ಮನೋರಂಜನೆ

ಚೆನ್ನೈ ಸೂಪರ್ ಕಿಂಗ್ಸ್–ಕೋಲ್ಕತ್ತ ನೈಟ್‌ ರೈಡರ್ಸ್‌ ಹಣಾಹಣಿ ಇಂದು; ದೋನಿ–ಗಂಭೀರ್ ಮುಖಾಮುಖಿ

Pinterest LinkedIn Tumblr

dhonin

ಮಂಗಳವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೋಲ್ಕತ್ತ ನೈಟ್‌ ರೈಡರ್ಸ್‌ ಸವಾಲು ಎದುರಿಸಲಿದೆ. ಇದಕ್ಕಾಗಿ ಚೆನ್ನೈ ತಂಡದ ಸುರೇಶ್‌ ರೈನಾ (ಎಡ) ಮತ್ತು ಎಂ.ಎಸ್‌. ದೋನಿ ಸೋಮವಾರ ಅಭ್ಯಾಸ ನಡೆಸಿದರು ಪಿಟಿಐ ಚಿತ್ರ

ಚೆನ್ನೈ (ಐಎಎನ್ಎಸ್): ಐಪಿಎಲ್ ಟೂರ್ನಿಯ ಬಲಶಾಲಿ ತಂಡವಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್ ಮಂಗಳವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಸವಾಲೊಡ್ಡಲಿದೆ. ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿರುವ ಮಹೇಂದ್ರ ಸಿಂಗ್ ದೋನಿ ಬಳಗದ ಆತ್ಮವಿಶ್ವಾಸವು ಉತ್ತುಂಗದಲ್ಲಿದೆ.

ಟೂರ್ನಿಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ತಾನ್ ರಾಯಲ್ಸ್ ವಿರುದ್ಧ ಮಾತ್ರ ಚೆನ್ನೈ ತಂಡವು ಸೋಲನುಭವಿಸಿದೆ. ಉಳಿದ ಪಂದ್ಯಗಳಲ್ಲಿ ಆಲ್‌ರೌಂಡ್ ಪ್ರದರ್ಶನದ ಮೂಲಕ ನಿರಂತರ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ 192 ರನ್ನುಗಳನ್ನು ಗಳಿಸಿದ ಚೆನ್ನೈ, ಎದುರಾಳಿಯನ್ನು ಕೇವಲ 95 ರನ್ನುಗಳಿಗೆ ಕಟ್ಟಿಹಾಕಿತ್ತು.

ಆರಂಭಿಕ ಆಟಗಾರರಾದ ಬ್ರೆಂಡನ್ ಮೆಕ್ಲಮ್ ಮತ್ತು ಡ್ವೇನ್ ಸ್ಮಿತ್ ಉತ್ತಮ ಆರಂಭ ಒದಗಿಸಿದರೆ, ಸುರೇಶ್ ರೈನಾ, ನಾಯಕ ದೋನಿ, ಫಾಫ್ ಡು ಪ್ಲೆಸಿಸ್ ಮಧ್ಯಮ ಕ್ರಮಾಂಕದಲ್ಲಿ ರನ್ನುಗಳ ಬೆಟ್ಟ ಕಟ್ಟುತ್ತಿದ್ದಾರೆ. ಬೌಲಿಂಗ್‌ನಲ್ಲಿ ಆಶಿಶ್ ನೆಹ್ರಾ ಅವರ ಸ್ವಿಂಗ್‌, ಆರ್. ಅಶ್ವಿನ್ ಅವರ ಕೇರಂ ಬಾಲ್‌ಗಳು ಬಲ ತುಂಬಿವೆ.

ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಆಟಗಾರರ ಪ್ರದರ್ಶನ ಮಟ್ಟ ಎಲ್ಲ ಪಂದ್ಯಗಳಲ್ಲಿಯೂ ಒಂದೇ ತೆರನಾಗಿಲ್ಲ. ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ತಂಡವು ಎರಡರಲ್ಲಿ ಸೋತಿದೆ. ಭಾನುವಾರ ರಾಜಸ್ತಾನ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿತು. ಇದರಿಂದ ಎರಡೂ ತಂಡಗಳು ಒಂದೊಂದು ಪಾಯಿಂಟ್ ಗಳಿಸಿದ್ದವು.

ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ , ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಯೂಸುಫ್ ಪಠಾಣ್ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸುತ್ತಿಲ್ಲ. ಅವರು ಫಾರ್ಮ್‌ಗೆ ಮರಳಿದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಆನೆಬಲ ಬರುವುದು ಖಚಿತ. ವೇಗಿ ಮಾರ್ನ್ ಮಾರ್ಕೆಲ್, ಉಮೇಶ್ ಯಾದವ್, ಸ್ಪಿನ್ನರ್ ಪಿಯೂಷ್ ಚಾವ್ಲಾ ಉತ್ತಮ ಫಾರ್ಮ್‌ ನಲ್ಲಿದ್ದಾರೆ.

ಉಳಿದ ಬೌಲರ್‌ಗಳಿಂದ ಸೂಕ್ತ ಬೆಂಬಲ ಸಿಕ್ಕರೆ ಪಂದ್ಯಕ್ಕೆ ತಿರುವು ನೀಡುವ ಸಾಮರ್ಥ್ಯ ಅವರಿಗೆ ಇದೆ. ಚೆನ್ನೈನ ಬ್ಯಾಟಿಂಗ್ ಶಕ್ತಿಗೆ ತಡೆಯೊಡ್ಡಬಲ್ಲ ತಾಕತ್ತು ಕೂಡ ಇದೆ. ಬೌಲಿಂಗ್‌ನಲ್ಲಿ ನಿಯಮಬಾಹಿರ ಶೈಲಿಯ ಆರೋಪ ಎದುರಿಸುತ್ತಿರುವ ಸುನಿಲ್ ನಾರಾಯಣ್ ಅವರು ಹೊರ ಗುಳಿದರೆ ಸ್ಪಿನ್‌ ವಿಭಾಗ ದುರ್ಬಲ ವಾಗುವ ಅಪಾಯವಿದೆ. ಅವರ ಬದಲಿಗೆ ಕರ್ನಾಟಕದ ಕೆ.ಸಿ. ಕಾರ್ಯಪ್ಪಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

ಮುಖ್ಯಾಂಶಗಳು
*ಪಾಯಿಂಟ್ಸ್‌ ಪಟ್ಟಿಯಲ್ಲಿ ನಂಬರ್‌ ಒನ್‌ ಸ್ಥಾನದತ್ತ ದೋನಿ ಚಿತ್ತ
*ಉತ್ತಮ ಫಾರ್ಮ್‌ನಲ್ಲಿ ಸುರೇಶ್‌ ರೈನಾ
*ಕೆ.ಸಿ.ಕಾರ್ಯಪ್ಪಗೆ ಅವಕಾಶ ನಿರೀಕ್ಷೆ

Write A Comment