ಮನೋರಂಜನೆ

ಭಾರತದ ಮುನ್ನಡೆಗೆ ಮಳೆ ಅಡ್ಡಿಬಾಂಗ್ಲಾದೇಶ 111/3, ಸ್ಪಿನ್ನರ್‌ಗಳ ಮಿಂಚು

Pinterest LinkedIn Tumblr

Del6422444

ಫಾತುಲ್ಲಾ(ಬಾಂಗ್ಲಾದೇಶ), ಜೂ.14: ಮಳೆ ಬಾಧಿತ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 111 ರನ್ ಕಲೆ ಹಾಕಿದೆ.

ಶನಿವಾರ ನಡೆದ ನಾಲ್ಕನೆ ದಿನದಾಟದ ಮೊದಲ ಸೆಶನ್‌ನಲ್ಲಿ 30.1 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿದ್ದು, ಉಳಿದ ಸಮಯ ಮಳೆಗಾಹುತಿಯಾಯಿತು. ಮಳೆಯಿಂದಾಗಿ ಪಂದ್ಯ ಬೇಗನೆ ಕೊನೆಗೊಂಡಾಗ ಇಮ್ರುಲ್ ಖೈಸ್(59) ಹಾಗೂ ಶಾಕಿಬ್ ಅಲ್ ಹಸನ್(0) ಕ್ರೀಸ್‌ನಲ್ಲಿದ್ದರು. ನಾಲ್ಕನೆ ದಿನದಾಟವನ್ನು ಅರ್ಧಗಂಟೆ ಮುಂಚಿತವಾಗಿ ಆರಂಭಿಸಲಾಯಿತು. ಮೂರನೆ ದಿನದಾಟವಾದ ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 462 ರನ್ ಗಳಿಸಿರುವ ಭಾರತ ಶನಿವಾರ ಒಂದೂ ರನ್ ಸೇರಿಸದೇ ಇನಿಂಗ್ಸ್ ಡಿಕ್ಲೇರ್ ಮಾಡಿ ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು.

ಇಶಾಂತ್ ಶರ್ಮ ಭಾರತದ ಬೌಲಿಂಗ್ ದಾಳಿಯನ್ನು ಆರಂಭಿಸಿದ್ದು, ರವಿಚಂದ್ರನ್ ಅಶ್ವಿನ್ ಇನಿಂಗ್ಸ್‌ನ ಎರಡನೆ ಓವರ್ ಬೌಲಿಂಗ್ ಮಾಡಿದರು. ಬಾಂಗ್ಲಾದೇಶದ ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ 7 ರನ್ ತಲುಪುತ್ತಲೇ ಬಾಂಗ್ಲಾದೇಶದ ಗರಿಷ್ಠ ಟೆಸ್ಟ್ ಸ್ಕೋರರ್ ಎಂಬ ಕೀರ್ತಿಗೆ ಭಾಜನರಾದರು. ಇನಿಂಗ್ಸ್ ಆರಂಭದಲ್ಲೇ ಬೌಲಿಂಗ್ ಮಾಡುವ ಅವಕಾಶ ಪಡೆದುಕೊಂಡಿರುವ ಸ್ಪಿನ್ನರ್ ಅಶ್ವಿನ್, ಇಕ್ಬಾಲ್‌ರನ್ನು 19 ರನ್‌ಗೆ ಔಟ್ ಮಾಡುವುದರೊಂದಿಗೆ ನಾಯಕ ವಿರಾಟ್ ಕೊಹ್ಲಿಯ ವಿಶ್ವಾಸವನ್ನು ಉಳಿಸಿಕೊಂಡರು. ಬಾಂಗ್ಲಾದೇಶ 12.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿದ್ದಾಗ ಮಳೆ ಆಗಮಿಸಿ 13 ನಿಮಿಷ ಪಂದ್ಯಕ್ಕೆ ಅಡ್ಡಿಪಡಿಸಿತು. ಆಗ ಇಮ್ರುಲ್ ಖೈಸ್(20) ಹಾಗೂ ಮೂಮಿನುಲ್ ಹಕ್(16) ಕ್ರೀಸ್‌ನಲ್ಲಿದ್ದರು. ಎರಡು ವರ್ಷಗಳ ನಂತರ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಆಡಿರುವ ಹರ್ಭಜನ್ ಸಿಂಗ್ ಇನಿಂಗ್ಸ್‌ನ 17ನೆ ಓವರ್‌ನ ನಂತರ ದಾಳಿಗೆ ಇಳಿದರು. 10 ರನ್ ಗಳಿಸಿದ್ದಾಗ ಧವನ್‌ರಿಂದ ಜೀವದಾನ ಪಡೆದಿರುವ ಖೈಸ್ 75 ಎಸೆತಗಳಲ್ಲಿ ಮೂರನೆ ಅರ್ಧಶತಕ ಸಿಡಿಸಿದರು.

ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಖೈಸ್ ಹಾಗೂ ಹಕ್ 24ನೆ ಓವರ್‌ನಲ್ಲಿ ಬಾಂಗ್ಲಾದೇಶ 100 ರನ್ ಗಳಿಸಲು ನೆರವಾದರು. ಹಕ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ ಹರ್ಭಜನ್ ಸಿಂಗ್ ಭಾರತಕ್ಕೆ ಮೇಲುಗೈ ಒದಗಿಸಿದರು. 54 ಎಸೆತಗಳಲ್ಲಿ 30 ರನ್ ಗಳಿಸಿರುವ ಹಕ್, ಹರ್ಭಜನ್ ಎಸೆತವನ್ನು ಯಾದವ್‌ಗೆ ಕ್ಯಾಚ್ ನೀಡಿದರು. ಸತತ 12ನೆ ಅರ್ಧಶತಕ ಸಿಡಿಸಿರುವ ದ.ಆಫ್ರಿಕದ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಲು ಹಕ್ ವಿಫಲರಾದರು.

29ನೆ ಓವರ್‌ನಲ್ಲಿ ಬಾಂಗ್ಲಾದೇಶದ ನಾಯಕ ಮುಶ್ಫಿಕುರ್ರಹೀಂ(2) ಪೆವಿಲಿಯನ್‌ಗೆ ಕಳುಹಿಸಿದ ಅಶ್ವಿನ್ 110 ರನ್‌ಗೆ 3ನೆ ವಿಕೆಟ್ ಕಬಳಿಸಿದರು. ಏಕೈಕ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಕೇವಲ 34 ಓವರ್ ಪಂದ್ಯ ಆಡಲು ಸಾಧ್ಯವಾಗಿತ್ತು. ಎರಡನೆ ದಿನದಾಟ ಸಂಪೂರ್ಣವಾಗಿ ಮಳೆಗಾಹುತಿಯಾಗಿತ್ತು. ಮೂರನೆ ದಿನದಾಟದಲ್ಲಿ ಸೂರ್ಯ ಕಣ್ಣು ತೆರೆದರೂ ಕೇವಲ 47.3 ಓವರ್ ಪಂದ್ಯ ಆಡಲಷ್ಟೇ ಸಾಧ್ಯವಾಗಿತ್ತು.

Write A Comment