ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ 38 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯ ರಾತ್ರಿಯಿಂದಲೇ ಅವರ ಅಭಿಮಾನಿಗಳು ಆಗಮಿಸಿ ಶುಭ ಕೋರುತ್ತಿದ್ದು, ಕಳೆದ ವರ್ಷ ಐಷಾರಾಮಿ ಕಾರ್ ಗಿಫ್ಟ್ ಮಾಡಿದ್ದ ಪತ್ನಿ ಶಿಲ್ಪಾ ಈ ಬಾರಿ ಮತ್ತೊಂದು ವಿಶೇಷ ಗಿಫ್ಟ್ ನೀಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಅರಮನೆಯಂತಹ ಬಂಗಲೆಯನ್ನು ಗಣೇಶ್ ಅವರ ಹುಟ್ಟು ಹಬ್ಬಕ್ಕೆ ಗಿಫ್ಟಾಗಿ ಹೊಟ್ಟಿರುವ ಶಿಲ್ಪಾ, ಇದರ ಪ್ರತಿಯೊಂದು ಇಂಟಿರಿಯರ್ ಡಿಸೈನನ್ನೂ ತಮ್ಮ ಪತಿಯ ಮನಕ್ಕೊಪ್ಪುವಂತೆ ಮಾಡಿಸಿದ್ದಾರೆ. ಇದೇ ಮನೆಯಲ್ಲಿ ಗಣೇಶ್ ಅವರು ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.
ಇದೇ ದಿನದಂದು ಅವರ ‘ಪಟಾಕಿ’ ಚಿತ್ರವೂ ಸೆಟ್ಟೇರಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿದ್ದು, ಅದಕ್ಕಾಗಿ ಹುರಿ ಮೀಸೆಯನ್ನೂ ಬಿಟ್ಟಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಗಣೇಶ್ ಮಾಧ್ಯಮಗಳೊಂದಿಗೆ ಮಾತನಾಡಿ, ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ಪ್ರೀತಿಗೆ ಧನ್ಯವಾದ ಹೇಳಿದರಲ್ಲದೇ ‘ಪಟಾಕಿ’ ಬಳಿಕ ‘ಮುಂಗಾರು ಮಳೆ 2’ ಆರಂಭವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.