ಅಂತರಾಷ್ಟ್ರೀಯ

ಕತ್ತೆ ಕತ್ತೆ ಎಂದು ಇನ್ನುಮುಂದೆ ಮೂದಲಿಸಬೇಡಿ..ಕತ್ತೆ ಹಾಲಿನಿಂದ ಸೌಂದರ್ಯ ವೃದ್ಧಿ ! ವಿಶ್ವದಾದ್ಯಂತ ಹೆಚ್ಚುತಿದೆ ಕತ್ತೆ ಹಾಲಿಗೆ ಬೇಡಿಕೆ !

Pinterest LinkedIn Tumblr

donkey

ಕತ್ತೆ… ಈ ಹೆಸರು ದಿನನಿತ್ಯ ಎಲ್ಲೋ ಒಂದು ಕಡೆ ಒಮ್ಮೆಯಾದರೂ ಕಿವಿಗೆ ಅಪ್ಪಳಿಸುತ್ತದೆ. ‘ಏ ಕತ್ತೆ ಬಾರೋ ಇಲ್ಲಿ’… ಹೀಗೆ ಬಹಳಷ್ಟು ರೂಪದಲ್ಲಿ ಈ ಪದ ಸದಾ ಬಳಕೆಯಾಗುತ್ತದೆ. ಆದರೆ, ಕತ್ತೆಯಿಂದ ಮನುಷ್ಯನಿಗೆ ಲಭಿಸುತ್ತಿರುವ ಉಪಯೋಗಗಳ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಅನಾದಿ ಕಾಲದಿಂದಲೂ ಇದನ್ನು ಸರಕು ಸಾಗಾಣಿಕೆಗೆ ಬಳಸುತ್ತಲೇ ಬಂದಿದ್ದಾರೆ.
ಮಡಿವಾಳರಿಗಂತೂ ಈ ಪ್ರಾಣಿಯು ಒಂದು ವರವೇ ಸರಿ. ಹಳ್ಳಿಗಾಡು ಪ್ರದೇಶಗಳಲ್ಲಿ ಈಗಲೂ ಬಟ್ಟೆ ಸಾಗಿಸಲು ಮತ್ತು ಉಪ್ಪಾರರು ಉಪ್ಪು ಮಾರಾಟ ಮಾಡಲು ಕತ್ತೆಗಳನ್ನೇ ಬಳಸುತ್ತ ಬಂದಿದ್ದಾರೆ. ಇಂತಹ ಮಹದುಪಕಾರಿ ಕತ್ತೆಯ ಬಗ್ಗೆ ಎಲ್ಲರಿಗೂ ಒಂದು ರೀತಿಯ ನಿರ್ಲಕ್ಷ್ಯ ಭಾವನೆ. ಅಷ್ಟೇ ಅಲ್ಲ, ಯಾರನ್ನಾದರೂ ತೆಗಳಬೇಕಾದರೆ ಅದರ ಹೆಸರು ಹೇಳಿ ಅವಮಾನಿಸುತ್ತಾರೆ. ಈ ಎಲ್ಲದಕ್ಕಿಂತಲೂ ಮುಖ್ಯವಾಗಿ ಕತ್ತೆ ಹಾಲು ಬಹಳ ಹಿಂದಿನಿಂದಲೂ ಮನುಷ್ಯನ ಆರೋಗ್ಯಕ್ಕೆ ಹಿತಕರವಾಗಿ ಬಳಕೆಯಾಗುತ್ತಿದೆ.

ರಾಜ-ಮಹಾರಾಜರುಗಳು ಕತ್ತೆ ಹಾಲಿನಲ್ಲೇ ಸ್ನಾನ ಮಾಡಿ ತಮ್ಮ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಳಂತೆ. ಇನ್ನು ರಾಣಿ-ಮಹಾರಾಣಿಯರ ಬಗ್ಗೆ ಹೇಳಲೇಬೇಕಾಗಿಲ್ಲ. ಹಲವರು ಈ ಹಾಲಿನಲ್ಲೇ ದಿನನಿತ್ಯ ಕಾಲ ಕಳೆಯುತ್ತಿದ್ದಳು ಎಂದು ಹೇಳಲಾಗುತ್ತದೆ.

ವಿಶ್ವದ ಅಪ್ರತಿಮ ಸುಂದರಿ ಕ್ಲಿಯೋಪಾತ್ರಾ ಸಹ ತನ್ನ ಸೌಂದರ್ಯ ವೃದ್ಧಿಗೆ ಕತ್ತೆ ಹಾಲಿನಲ್ಲೇ ಸ್ನಾನ ಮಾಡುತ್ತಿದ್ದರಂತೆ. ಅಷ್ಟೇ ಅಲ್ಲ , ಸಾಕಷ್ಟು ಸಮಯವನ್ನು ಕತ್ತೆ ಹಾಲಿನ ಟಬ್‌ನಲ್ಲಿ ಕಳೆಯುತ್ತಿದ್ದರು ಎಂಬ ಮಾತುಗಳೂ ಇವೆ. ಕ್ಲಿಯೋಪಾತ್ರಾಗೆ 700ಕ್ಕೂ ಅಧಿಕ ಕತ್ತೆಗಳಿಂದ ಹಾಲನ್ನು ಸಂಗ್ರಹಿಸಿ ನೀಡಲಾಗುತ್ತಿತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸಂಗತಿ. ಅದೇನೇ ಇರಲಿ, ಇತ್ತೀಚೆಗೆ ನಶಿಸುತ್ತಿರುವ ಕತ್ತೆಗಳ ಸಂತತಿಯನ್ನು ಅಭಿವೃದ್ಧಿಪಡಿಸುವುದು ಇದೀಗ ಅನಿವಾರ್ಯ ಎಂಬಂತೆ ಕಾಣುತ್ತಿದೆ. ವಿದೇಶಗಳಲ್ಲಿ ಇಂದಿಗೂ ಕತ್ತೆಗಳನ್ನು ಸಾಕಲಾಗುತ್ತದೆ. ಭಾರತದಲ್ಲಿ ಹಸು ಸಾಕಾಣಿಕೆಗೆ ಮಹತ್ವ ನೀಡಿದಂತೆ ವಿದೇಶಗಳಲ್ಲಿ ಕೆಲವೆಡೆ ಕತ್ತೆ ಸಾಕಾಣಿಕೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ.

ಕತ್ತೆ ಹಾಲಿನಿಂದ ಸೌಂದರ್ಯವರ್ಧಕ ವಸ್ತುಗಳನ್ನು ತಯಾರಿಸುವುದು ಇದಕ್ಕೆ ಪ್ರಮುಖ ಕಾರಣ. ವಿಶ್ವದ ಮಾರುಕಟ್ಟೆಯಲ್ಲಿ ಇಂದು ಈ ವಸ್ತುಗಳಿಗೆ ಭಾರೀ ಬೇಡಿಕೆಯಿದೆ. ಕತ್ತೆ ಹಾಲಿನಲ್ಲಿರುವ ಅತಿಯಾದ ಪೋಷಕಾಂಶಗಳು ಈ ಬೇಡಿಕೆಗೆ ಪ್ರಮುಖ ಕಾರಣ. ಪ್ರತಿ 100ಗ್ರಾಂ ಮಹಿಳೆಯರ ಎದೆ ಹಾಲಿನಲ್ಲಿ 0.9 ರಿಂದ 1.7 ಗ್ರಾಂ ಪ್ರೊಟೀನ್ ಅಂಶ ಲಭಿಸಿದರೆ, ಕತ್ತೆ ಹಾಲಿನಲ್ಲಿ 1.5 ರಿಂದ 2.8 ಗ್ರಾಂ ಪ್ರೊಟೀನ್ ಸಿಗಲಿದೆ. ಇನ್ನು ಈ ಹಾಲಿನಲ್ಲಿ ಕೊಬ್ಬಿನಂಶವು ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಬಾಣಂತಿ ಹಾಲಿನಲ್ಲಿ 3.5 ರಿಂದ 4ಗ್ರಾಂ ಕೊಬ್ಬಿನ ಅಂಶವಿದ್ದರೆ, ಕತ್ತೆ ಹಾಲಿನಲ್ಲಿ ಕೇವಲ 0.5 ರಿಂದ 2ಗ್ರಾಂ ಕೊಬ್ಬಿನಂಶ ಅಡಗಿರುತ್ತದೆ.

ಇನ್ನು ದೇಹಕ್ಕೆ ಅತ್ಯಗತ್ಯವಾಗಿ ಅದರಲ್ಲೂ ಎಳೆ ಮಕ್ಕಳ ಬೆಳವಣಿಗೆಗೆ ತೀರಾ ಅನಿವಾರ್ಯವಾಗಿರುವ ಲ್ಯಾಕ್ಟೋಸ್ ಅಂಶ ಕತ್ತೆ ಹಾಲಿನಲ್ಲಿ ಬಾಣಂತಿ ಹಾಲಿನಷ್ಟೆ ಇರುತ್ತದೆ. ಹಾಗಾಗಿಯೇ ಇಂದು ಕತ್ತೆ ಹಾಲಿಗೆ ಸಾಕಷ್ಟು ಬೇಡಿಕೆ ಹೆಚ್ಚುತ್ತಿದೆ. ಆಧುನಿಕ ಯುಗದಲ್ಲಿ ಮಹಿಳೆಯರು ತಮ್ಮ ಸೌಂದರ್ಯ ಕಾಪಾಡಿಕೊಳ್ಳುವ ಸಲುವಾಗಿ ಎಳೆ ಮಕ್ಕಳಿಗೆ ಎದೆ ಹಾಲು ಉಣಿಸುವ ಪ್ರಕ್ರಿಯೆಯಿಂದ ದೂರ ಸರಿಯುತ್ತಿದ್ದಾರೆ. ಹಾಗಾಗಿ ಇಂದು ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡಿರುವ ಕತ್ತೆ ಸಾಕಾಣಿಕೆದಾರರು ಪ್ರತಿನಿತ್ಯ ಹಾಲು ನೀಡುವ ಕತ್ತೆಗಳನ್ನು ಗಲ್ಲಿ ಗಲ್ಲಿಗಳಲ್ಲಿ ಮತ್ತು ರಸ್ತೆ ರಸ್ತೆಗಳಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ.

ಪ್ರತಿ ಲೀಟರ್‌ಗೆ ಭಾರೀ ಹಣವನ್ನು ತೆತ್ತು ತಮ್ಮ ಮಕ್ಕಳಿಗೆ ಹಲವರು ಈ ಹಾಲನ್ನು ಉಣಿಸುತ್ತಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾದ ಅಂಶವೆಂದರೆ ಕತ್ತೆ ಹಾಲು ಹಲವು ಕಾಯಿಲೆಗಳಿಗೆ ರೋಗ-ನಿರೋಧಕ ಅಂಶವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸುಳ್ಳಲ್ಲ. ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕುಂಠಿತಗೊಂಡಿದ್ದರೆ ಅದನ್ನು ವೃದ್ಧಿಸುವ ಸಲುವಾಗಿ ಕತ್ತೆ ಹಾಲು ಕುಡಿಸುವ ಮಂದಿ ಇತ್ತೀಚೆಗೆ ಬೆಂಗಳೂರಿನಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಕೆಲವರು ಇದನ್ನು ನಂಬಿಕೆ ಎಂದು ಹೀಗಳೆಯುತ್ತಾರೆ. ಆದರೆ, ಇದು ವಾಸ್ತವ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ , ಕೆಲವು ಮಹಿಳೆಯರು ಇಂದು ಪ್ರತಿದಿನ ಐದರಿಂದ ಆರು ಬಾರಿ ಕತ್ತೆ ಹಾಲಿನಿಂದ ಮುಖ ತೊಳೆದುಕೊಳ್ಳುವ ಮೂಲಕ ಅದರ ಹೊಳಪನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ನ್ಯೂರೋ ಚಕ್ರವರ್ತಿಯ ಪತ್ನಿ ಪೊಪೀಯಾ ಕತ್ತೆ ಹಾಲನ್ನು ಪ್ರಥಮ ಬಾರಿಗೆ ಬಳಸುವ ಮೂಲಕ ಇಡೀ ಸಮಾಜಕ್ಕೆ ಅದರ ಮಹತ್ವವನ್ನು ಸಾರಿದ ಬಗ್ಗೆ ದಾಖಲೆಗಳಿವೆ. ಕತ್ತೆ ಹಾಲಿನಲ್ಲೇ ಈಕೆ ಸ್ನಾನ ಮಾಡುತ್ತಿದ್ದಳು ಎಂದು ಸಹ ಇತಿಹಾಸಕಾರರು ತಿಳಿಸಿದ್ದಾರೆ.

ನೆಪೋಲಿಯನ್ ಸಹೋದರಿ ತನ್ನ ಚರ್ಮದ ಸೌಂದರ್ಯ ವೃದ್ಧಿಗೆ ಕತ್ತೆ ಹಾಲು ಬಳಸುತ್ತಿದ್ದರು. ಹಾಗಾಗಿ ತದನಂತರ ಸಂಶೋಧಕರು ಕತ್ತೆಗಳ ಹಾಲನ್ನು ಸೌಂದರ್ಯ ವರ್ಧಕ ಸಾಧನಗಳಲ್ಲಿ ಬಳಸಲು ಆರಂಭಿಸಿದರು. ಇದು ಅತ್ಯುತ್ತಮ ಚಿಕಿತ್ಸಾ ಗುಣ ಹೊಂದಿದೆ ಎಂಬುದು ಹಲವರ ವಾದ. ವೈದ್ಯ ಲೋಕದ ತಂದೆ ಎಂದೇ ಬಣ್ಣಿಸಲ್ಪಡುವ ಹಿಪೋಕ್ರೇಟ್ಸ್ ಪ್ರಕಾರ, ಕತ್ತೆ ಹಾಲು ನಾನಾ ರೀತಿಯ ರೋಗಗಳ ವಾಸಿಗೆ ಅತ್ಯುತ್ತಮ ಔಷಧ. ಕರುಳು ಸಂಬಂಧಿ ಕಾಯಿಲೆ, ಸೋಂಕು ಕಾಯಿಲೆಗಳು, ಜ್ವರ, ಮೂಗಿನಲ್ಲಿ ರಕ್ತ ಸುರಿಯುವಿಕೆ, ವಿಷ ಮತ್ತು ಹುಣ್ಣುಗಳ ಸಮಸ್ಯೆ ಪರಿಹಾರಕ್ಕೆ ಕತ್ತೆ ಹಾಲು ಸೇವನೆ ದಿವ್ಯ ಔಷಧಿ ಎಂಬುದು ಹಿಪೋಕ್ರೇಟ್ ಹೇಳಿಕೆ.

ಹಲ್ಲುಗಳು ತಮ್ಮ ಶಕ್ತಿ ಕಳೆದುಕೊಂಡು ಸಡಿಲಗೊಂಡ ಸಂದರ್ಭದಲ್ಲಿ ಕತ್ತೆ ಹಾಲು ಸೇವನೆಯಿಂದ ಅವು ಮತ್ತೆ ತಮ್ಮ ಹಿಂದಿನ ಗುಣ ಪಡೆಯುತ್ತವೆ ಎಂದು ಹೇಳಲಾಗಿದೆ. ಹೀಗೆ ನಾನಾ ವಿಧಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಅದರಲ್ಲೂ ಮಹಿಳೆಯರ ಸಾಕಷ್ಟು ಸಮಸ್ಯೆಗಳಿಗೆ ಕತ್ತೆ ಹಾಲು ಅತ್ಯುತ್ತಮ ಪರಿಹಾರ ಎಂಬುದು ಈಗಾಗಲೇ ಸಾಬೀತಾಗಿದೆ. ಕತ್ತೆ ಹಾಲಿನಲ್ಲಿ ರೋಗನಿರೋಧಕ ಗುಣಗಳು ಅಧಿಕವಾಗಿವೆ. ಬೊಜ್ಜು ಕರಗಿಸಲು ಈ ಹಾಲು ತುಂಬಾ ಉಪಕಾರಿ. ಲಂಡನ್‌ನಲ್ಲಿ 19ನೆ ಶತಮಾನದಲ್ಲಿ ಹಸು ಹಾಲಿನಷ್ಟೇ ಕತ್ತೆ ಹಾಲಿಗೂ ಬೇಡಿಕೆ ಹೆಚ್ಚಾಗಿತ್ತು. ಒಟ್ಟಾರೆ ಕತ್ತೆ ಹಾಲಿನಿಂದ ಮಾನವನಿಗೆ ಸಾಕಷ್ಟು ಲಾಭಗಳು ಲಭ್ಯವಾಗುತ್ತಿವೆ. ಈ ನಿಟ್ಟಿನಲ್ಲಿ ಕತ್ತೆ ಸಾಕಾಣಿಕಾ ಕೇಂದ್ರಗಳು ಹೆಚ್ಚಾಗುತ್ತಿವೆ. ಅಷ್ಟೇ ಅಲ್ಲ , ಇದೊಂದು ದೊಡ್ಡ ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿದೆ. ಕತ್ತೆಗಳೆಂದರೆ ಮೂಗು ಮುರಿಯುವ ಮಂದಿಯೂ ಇತ್ತೀಚೆಗೆ ಒಮ್ಮೆ ಇವುಗಳ ಹಾಲಿನ ರುಚಿ ನೋಡಬೇಕು ಎಂದು ಹಂಬಲಿಸುತ್ತಿದ್ದಾರೆ. ಹೆಚ್ಚಾಗಿ ಈ ಹಾಲಿನಿಂದ ತಯಾರಿಸುತ್ತಿರುವ ಸೌಂದರ್ಯ ವರ್ಧಕ ಸಾಧನಗಳಿಗೆ ಮಹಿಳೆಯರು ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಮುಗಿಬಿದ್ದು ಖರೀದಿಸುತ್ತಿದ್ದಾರೆ.

Write A Comment