಬಿದ್ದಿದ್ದಾನೆ.

ಆರೋಪಿಯು ತಬ್ರೇಜ್ ಖಾನ್ ನೊಂದಿಗೆ ಸೇರಿ ಬನಶಂಕರಿಯ 2 ವಿವೇಕನಗರದ 6 ಸಂಪಂಗಿರಾಮನಗರ, ಮೈಕೋ ಲೇಔಟ್, ಅಶೊಕನಗರ ಸದಾಶಿವನಗರ ಶಂಕರ ಪುರದ ತಲಾ 1 ಸೇರಿ ಒಟ್ಟು 13 ಕಡೆಗಳಲ್ಲಿ ಒಂಟಿ ಮಹಿಳೆಯ ಚಿನ್ನದ ಸರಗಳನ್ನು ಕಳವು ಮಾಡಿದ್ದನು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಯಿಂದ 410 ಗ್ರಾಂ ತೂಕದ 10 ಲಕ್ಷ 25ಸಾವಿರ ಮೌಲ್ಯದ 14 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. 13 ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಆರೋಪಿ ಜೊತೆಗಿದ್ದ ಮತ್ತೊಬ್ಬ ಆರೋಪಿ ತಬ್ರೇಜ್ ಖಾನ್‌ಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಹೇಳಿದರು.

ಆರೋಪಿಗಳು ನಡೆದುಕೊಂಡು ಹೋಗುವ ಒಂಟಿ ಮಹಿಳೆಯರು, ವಯಸ್ಸಾದ ಮಹಿಳೆಯರನ್ನು ಗುರಿಯನ್ನಾಗಿಸಿಕೊಂಡು ದ್ವಿಚಕ್ರ ವಾಹನಗಳಲ್ಲಿ, ಹೆಲ್ಮೆಟ್ ಧರಿಸಿಕೊಂಡು ಸರಗಳವು ಮಾಡುವಲ್ಲಿ ಕುಖ್ಯಾತಿ ಹೊಂದಿದ್ದಾರೆ. ಬಂಧಿತರು ಹಿಂದೆ ಬಾಣಸವಾಡಿಯ 3 ಕಡೆ ಸರಗಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ವಾಸ ಅನುಭವಿಸಿದ್ದರು, ಅಲ್ಲದೇ ಬಿಡದಿ ಬಳಿ ಜಾನ್ ಎಂಬ ಸೆಕ್ಯೂರಿಟಿ ಗಾರ್ಡ್‌ನನ್ನು ಕೊಲೆ ಮಾಡಿ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ವಿವರಿಸಿದರು.

ಪ್ರಕರಣದಲ್ಲಿ ಮಾಲುಗಳನ್ನು ಸ್ವೀಕರಿಸಿದ ಕೆಜಿಎಫ್ ಮೂಲದ ಖಾನ್ ಟೂಲ್ಸ್ ಅಂಗಡಿಯ ಮಾಲೀಕ ಅಮ್ಜದ್ ಹಾಗೂ ಗೋರಿಪಾಳ್ಯದ ಮಹದೇವನನ್ನು ಬಂಧಿಸಲಾಗಿದೆ ಎಂದರು.

ಸಂಪಂಗಿರಾಮನಗರ

ಹಗಲಿನ ವೇಳೆಯಲ್ಲಿ ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿಕೊಂಡು ಮನೆ ಒಳಗೆ ಪ್ರವೇಶ ಮಾಡಿ ಕಳವು ಮಾಡುವುದು ಹಾಗೂ ಆಟೋ ಮತ್ತು ಕಾರುಗಳಲ್ಲಿ ಕುಳಿತು ನಿದ್ರೆ ಮಾಡುವ ವ್ಯಕ್ತಿಗಳ ಜೇಬಿನಲ್ಲಿದ್ದ ಹಾಗೂ ಕಾರಿನ ಡ್ಯಾಶ್ ಬೋರ್ಡ್ ಮೇಲೆ ಇಟ್ಟಿರುವ ಮೊಬೈಲ್‍ಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಂಪಂಗಿರಾಮನಗರ ಪೊಲೀಸರು 4 ಲಕ್ಷ ಮೌಲ್ಯದ 12 ಮೊಬೈಲ್‍ಗಳು ಸೇರಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಬಂಧನದಿಂದ ಹಲಸೂರುಗೇಟ್, ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಮನೆ ಕಳವು ಪ್ರಕರಣಗಳು ಪತ್ತೆಯಾಗಿದೆ.

ಸದಾಶಿವನಗರ

ಬಿ.ಹೆಚ್.ಇ.ಎಲ್ ಸರ್ಕಲ್ ಬಳಿ ಕಾರಿನಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹಣ, ಆಭರಣ ದೋಚಲು ಹೊಂಚುಹಾಕುತ್ತಿದ್ದ ಆಂದ್ರಪ್ರದೇಶ ಮೂಲದ ನವೀನ(19), ಸತೀಶ್(21) ಚಿಕ್ಕಬಳ್ಳಾಪುರ ಮೂಲದ ಸುರೇಶ (42) ರವೀಂದ್ರ ಕುಮಾರ್(23)ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಆರೋಪಿಗಳು ಬಸ್‌ ನಿಲ್ದಾಣಗಳಲ್ಲಿ ಮತ್ತು ರಸ್ತೆಯಲ್ಲಿ ಪ್ರಯಾಣಿಕರಂತೆ ನಿಂತು ಮೊಬೈಲ್ ಪೋನ್‍ಗಳನ್ನು ಸಾರ್ವಜನಿಕರಿಂದ ಸುಲಿಗೆ ಮಾಡುವುದು ಮತ್ತು ಬಸ್‍ಗಳಲ್ಲಿ ಪ್ರಯಾಣಿಕರಂತೆ ಸಂಚರಿಸಿ ಸಾರ್ವಜನಿಕರಿಂದ ಮೊಬೈಲ್ ಫೋನ್‍ಗಳನ್ನು ಕಳುವು ಮಾಡಿ ಕಾರಿನಲ್ಲಿ ಪರಾರಿಯಾಗುತ್ತಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.ಮತ್ತೊಬ್ಬ ಆರೋಪಿ ಶಿವಾಜಿತಲೆ ಮರೆಸಿಕೊಂಡಿದ್ದಾನೆ.

ಎಸ್.ಜೆ.ಪಿ.ರಸ್ತೆಯ ಟೆಂಪೋ ಸ್ಟ್ಯಾಂಡ್ ಹಿಂಭಾಗ ಸುಮಾರು 3 ರಿಂದ 4 ಜನರ ಗುಂಪು ದರೋಡೆ ಸಜ್ಜಾಗಿದ್ದ ಅಶ್ರಫ್ (26), ಪುರುಷೋತ್ತಮ್(25), ರಿಜ್ವಾನ್(25) ಹಾಗೂ ರಿಯಾಜ್ (32)ನನ್ನು ಬಂಧಿಸಿ 33 ಗ್ರಾಂ ತೂಕದ 3 ಚಿನ್ನದ ಸರಗಳು, ಒಂದು ಜೊತೆ ಚಿನ್ನದ ಕಿವಿ ಓಲೆಗಳು ಹಾಗೂ 9 ಮೊಬೈಲ್ ಫೋನ್‍ಗಳು ಸೇರಿ 1ಲಕ್ಷ 50, ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ,ಡಿಸಿಪಿ ಸಂದೀಪ್‍ಪಾಟೀಲ್ ಅವರಿದ್ದರು.

Write A Comment