ಮನೋರಂಜನೆ

ಮುರಾರಿ ಚಿತ್ರ ವಿಮಶೆಱ

Pinterest LinkedIn Tumblr

ಮುರರರ

-ಮದನ್​ಕುಮಾರ್ ಸಾಗರ

ಲಾಭ-ನಷ್ಟ ಏನೇ ಇರಲಿ, ಶುಕ್ರವಾರ ಬರುತ್ತಲೇ ಹೊಸ ಸಿನಿಮಾ ಬಿಡುಗಡೆಯಾಗುವುದು ತಪ್ಪುವುದಿಲ್ಲ. ಕುತೂಹಲಕ್ಕಾದರೂ ಒಮ್ಮೆ ಚಿತ್ರಮಂದಿರದೊಳಗೆ ಕಾಲಿಡುವುದನ್ನು ಪ್ರೇಕ್ಷಕಪ್ರಭು ತಪ್ಪಿಸುವುದಿಲ್ಲ. ಹಾಗೆ ಒಳಬಂದ ಪ್ರೇಕ್ಷಕನ ಮೊದಲ ಬೇಡಿಕೆ- ಮನರಂಜನೆ. ಬರೀ ಮನರಂಜನೆಗಿಂತ ಅದರಲ್ಲೊಂಚೂರು ಹೊಸತನವಿದ್ದರೆ ಫುಲ್​ಖುಷ್. ವಾಸು ನಿರ್ದೇಶನದ ‘ಮುರಾರಿ’ ಚಿತ್ರದಲ್ಲಿ ಮನರಂಜನೆಯೇನೋ ಸಿಗಬಹುದು. ಆದರೆ, ಹೊಸತನ ಮಾತ್ರ ಕಾಣೆ. ಐದು ವರ್ಷಗಳಿಂದಲೂ ಮಾರಾಟವಾಗದೇ ಉಳಿದ ಹಳೇ ಸರಕನ್ನು ಈಗ ಮಾರುಕಟ್ಟೆಗೆ ತಂದರೆ, ಅದರಲ್ಲಿ ತಾಜಾತನ ಇರಲು ಸಾಧ್ಯವೇ? ‘ಓಲ್ಡ್ ಈಸ್ ಗೋಲ್ಡ್’ ಎಂಬ ಮಾತು ಎಲ್ಲದಕ್ಕೂ ಅನ್ವಯವಾಗುವುದಿಲ್ಲ ಬಿಡಿ. ಸದ್ಯ ಬಿಜಿ ನಾಯಕ ನಟ ಎನಿಸಿರುವ ಸತೀಶ್ ನೀನಾಸಂ, ‘ಮುರಾರಿ’ಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಾತ್ರ ನಿರ್ವಹಿಸಿದ್ದಾರೆಂದರೆ, ಈ ಚಿತ್ರ ಅದಿನ್ನೆಷ್ಟು ಹಳೆಯದು ಅಂತ ನೀವೇ ಊಹಿಸಿಕೊಳ್ಳಿ!

ಪ್ರೀತಿ, ರಾಜಕಾರಣ ಮತ್ತು ರೌಡಿಸಂ ಎಂಬ ಮೂರು ಎಲಿಮೆಂಟ್​ಗಳನ್ನು ಪರಸ್ಪರ ಬೆಸೆದು ತಯಾರಿಸಿದ ಅನೇಕ ಕಥೆಗಳು ಬೆಳ್ಳಿಪರದೆಗೆ ಮುಖತೋರಿಸಿ ಹೋಗಿವೆ. ‘ಮುರಾರಿ’ಯದ್ದೂ ಮತ್ತದೇ ಕಥೆ. ನೂರಾರು ಸಿನಿನಾಯಕರು ತುಳಿದಿರುವ ಸವಕಲು ಹಾದಿಯಲ್ಲೇ ಚಲಿಸುವ ಈತನ ಪಯಣ, ಮುಂದೆ ಹೇಗೆಲ್ಲ ಸಾಗುತ್ತದೆ ಎಂಬುದನ್ನು ಪ್ರೇಕ್ಷಕ ಮೊದಲೇ ನಿರ್ಧರಿಸಬಲ್ಲ. ಹಾಗಾಗಿ, ‘ಆಹಾ.. ಓಹೋ..’ ಎಂಬಿತ್ಯಾದಿ ಉದ್ಘಾರ ಹೊರಡಿಸುವ ಅವಕಾಶವಿಲ್ಲ. ನಾಯಕನಿಗೆ (ಶ್ರೀಮುರುಳಿ) ಹಣ ಗಳಿಸಲು ಇರುವ ಏಕೈಕ ಮಾರ್ಗ ರೌಡಿಸಂ! ಹಣ ಕೈಯಲ್ಲಿಟ್ಟರೆ ಸಾಕು, ತೋರಿಸಿದವರ ತಲೆ ಕತ್ತರಿಸುತ್ತಾನೆ. ಜತೆಗೆ ಪ್ರೀತಿ-ಪ್ರೇಮಕ್ಕೂ ಬೆಲೆ ಕೊಡುತ್ತಾನೆ! ಅದೇ ಕಾರಣಕ್ಕಾಗಿ ಕೆಲಸ ಕೊಟ್ಟ ಯಜಮಾನನ್ನೇ ಎದುರು ಹಾಕಿಕೊಳ್ಳುತ್ತಾನೆ. ಈ ಪರಿಸ್ಥಿತಿಯನ್ನೇ ಬಂಡವಾಳವಾಗಿಸಿಕೊಂಡ ಪುಡಿ ಖಳ ಪ್ರಶಾಂತ್ (ಸತೀಶ್ ನೀನಾಸಂ) ಮೋಸದ ಬಲೆ ಹೆಣೆಯುತ್ತಾನೆ. ಆ ಬಲೆಗೆ ಬಿದ್ದು ನಾಯಕಿಯನ್ನೇ (ರಶ್ಮಿ) ಅಪಹರಿಸಿ ಮೋಸಹೋಗುತ್ತಾನೆ ನಾಯಕ. ಯಾವ ರೀತಿ ಮೋಸ ಹೋಗುತ್ತಾನೆ? ಪ್ರೀತಿ-ಪ್ರೇಮಕ್ಕೆ ಬೆಲೆ ಕೊಡುವ ರೌಡಿಯ ಹಿನ್ನೆಲೆ ಏನು? ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಆತ ಪೊಲೀಸರ ಗುಂಡಿಗೆ ಬಲಿಯಾಗುತ್ತಾನಾ? ಒಳ್ಳೆಯವನಾಗಿ ತನ್ನ ಪ್ರೀತಿ ಉಳಿಸಿಕೊಳ್ಳುತ್ತಾನಾ? ಉತ್ತರವನ್ನು ಸುಮ್ಮನೆ ಊಹಿಸಿಕೊಳ್ಳುತ್ತೀರೋ ಅಥವಾ ಚಿತ್ರಮಂದಿರಕ್ಕೆ ಹೋಗುತ್ತೀರೋ, ಆಯ್ಕೆ ನಿಮ್ಮದು.

ಕೊಲೆಗಾರ ನಾಯಕ ಅದೆಂಥದ್ದೇ ಸಂದೇಶ ಹೇಳಿದರೂ ಅದು ‘ಭೂತದ ಬಾಯಲ್ಲಿ ಭಗವದ್ಗೀತೆ’ ಕೇಳಿದಂತಾಗುತ್ತದೆ ಅಷ್ಟೇ. ನಾಯಕಿ ಪಾತ್ರಕ್ಕೆ ತೂಕ ಕಮ್ಮಿ. ಹಾಗಾಗಿ ರಶ್ಮಿ ಅವರಿಂದ ವಿಶೇಷವನ್ನೇನೂ ನಿರೀಕ್ಷಿಸಲಾಗದು. ಮೊದಲಾರ್ಧದಲ್ಲಿ ಗ್ಲಾಮರ್ ಬಲದಿಂದಲೇ ಪರದೆ ಆಕ್ರಮಿಸಿಕೊಳ್ಳುವ ಮಾಧುರಿ, ಸ್ವಲ್ಪ ಹೊತ್ತಿನ ನಂತರ ನಾಪತ್ತೆ. ಚಿಕ್ಕ ಪಾತ್ರವಾದರೂ ನೆನಪಿನಲ್ಲಿಯುಳಿವಂತೆ ನಟಿಸಿದ್ದಾರೆ ಸತೀಶ್ ನೀನಾಸಂ. ಪೊಲೀಸ್ ಅಧಿಕಾರಿಯಾಗಿ ಶರತ್ ಲೋಹಿತಾಶ್ವ ಭಯ ಹುಟ್ಟಿಸುತ್ತಾರೆ. ಖಳರಾದ ಸುರೇಶ್ಚಂದ್ರ ಮತ್ತು ಪೆಟ್ರೋಲ್ ಪ್ರಸನ್ನ ದುಷ್ಟತನ

ಮೆರೆಯುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಕೌರವ ವೆಂಕಟೇಶ್ ಅವರ ಸಾಹಸದಲ್ಲಿ ಹೊಸ ಪಟ್ಟುಗಳಿಲ್ಲದಿರುವುದು ಆಕ್ಷನ್​ಪ್ರಿಯರಿಗೆ ಕೊಂಚ ನಿರಾಸೆ. ವಿ. ಮನೋಹರ್ ಸಾಹಿತ್ಯ ಮತ್ತು ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಮತ್ತೆ ಮತ್ತೆ ಗುನುಗುನಿಸಿಕೊಳ್ಳುವುದು ಅನುಮಾನ. ಸೂರಿ ಕ್ಯಾಮರಾ ಕಣ್ಣಿಗೆ ಮತ್ತಷ್ಟು ಕಾಂತಿ ಬೇಕಿತ್ತು. ಅದಾಗಲೇ ಎರಡು ಗಂಟೆಗೆ ಕುಸಿದಿರುವ ಚಿತ್ರಕ್ಕೆ ಸಂಕಲನಕಾರ ರಾಜ್ ಇನ್ನೆಷ್ಟು ಕತ್ತರಿ ಹಾಕಲು ಸಾಧ್ಯ? ಅನುಭವಿ ಬಿ.ಎ. ಮಧು ಸಂಭಾಷಣೆಯಲ್ಲಿ ಏರಿಳಿತವಿಲ್ಲ.

***

ಚಿತ್ರ: ಮುರಾರಿ

ನಿರ್ವಣ: ಆರ್.ಎಸ್. ಗೌಡ

ನಿರ್ದೇಶನ: ಎಚ್. ವಾಸು ಪಾತ್ರವರ್ಗ: ಶ್ರೀಮುರಳಿ, ರಶ್ಮಿ, ಶರತ್ ಲೋಹಿತಾಶ್ವ, ಮಾಧುರಿ, ಸುರೇಶ್ಚಂದ್ರ, ಪೆಟ್ರೋಲ್ ಪ್ರಸನ್ನ, ಸತೀಶ್ ನೀನಾಸಂ ಮತ್ತಿತರರು

Write A Comment