ಮನೋರಂಜನೆ

ಬಾಹುಬಲಿಗೆ ಪ್ರೇಕ್ಷಕರ ಬಹು ಪರಾಕ್‌

Pinterest LinkedIn Tumblr

baahubaliಹೈದರಾಬಾದ್‌: ಬಹು ನಿರೀಕ್ಷಿತ ಬಹುಭಾಷೆಯಲ್ಲಿ ಬಿಡುಗೆಯಾದ ಬಾಹುಬಲಿ ಚಿತ್ರ ವಿಶ್ವದ ನಾನಾ ಭಾಗಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.

ದೇಶದಲ್ಲೇ ಅತಿ ಹೆಚ್ಚು ಬಜೆಟ್‌ನ ಸಿನಿಮಾ ಎಂಬ ಹೆಗ್ಗಳಿಕೆಯೂ ಇರುವುದರಿಂದ ಸಹಜವಾಗಿಯೇ ಬಾಹುಬಲಿ ಸಿನಿಮಾದ ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗಿತ್ತು. ಚಿತ್ರದ ಬಜೆಟ್‌ 200 ಕೋಟಿಗೂ ಅಧಿಕ ಎನ್ನಲಾಗಿದ್ದು, ದೊಡ್ಡ ತಾರಾಗಣವನ್ನು ಹೊಂದಿದೆ.

ಪ್ರಭಾಸ್‌, ರಾಣಾ ದುಗ್ಗಬಟಿ, ರಮ್ಯಾಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ ಮುಂತಾದವರ ತಾರಾಗಣವಿರುವ ಬಾಹುಬಲಿ ಮೊದಲ ದಿನ ಜಗತ್ತಿನ 4 ಸಾವಿರಕ್ಕೂ ಅಧಿಕ ಸಿನಿಮಾ ಮಂದಿರಗಳಲ್ಲಿ ತೆರೆ ಕಂಡಿತ್ತು. ಕಳೆದ ಮೂರು ವರ್ಷಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಕುತೂಹಲ ಕೆರಳಿಸುತ್ತಲೇ ಬಂದಿದ್ದ ನಿರ್ದೇಶಕ ರಾಜಮೌಳಿ ಸಿನಿ ಪ್ರಿಯರನ್ನು ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿದ್ದರು.

ಇದೀಗ ಅವರ ನಿರೀಕ್ಷೆಯಂತೆ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಿನಿಪ್ರಿಯ ಪ್ರೇಕ್ಷಕರು ಶುಕ್ರವಾರ ಬೆಳಗ್ಗಿನಿಂದಲೇ ಸಿನಿಮಾ ಮಂದಿರಗಳಿಗೆ ಲಗ್ಗೆ ಇಟ್ಟಿದ್ದರು. ಆ ಎರಡೂ ರಾಜ್ಯಗಳ ಪ್ರೇಕ್ಷಕರನ್ನು ನಿಯಂತ್ರಿಸಲು ನಾನಾ ಸಿನಿಮಾ ಮಂದಿರಗಳ ಬಳಿ ಪೊಲೀಸರು ಬೆಳಗ್ಗಿನಿಂದಲೇ ಹರಸಾಹಸ ಪಟ್ಟರು.

ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಿದ ಪ್ರೇಕ್ಷಕರು, ಸಿನಿಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಸ್ಥಳದಲ್ಲೇ ಟಿಕೆಟ್‌ ಖರೀದಿಸುವವರ ಅವಕಾಶವನ್ನು ಕಸಿದರು. ಸಿನಿಮಾ ಮಂದಿರಗಳಲ್ಲಿ ಇಡೀ ದಿನ ಸರತಿ ಸಾಲಲ್ಲಿ ಜನ ಟಿಕೆಟ್‌ ಖರೀದಿಸಲು ಶ್ರಮಿಸಿದರು. ಕೆಲವೆಡೆ ಆನ್‌ಲೈನ್‌ ಬುಕಿಂಗ್‌ ಮಾಡುವ ಕಂಪ್ಯೂಟರ್ ಸರ್ವರ್‌ಗಳು ಜಾಂ ಆಗಿ ಪ್ರೇಕ್ಷಕರು ಪರದಾಡಿದರು.

ಬಾಹುಬಲಿ ಸಿನಿಮಾ ನಿರ್ದೇಶಕ ಎಸ್‌.ಎಸ್.ರಾಜಮೌಳಿ ಹಾಗೂ ಸಿನಿಮಾ ತಂಡದವರು ಹೈದರಾಬಾದ್‌ನ ಸಿನಿಮಾ ಮಂದಿರಕ್ಕೆ ಬೆಳಗ್ಗೆ ಭೇಟಿ ನೀಡಿದರು. ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ನಯವಾಗಿ ನಿರಾಕರಿಸಿದರು.

ದಿಗ್ಗಜರಾದ ಅಮಿತಾಬ್‌ ಬಚ್ಚನ್‌ ಸೇರಿದಂತೆ ಸಿನಿಮಾ ಕ್ಷೇತ್ರದ ಹಲವರು ಬಾಹುಬಲಿಗೆ ಬಹು ಪರಾಕ್‌ ಹೇಳಿದ್ದಾರೆ.

Write A Comment