–ಡಿ.ಎಂ.ಕುರ್ಕೆ ಪ್ರಶಾಂತ
ಚಿತ್ರ: ಮಹಾಕಾಳಿ
ತಾರಾಗಣ: ಮಾಲಾಶ್ರೀ, ಶ್ರೀನಿವಾಸಮೂರ್ತಿ, ಮೈಕೋ ನಾಗರಾಜ್, ದಿಲೀಪ್, ಪೂಜಾ, ನರೇಶ್ ಗೌಡ ಮತ್ತಿತರರು
ನಿರ್ದೇಶನ: ಎಸ್.ಎಸ್. ಮಹೇಂದರ್
ನಿರ್ಮಾಪಕರು: ರಮೇಶ್ ಕಶ್ಯಪ್
ಮಾಲಾಶ್ರೀ ಸಿನಿಮಾಗಳು ಎಂದರೆ ಅಲ್ಲೊಂದಿಷ್ಟು ಕೇಡಿಗಳು, ಭ್ರಷ್ಟ ಅಧಿಕಾರಿಗಳು, ಅನಾಚಾರದ ರಾಜಕಾರಣಿಗಳು, ಇವರೆಲ್ಲರ ಬಡಿದು ರಕ್ತಚೆಲ್ಲಿ ಬಡವರ ಬಂಧು ಎನಿಸಿಕೊಳ್ಳುವ, ಹೆಣ್ಣಿನ ಕಣ್ಣೀರು ಒರೆಸುವವಳೇ ನಾಯಕಿ! ಈ ಹಾದಿಯ ‘ಚಾಮುಂಡಿ’, ‘ಶಕ್ತಿ’, ‘ದುರ್ಗಿ’ ಸಿನಿಮಾಗಳ ಪಟ್ಟಿಗೆ ಮತ್ತೊಂದು ಹೊಸ ಸೇರ್ಪಡೆ ‘ಮಹಾಕಾಳಿ’.
ಮಾಲಾಶ್ರೀ ಅವರಿಗೆ ಕೆಲವು ಸೂತ್ರಗಳನ್ನು ತಲೆಯಲ್ಲಿಟ್ಟುಕೊಂಡು ಅವರ ಇಮೇಜಿಗೆ ತಕ್ಕಂತೆ ಕೈ–ಕೈ ಮಿಲಾಯಿಸುವ ಕಥೆಗಳನ್ನು ಸಿದ್ಧಮಾಡುತ್ತಾರೆ ನಿರ್ದೇಶಕರು.ಮಾಫಿಯಾ, ಭ್ರಷ್ಟ ರಾಜಕಾರಣಿಗಳು, ಪೊಲೀಸ್ ವ್ಯವಸ್ಥೆಯ ಅದಕ್ಷತೆ, ಹೆಣ್ಣಿನ ಶೋಷಣೆ, ತನ್ನ ವಿರೋಧಿಗಳ ವಿರುದ್ಧ ಸೆಟೆದು ನಿಂತು ಗೆಲ್ಲುವ ಹೆಣ್ಣು ಇತ್ಯಾದಿ ಸೂತ್ರಗಳು ಸಾಮಾನ್ಯ. ಇದು ಮಾಲಾಶ್ರೀ ಅವರ ‘ಪಕ್ಕಾ’ ಅಭಿಮಾನಿಗಳಿಂದ ಶಿಳ್ಳೆ ಗಿಟ್ಟಿಸುತ್ತದೆ ನಿಜ. ಆದರೆ ಸಿನಿಮಾದಿಂದ ಸಿನಿಮಾಕ್ಕೆ ಇದೇ ಹಾದಿಯಲ್ಲಿ ಸಾಗುತ್ತಿರುವ ಅವರನ್ನು ಮತ್ತು ಅವರ ಪಾತ್ರಗಳು ಒಂದೇ ಚೌಕಟ್ಟಿನೊಳಗೆ ಬಂಧಿಯಾದಂತೆಯೂ ಕಾಣಿಸುತ್ತದೆ. ಈ ಆಧಾರದಲ್ಲಿ ‘ಮಹಾಕಾಳಿ’ಯನ್ನು ಮಾಲಾಶ್ರೀ ಸೂತ್ರದ ಸಿನಿಮಾ ಎನ್ನಬಹುದು.
‘ಮಹಾಕಾಳಿ’ಯ ಚಿತ್ರಕಥೆಯ ಪ್ರಸಂಗಗಳು ನಮ್ಮ ಸಮಾಜದಲ್ಲಿ ನಿತ್ಯ ಕಾಣುವಂಥದ್ದೇ. ಹೆತ್ತತಾಯಿಯನ್ನು ವೃದ್ಧಾಶ್ರಮ ಸೇರಿಸುವ ಮಕ್ಕಳು, ಹಣಕ್ಕಾಗಿ ಭ್ರಷ್ಟರಾಗುವ ಪೊಲೀಸರು, ವಕೀಲರು. ಹೆಣ್ಣನ್ನು ಕಾಮಕ್ಕೆ ಎಂದುಕೊಳ್ಳುವ ಪುರುಷರು, ವರದಕ್ಷಿಣೆಗಾಗಿ ಸೊಸೆಯನ್ನೇ ಬಲಿಹಾಕುವ ಅತ್ತೆಯರು, ಆಸ್ತಿಗಾಗಿ ಒಡಹುಟ್ಟಿದವಳನ್ನೇ ವಂಚಿಸುವ ಅಣ್ಣ–ತಮ್ಮಂದಿರು… ಇತ್ಯಾದಿ. ಇದಕ್ಕೆ ಪೂರಕ ಎನ್ನುವಂತೆ ಒಂದು ಪ್ರೇಮಕಥೆ ಎಳೆಯೂ ತೆರೆದುಕೊಳ್ಳುತ್ತದೆ.
ನಿರ್ದೇಶಕ ಮಹೇಂದರ್, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆಯ ಕಥೆಯನ್ನು ಹೇಳಿದ್ದಾರೆ. ಮಾಲಾಶ್ರೀ ಅವರ ‘ಲೇಡಿ ಟೈಗರ್’ ಹೊಡಿ–ಬಡಿ ಸಿನಿಮಾಗಳನ್ನು ನೋಡಿದವರಿಗೆ ‘ಮಹಾಕಾಳಿ’ ಹೊಸತು ಎನಿಸುವ ಭಾವನೆ ಮೂಡುವುದಿಲ್ಲ.
ಈ ಮಹಿಳಾ ಪರ ಕಮರ್ಷಿಯಲ್ ಕಥೆಯಲ್ಲಿ ಐಟಂ ಹಾಡೂ ಇದೆ, ರಾಜು ತಾಳಿಕೋಟೆ ಕಾಮಿಡಿಯಲ್ಲಿ ಸ್ವಲ್ಪ ಡಬ್ಬಲ್ ಮೀನಿಂಗ್ ಬೆರಕೆಯೂ ಇದೆ. ಬೇರೆ ಬೇರೆ ಪೋಷಾಕುಗಳಲ್ಲಿ ಕಾಣಿಸಿಕೊಂಡಿದ್ದ ಮಾಲಾಶ್ರೀ ಇಲ್ಲಿ ಕರ್ನಾಟಕ ಮಹಿಳಾ ರಕ್ಷಣಾ ವೇದಿಯ ಮೂಲಕ ಶೋಷಿತ ಮಹಿಳೆಯರ ಪರ ದನಿ ಎತ್ತುವರು.
‘ಮೇಡಂ, ನಿಮ್ಮನ್ನು ಇಂಥ ಪರಿಸ್ಥಿತಿಯಲ್ಲಿ ನೋಡುವುದಕ್ಕೆ ನೋವಾಗುತ್ತದೆ’ ಎನ್ನುವ ಸಂಭಾಷಣೆ ಚಿತ್ರದ
ಬಗೆಗಿನ ಆತ್ಮವಿಮರ್ಶೆಯಂತಿದೆ. ‘ದೇವಿ ದೇವಿ ಎದೆಯ ನಡುಗಿಸುವ ಇವಳು’ ಹಾಡು ‘ದುರ್ಗಿ’ ಚಿತ್ರದ ‘ಬೀಳತ್ದಾವ್ ನೋಡು ಈಗ ಕವ್ವಾತಗಳು, ಕೇಳತ್ತಾವ್ ನೋಡು ಚಪ್ಪಾಳೆಗಳು…’ ಹಾಡನ್ನು ನೆನಪಿಸುತ್ತದೆ. ಇಡೀ ಸಿನಿಮಾವನ್ನು ತುಂಬಿಕೊಂಡವರು ಮಾಲಾಶ್ರೀ ಅವರೇ! ರಾಜು ತಾಳಿಕೋಟೆ ಕಾಮಿಡಿ ಉಪ್ಪಿನಕಾಯಿಯಂತೆ ರುಚಿಸುತ್ತವೆ. ಲವ್, ಕಾಮಿಡಿ, ಸಾಹಸ ದೃಶ್ಯಗಳು ಪಟಪಟನೆ ಬದಲಾಗುವುದನ್ನು ನೋಡಿದರೆ ನಿರ್ದೇಶಕರ ಸಿದ್ಧಮಾದರಿ ಕಥನ ನಿರೂಪಣಾ ಮನಸ್ಥಿತಿ ಎದ್ದು ತೋರುತ್ತದೆ.