ಅಂತರಾಷ್ಟ್ರೀಯ

ಭಾರತದ 2,100 ಉತ್ಪನ್ನಗಳು ಅಮೆರಿಕದಿಂದ ತಿರಸ್ಕೃತ; ಪಟ್ಟಿಯಲ್ಲಿ: ಎಚ್‌ಯುಎಲ್, ಬ್ರಿಟಾನಿಯಾ, ನೆಸ್ಲೆ ಇಂಡಿಯಾ, ಹಲ್ದೀರಾಮ್

Pinterest LinkedIn Tumblr

haldiram

ಕೋಲ್ಕತಾ/ಮುಂಬೈ, ಜೂ.14: ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರವು ಆಹಾರ, ವೈಯಕ್ತಿಕ ರಕ್ಷಣೆ ಹಾಗೂ ಆರೋಗ್ಯ ಪೂರಕ ವರ್ಗಗಳಿಗೆ ಸೇರಿದ, ‘ಮೇಡ್ ಇನ್ ಇಂಡಿಯಾದ’ 2,100ಕ್ಕೂ ಹೆಚ್ಚು ಆಮದು ಬ್ಯಾಚ್‌ಗಳನ್ನು ಕಳೆದ ಒಂದು ವರ್ಷದಲ್ಲಿ ತಿರಸ್ಕರಿಸಿದೆ. ಅವುಗಳಲ್ಲಿ ಹಿಂದೂಸ್ಥಾನ್ ಯುನಿಲಿವರ್, ಬ್ರಿಟಾನಿಯಾ, ನೆಸ್ಲೆ ಇಂಡಿಯಾ, ಹಲ್ದೀರಾಮ್, ಹೈನ್ಜ್ ಇಂಡಿಯಾಗಳಂತಹ ಖ್ಯಾತ ಕಂಪೆನಿಗಳ ಉತ್ಪನ್ನಗಳು ಸೇರಿವೆ.

ತಿರಸ್ಕೃತ ಸಾಮಗ್ರಿಗಳು ಅನಧಿಕೃತ ಮೂರನೆ ವರ್ಗದ ಆಮದುಗಾರರು ತರಿಸಿಕೊಂಡವುಗಳಾಗಿವೆಯೆಂದು ಹೆಚ್ಚಿನ ಭಾರತೀಯ ಕಂಪೆನಿಗಳು ಹೇಳಿವೆ.

ಭಾರತೀಯ ಆಹಾರ ಪ್ರಾಧಿಕಾರವು ದೇಶದಲ್ಲಿರುವ ಎಲ್ಲ ನೂಡಲ್ಸ್ ಹಾಗೂ ಪಾಸ್ತಾ ಬ್ರಾಂಡ್‌ಗಳನ್ನು ಪರೀಕ್ಷಿಸಲು ನಿರ್ಧರಿಸಿದೆ. ತಾನು ಆಹಾರ ಕಲಬೆರಕೆ ನಿವಾರಣೆಗೆ ಇದೇ ಆದ್ಯತೆಯನ್ನು ಕೊಡುತ್ತೇವೆ. ಇದು ಭ್ರಷ್ಟಾಚಾರವನ್ನು ಮಟ್ಟಹಾಕುತ್ತದೆಂದು ಅದು ಹೇಳಿದೆ.

ಯುಎಸ್‌ಎಫ್‌ಡಿಎ ಕೂಡ ಭಾರತದಲ್ಲಿ ತಯಾರಾದ ಮ್ಯಾಗಿ ನೂಡಲ್ಸ್ ನ ಮಾದರಿಗಳ ಪರೀಕ್ಷೆಯನ್ನು ಆರಂಭಿಸಿದೆ. ಮಾತ್ರವಲ್ಲದೆ, ಥರ್ಡ್ ಪಾರ್ಟಿ ಆಮದುದಾರರಿಂದ ಅಮೆರಿಕದ ಚಿಲ್ಲರೆ ವ್ಯಾಪಾರಿಗಳು ಖರೀದಿಸುವ ಮ್ಯಾಗಿ ಉತ್ಪನ್ನಗಳ ಪರೀಕ್ಷೆಯನ್ನೂ ಅದು ನಡೆಸುತ್ತಿದೆ.

ಜನವರಿಯಲ್ಲಿ, ಮೊಗಾದ ನೆಸ್ಲೆ ಘಟಕದಲ್ಲಿ ತಯಾರಾಗಿದ್ದ ಇನ್‌ಸ್ಟ್ಟಂಟ್ ನೂಡಲ್‌ಗಳನ್ನು, ಪೊಟ್ಟಣದ ಮೇಲೆ ತಯಾರಿಕೆಗೆ ಬಳಸಿದ ವಸ್ತುಗಳ ಹೆಸರು ಮುದ್ರಿಸದಿದ್ದುದಕ್ಕಾಗಿ ಯುಎಸ್‌ಎಫ್‌ಡಿಎ ತಿರಸ್ಕರಿಸಿತ್ತು.

ಕಳೆದ ತಿಂಗಳು ಕರಿದ ತಿಂಡಿ, ಬಟಾಟೆ ಚಿಪ್ಸ್ ಹಾಗೂ ಸಿಹಿತಿಂಡಿಗಳಲ್ಲಿ ಕೀಟ ನಾಶಕಗಳು ಕಂಡುಬಂದ ಕಾರಣ ಯುಎಸ್‌ಎಫ್‌ಡಿಎ ಹಲ್ದೀರಾಮ್‌ನ 53 ದಾಗೀನುಗಳನ್ನು ತಿರಸ್ಕರಿಸಿತ್ತು. ಅವುಗಳನ್ನು ಒಂದೋ ಸರಿಯಾಗಿ ಸಂಸ್ಕರಿಸಿಲ್ಲ ಅಥವಾ ಉತ್ಪಾದಿಸಿಲ್ಲ ಅಥವಾ ಅಶುಚಿ ಪರಿಸರದಲ್ಲಿ ಪೊಟ್ಟಣ ಕಟ್ಟಲಾಗಿದೆಯೆಂದು ಅದು ಹೇಳಿತ್ತು.

ಅನಧಿಕೃತ ರಫ್ತುದಾರರು ಸರಿಯಾಗಿ ದಾಸ್ತಾನು ಮಾಡದಿರುವುದು ಹಾಗೂ ಹಂಚಿಕೆ ಮಾಡದಿರುವುದು ಉತ್ಪನ್ನಗಳು ತಿರಸ್ಕೃತವಾಗಲು ಕಾರಣ. ಒಂದು ವೇಳೆ ತಮ್ಮ ಅಧಿಕೃತ ಉತ್ಪನ್ನಗಳು ತಿರಸ್ಕೃತವಾದರೆ, ತಾವದನ್ನು ಎಫ್‌ಡಿಎ ಅಂಗೀಕೃತ ಪ್ರಯೋಗಾಲಯಗಳಲ್ಲಿ ಮರು ಪರೀಕ್ಷಿಸುತ್ತೇವೆಂದು ಹಲ್ದೀರಾಮ್ ಕಂಪೆನಿಯ ನಿರ್ದೇಶಕ ಎ.ಕೆ. ತ್ಯಾಗಿ ತಿಳಿಸಿದ್ದಾರೆ. ಯುಎಸ್‌ಎಫ್‌ಡಿಎ ಭಾರತದಲ್ಲಿನ ತನ್ನ ಸೌಲಭ್ಯಗಳನ್ನು ನಿಯಮಿತವಾಗಿ ತಪಾಸಣೆ ಮಾಡುತ್ತದೆ ಹಾಗೂ ಅವುಗಳ ಉತ್ಪಾದನೆಗಳು ಜಾಗತಿಕ ಸುರಕ್ಷಾ ನಿಯಮಗಳನ್ನು ಖಚಿತಗೊಳಿಸುತ್ತವೆಯೆಂದು ಅವರು ಹೇಳಿದ್ದಾರೆ.

ಭಾರತದ ಪೊಟ್ಟಣ ಆಹಾರ ಉತ್ಪನ್ನಗಳ ಗುಣಮಟ್ಟವು ಜಾಗತಿಕ ನಿಯಮಗಳನ್ನು ಆಧರಿಸಿದ್ದು, ಬ್ಯಾಚ್‌ಗಳ ತಿರಸ್ಕರಣೆಯು ಪರಿಹರಿಸಲೇ ಬೇಕಾಗಿರುವ ಮುಖ್ಯ ಸಮಸ್ಯೆಯಾಗಿದೆಯೆಂದು ಅಮೂಲ್ ಡೈರಿ ಪ್ರಾಡಕ್ಟ್‌ಗಳ ಉತ್ಪಾದನಾ ಸಂಸ್ಥೆ, ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಆಡಳಿತ ನಿರ್ದೇಶಕ ಆರ್.ಎಸ್. ಸೋಧಿ ಅಭಿಪ್ರಾಯಿಸಿದ್ದಾರೆ. ಕಂಪೆನಿಗಳ ವಾದ ಥರ್ಡ್ ಪಾರ್ಟಿ ವ್ಯಾಪಾರಸ್ಥರು ಉತ್ಪನ್ನಗಳ ತಿಳುವಳಿಕೆಯಿಲ್ಲದೆ, ಭಾರೀ ಪ್ರಮಾಣದಲ್ಲಿ ರಫ್ತು ಮಾಡುತ್ತಾರೆಂದು ಹಲವು ಕಂಪೆನಿಗಳು ಆರೋಪಿಸಿವೆ. ಉದಾಹರಣೆಗೆ: ಅಮೆರಿಕಕ್ಕೆ ತನ್ನ ರಫ್ತು ಕೇವಲ ಭಾರತದಲ್ಲಿನ ಯುಎಸ್‌ಎಫ್‌ಡಿಎ ನೋಂದಾಯಿತ ಕಾರ್ಖಾನೆಗಳಿಂದಲೇ ತಯಾರಾದುದಾಗಿರುತ್ತದೆ ಹಾಗೂ ಉತ್ಪನ್ನ ಮತ್ತು ಪೊಟ್ಟಣದ ಎಲ್ಲ ಮಾನದಂಡಗಳಿಗೆ ಅನುಸಾರವಾಗಿರುತ್ತದೆ. ಯುಎಸ್‌ಎಫ್‌ಡಿಎಯಿಂದ ತಿರಸ್ಕರಿಸಲ್ಪಟ್ಟಿರುವ ಉತ್ಪನ್ನಗಳು ನೇರವಾಗಿ ಕಂಪೆನಿಯಿಂದ ಕಳುಹಿಸಲ್ಪಟ್ಟವುಗಳಲ್ಲವೆಂದು ಬ್ರಿಟಾನಿಯಾ ಹೇಳುತ್ತಿದೆ.

ಅದೇ ರೀತಿ, ನಿಷೇಧಿಸಲಾದ ಉತ್ಪನ್ನಗಳು ತಮ್ಮಿಂದ ಕಳುಹಿಸಲ್ಪಟ್ಟವುಗಳಲ್ಲ. 2015ರಲ್ಲಿ ಎಚ್‌ಯುಎಲ್, ಅಮೆರಿಕದ ಆಹಾರ ಮತ್ತು ಔಷಧ ಸುರಕ್ಷಾ ಪ್ರಾಧಿಕಾರದಲ್ಲಿ ನೋಂದಾಯಿಸಲ್ಪಟ್ಟಿರುವ ಅಧಿಕೃತ ಹಂಚಿಕೆದಾರರ ಮೂಲಕ ಅಮೆರಿಕದ ಮಾರುಕಟ್ಟೆಗೆ ಕಳುಹಿಸಿದ ಯಾವುದೇ ಉತ್ಪನ್ನ ತಿರಸ್ಕರಿಸಲ್ಪಟ್ಟಿಲ್ಲ.

2015ರಲ್ಲಿ ಯುಎಸ್‌ಎಫ್‌ಡಿಎ ತಿರಸ್ಕರಿಸಿದ ಉತ್ಪನ್ನಗಳು ಎಚ್‌ಯುಎಲ್‌ನಿಂದ ಕಳುಹಿಸಲ್ಪಟ್ಟವುಗಳಲ್ಲವೆಂದು ತಾವು ಸ್ಪಷ್ಟಪಡಿಸಬಯಸುತ್ತೇವೆಂದು ಹಿಂದೂಸ್ಥಾನ್ ಯುನಿಲಿವರ್‌ನ ವಕ್ತಾರರು ತಿಳಿಸಿದ್ದಾರೆ.

ಕಂಪೆನಿಯು ಎಫ್‌ಡಿಎಯ ಜಾಲತಾಣವನ್ನು ಪರಿಶೀಲಿಸಿದೆ. ಕೆಲವು ಬ್ಯಾಚ್‌ಗಳನ್ನು ಅಮೆರಿಕಕ್ಕೆ ರಫ್ತು ಮಾಡುವ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳಿಂದ ಬಂದವುಗಳಲ್ಲವೆಂದು ವಿವರಿಸಲಾಗಿದೆ. ಅಂದರೆ, ಈ ಬ್ಯಾಚ್‌ಗಳು ಕಂಪೆನಿಯು ಸಂಘಟಿಸಿದ ಅಥವಾ ಅದರ ನಿಯಂತ್ರಣದಲ್ಲಿರುವ ರಫ್ತುದಾರರು ಕಳುಹಿಸಿರುವುದಿಲ್ಲ. ಅವುಗಳನ್ನು ಬೇರೆಯವರೇ ಕಳುಹಿಸಿದ್ದಾರೆಂದು ಅರ್ಥವಾಗುತ್ತದೆ. ಆ ಬ್ಯಾಚುಗಳು ಯಾಕೆ ತಿರಸ್ಕರಿಸಲ್ಪಟ್ಟಿವೆಯೆಂಬುದನ್ನು ಇದೇ ವಿವರಿಸುತ್ತಿದೆ. ಅವು ‘ಕಂದು ಮಾರುಕಟ್ಟೆ’ ರಫ್ತುಗಳಾಗಿವೆಯೆಂದು ನೆಸ್ಲೆಯ ವಕ್ತಾರರೊಬ್ಬರು ಹೇಳಿದ್ದಾರೆ. ಕಂಪೆನಿಗಳಿಗೆ ತಮ್ಮ ಉತ್ಪನ್ನಗಳು ತಿರಸ್ಕೃತವಾಗಿರುವುದೂ ಆ ಸಮಯದಲ್ಲಿ ತಿಳಿದಿರುವುದಿಲ್ಲ. ಜವಾಬ್ದಾರಿಯುತ ಸಂಸ್ಥೆಯಾಗಿ ತಾವು ಯಾವುದೇ ವಿಚಾರಣೆ ಎದುರಿಸಲು ಸಿದ್ಧರಿದ್ದೇವೆಂದು ಮೊಂಡೆಲೆಝ್ ಇಂಡಿಯಾದ ವಕ್ತಾರರೊಬ್ಬರು ತಿಳಿಸಿದ್ದಾರೆ.

ಈ ವರ್ಷದ ಎಪ್ರಿಲ್‌ನಲ್ಲಿ ಮೊಂಡೆಲೆಝ್ ಇಂಡಿಯಾದ ಬೀಜಗಳು ಹಾಗೂ ಹಣ್ಣುಗಳನ್ನೊಳಗೊಂಡ ಚಾಕೋಲೆಟ್ ಕ್ಯಾಂಡಿಯ ಬ್ಯಾಚೊಂದು, ‘ಅಶುದ್ಧ ಪರಿಸರದಲ್ಲಿ ಉತ್ಪಾದನೆ, ಸಂಸ್ಕರಣೆ ಹಾಗೂ ಪೊಟ್ಟಣ ಮಾಡಿದಂತೆ ಕಾಣುತ್ತಿದೆ’ ಎಂಬ ಕಾರಣಕ್ಕಾಗಿ ತಿರಸ್ಕರಿಸಲ್ಪಟ್ಟಿತ್ತೆಂದು ಎಫ್‌ಡಿಎ ಜಾಲತಾಣದ ಹೇಳಿಕೆಯೊಂದರಲ್ಲಿ ಸ್ಪಷ್ಟಪಡಿಸಲಾಗಿತ್ತು.

Write A Comment