ಮನೋರಂಜನೆ

ರಾಘವೇಂದ್ರ ರಾಜ್‌ಕುಮಾರ್ ದಂಪತಿ ವಿರುದ್ಧ ದೂರು

Pinterest LinkedIn Tumblr

ragu

ಬೆಂಗಳೂರು: ಸಿನಿಮಾ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್‌ನ ಲೆಕ್ಕಿಗ ಉಮೇಶ್ ಕೋಟೆಕಾರ್ (49) ಅವರು ಕಾಟನ್‌ಪೇಟೆ ಮುಖ್ಯರಸ್ತೆಯ ವಸತಿ ಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ರಾಘವೇಂದ್ರ ರಾಜ್‌ಕುಮಾರ್ ಮತ್ತು ಅವರ ಪತ್ನಿ ಮಂಗಳಾ ಅವರು ಪತಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಸುಮನಾ ಹೇಳಿಕೆ ನೀಡಿದ್ದಾರೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ನೀಡಿದ ಆರೋಪದಡಿ ರಾಘವೇಂದ್ರ ರಾಜ್‌ಕುಮಾರ್ ದಂಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಉಡುಪಿಯ ಉಮೇಶ್, ಪತ್ನಿ– ಮಗನ ಜತೆ ತ್ಯಾಗರಾಜನಗರ ಸಮೀಪದ ನಾಗಸಂದ್ರದಲ್ಲಿ ನೆಲೆಸಿದ್ದರು. ಕೆಲಸ ಇರುವುದಾಗಿ ಮಂಗಳವಾರ (ಜೂನ್‌ 2) ಮನೆಯಿಂದ ಹೊರ ಹೋಗಿದ್ದ ಉಮೇಶ್, ವಸತಿ ಗೃಹದಲ್ಲಿ ಕೊಠಡಿ ಬಾಡಿಗೆ ಪಡೆದಿದ್ದರು.

ಎರಡು ದಿನಗಳಿಂದ ಅವರು ಕೊಠಡಿಯ ಬಾಗಿಲು ತೆರೆಯದ ಕಾರಣ ಅನುಮಾನಗೊಂಡ ವಸತಿ ಗೃಹದ ಸಿಬ್ಬಂದಿ, ಗುರುವಾರ ಮಧ್ಯಾಹ್ನ ಠಾಣೆಗೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

‘₨ 3 ಕೋಟಿ ದುರ್ಬಳಕೆ ಆಗಿದೆ ಎಂದು ಆಡಳಿತ ಮಂಡಳಿ ಆರೋಪ ಮಾಡಿತ್ತು. ಮೇ 28ರಂದು ಉಮೇಶ್‌ಗೆ ಕರೆ ಮಾಡಿದ್ದ ಮಂಗಳಾ, ಲೆಕ್ಕದ ಬಗ್ಗೆ ವಿವರಣೆ ನೀಡುವಂತೆ ಎಚ್ಚರಿಕೆ ನೀಡಿದ್ದರು. ಮರುದಿನ ಉಮೇಶ್‌ ಅವರ ಮನೆಗೆ ಬಂದ ವಜ್ರೇಶ್ವರಿ ಕಂಬೈನ್ಸ್‌ನ ನೌಕರರು, ಮನೆಗೆ ಸಂಬಂಧಪಟ್ಟ ಕೆಲ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು’ ಎಂದು ಮೃತರ ಸಂಬಂಧಿ ಗಿರೀಶ್ ದೂರಿದರು.

‘ಘಟನೆ ಸಂಬಂಧ ಉಮೇಶ್ ಅವರ ಮಗ ಯು.ಕೆ. ವಿನಾಯಕ್ ದೂರು ಕೊಟ್ಟಿದ್ದಾರೆ. ಆರೋಪದ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ದಂಪತಿಯಿಂದ ವಿವರಣೆ ಕೇಳಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಉಮೇಶ್ ಹಲವು ವರ್ಷಗಳಿಂದ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬದವರ ಆರೋಪಕ್ಕೂ ನಮಗೂ ಸಂಬಂಧವಿಲ್ಲ. ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ-
ರಾಘವೇಂದ್ರ ರಾಜ್‌ಕುಮಾರ್

Write A Comment