ಅಂತರಾಷ್ಟ್ರೀಯ

ಪೈಲಟ್‌ ಅಜ್ಜನ ಗಿನ್ನೆಸ್‌ ದಾಖಲೆ

Pinterest LinkedIn Tumblr

gulpilot

ಈ ಅಜ್ಜನಿಗೀಗ ಬರೋಬರಿ 95 ವರ್ಷ ಐದು ತಿಂಗಳು. ವಿಮಾನ ಏರಿ ಪೈಲಟ್‌ ಸೀಟಿನಲ್ಲಿ ಕೂತು ಅದನ್ನು ಹಾರಿಸುತ್ತಿದ್ದರೆ ಎಂಥ ಯುವ ಪೈಲಟ್‌ಗಳೂ ನಾಚಲೇಬೇಕು. ಅಂಥ ನಿಪುಣತೆ ಇವರದ್ದು. ಕಳೆದ ವಾರ ವಿಮಾನ ಹಾರಿಸುವ ಮೂಲಕ ‘ಹಿರಿಯ ಪೈಲಟ್‌’ ಎಂದು ಗಿನ್ನೆಸ್‌ ಬುಕ್‌ ಆಫ್‌ ವರ್ಲ್ಡ್ ರಿಕಾರ್ಡ್‌’ಗೆ ಸೇರ್ಪಡೆಗೊಂಡಿದ್ದಾರೆ ಇವರು.

ಇವರ ಹೆಸರು ಪೀಟರ್‌ ವೆಬರ್. ಕ್ಯಾಲಿಫೋರ್ನಿಯಾದ ಕ್ಯಾಮರಾನ್‌ ಪಾರ್ಕ್‌ನಲ್ಲಿ 72 ವರ್ಷಗಳಿಂದ ಪೈಲಟ್‌ ಆಗಿ ದುಡಿಯುತ್ತಿ ದ್ದಾರೆ. ಈಗಲೂ ವಿಮಾನ ಚಾಲನಾ ಪರವಾನಗಿ ಹೊಂದಿರುವ ಪೀಟರ್ ತಿಂಗಳಲ್ಲಿ ಒಂದೆರಡು ಬಾರಿ ಮಾತ್ರ ಹಾರಾಟ ನಡೆಸುತ್ತಾರೆ.

ಎರಡನೇ ಮಹಾಯುದ್ಧ ಹಾಗೂ ವಿಯೆಟ್ನಾಂ ಯುದ್ಧದಲ್ಲಿ ಹಾರಾಟ ನಡೆಸಿರುವ ಅವರು ಕೊರಿಯನ್ ಯುದ್ಧ ವಿಮಾನದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಮೆರಿಕದ ವಾಯುದಳದಲ್ಲಿ ಲೆಫ್ಟಿನೆಂಟ್ ಕರ್ನಲ್ ಪದವಿಯಲ್ಲಿದ್ದ ಪೀಟರ್‌ ಅವರು 1970ರಲ್ಲಿ ನಿವೃತ್ತಿ ಪಡೆದಿದ್ದಾರೆ.

ಕಳೆದ ವಾರ ವಿಮಾನ ಹಾರಿಸಿದ ನಂತರ ಅದರ ಸಂಪೂರ್ಣ ದೃಶ್ಯಾವಳಿಗಳನ್ನು ದಾಖಲಿಸಿ ‘ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌’ನ ವ್ಯವಸ್ಥಾಪಕ ಮಂಡಳಿಗೆ ಕಳುಹಿಸಿಕೊಟ್ಟಿದ್ದರು. “ನನ್ನದು ವಿಶ್ವ ದಾಖಲೆ ‌ ಆಗಿದೆಯೋ ಇಲ್ಲವೋ ತಿಳಿದಿರಲಿಲ್ಲ. ಆದರೂ ಏನೋ ವಿಶ್ವಾಸ ನನ್ನಲ್ಲಿತ್ತು. ಆ ವಿಶ್ವಾಸ ಸುಳ್ಳಾಗಲಿಲ್ಲ. ನನ್ನ ಮೇಲ್‌ಗೆ ‘ಅಭಿನಂದನೆಗಳು, ನೀವು ಗಿನ್ನೆಸ್‌ ದಾಖಲೆಗೆ ಸೇರಿರುವಿರಿ.

ವಿಮಾನವನ್ನು ಏಕಾಂಗಿಯಾಗಿ ಓಡಿಸುವ ಪೈಲಟ್‌ ಪರವಾನಗಿ ಹೊಂದಿರುವ ವಿಶ್ವದ ಅತ್ಯಂತ ಹಿರಿಯ ಪೈಲಟ್‌’ ಎಂದು ನೀವು ಬಿರುದಾಂಕಿತಗೊಂಡಿರುವಿರಿ’ ಎಂಬ ಸಂದೇಶ ಬಂತು. ಇದನ್ನು ನೋಡಿ ನನಗಾದ ಆನಂದ ಅಷ್ಟಿಷ್ಟಲ್ಲ” ಎಂದು ನೆನೆಸಿಕೊಳ್ಳುತ್ತಾರೆ ಈ ಅಜ್ಜ. ಲಾಂಗ್‌ಮಾಂಟ್‌ನ ಕೋಲ್‌ ಕುಗೆಲ್‌ ಎಂಬ 105 ವರ್ಷದ ವ್ಯಕ್ತಿಯೊಬ್ಬರು 2007ರಲ್ಲಿ ವಿಮಾನ ಹಾರಿಸಿ ಗಿನ್ನೆಸ್‌ ದಾಖಲೆ ಸೇರಿದ್ದರು. ಅದೇ ವರ್ಷ ಅವರು ಮರಣ ಹೊಂದಿದರು. ಆ ನಂತರದ ದಾಖಲೆ ಪೀಟರ್‌ ಅವರದ್ದು.

‘ನನ್ನ ಸಾಧನೆ ಇಷ್ಟಕ್ಕೇ ಮುಗಿದಿಲ್ಲ. 96ನೆಯ ವಯಸ್ಸಿನಲ್ಲಿ ಗಿನ್ನೆಸ್‌ ಪುಸ್ತಕದಲ್ಲಿ ಯಾವ ರೀತಿ ದಾಖಲೆ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೇನೆ’ ಎಂದು ಬೊಚ್ಚು ಬಾಯಿ ಬೀರಿ ನಗುತ್ತಿದ್ದಾರಂತೆ ಪೀಟರ್‌. ಇವರ ದಾಖಲೆ ವಿಮಾನ ಹಾರಾಟವನ್ನು ಯೂಟ್ಯೂಬ್‌ನಲ್ಲಿ ನೋಡಬಹುದು: https://www.youtube.com/watch?t=85&v=5tcyWVSOm-s
(ಪ್ರಜಾವಾಣಿ)

Write A Comment