ಕರ್ನಾಟಕ

ರಾಜ್ಯದಲ್ಲಿ ನಿಲ್ಲದ ರೈತರ ಆತ್ಮಹತ್ಯೆ : ಇಂದು ಮೂವರು ರೈತರು ಅತ್ಮಹತ್ಯೆ

Pinterest LinkedIn Tumblr

Suicide

ಬೆಂಗಳೂರು, ಜು.11: ಬೆಳೆನಷ್ಟ, ಸಾಲಬಾಧೆ ಹಾಗೂ ಆರ್ಥಿಕ ಸಂಕಷ್ಟದಿಂದ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಎರಡು ಕಡೆ ಇಬ್ಬರು ಹಾಗೂ ಗಡಿ ಭಾಗದ ಚಾಮರಾಜನಗರ ಜಿಲ್ಲೆಯಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಈವರೆಗೆ ಸುಮಾರು 40ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲಿಯೇ ಇದರ ಬಗ್ಗೆ ವರದಿ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರೂ ಕೂಡ ಸದ್ಯದಲ್ಲೇ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಕೆಲವರನ್ನು ರಾಜ್ಯಕ್ಕೆ ಕಳುಹಿಸಿದ್ದು, ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುವಂತೆ ಹೇಳಿದ್ದಾರೆಂದು ಗೊತ್ತಾಗಿದೆ. ಇದಕ್ಕೆ ಇಂಬು ನೀಡುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಅವರು ಇಂದು ಮಂಡ್ಯಾ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ ಅವರಿಂದ ಮಾಹಿತಿ ಕಲೆಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಂಕಷ್ಟದಲ್ಲಿರುವ ರೈತರಿಗೆ ತಾತ್ಕಾಲಿಕ ಪರಿಹಾರದ ಪ್ಯಾಕೇಜ್‌ಗಳನ್ನು ಘೋಷಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆಂದು ಹೇಳಲಾಗಿದೆ.

ಮಂಡ್ಯ ವರದಿ:
ಕೆಆರ್‌ಪೇಟೆ ತಾಲೂಕಿನ ಐಪನಹಳ್ಳಿ ಗ್ರಾಮದ ನಿವಾಸಿ ರಾಮಕೃಷ್ಣ (35) ಹಾಗೂ ಕೆಂಪಿಕೊಪ್ಪಲು ಗ್ರಾಮದ ನಿವಾಸಿ ಚಿನ್ನಸ್ವಾಮಿ (45) ಆತ್ಮಹತ್ಯೆ ಮಾಡಿಕೊಂಡ ರೈತರು. ರಾಮಕೃಷ್ಣ ತನ್ನ 3 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲು ವಿವಿಧ ಬ್ಯಾಂಕ್‌ಗಳಲ್ಲಿ ಲಕ್ಷಾಂತರ ರೂ. ಸಾಲ ಮಾಡಿದ್ದರು. ಕಬ್ಬಿಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಮನನೊಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಕೆಂಪಿಕೊಪ್ಪಲಿನ ಚಿನ್ನಸ್ವಾಮಿ ತನ್ನ ಎರಡು ಎಕರೆ ಜಮೀನಿನಲ್ಲಿ ಬದನೆ ಬೇಸಾಯ ಮಾಡಿದ್ದರು. ಹುಳು ಬಿದ್ದು ಬದನೆ ಸಂಪೂರ್ಣ ನಾಶವಾಗಿತ್ತು. ಕಬ್ಬು ಬೇಸಾಯದಿಂದಲೂ ನಷ್ಟ ಸಂಭವಿಸಿತ್ತು. ವ್ಯವಸಾಯ ಮಾಡಲು ಗ್ರಾಮದಲ್ಲಿ ಲಕ್ಷಾಂತರ ರೂ. ಕೈಸಾಲ ಮಾಡಿದ್ದರು. ಬೆಳೆ ಸರಿಯಾಗಿ ಕೈಸೇರದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಮನನೊಂದು ಇಂದು ಮುಂಜಾನೆ ತನ್ನ ಜಮೀನಿನ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತನ್ನ ಗಂಡ ವಿಷ ಕುಡಿದು ಸಾವನ್ನಪ್ಪಿದ ವಿಷಯ ತಿಳಿದ ಪತ್ನಿ ಲತಾಮಣಿ (35) ಯೂ ಕೂಡ ನಿದ್ರೆ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಕೆಆರ್‌ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎರಡು ಪ್ರತ್ಯೇಕ ಪ್ರಕರಣಗಳು ಕೆಆರ್‌ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಕಿಕ್ಕೇರಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚಾಮರಾಜನಗರ ವರದಿ :ವಿವಿಧ ಬ್ಯಾಂಕ್‌ಗಳಲ್ಲಿ ಬೆಳೆಗಾಗಿ ಮಾಡಿದ್ದ ಸಾಲದಿಂದ ನೊಂದು ಕ್ರಿಮಿನಾಶಕ ಸೇವಿಸಿ ರೈತನೊಬ್ಬ ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ತಾಲೂಕಿನ ರಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಗಂಗವಾಡಿ ಗ್ರಾಮದ ನಿವಾಸಿ ಶಿವರುದ್ರೇಗೌಡ (32) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ತನ್ನ ಜಮೀನಿನಲ್ಲಿ ಕಬ್ಬು ಹಾಗೂ ಮತ್ತಿತರ ಬೆಳೆ ಬೆಳೆಯಲು ಬ್ಯಾಂಕ್‌ನಲ್ಲಿ 60 ಸಾವಿರ ರೂ. ಹಾಗೂ ಸ್ಥಳೀಯರಿಂದ 3 ಲಕ್ಷ ರೂ. ಕೈಸಾಲ ಮಾಡಿದ್ದ ಎಂದು ತಿಳಿದುಬಂದಿದೆ.

ಫಸಲು ಸರಿಯಾಗಿ ಕೈಸೇರದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ತೋಟದ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment