ಮನೋರಂಜನೆ

ಚಿತ್ರ ದಕ್ಷ: ಇತಿಮತಿ ಮತ್ತು ದಕ್ಷತೆ

Pinterest LinkedIn Tumblr

pvec25aprmDhaksha3

– ಗಣೇಶ ವೈದ್ಯ

ಚಿತ್ರ: ದಕ್ಷ
ತಾರಾಗಣ: ವಿಜಯ್, ಪಂಕಜ್, ನೇಹಾ ಪಾಟೀಲ್, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಇತರರು
ನಿರ್ದೇಶನ: ಎಸ್. ನಾರಾಯಣ್
ನಿರ್ಮಾಪಕರು: ಭಾಗ್ಯವತಿ ಕಂಬೈನ್ಸ್

ನಾಳೆ ಬೆಳಗಾದರೆ ಸಮಾಜ ಘಾತುಕನ ವಿರುದ್ಧ ತೀರ್ಪು ನೀಡಲಿರುವ ನ್ಯಾಯಮೂರ್ತಿಗಳು (ಸುಚೇಂದ್ರ ಪ್ರಸಾದ್) ಮತ್ತು ಆ ತೀರ್ಪನ್ನು ಹೇಗಾದರೂ ತಮ್ಮ ಪರವಾಗಿ ಬರೆಸಿಕೊಳ್ಳುವ ಹಟಕ್ಕೆ ಬಿದ್ದು ರಾತ್ರಿಯಲ್ಲಿ ನ್ಯಾಯಮೂರ್ತಿಗಳ ಮನೆಯನ್ನು ಹೈಜಾಕ್ ಮಾಡಿ ಕುಟುಂಬದವರನ್ನೆಲ್ಲ ಒತ್ತೆಯಾಳಾಗಿ ಇರಿಸಿಕೊಳ್ಳುವ ನಕ್ಸಲರು. ಅಲ್ಲಿಂದ ಕಾನೂನು ಪಾಲಕರು ಮತ್ತು ಕಾನೂನು ಕೈಗೆತ್ತಿಕೊಂಡವರ ಸೆಣಸಾಟ ಆರಂಭ. ಸಂಕಷ್ಟದಲ್ಲಿರುವ ಕುಟುಂಬವನ್ನು ಹಾಗೂ ನ್ಯಾಯವನ್ನು ರಕ್ಷಿಸಲು ಆ ಮನೆಗೆ ಏಕಾಂಗಿಯಾಗಿ ಬರುವ ಟೈಗರ್ ಕಮಾಂಡೊ ದಕ್ಷನ (ವಿಜಯ್) ದೇಶಭಕ್ತಿ, ತೋಳ್ಬಲ ಹಾಗೂ ಚಾಣಾಕ್ಷತದ ಅನಾವರಣವೇ ‘ದಕ್ಷ’ ಸಿನಿಮಾ.

ಎಸ್‌. ನಾರಾಯಣ್ ನಿರ್ದೇಶನದ ‘ದಕ್ಷ’ ಒಂದೇ ಶಾಟ್‌ನಲ್ಲಿ ಚಿತ್ರೀಕರಣಗೊಂಡು ಗಿನ್ನೆಸ್ ಪುಟ ಸೇರ್ಪಡೆಯಾಗಿರುವ ಸಿನಿಮಾ. ಇದೊಂದು ಹಲವು ಮಿತಿಗಳಿರುವ ಒಳ್ಳೆಯ ಪ್ರಯತ್ನದಂತೆ ಕಾಣಿಸುತ್ತದೆ. ಒಂದೇ ಟೇಕ್‌ ಆದ್ದರಿಂದ ಕ್ಯಾಮೆರಾದ ಪ್ರತಿ ಚಲನೆಗೂ ಕಾರಣ ಕೊಡುವ ಅನಿವಾರ್ಯತೆ ಎದುರಾದಂತಿದೆ. ಹಾಗಾಗಿಯೇ ಪಾತ್ರವೊಂದು ಒಂದು ಸ್ಥಳದಿಂದ ಮತ್ತೊಂದು ಸ್ಥಳ ಸೇರುವವರೆಗೂ ಆ ಪಾತ್ರದ ಹಿಂದೆ ಕ್ಯಾಮೆರಾ ಓಡಿಸಿದ್ದಾರೆ ಛಾಯಾಗ್ರಾಹಕ ರೇಣುಕುಮಾರ್.

ಇಂತಹ ಸನ್ನಿವೇಶಗಳನ್ನು ಸಂಕಲನದ ಅವಧಿಯಲ್ಲಿ ಜಾಣತನದಿಂದ ನಿರ್ವಹಿಸಿದ್ದರೆ ಚಿತ್ರದ ಅವಧಿ ಇನ್ನೂ ಕಡಿಮೆಯಾಗಬಹುದಿತ್ತು, ತಾಂತ್ರಿಕವಾಗಿಯೂ ಶ್ರೀಮಂತವಾಗಿಸಬಹುದಿತ್ತು. ಇಡೀ ಚಿತ್ರ ಒಂದು ಮನೆಯಲ್ಲಿ ಸಾಗುವುದರಿಂದ ಪ್ರೇಕ್ಷಕನನ್ನು ಅಲ್ಲಿಯೇ ಕಟ್ಟಿಹಾಕಿದಂತೆ ಎನಿಸುತ್ತದೆ.

ವಿಜಯ್ ಚಿತ್ರಗಳಲ್ಲಿ ಭರಪೂರ ಹೊಡೆದಾಟಗಳನ್ನು ನಿರೀಕ್ಷಿಸುವ ಅಭಿಮಾನಿಗಳಿಗೆ ಇಲ್ಲಿ ನಿರಾಸೆಯೇನೂ ಇಲ್ಲ. ಜೊತೆಗೆ ಬಂದೂಕಿನ ನಳಿಕೆಯಿಂದ ಗುಂಡುಗಳು ಸದ್ದು ಮಾಡುವಂತೆ ವಿಜಯ್ ಬಾಯಿಂದ ಹೋರಾಟ ಮತ್ತು ದೇಶಭಕ್ತಿಯ ವಾಕ್ಯಗಳು ಸಿಡಿಯುತ್ತವೆ.

ಚಿತ್ರ ಕೊಂಚ ಗಂಭೀರವಾಗುತ್ತಿದೆ ಎನ್ನುವಷ್ಟರಲ್ಲೇ ಬುಲೆಟ್ ಪ್ರಕಾಶ್ ಕಚಗುಳಿಯಿಡುತ್ತಾರೆ. ಕಳ್ಳನಾಗಿ ನ್ಯಾಯಾಧೀಶರ ಮನೆ ಸೇರುವ ‘ಬುಲೆಟ್’ ಇರುವಿಕೆ ಕೊನೆಯವರೆಗೆ ಯಾರಿಗೂ ಗೊತಗದಿದ್ದರೂ ಆ ಪಾತ್ರ ಇಡೀ ಸಿನಿಮಾದ ಭಾಗವಾಗುತ್ತದೆ. ಬುಲೆಟ್ ಪ್ರಕಾಶ್ ತಮ್ಮ ಹಾವಭಾವದಿಂದಲೇ ಪ್ರೇಕ್ಷಕನಲ್ಲಿ ನಗೆಯುಕ್ಕಿಸುತ್ತಾರೆ. ಚಿತ್ರದ ಎರಡನೇ ಭಾಗದಲ್ಲಿ ಇವರನ್ನು ಸೇರಿಕೊಳ್ಳುವ ರಂಗಾಯಣ ರಘು ತಮ್ಮ ಎಂದಿನ ಲಯದಲ್ಲಿ ಸಾಗುತ್ತಾರೆ. ನಕ್ಸಲ್ ಮುಖಂಡ ಶೋಭರಾಜ್‌ ಅವರದು ಗಂಭೀರ ವದನ.

ಪ್ರಜೆಗಳಿಗೆ ನ್ಯಾಯಾಂಗದ ಮೇಲಿನ ನಂಬಿಕೆ ಉಳಿಸಲು ನಾಯಕ ಪಣತೊಟ್ಟು ಹೋರಾಡುತ್ತಾನೆ. ಆದರೆ, ಭಯೋತ್ಪಾದಕರನ್ನು ಪೊಲೀಸ್ ವಶಕ್ಕೆ ನೀಡಿದರೆ ವಿಚಾರಣೆ ಎನ್ನುವ ಕಟಕಟೆಯಲ್ಲಿ ಸಮಯ,ಹಣ ಪೋಲಾಗುವ ಕಾರಣ ನೀಡಿ ನಾಯಕ ನಕ್ಸಲರನ್ನು ಕೊಲ್ಲುತ್ತಾನೆ, ಅದೂ ನ್ಯಾಯಾಧೀಶರ ಮುಂದೆಯೇ! ಈ ವಿಪರ್ಯಾಸವನ್ನು ಅರ್ಥೈಸಿಕೊಳ್ಳುವ ಪರಿ ಪ್ರೇಕ್ಷಕನಿಗೆ ಬಿಟ್ಟಿದ್ದು.

Write A Comment