ಮನೋರಂಜನೆ

ಯಶ್ ಮನೆ ಖಾಲಿ ಮಾಡಿದರೆ ಪ್ರಕರಣ ವಾಪಸ್: ಮಾಲೀಕ ಮುನಿ ಪ್ರಸಾದ್

Pinterest LinkedIn Tumblr

yash-house-owner

ಬೆಂಗಳೂರು: ಚಿತ್ರನಟ ಯಶ್ ಕುಟುಂಬದವರು ಬಾಕಿ ಇರುವ ಮನೆ ಬಾಡಿಗೆಯನ್ನು ನೀಡಿ ನಮ್ಮ ಮನೆಯನ್ನು ನಮಗೆ ವಾಪಸ್ ನೀಡಿದರೆ ಅವರ ವಿರುದ್ಧ ನಾವು ಹೂಡಿರುವ ಪ್ರಕರಣಗಳನ್ನು ವಾಪಸ್ ಪಡೆಯುತ್ತೇವೆ ಎಂದು ಮನೆ ಮಾಲೀಕ ಮುನಿ ಪ್ರಸಾದ್ ಹೇಳಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮಗೆ ಯಶ್ ಬಗ್ಗೆ ಯಾವುದೇ ದೂರುಗಳಿಲ್ಲ. ಆದರೆ ಅವರ ತಾಯಿ ಪುಷ್ಪಾ ಅವರು ಬಾಡಿಗೆ ಕೇಳಿದರೆ ಪರೋಕ್ಷ ಪ್ರಾಣ ಬೆದರಿಕೆ ಹಾಕುತ್ತಾರೆ. ಸುಮಾರು ಒಂದೂವರೆ ವರ್ಷದಿಂದ ಮನೆ ಬಾಡಿಗೆ ನೀಡಿಲ್ಲ. 29 ಲಕ್ಷದ 30 ಸಾವಿರದ 972 ರು. ಬಾಡಿಗೆ ಹಣವೇ ಬರಬೇಕು. ಹೀಗಾಗಿ ಮನೆ ಬಾಡಿಗೆ ನೀಡಿ ಮನೆಯನ್ನು ಖಾಲಿ ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಹೇಳಿದರು.

“ಮನೆ ಬಾಡಿಗೆ ಪಡೆಯುವಾಗ ಮೊದಲು 40 ಸಾವಿರ ಬಾಡಿಗೆಗೆ ನೀಡಿದ್ದೆವು. ಅಲ್ಲದೆ ಪ್ರತೀ ವರ್ಷ ಶೇ.5 ರಷ್ಟು ಬಾಡಿಗೆ ಹೆಚ್ಚಳ ಮಾಡುವ ಕರಾರು ಮಾಡಿಕೊಂಡಿದ್ದವು. ಬಳಿಕ ಬಾಡಿಗೆಯನ್ನು 46 ಸಾವಿರಕ್ಕೆ ಏರಿಕೆ ಮಾಡಿದ್ದೆವು. ಅದರಂತೆ 2011ರಲ್ಲಿ ಕರಾರು ಮುಕ್ತಾಯವಾಗಿತ್ತು. ಆದರೆ ಈ ವರೆಗೂ ಅವರು ಬಾಡಿಗೆ ನೀಡಿಲ್ಲ. ಮಗಳ ಮದುವೆ ಬಳಿಕ ನಾವು ಇದೇ ಮನೆಯಲ್ಲಿ ನೆಲಸಬೇಕು ಎಂದು ನಿರ್ಧರಿಸಿದ್ದೇವೆ. ಹೀಗಾಗಿ ನಮಗೆ ನ್ಯಾಯಕೊಡಿಸಿ ಎಂದು ಮುನಿ ಪ್ರಸಾದ್ ಮನವಿ ಮಾಡಿದ್ದಾರೆ.

ಯಶ್ ತಾಯಿ ಪುಷ್ಪಾ ಮನೆ ನವೀಕರಣ ಮಾಡಿಲ್ಲ

ಇದೇ ವೇಳೆ ಮನೆ ನವೀಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುನಿ ಪ್ರಸಾದ್ ಅವರು, “ಯಶ್ ತಾಯಿ ಪುಷ್ಪಾ ಅವರು ಆರೋಪಿಸಿರುವಂತೆ ಅವರು ನಮ್ಮ ಮನೆಗೆ ಯಾವುದೇ ರೀತಿಯ ಖರ್ಚು ಮಾಡಿಲ್ಲ. ಮನೆಯನ್ನು ಅವರಿಗೆ ಕೊಡುವಾಗಲೇ ಮನೆ ಎಲ್ಲರೀತಿಯಲ್ಲಿ ಸಿದ್ಧಪಡಿಸಿ ಕೊಡಲಾಗಿತ್ತು. ಈಗ ಪುಷ್ಪಾ ಅವರು ಆರೋಪಿಸಿರುವಂತೆ ಅವರು ಯಾವುದೇ ರೀತಿಯ ಖರ್ಚು ಮಾಡಿಲ್ಲ. ನಾವೇ ಎಲ್ಲ ರೀತಿಯಲ್ಲಿಯೂ ಸಿದ್ಧವಿರುವಂತಹ ಮನೆಯನ್ನು ಅವರಿಗೆ ನೀಡಿದ್ದೆವು ಎಂದು ಮುನಿ ಪ್ರಸಾದ್ ಹೇಳಿದ್ದಾರೆ.

ವಿಫಲವಾದ ಸಂಧಾನ

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಲೋಕೇಶ್ ಕುಮಾರ್, ನಟ ಯಶ್ ಈ ಮನೆಗೆ ಹೋದ ನಂತರ ಅವರಿಗೆ ಯಶಸ್ಸು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅವರು ಮನೆ ಖಾಲಿ ಮಾಡಲು ಸಿದ್ಧರಿಲ್ಲ ಎನ್ನಲಾಗಿದೆ. ಬಾಡಿಗೆ ನೀಡುವಂತೆ ಇಲ್ಲವಾದಲ್ಲಿ ಮನೆ ಖಾಲಿ ಮಾಡುವಂತೆ ಮಾಲೀಕರು ಸಾಕಷ್ಟು ಬಾರಿ ಮನವಿ ಮಾಡಿದರೂ ಯಶ್ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರ ವರ್ತನೆಯಿಂದ ಬೇಸತ್ತ ಮನೆ ಮಾಲೀಕರು ಈ ಹಿಂದೆ ಮಾರ್ಚ್ 23 ರಂದು ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದು ಸಿವಿಲ್ ಪ್ರಕರಣ ಆಗಿರುವ ಕಾರಣ ವಾದಿ, ಪ್ರತಿವಾದಿಯನ್ನು ಕರೆದು ಸಂಧಾನ ಮಾಡಲು ಪೊಲೀಸರು ಯತ್ನಿಸಿದ್ದರು. ಆದರೆ, ಸಾಧ್ಯವಾಗದ ಕಾರಣ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ತಿಳಿಸಿದ್ದಾರೆ. ಈ ನಡುವೆ ತಾವು ಅದೇ ಮನೆಯಲ್ಲಿ ವಾಸಿಸುವುದಾಗಿ ಹಾಗೂ ಅದಕ್ಕೆ ಅವಕಾಶ ಕಲ್ಪಿಸುವಂತೆ  ನಟ ಯಶ್ ಹಾಗೂ ಅವರ ತಾಯಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ನಾವು ಕಳೆದ ಒಂದು ವರ್ಷದಿಂದ ಮನೆ ಬಾಡಿಗೆ ಕಟ್ಟಿಲ್ಲ. ಕಾರಣ ಅವರು ನಮಗೆ ಅವಮಾನ ಮಾಡಿದ್ದಾರೆ. ಬೇರೆ ಭಾಷಿಗರನ್ನು ನಮ್ಮ ಮನೆಗೆ ಕಳುಹಿಸಿ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ನಾವು ಬಾಡಿಗೆ ನೀಡುವುದನ್ನು ನಿಲ್ಲಿಸಿದ್ದೇವೆ. ಅಲ್ಲದೆ ಮನೆಯ ನವೀಕರಣಕ್ಕೆ ರು.7 ಲಕ್ಷ ಖರ್ಚು ಮಾಡಿದ್ದೇವೆ.

-ಪುಷ್ಪಾ, ನಟ ಯಶ್ ತಾಯಿ

ನಾವು ಬಾಡಿಗೆ ನೀಡಲು ಸಿದ್ಧರಿದ್ದೇವೆ. ಆದರೆ, ಮಾಲೀಕರೇ ಬಾಡಿಗೆ ಪಡೆಯಲು ಬಂದಿಲ್ಲ. ಅವರು ಯಾವಾಗ ಬಂದರೂ ನಾವು ಬಾಡಿಗೆ ಹಣ ನೀಡಲು ಸಿದ್ಧರಿದ್ದೇವೆ.

-ಯಶ್, ನಟ

ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಬಾಡಿಗೆ ನೀಡಿಲ್ಲ. ಮನೆ ಖಾಲಿ ಮಾಡುವಂತೆ ಸೂಚಿಸಿದರೆ ಖಾಲಿ ಮಾಡಿಲ್ಲ. ಬಾಡಿಗೆಯನ್ನು ಕೂಡಲೇ ನೀಡಿ ಮನೆ ಖಾಲಿ ಮಾಡಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದೇವೆ.

-ಡಾ. ಮುನಿಪ್ರಸಾದ್, ಮನೆ ಮಾಲೀಕ

Write A Comment