ರಾಷ್ಟ್ರೀಯ

ನಿರಂತರ ಅತ್ಯಾಚಾರ ಎಸಗಿ, ಹುಟ್ಟಿದ ಮಗುವನ್ನು ಸಮಾಧಿ ಮಾಡಿದ ಚಿಕ್ಕಪ್ಪಂದಿರು

Pinterest LinkedIn Tumblr

ra

ಅಹಮದಾಬಾದ್: 23 ವರ್ಷದ ಯುವತಿಯ ಮೇಲೆ ಆಕೆಯ ಚಿಕ್ಕಪ್ಪಂದಿರೇ ನಿರಂತರ ಅತ್ಯಾಚಾರ ಎಸಗಿದ ಭೀಕರ ಘಟನೆ ಅಹಮದಾಬಾದ್ ಜಿಲ್ಲೆಯ ವಿರಮ್‌ಗಮ್ ನಗರದಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ಆಕೆಗೆ ಹುಟ್ಟಿದ ಮಗು ತಾವಿಬ್ಬರು ಅತ್ಯಾಚಾರ ನಡೆಸಿಯೇ ಹುಟ್ಟಿದ್ದಾಗಿರಬಹುದೆಂದು ಭಾವಿಸಿದ ಅವರಿಬ್ಬರು ಮಗುವನ್ನು ಕದ್ದು, ಕೊಂದು ಸಮಾಧಿ ಮಾಡಿದ್ದಾರೆ.

ಜಮಲ್ಪುರ್ ಗ್ರಾಮದ ನಿವಾಸಿಯಾಗಿರುವ ಪೀಡಿತೆ ಈ ಕುರಿತು ತನ್ನ ಚಿಕ್ಕಪ್ಪಂದಿರ ವಿರುದ್ಧ ಮಿರಮಗಮ್‌ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೀಡಿತೆಗೆ ಮೂರು ತಿಂಗಳ ಹಿಂದೆ ವಿವಾಹವಾಗಿದ್ದು, ಆಕೆಯ ಗಂಡನ ಜತೆ ಜಗಳವಾಡಿದ್ದ ಚಿಕ್ಕಪ್ಪಂದಿರು ಆಕೆಯನ್ನು ಮನೆಗೆ ಮರಳಿ ಕರೆತಂದಿದ್ದರು.

ನಂತರ ಅವರಿಬ್ಬರು ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಆಕೆಯ ತಂದೆ-ತಾಯಿ ಮತ್ತು ಸಹೋದರನಿಗೂ ಆಕೆಯನ್ನು ನೋಡಲು ಬಿಟ್ಟಿಲ್ಲ. ಅವಳು ಗರ್ಭಿಣಿ ಎಂದು ಅರಿವಾದ ಮೇಲೆ ಆಕೆಯ ಡೆಲಿವರಿಯನ್ನು ಅಹಮದಾಬಾದ್ ನಗರದ ಹೊರಗೆ ಮಾಡಿಸಿ ರಹಸ್ಯವನ್ನು ಕಾಪಾಡಲು ಅವರಿಬ್ಬರು ನಿಶ್ಚಯಿಸಿದರು.

ಕಳೆದ ತಿಂಗಳ ಮೊದಲ ವಾರದಲ್ಲಿ ಆಕೆಯನ್ನು ಮೆಹಸಾನಾದ ಕಡಿಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆ ಮಗುವನ್ನು ಹೆತ್ತ ತಕ್ಷಣ ಅದನ್ನು ಕದ್ದು ಚೀಲದಲ್ಲಿ ಹಾಕಿಕೊಂಡು ಹೋದ ಅವರಿಬ್ಬರು ಸನಾಂದನ ಕೃಷಿಭೂಮಿಯಲ್ಲಿ ಅದನ್ನು ಹೂತು ಹಾಕಿ ರಾಕ್ಷಸಿ ಕೃತ್ಯವನ್ನು ಮೆರೆದಿದ್ದಾರೆ.  ಆಕೆ ಮೆಹಸಾನಾದಲ್ಲಿರುವುದನ್ನು  ಕಂಡು ಹಿಡಿದ ಸಹೋದರ ಆಕೆಯನ್ನು ಸಂಪರ್ಕಿಸಿ  ನಂತರ ಇಬ್ಬರು ಸೇರಿಕೊಂಡು ಅಹಮದಾಬಾದ್ ಜಿಲ್ಲಾ ಪೊಲೀಸ್ ಬಳಿ ದೂರು ನೀಡಿದ್ದಾರೆ.

ನೀಡಿರುವ ದೂರಿನ ಪ್ರಕಾರ ಯುವತಿಯ ಪೋಷಕರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದುದರಿಂದ ಆಕೆಯನ್ನು ನಾವು ನೋಡಿಕೊಳ್ಳುವುದಾಗಿ ಇಬ್ಬರು ಅವಿವಾಹಿತ ಚಿಕ್ಕಪ್ಪಂದಿರು ಹೇಳಿಕೊಳ್ಳುತ್ತಿದ್ದರು. ಯುವತಿಯ ಪೋಷಕರು ಹಳ್ಳಿಯಲ್ಲಿರುವ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಆರೋಪಿಗಳಿಬ್ಬರು  ತೋಟದ ಮನೆಯಲ್ಲಿ ವಾಸವಾಗಿದ್ದರು. ಆಕೆಯನ್ನು ಪದೇ ಪದೇ ಮನೆಗೆ ಕರೆಸಿಕೊಳ್ಳುತ್ತಿದ್ದ ಅವರಿಬ್ಬರು ಅತ್ಯಾಚಾರ ಎಸಗಿ, ಈ ಕುರಿತು ತಂದೆ-ತಾಯಿಗಳಿಗೆ ಹೇಳಿದರೆ ಘೋರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಒಡ್ಡಿದ್ದರು. ಹೀಗಾಗಿ ಆಕೆ ಅವರ ದೌರ್ಜನ್ಯವನ್ನು ಮೌನವಾಗಿ ಸಹಿಸಿಕೊಂಡಿದ್ದಾಳೆ.

ಆರೋಪಿ ಸಹೋದರರಲ್ಲಿ  ಹಿರಿಯನನ್ನು ಬಂಧಿಸಲಾಗಿದ್ದು, ಕಿರಿಯವನು ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

-ಕೃಪೆ: ವೆಬ್ ದುನಿಯಾ

Write A Comment