ಮನೋರಂಜನೆ

ವಿಷ್ಣುವರ್ಧನ್ ಸ್ಮಾರಕ ಭೂಮಿ ಮಂಜೂರು ರದ್ದು

Pinterest LinkedIn Tumblr

vishnuಬೆಂಗಳೂರು: ಕನ್ನಡದ ಮೇರು ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಎರಡು ಎಕರೆ ಭೂಮಿ ಮಂಜೂರು ಮಾಡಿ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕೆಂಗೇರಿಯ ಮೈಲಸಂದ್ರದ ಬಳಿ ಸರ್ವೇ ನಂ.22 ರಲ್ಲಿ ಎರಡು ಎಕರೆ ಜಾಗ ಮಂಜೂರು ಮಾಡಿದ್ದ ಸರ್ಕಾರದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಪರಿಸರವಾದಿ ಶರತ್ ಬಾಬು ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ. ಎಸ್.ಕೆ ಮುಖರ್ಜಿ ಹಾಗೂ  ಬಿ.ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿ ಸ್ಮಾರಕ ನಿರ್ಮಾಣಕ್ಕೆ ಬೇರೊಂದು ಜಾಗ ಮಂಜೂರು ಮಾಡಬಹುದೆಂದು ಸರ್ಕಾರಕ್ಕೆ ಸೂಚಿಸಿದೆ.

ಅರ್ಜಿದಾರರ ಪರ ವಕೀಲರು ವಾದಿಸಿ ರಾಜ್ಯ ಸರ್ಕಾರ ವಿಷ್ಣುವರ್ಧನ್ ಸ್ಮಾರಕಕ್ಕೆ ಮೈಲಸಂದ್ರ ಬಳಿ ಸರ್ವೇ ನಂ.22 ರಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಈ ಜಮೀನು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಬಫರ್ ವಲಯದ ವ್ಯಾಪ್ತಿಗೆ ಸೇರುತ್ತದೆ. ರಾಜ್ಯ ಅರಣ್ಯ ಕಾಯ್ದೆ ಸೆಕ್ಷನ್ 41 ಹಾಗೂ 41 (2 ) ಪ್ರಕಾರ ಮೀಸಲು ಅರಣ್ಯ ಪ್ರದೇಶವಿರುವ ಜಾಗದ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಅರಣ್ಯೇತರ ಚಟುವಟಿಕೆ ಹಾಗೂ ಇತರೆ ಯಾವುದೇ ಕಾಮಗಾರಿಗೆ ಬಳಸುವಂತಿಲ್ಲ ಎಂಬ ಅಂಶವನ್ನು ಕೋರ್ಟ್ ಗಮನಕ್ಕೆ ತಂದರು.

ಸರ್ಕಾರದ ಆದೇಶದಂತೆ ಮಂಜೂರಾದ ಜಾಗದಲ್ಲಿ ಸ್ಮಾರಕ ನಿರ್ಮಿಸಿದರೆ ಅಲ್ಲಿನ ಅರಣ್ಯ ಸಂಪತ್ತು ನಾಶವಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಪ್ರದೇಶದಲ್ಲಿ ಸ್ಮಾರಕ ನಿರ್ಮಿಸಲು ಅವಕಾಶ ನೀಡಬಾರದು ಎಂದು ಕೋರಿದ್ದರು. ಅರ್ಜಿದಾರರ ವಾದವನ್ನು ಪರಿಗಣಿಸಿ ವಿಭಾಗೀಯ ಪೀಠ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿದೆ.

ವಿಷ್ಣುವರ್ಧನ್ ಅವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರ ನಗರದ ಉತ್ತರಹಳ್ಳಿ ಬಳಿಯ ಅಭಿಮಾನ್ ಸ್ಟುಡಿಯೋದಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಿತ್ತು. ಸ್ಟುಡಿಯೋ ಮಾಲೀಕರು ತಕರಾರು ತೆಗೆದ ಹಿನ್ನೆಲೆಯಲ್ಲಿ ಸರ್ಕಾರ ಮೈಲಸಂದ್ರದ ಬಳಿ ಎರಡು ಜಾಗ ಮಂಜೂರು ಮಾಡಿತ್ತು.

Write A Comment