ಕರ್ನಾಟಕ

ಸಿಎಂ ಸಿದ್ದರಾಮಯ್ಯ ದನ ಕಾಯ್ತಿದ್ರಾ: ಕುಮಾರಸ್ವಾಮಿ ಪ್ರಶ್ನೆ

Pinterest LinkedIn Tumblr

HD-Kumaraswamy

ಬೆಂಗಳೂರು: `ಒಂದಂಕಿ ಲಾಟರಿ ಅಕ್ರಮ’ದ ಬಗ್ಗೆ ತಾವು ಸರ್ಕಾರಕ್ಕೆ ಪತ್ರ ಬರೆದು ಒಂದೂವರೆ ವರ್ಷವಾಯ್ತು. ಆದರೂ, ಸರ್ಕಾರ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎನ್ನುವುದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನು ದನ ಕಾಯ್ತಿದ್ರಾ? ಎಂದು ಖಾರವಾಗಿ ಪ್ರಶ್ನಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಭಾನುವಾರ ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷದ ಯುವ ಮುಖಂಡರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದಂಕಿ ಲಾಟರಿ ಅಕ್ರಮ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

`ಒಂದಂಕಿ ಲಾಟರಿ ಅಕ್ರಮದ ಬಗ್ಗೆ 2013 ಡಿಸೆಂಬರ್‍ನಲ್ಲಿಯೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಹಲವು ಕುಟುಂಬಗಳು ಇದರಿಂದ ಬೀದಿಗೆ ಬರಲಿವೆ. ಸರ್ಕಾರ ಈ ಬಗ್ಗೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದ್ದೆ. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಪತ್ರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬದಲಿಗೆ ಹೀಯಾಳಿಸಿ ಮಾತನಾಡಿದ್ದರು. ಇದು ಹುಡುಗಾಟಿಕೆ ಮಾತು ಎಂದು ವ್ಯಂಗ್ಯವಾಡಿದ್ದರು. ಆದರೆ, ಒಂದಂಕಿ ಲಾಟರಿ ಈಗ ಅಕ್ರಮ ಬಯಲಾಗಿದೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ರಾಜ್ಯಪಾಲರ ಭೇಟಿ: ಬಂಧಿತ ವ್ಯಕ್ತಿ ರಾಜನ್ ಒಬ್ಬ ಏಜೆಂಟ್ ಮಾತ್ರ. ಈ ದಂಧೆಯ ನಿಜವಾದ ಕಳ್ಳರು ಹವಾನಿಯಂತ್ರಿತ ಕೊಠಡಿ ಯಲ್ಲಿ ಹಾಯ್ ಆಗಿ ಕುಳಿತಿದ್ದಾರೆ. ಇಂಥ ಕೆಟ್ಟ ಸರ್ಕಾರ ರಾಜ್ಯದ ಜನತೆಗೆ ಬೇಕಾ?. ಒಂದಂಕಿ ಲಾಟರಿಯ ಅಕ್ರಮ ದಂಧೆ ಕುರಿತು ಮಂಗಳವಾರ ಅಥವಾ ಬುಧವಾರ ರಾಜ್ಯಪಾಲರನ್ನು ಭೇಟಿ ಮಾಡಿ ವಿವರಣೆ ನೀಡಲಾಗುವುದು. ಈ ಸರ್ಕಾರವನ್ನು ವಜಾ ಮಾಡುವಂತೆ ಮನವಿ ಮಾಡ ಲಾಗುವುದು ಎಂದರು.

ಸರ್ಕಾರದ ಬೇಜವಾಬ್ದಾರಿಯಿಂದಲೇ ಲಾಟರಿ ಹಗರಣ ನಡೆದಿದೆ. ಸಿಎಂ ಮತ್ತು ಗೃಹ ಸಚಿವರೇ ಈ ದಂಧೆಯ ಪಾಪಕ್ಕೆ ಹೊಣೆ. ಒಂದೂವರೆ ವರ್ಷದಿಂದ ಈ ದಂಧೆ ನಿರಂತರವಾಗಿ ನಡೆಯುತ್ತಾ ಬಂದರೂ ನೀವು(ಸರ್ಕಾರ) ಮೌನವಹಿಸಿದ್ದೀರಿ ಎಂದರೆ, ನಿಮ್ಮ ವಿರುದ್ಧ ಏನು ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

Write A Comment