ಮನೋರಂಜನೆ

ಸುನಂದ ಪುಷ್ಕರಾವ್ ಸುತ್ತಾ ಎ.ಎಂ.ಆರ್. ನಿರ್ದೇಶನದ ‘ಗೇಮ್’

Pinterest LinkedIn Tumblr

game

– ಎಚ್. ಮಹೇಶ್
ಎ.ಎಂ.ಆರ್. ನಿರ್ದೇಶನದ ಗೇಮ್ ಚಿತ್ರದ ಕತೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಮಂತ್ರಿ ಶಶಿ ತರೂರ್‌ರ ಪತ್ನಿ ಸುನಂದಾ ಪುಷ್ಕರ್ ಅವರ ಕೊಲೆ ರಹಸ್ಯ ಕುರಿತಾದ ಕತೆಯಾಧರಿಸಿದ ಸಿನಿಮಾ ಎಂಬ ಸ್ಫೋಟಕ ಮಾಹಿತಿ ಈಗ ಹೊರ ಬಿದ್ದಿದೆ. ಇದುವರೆಗೂ ಗೇಮ್ ಚಿತ್ರದ ಕತೆ ಐಪಿಎಲ್‌ನಲ್ಲಿ ನಡೆಯುವ ಬೆಟ್ಟಿಂಗ್ ದಂಧೆ ಕುರಿತಾದ ಸಿನಿಮಾ ಎಂದು ಹೇಳಲಾಗಿತ್ತು. ಆದರೆ ಮನಿಷಾ ಕೊಯಿರಾಲಾ ಎಂಟ್ರಿ ಕೊಟ್ಟ ನಂತರ ಈ ಚಿತ್ರದ ಕತೆ ಬಗ್ಗೆ ಹೊಸ ತಿರುವು ಸಿಕ್ಕಿವೆ.

ಇತ್ತೀಚೆಗಷ್ಟೇ ಮನಿಷಾ ಕೊಯಿರಾಲಾ ಬೆಂಗಳೂರಿಗೆ ಬಂದಿದ್ದರು. ಈ ಸಮಯದಲ್ಲಿ ಎ.ಎಂ.ಆರ್.ರಮೇಶ್, ಚಿತ್ರದಲ್ಲಿ ಮನಿಷಾ ಕೊಯಿರಾಲಾ ಅವರ ಕೊಲೆಯಾಗುತ್ತದೆ ಎಂದು ಹೇಳಿದ್ದರು.

ಮನಿಷಾ ಕೊಯಿರಾಲಾರನ್ನು ಸಂಪರ್ಕಿಸುವ ಮುನ್ನ ತಮಿಳು ನಟಿ ಖುಷ್ಬೂ ಅವರನ್ನು ಈ ಪಾತ್ರಕ್ಕೆ ಸಂಪರ್ಕಿಸಲಾಗಿತ್ತು. ಆದರೆ ಅವರು ಪಾತ್ರದ ಬಗ್ಗೆ ವಿವರಣೆ ಬಯಸಿದ್ದರು. ಪಾತ್ರದ ಬಗ್ಗೆ ಮಾಹಿತಿ ಕೊಡಲು ಸಾಧ್ಯ ಇಲ್ಲ ಎಂದು ನಿರ್ದೇಶಕ ರಮೇಶ್, ಮನಿಷಾ ಕೊಯಿರಾಲಾರನ್ನು ಸಂಪರ್ಕಿಸಿ ಚಿತ್ರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.

ಹಾಗಾದರೆ ಇದು ಯಾರ ಜೀವನ ಕತೆಯಾಧರಿಸಿದ ಸಿನಿಮಾ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಅದಕ್ಕೆ ರಮೇಶ್ ಕೊಡುವ ಉತ್ತರ ಹೀಗಿದೆ : ಇದು ಮರ್ಡರ್ ಮಿಸ್ಟರಿ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಸುನಂದಾ ಪುಷ್ಕರ್ ಮರ್ಡರ್ ಮಿಸ್ಟರಿ ಕತೆಯೇ ಅಥವಾ ಐಪಿಎಲ್‌ನಲ್ಲಿ ನಡೆಯುವ ಬೆಟ್ಟಿಂಗ್ ಕತೆಯೇ ಎಂಬುದನ್ನು ಸಿನಿಮಾ ರಿಲೀಸ್ ನಂತರ ಜನರು ನೋಡಿ ಡಿಸೈಡ್ ಮಾಡಲಿ. ನನ್ನ ಕತೆ ಬಗ್ಗೆ ಸದ್ಯಕ್ಕೆ ನಾನು ಯಾವುದೇ ಮಾಹಿತಿ ಕೊಡಲು ಇಷ್ಟಪಡುವುದಿಲ್ಲ’ ಎಂದ ಹೇಳಿದ ಅವರು ಕತೆ ಬಗ್ಗೆ ಮಾತನಾಡಲು ಇಷ್ಟಪಡಲಿಲ್ಲ.

ಸುನಂದಾ ಪುಷ್ಕರ್ ಕತೆ ಎಂದು ಲಿಂಕ್ ಆಗಿದ್ದು ಹೇಗೆ? ಈ ಪ್ರಶ್ನೆಗೆ ರಮೇಶ್ ನಿಖರವಾಗಿ ಉತ್ತರ ಕೊಡುತ್ತಾರೆ. ಅವರು ಹೇಳುವಂತೆ, ‘ ಮನಿಷಾ ಕೊಯಿರಾಲಾ ನಿರ್ವಹಿಸುತ್ತಿರುವ ಪಾತ್ರಕ್ಕೆ ಖುಷ್ಬೂ ಅವರನ್ನು ನಮ್ಮ ಚಿತ್ರದ ಪಿಆರ್‌ಒ ಸಂಪರ್ಕಿಸಿದ್ದು ನಿಜ. ಅವರು ಕತೆ ಕೇಳುವ ಮುನ್ನವೇ ಇದು ಸುನಂದ ಪುಷ್ಕರ್ ಅವರ ಮರ್ಡರ್ ಮಿಸ್ಟರಿಯಾಧರಿಸಿದ ಸಿನಿಮಾವೇ ಎಂದು ಕೇಳಿದರು. ಅಲ್ಲಿಗೆ ಅವರಿಗೆ ಕತೆ ಹೇಳಿ ಪಾತ್ರ ಮಾಡಿಸುವ ನನ್ನಾಸೆ ಕಮರಿಬಿತ್ತು. ಆ ನಂತರ ಅವರು ನಮ್ಮ ಪ್ರೊಡಕ್ಷನ್ ಮ್ಯಾನೇಜರ್‌ಗೆ ಕರೆ ಮಾಡಿ ಗೇಮ್ ಸಿನಿಮಾ ಸುನಂದಾ ಪುಷ್ಕರ್ ಅವರ ಕೊಲೆಯಾಧರಿಸಿದ ಸಿನಿಮಾವೇ ಅಥವಾ ಅಲ್ಲವೇ ಎಂದು ತಿಳಿದುಕೊಳ್ಳುವ ಒತ್ತಡ ಇದೆ, ಕತೆ ಹೇಳಿ ಎಂದು ಕೇಳಿದ್ದಾರೆ. ಈಗ ಖುಷ್ಬೂ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅವರಿಗೆ ಪಾತ್ರ ಮಾಡುವುದಕ್ಕಿಂತ ಹೆಚ್ಚಾಗಿ ನನ್ನ ಸಿನಿಮಾದ ಕತೆ ಏನು ಎಂದು ತಿಳಿದುಕೊಳ್ಳುವ ಕುತೂಹಲ ಇದೆ. ಅದಕ್ಕಾಗಿಯೇ ಅವರನ್ನು ಪಾತ್ರದಿಂದ ಕೈ ಬಿಡಲಾಗಿದೆ’ ಎಂದು ವಿವರಣೆ ಕೊಟ್ಟರು ನಿರ್ದೇಶಕ ರಮೇಶ್.

ಬಲ್ಲ ಮೂಲಗಳ ಪ್ರಕಾರ ಗೇಮ್ ಸಿನಿಮಾ ಸುನಂದಾ ಪುಷ್ಕರ್ ಅವರ ಕೊಲೆಯಾಧರಿಸಿದ ಸಿನಿಮಾ ಎಂದೇ ಹೇಳಲಾಗುತ್ತಿದೆ. ಮನಿಷಾ ಕೊಯಿರಾಲಾ, ಸುನಂದಾ ಪುಷ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಶಿ ತರೂರ್ ಪಾತ್ರವನ್ನು ತಮಿಳು ನಟ ಶ್ಯಾಮ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಿರ್ದೇಶಕರು ಮಾತ್ರ ಈ ವಿಷಯಗಳ ಬಗ್ಗೆ ಹೆಚ್ಚಿಗೆ ಹೇಳುವ ಬದಲು ಮೌನಕ್ಕೆ ಶರಣಾಗುತ್ತಾರೆ.

ಈ ಚಿತ್ರದಲ್ಲಿ ಮನಿಷಾ ಕೊಯಿರಾಲಾ ಕೊಲೆಯಾಗುತ್ತಾರೆ. ಆ ಕೊಲೆ ಭೇದಿಸುವ ಪಾತ್ರದಲ್ಲಿ ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದಾರೆ. ಇಷ್ಟು ವಿವರ ಬಿಟ್ಟರೆ ನನ್ನ ಸಿನಿಮಾದ ಕತೆ ಏನು ಎಂದು ಹೇಳುವುದಕ್ಕೆ ಇದು ಸಕಾಲವಲ್ಲ.
-ಎಂ.ಎಂ.ಆರ್.ರಮೇಶ್, ನಿರ್ದೇಶಕ
-ಕೃಪೆ: ವಿಜಯ ಕನಾಱಟಕ

Write A Comment