ಕರ್ನಾಟಕ

‘ಬೇಸಿಗೆ ಶಿಬಿರ’ವೆಂಬ ಮಾಯೆ…

Pinterest LinkedIn Tumblr

bhec25children2-Cut_0ವಾರ್ಷಿಕ ಪರೀಕ್ಷೆ ಇನ್ನೇನು ಮುಗಿಯುವ ಹಂತಕ್ಕೆ ಬರುತ್ತಿದ್ದಂತೆಯೇ  ಬಹುತೇಕ ಮನೆಗಳಲ್ಲಿ ಬೇಸಿಗೆ ಶಿಬಿರದ್ದೇ ಚರ್ಚೆ. ಪೋಷಕರು ದಿನ ಪತ್ರಿಕೆಗಳ ಜೊತೆ ಬರುವ ಬೇಸಿಗೆ ಶಿಬಿರಗಳ ಬಣ್ಣಬಣ್ಣಗಳ ಕರಪತ್ರ ತಿರುವಿ ಹಾಕಿ ತಮ್ಮ ಮಕ್ಕಳಿಗೆ ಯಾವ ಶಿಬಿರಕ್ಕೆ ಕಳುಹಿಸಬೇಕು ಎಂದು ‘ಗಂಭೀರ ಚಿಂತನೆ’ಯಲ್ಲಿ ತೊಡಗುವ ಕಾಲವಿದು.

ಮಹಾನಗರಗಳಲ್ಲಿನ ಮಕ್ಕಳು ಅಜ್ಜಿಯ ಮನೆಗೆ ಹೋಗಲು ಕಾತರರಾಗಿದ್ದರೆ, ಬೇಸಿಗೆ ಶಿಬಿರಕ್ಕೆ ಅವರನ್ನು ಕಳಿಸುವುದು ಅಪ್ಪ-ಅಮ್ಮಂದಿರಿಗೆ ಪ್ರತಿಷ್ಠೆಯ ಸಂಕೇತ. ಪಕ್ಕದ ಮನೆಯ ಮಂಜು ಶಿಬಿರಕ್ಕೆ ಹೋಗಿ ಬುದ್ಧಿವಂತನಾದರೆ ನಮ್ಮ ಮನೆಯ ಸಂಜು ಗತಿಯೇನು ಎಂಬುದು ಅವರ ಚಿಂತೆ. ಸಾಮಾನ್ಯ ದಿನಗಳಲ್ಲಿ ಸಾಧ್ಯವಾಗದ ಆಟೋಟ, ಪಠ್ಯೇತರ ಚಟುವಟಿಕೆ ಕಲಿಯಲು ಇಂತಹ ಶಿಬಿರಗಳಲ್ಲಿ ಸಾಧ್ಯ ಎಂದು ಕೆಲವು ಮಕ್ಕಳು ಲೆಕ್ಕಾಚಾರ ಹಾಕುತ್ತಿದ್ದರೆ, ಶಿಬಿರಗಳ ಶುಲ್ಕ ನೋಡಿಯೇ  ಪೋಷಕರು ದಂಗಾಗಿ ಹೋಗುತ್ತಾರೆ.

ವರ್ಷಪೂರ್ತಿ ಮಾಸಿಕ ಪರೀಕ್ಷೆ, ಸೆಮಿಸ್ಟರ್, ಕ್ಲಾಸ್ ಟೆಸ್ಟ್ ಎಂತೆಲ್ಲಾ ಸುಸ್ತಾಗಿದ್ದ ಮಕ್ಕಳು ಪೋಷಕರ ಜೊತೆ ಟೂರ್ ಹೋಗುವ ಹಂಬಲವಿರುತ್ತದೆ. ಬೇಸಿಗೆ ಶಿಬಿರಕ್ಕೆ ಕಳುಹಿಸಿ ವೇಳೆಯನ್ನು ‘ಸದ್ವಿನಿಯೋಗ’ ಮಾಡಿಕೊಳ್ಳಲು ಅಪ್ಪ ಅಮ್ಮ ತಾಕೀತು ಮಾಡುತ್ತಾರೆ. ಅಪ್ಪ- ಅಮ್ಮಂದಿರಿಬ್ಬರೂ ಉದ್ಯೋಗದಲ್ಲಿದ್ದರೆ ಅವರದ್ದು ಇನ್ನೊಂದು ತಲೆಬಿಸಿ. ಉಳಿದ ದಿನಗಳಲ್ಲಿ ಡೇ ಕೇರ್‌ಗಳಲ್ಲಿ ಮಕ್ಕಳನ್ನು ಬಿಟ್ಟು ಕಚೇರಿಗೆ ಹೋಗುತ್ತಿದ್ದರೆ, ಬೇಸಿಗೆ ರಜೆಯಲ್ಲಿ ಡೇ-ಕೇರ್‌ಗಳಿಗೂ ರಜೆ. ಇನ್ನೇನು ಮಾಡುವುದು? ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವ ಅವರಿಗೆ ಅನಿವಾರ್ಯ.

ಒಟ್ಟಿನಲ್ಲಿ ಬೇಸಿಗೆ ಶಿಬಿರ ಎನ್ನುವ ಮಾಯೆ, ಒಂದಿಲ್ಲೊಂದು ರೀತಿಯಲ್ಲಿ ಹಲವು ಮನೆಯ ಚರ್ಚೆಯ ವಿಷಯ. ಕೆಲವರಿಗೆ ಇದು ಹಿತ, ಇನ್ನು ಕೆಲವರಿಗೆ ಇದು ನುಂಗಲಾರದ ಬಿಸಿತುಪ್ಪ.

ರಜೆ ಕೊಡುವುದು ಏಕೆ?
ಏಪ್ರಿಲ್- ಮೇ ತಿಂಗಳಿನಲ್ಲಿ ಸರ್ಕಾರ ರಜೆ ಘೋಷಿಸಿರುವ ಉದ್ದೇಶ ಗೊತ್ತೆ? ಇದು ಕಡು ಬಿಸಿಲಿನ ದಿನಗಳು. ಇಂಥ ಬಿಸಿಲಿನಲ್ಲಿ ಮಕ್ಕಳ ಮನಸ್ಸು ಪಠ್ಯದ ಕಡೆಗೆ ಸೆಳೆಯುವುದಿಲ್ಲ. ಆದ್ದರಿಂದ ವರ್ಷಪೂರ್ತಿಯ ಏಕತಾನತೆಯುಳ್ಳ ಕಲಿಕೆಯಿಂದ ಹೊರಬಂದು ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ನಿರಾಳ ಮಾಡಿಕೊಳ್ಳಲಿ, ಶಾಲೆ ಬಿಟ್ಟೊಡನೆ  ಆ ಕ್ಲಾಸು, ಈ ಕ್ಲಾಸು ಎಂದು ತಲೆಕೆಡಿಸಿಕೊಂಡು ಆಟವಾಡುವುದನ್ನೇ ಮರೆಯುವ ಮಕ್ಕಳು ಒಂದಿಷ್ಟು ರಿಲ್ಯಾಕ್ಸ್ ಆಗಲಿ, ಅಜ್ಜಿ ಮನೆ, ಪ್ರವಾಸವೆಂದು ಒಂದಷ್ಟು ಸುತ್ತಲಿ. ಬೇಸಿಗೆಯಲ್ಲಿ ದೈಹಿಕವಾಗಿಯೂ ಮಕ್ಕಳು ಬೆಳೆಯುತ್ತಾರೆ. ಮಾನಸಿಕವಾಗಿಯೂ ವಿಕಾಸವಾಗಲಿ ಎನ್ನುವುದು ರಜೆಯ ಉದ್ದೇಶ.

ಕೆಲವು ಸಂಘ ಸಂಸ್ಥೆಗಳು ಆಯೋಜಿಸುವ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುವುದೂ ನಿಜವೇ. ನಗರ ಪ್ರದೇಶಗಳಲ್ಲಿ ಇರುವ ಮಕ್ಕಳ ಅಜ್ಜಿಯ ಮನೆಗಳೆಲ್ಲ ಹಳ್ಳಿಗಳಲ್ಲೇ ಇರಬೇಕೆಂದಿಲ್ಲವಲ್ಲ! ಅಜ್ಜಿ ಮನೆಗೆ ಹೋಗಿ ಚಿನ್ನಿದಾಂಡು, ಕುಂಟು ಬಿಲ್ಲೆ, ಲಗೋರಿ, ಬುಗುರಿ, ಐಸ್ ಪೈಸ್, ಕಣ್ಣಮುಚ್ಚಾಲೆ, ಅಡುಗೆ ಆಟ, ಗೊಂಬೆಗಳ ಮದುವೆ, ಮರಳಿನಲ್ಲಿ ಮನೆ ಕಟ್ಟುವುದು… ಇವೆಲ್ಲಾ ಆಡುವ ಭಾಗ್ಯ ನಗರದ ಮಕ್ಕಳಿಗೆ ಸಿಗಲು ಸಾಧ್ಯವೆ? ಒಂದೇ ಊರಿನಲ್ಲಿ ಅಜ್ಜಿ ಮನೆ ಇದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗುವ ಮಕ್ಕಳಿಗೆ ಅಂಗಳದಲ್ಲಿ ಕುಂಟಾಬಿಲ್ಲೆ ಆಡುವುದೂ, ಹಿತ್ತಲಲ್ಲಿ ಮಣ್ಣಿನ ಮಡಕೆ ಮಾಡುವುದೂ ಕನಸಿನ ಆಟಗಳೇ. ಇಂಥ ಮಕ್ಕಳಿಗೆ  ಬೇಸಿಗೆ ಶಿಬಿರ ಹೇಳಿ ಮಾಡಿಸಿದ್ದು. ಇಲ್ಲಿ ಮಗು ಉಳಿದ ಮಕ್ಕಳ ಜೊತೆ ಬೆರೆತು ಆಟವಾಡುತ್ತದೆ. ಶಾಲೆಗಳಿಗಿಂತ ಭಿನ್ನವಾಗಿರುವ ಪಠ್ಯೇತರ ಚಟುವಟಿಕೆಗಳು ಆ ಶಿಬಿರದಲ್ಲಿ ಇದ್ದರೆ ಇನ್ನೇನು ಬೇಕು ಮಕ್ಕಳಿಗೆ.

ಕೆಲವು ಸಂಘ ಸಂಸ್ಥೆಗಳಂತೂ ಶಾಲೆಗಿಂತ ಸಂಪೂರ್ಣ ಭಿನ್ನವಾಗಿರುವ ಲೋಕವನ್ನೇ ಬೇಸಿಗೆ ಶಿಬಿರದಲ್ಲಿ ಸೃಷ್ಟಿ ಮಾಡಿರುತ್ತವೆ. ಅಪ್ಪ- ಅಮ್ಮ ಕಲಿಸದ, ಶಾಲೆಯಲ್ಲಿ ಗುರುಗಳು ಹೇಳಿಕೊಡದ ವಿಷಯಗಳನ್ನು ಇಲ್ಲಿ ಅವರು ಕಲಿಯುತ್ತಾರೆ. ಕೆಲವು ಶಿಬಿರಗಳಲ್ಲಿ ಮಕ್ಕಳ ಕೈಯಲ್ಲಿಯೇ ತರಕಾರಿ ಮಾರಾಟ ಮಾಡಿಸಿ ವ್ಯವಹಾರ ಜ್ಞಾನ ಕುದುರಿಸುವುದು, ಗ್ರಾಮೀಣ ಆಟಗಳನ್ನು ಮಕ್ಕಳಿಗೆ ಕಲಿಸಿ ಅಲ್ಲಿನ ಸೊಗಡನ್ನು ಇಲ್ಲಿ ತರುವ ಕೆಲಸ  ನಡೆಯುತ್ತವೆ. ಪ್ರಕೃತಿ ವೀಕ್ಷಣೆ , ಚಾರಣ, ನಿಸರ್ಗದ ಪರಿಚಯ ಕಾರ್ಯಕ್ರಮವೂ ಕೆಲವು ಶಿಬಿರಗಳ ಭಾಗವಾಗಿರುತ್ತವೆ. ಇವು ಮಕ್ಕಳ ಸಾಮರ್ಥ್ಯವನ್ನು, ಅವರ ಬುದ್ಧಿಮತ್ತೆಯನ್ನು ಹೆಚ್ಚಿಸಲು  ಸಾಧ್ಯ.

ಹೊರಾಂಗಣ ಆಟ
ಮನೆಯೊಳಗಿನ ವೀಡಿಯೊ ಗೇಮ್‌, ಕಂಪ್ಯೂಟರ್‌, ಮೊಬೈಲ್‌ಗಳನ್ನು ಕಸಿದಿಟ್ಟು ಹೊರಗೆ ಆಟವಾಡಲು ಕಳುಹಿಸಿ. ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ಗೆಲುವನ್ನು ಸಂಭ್ರಮಿಸುವಂತೆ ಸೋಲನ್ನು ಸ್ವೀಕರಿಸುವ ವಿಶಾಲ ಭಾವ ಅವರಲ್ಲಿ ಆಟಗಳೇ ತುಂಬಬಹುದು. ತಂಡಸ್ಫೂರ್ತಿಯೊಂದಿಗೆ ಸಹಕಾರ, ಸಹಚರ್ಯ ಬೆಳೆಯುವುದು ಈ ಆಟಗಳಿಂದಲೇ.

ಶಿಬಿರಕ್ಕೆ ಕಳುಹಿಸುವ ಮುನ್ನ…
ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸುವ ಮುನ್ನ ಕರಪತ್ರಗಳಲ್ಲಿನ ಜಾಹೀರಾತುಗಳಿಗೆ ಮಾರು ಹೋಗಬಾರದು.  ಶಿಬಿರದಲ್ಲಿ ಯಾವ ರೀತಿಯ ಚಟುವಟಿಕೆಗಳು ನಡೆಯುತ್ತವೆ, ಅವುಗಳಲ್ಲಿ ಮಕ್ಕಳಿಗೆ ಆಸಕ್ತಿ ಇದೆಯೇ? ಎಷ್ಟು ಮಕ್ಕಳು ಶಿಬಿರಕ್ಕೆ ಸೇರಿದ್ದಾರೆ? ಕಳೆದ ವರ್ಷ ಸೇರಿದವರೇ ಈ ವರ್ಷವೂ ಇದ್ದಾರೆಯೇ? ಶಿಬಿರದಲ್ಲಿ ಸ್ವಯಂಸೇವಕರ ಸಂಖ್ಯೆ ಎಷ್ಟಿದೆ? ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಇದೆಯೇ? ಈಜು ಕಲಿಸುವ ಸೌಲಭ್ಯವಿದ್ದರೆ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಈಜುಕೊಳ, ಉಡುಗೆ ಬದಲಿಸಲು ಸುರಕ್ಷಿತ ವಾತಾವರಣ ಇದೆಯೇ ಮುಂತಾದವನ್ನು  ಗಮನಿಸಬೇಕು.

‘ಅಮ್ಮಾ  ನಿಸರ್ಗ ಎಂದರೇನು? ಕಾಡು ಹೇಗಿರುತ್ತದೆ? ಗುಡ್ಡ ಹೇಗೆ ಕಾಣಿಸುತ್ತದೆ, ಹೊಲ-ಗದ್ದೆ ಹೇಗಿರುತ್ತವೆ, ಹಕ್ಕಿ ಗೂಡು ಹೇಗೆ ಕಟ್ಟುತ್ತದೆ’ ಎಂದು ಮಗು ಶಾಲೆಯ ಪುಸ್ತಕ ಓದುವಾಗ ಪ್ರಶ್ನಿಸಿದರೆ ‘ಗೂಗಲ್’ನಲ್ಲಿ ಹುಡುಕಿ ಪ್ರಿಂಟ್ಔಟ್ ತೆಗೆದುಕೊಡುವ ಬದಲು ನಿಜವಾಗಿಯೂ ತೋರಿಸಿದರೆ ಒಳಿತಲ್ಲವೇ, ಅದಕ್ಕೆ ಬೇಸಿಗೆ ರಜೆಯಲ್ಲದೇ ಇನ್ನಾವ ದಿನಗಳಿಂದ ಸಾಧ್ಯ?

ಪೋಷಕರದ್ದೇ ಒತ್ತಾಸೆ
‘ನೀನಾಸಮ್’ ವತಿಯಿಂದ ಪ್ರತಿವರ್ಷವೂ ಬೇಸಿಗೆ ಶಿಬಿರ ಆಯೋಜಿಸಲಾಗುತ್ತಿತ್ತು. ಶಾಲೆಗಳಿಗಿಂತ ಭಿನ್ನವಾಗಿರುವ ಪಠ್ಯೇತರ ಚಟುವಟಿಕೆಗಳೂ ನಡೆಯುತ್ತಿದ್ದವು, ಮಕ್ಕಳೂ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಆದರೆ  ಬರಬರುತ್ತಾ ಮಕ್ಕಳ ಆಸಕ್ತಿಗಿಂತ  ಪೋಷಕರ ಒತ್ತಾಯವೇ ಹೆಚ್ಚಾಗುತ್ತಿದೆ ಎನ್ನಿಸಿತು. ಮನೆಯಲ್ಲಿ ಮಕ್ಕಳು ಗಲಾಟೆ ಮಾಡುತ್ತಾರೆಂದು ಅವರಿಂದ ತಪ್ಪಿಸಿಕೊಂಡರೆ ಸಾಕು ಎನ್ನುವ ರೀತಿ ಶಿಬಿರಗಳು ಭರ್ತಿಯಾಗಲು ಆರಂಭಿಸಿದವು. ಶಿಬಿರದ ಉದ್ದೇಶ ಈಡೇರುತ್ತಿಲ್ಲ ಎನಿಸಿದ ಕಾರಣ ಮೂರ್ನಾಲ್ಕು ವರ್ಷಗಳಿಂದ ಇದನ್ನು ನಿಲ್ಲಿಸಿಬಿಟ್ಟಿದ್ದೇವೆ.

-ಕೆ.ವಿ.ಅಕ್ಷರ, ರಂಗಕರ್ಮಿ

ಟೈಂ ವೇಸ್ಟ್‌  ತಪ್ಪಿಸಬಹುದು
ನಾವು ಮಕ್ಕಳನ್ನು ಕಳಿಸುವ ಬೇಸಿಗೆ ಶಿಬಿರದಲ್ಲಿ ಭಗವದ್ಗೀತೆ, ಶ್ಲೋಕ, ಯೋಗ ಎಲ್ಲವನ್ನೂ ಹೇಳಿಕೊಡುತ್ತಾರೆ. ಇದರಿಂದ ಮಕ್ಕಳಿಗೆ ತುಂಬಾ ಉಪಯೋಗ ಆಗುತ್ತಿದೆ. ಮನೆಯಲ್ಲಿ ಇದ್ದರೆ ಸುಮ್ಮನೆ ಟಿ.ವಿ. ನೋಡುತ್ತಾ ಟೈಂ ವೇಸ್ಟ್‌ ಮಾಡುತ್ತಾರೆ. ಶಿಬಿರಕ್ಕೆ ಹೋದರೆ ಚಟುವಟಿಕೆಯಿಂದ ಕೂಡಿರುತ್ತಾರೆ.
-ಡಾ.ಸುಶ್ಮಾ ಎಸ್‌.

ಸ್ವರ್ಗ ಎಂಬ ಅಜ್ಜ, ಅಜ್ಜಿ ಮನೆ
ಯಾರ ಬಾಲ್ಯ ಹುಡುಕಿದರೂ ಅಲ್ಲಿ ಸ್ವರ್ಗ ಸಮಾನವಾದ ಅಜ್ಜ,ಅಜ್ಜಿ ಮನೆ ಕತೆ ಸಿಗುತ್ತದೆ. ಅಪ್ಪ- ಅಮ್ಮನ ಜೊತೆಯಲ್ಲಿ ಸಿಗದ ಅಜ್ಜನ ಮನೆಯ ಸ್ವಚ್ಛಂದ ವಾತಾವರಣ ಮಕ್ಕಳ ವೈಯಕ್ತಿಕ ಬೆಳವಣಿಗೆಗೆ ಅವಶ್ಯಕ ಕೂಡ. ಆದರೆ ಬದಲಾದ ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳು ಅಜ್ಜನ ಮನೆಯ ಕೊರತೆಯಿಂದ ಬಳಲುತ್ತಿದ್ದಾರೆ. ಅದನ್ನು ತುಂಬಬೇಕಾದದ್ದು ಬೇಸಿಗೆ ಶಿಬಿರಗಳ ಕೆಲಸ. ಆದರೆ ಹೆಚ್ಚಿನ ಶಿಬಿರಗಳು ಕ್ರಾಶ್‌ಕೋರ್ಸ್‌ನಂತೆ ಪಾಲಕರ ಇಚ್ಛೆ ಮಾತ್ರ ಪೂರೈಸುತ್ತಿವೆ. ಶಿಬಿರಗಳಲ್ಲಿ ಮಕ್ಕಳು ಏನು ಕಲಿತರು ಅನ್ನುವುದಕ್ಕಿಂತ ಮಕ್ಕಳು ಎಷ್ಟು ‘ಬೆಳೆದರು’ ಎನ್ನುವುದು ಮುಖ್ಯ.
-ಮನು ಎಚ್‌.ಎಸ್‌. ಹೆಗ್ಗೋಡು

ಶಿಬಿರ ತುಂಬಾ ಬೋರ್
ಬೇಸಿಗೆ ಶಿಬಿರಕ್ಕೆ ಹೋದ ವರ್ಷ ಹೋಗಿದ್ದೆ. ಆದರೆ ತುಂಬಾ ಬೋರ್‌ ಅನ್ನಿಸ್ತು. ಶಾಲೆಗೂ, ಶಿಬಿರಕ್ಕೂ ಏನೂ ವ್ಯತ್ಯಾಸ ಅನ್ನಿಸಲಿಲ್ಲ. ಅದೇ ಹಾಡು, ಅದೇ ಡ್ರಾಯಿಂಗ್‌, ಅದೇ ಪೇಂಟಿಂಗ್. ಅದಕ್ಕೇ ಈ ವರ್ಷ ಅಲ್ಲಿಗೆ ಹೋಗಲಿಲ್ಲ. ಅಜ್ಜಿಯ ಮನೆಯಲ್ಲಿ ಊರಿನಿಂದ ತಮ್ಮ- ತಂಗಿ, ಅಕ್ಕ ಎಲ್ಲಾರೂ ಬಂದಿದ್ದಾರೆ. ಅಲ್ಲೇ ರಜೆ ಕಳಿಯೋದು ನನಗೆ ತುಂಬಾ ಇಷ್ಟ.
-ಪ್ರತೀಕ್ ಎನ್.

Write A Comment