ಮನೋರಂಜನೆ

ಮಧುರ ಕಂಠ, ಸುಂದರ ದೇಹ ಸಿರಿಯ ಬೆಂಗಳೂರಿನ ಬೆಡಗಿ ಸರು ಮೈನಿ ಬಾಲಿವುಡ್‌ನ ‘ಡೇಂಜರಸ್‌ ಹುಸ್ನ್’ ನಾಯಕಿ

Pinterest LinkedIn Tumblr

me-123fhಮಧುರವಾರ ಕಂಠದೊಂದಿಗೆ ಸುಂದರ ದೇಹ ಸಿರಿ ಹೊಂದಿರುವ ಬೆಂಗಳೂರಿನ ಬೆಡಗಿ ಸರು ಮೈನಿ ಈಗ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಹಾಡು ಕೇಳುತ್ತಲೇ ಸಂಗೀತದತ್ತ ಒಲವು ಬೆಳೆಸಿಕೊಂಡು ಪಾಪ್‌ ಲೋಕದಲ್ಲಿ ಹೆಸರು ಮಾಡಿರುವ ಈಕೆ ಈಗ ಅಭಿನಯದತ್ತ ಒಲವು ತೋರಿದ್ದಾರೆ.

ಮನಸ್ಸಿನ ಖುಷಿಗಾಗಿ ಹಾಡು ಕೇಳುತ್ತಿದ್ದ ಈ ಬೆಂಗಳೂರು ಹುಡುಗಿ ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ ಪಾಪ್‌ ಗಾಯಕಿಯಾದರು. ತನ್ನ ಹಾಡುಗಳಿಗೆ ತಾನೇ ಹೆಜ್ಜೆ ಹಾಕುತ್ತಿದ್ದ ಬೆಡಗಿ ಸರು ಬಾಲಿವುಡ್‌ನ ‘ಡೇಂಜರಸ್‌ ಹುಸ್ನ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಬೆಂಗಳೂರಿನ ಈ ಪ್ರತಿಭೆ ತನ್ನ ಬಾಲಿವುಡ್‌ ಪಯಣದ ಬಗ್ಗೆ ‘ಮೆಟ್ರೊ’ದೊಂದಿಗೆ ಮನಬಿಚ್ಚಿ ಹೇಳಿಕೊಂಡಿದ್ದು ಹೀಗೆ…

‘ನಾನು ಮೂಲತಃ ಬೆಂಗಳೂರಿನವಳು. ಆದರೆ ಪಾಪ್‌ ಗಾಯನ ಪ್ರಾರಂಭಿಸಿದಾಗಿನಿಂದ ಮುಂಬೈನಲ್ಲಿ ನೆಲೆಸಿದ್ದೇನೆ. ಆಗಾಗ ಬೆಂಗಳೂರಿಗೆ ಬಂದು ಹೋಗುತ್ತೇನೆ. ನನ್ನ ಹಾಡುಗಳಿಗೆ ನಾನೇ ಹೆಜ್ಜೆ ಹಾಕುತ್ತೇನೆ. ಹೀಗಾಗಿ ಕ್ಯಾಮೆರಾ ಎಂದರೆ ಭಯವಿಲ್ಲ. ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಹಾಕುತ್ತಾ ಅಭಿನಯದತ್ತ ಒಲವು ಮೂಡಿತು’ ಎಂದು ಮಾತಿಗಿಳಿದ ಸರು, ‘ನಾನು ಅಕಾಶಕ್ಕಾಗಿ ಬಹಳ ವರ್ಷ ಕಾದಿದ್ದೇನೆ. ಬಾಲಿವುಡ್‌ನಲ್ಲಿ ಕಾಂಪ್ರಮೈಸ್‌ ಮಾಡಿಕೊಳ್ಳದೇ ಹೋದರೆ ಅವಕಾಶ ಸಿಗುವುದು ತುಂಬಾ ಕಷ್ಟ’ ಎನ್ನುತ್ತಾರೆ.

‘ನನಗೆ ಸಾಕಷ್ಟು ಅವಕಾಶಗಳು ಬಂದವು. ಆದರೆ ಒಂದೊಂದು ಅವಕಾಶಕ್ಕೂ ಒಂದೊಂದು ರೀತಿಯ ಕಾಂಪ್ರಮೈಸ್‌ ಮಾಡಿಕೊಳ್ಳಬೇಕಾಗಿತ್ತು. ಇನ್ನೂ ಕೆಲವು ಅವಕಾಶಗಳಲ್ಲಿ ಒಳ್ಳೆಯ ಪಾತ್ರಗಳು ಇರುತ್ತಿರಲಿಲ್ಲ. ಹೀಗಾಗಿ ತುಂಬಾ ದಿನ ಕಾದಿದ್ದೇನೆ. ಕಡೆಗೆ ಡೇಂಜರಸ್‌ ಹುಸ್ನ್‌ ಸಿನಿಮಾದಲ್ಲಿನ ನಾಯಕಿ ಪಾತ್ರ ನಿಜಕ್ಕೂ ನನಗೆ ಇಷ್ಟವಾಯಿತು ಹಾಗೂ ಅಭಿನಯಿಸಲು ನಿಜಕ್ಕೂ ಸವಾಲೆನಿಸಿತು. ಅದಕ್ಕಾಗಿ ಇದಕ್ಕೆ ಒಪ್ಪಿದೆ’ ಎನ್ನುತ್ತಾರೆ ಸರು.

ಮೊದಲು ನಾನು ಸಿನಿಮಾಗಳಲ್ಲಿ ಅಭಿನಯಿಸುವ ವಿಷಯಕ್ಕೆ ಮನೆಯವರಿಂದ ವಿರೋಧ ವ್ಯಕ್ತವಾಯಿತು. ಅದರಲ್ಲೂ ಸನ್ನಿ ಲಿಯಾನ್‌ ಅವರ ಪತಿ ಡೇನಿಯಲ್‌ ವೆಬರ್‌ ಜೊತೆ ಎಂದು ತಿಳಿದ ಕೂಡಲೇ ಯಾರೂ ಒಪ್ಪಲಿಲ್ಲ. ಅವರ ವಿರೋಧದ ನಡುವೆಯೇ ಈ ಚಿತ್ರಕ್ಕೆ ಸಹಿ ಹಾಕಿದೆ. ಆಗ ನನ್ನ ಮನಸ್ಸಿನಲ್ಲಿ ಯಾವುದೇ ಭಯ ಅಥವಾ ಅನುಮಾನ ಇರಲಿಲ್ಲ. ಕಾರಣ ಸನ್ನಿಯಿಂದಾಗಿ ತುಂಬಾ ಸುದ್ದಿಯಲ್ಲಿರುವ ಡೇನಿಯಲ್‌ ಈಗ  ಸೆಲೆಬ್ರಟಿ. ಆದರೆ ಅವರು ನೀಲಿ ಚಿತ್ರಗಳಲ್ಲಿ ಅಭಿನಯಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಒಂದು ವೇಳೆ ಅವರು ಅಭಿನಯಿಸಿದ್ದರೂ ಅದು ಅವರ ವೈಯಕ್ತಿಕ ವಿಷಯ. ಅದರಿಂದ ನನಗೆ ಏನೂ ಸಮಸ್ಯೆ ಇಲ್ಲ ಎಂದು ವಿಶ್ವಾಸದಿಂದ ಹೇಳುತ್ತಾರೆ ಸರು.

ಜನರು ಈಗ ಸನ್ನಿಯನ್ನು ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರೆ. ಭಾರತೀಯರು ವಿಶಾಲ ಮನೋಭಾವದಿಂದ ಚಿಂತನೆ ಮಾಡಲು ಪ್ರಾರಂಭಿಸಿದ್ದಾರೆ. ಹೀಗಾಗಿ ಡೇನಿಯಲ್‌ ಜೊತೆ ಅಭಿನಯಿಸುವುದನ್ನು ಸಾಕಷ್ಟು ಮಂದಿ ಸ್ವಾಗತಿಸಿದ್ದಾರೆ. ಹೀಗಾಗಿ ಈಗ ಮನೆಯವರಿಂದಲೂ ಯಾವುದೇ ವಿರೋಧವಿಲ್ಲ ಎಂದು ನಗೆ ಬೀರುತ್ತಾರೆ ಅವರು.

ಹಿಂದಿ ಬಾರದೆ ಇದ್ದರೂ ಡೇನಿಯಲ್‌ ಸೆಟ್‌ನಲ್ಲಿ ತುಂಬಾ ಚೆನ್ನಾಗಿ ಹೊಂದಿಕೊಂಡು ಹೋಗುತ್ತಾರೆ.  ಈ ಚಿತ್ರಕ್ಕಾಗಿ ಅವರು ನೃತ್ಯ ಹಾಗೂ ನಟನೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಅದಕ್ಕಾಗಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಅವರಿಗೆ ಭಾರತೀಯ ಶೈಲಿಯಲ್ಲಿ ನೃತ್ಯ ಮಾಡಲು ತುಂಬಾ ಕಷ್ಟ ಆಗುತ್ತಿದ್ದರೂ ತುಂಬಾ ಶ್ರಮವಹಿಸಿ ಕಲಿಯುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ಬೋಲ್ಡ್‌ ದೃಶ್ಯಗಳಲ್ಲಿ ನಟಿಯರೇ ಮೇಲುಗೈ
‘ಈಗ ಬೋಲ್ಡ್‌ ಸೀನ್‌ಗಳಲ್ಲಿ ಟಾಪ್‌ ನಟಿಯರೇ ಅಭಿನಯಿಸುತ್ತಿದ್ದಾರೆ. ಹೀಗಾಗಿ ನಾಯಕಿಯರು ಬೋಲ್ಡ್‌ ದೃಶ್ಯಗಳಲ್ಲಿ ಅಭಿನಯಿಸಬಾರದು ಎಂದು ಏನೂ ಇಲ್ಲ. ಹೀಗಾಗಿ ನಾನು ಬೋಲ್ಡ್‌ ದೃಶ್ಯಗಳಲ್ಲಿ ಅಭಿನಯಿಸಲು ಒಪ್ಪಿದ್ದೇನೆ. ಆದರೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಒಂದು ಮಿತಿ ಇದೆ. ಅದಕ್ಕೂ ಮೀರಿದ ದೃಶ್ಯಗಳಲ್ಲಿ ಅಭಿನಯಿಸಲು ನಾನು ಒಪ್ಪಿಲ್ಲ. ಅದಕ್ಕಾಗಿ ಬಾಡಿ ಡಬ್ಲಿಂಗ್‌ ಮಾಡಿಸುವಂತೆ ಚಿತ್ರಕ್ಕೆ ಸಹಿ ಹಾಕುವ ಮುನ್ನವೇ ನಿರ್ದೇಶಕರಲ್ಲಿ ಮನವಿ ಮಾಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಡೇಂಜರಸ್‌ ಹುಸ್ನ್‌ ಒಂದು ರೊಮ್ಯಾಂಟಿಕ್‌ ಥ್ರಿಲ್ಲರ್‌. ಇದರಲ್ಲಿ ನನ್ನದು ಚಾಲೆಂಜಿಂಗ್‌ ಪಾತ್ರ. ಸಾಕಷ್ಟು ಹಸಿಬಿಸಿ ದೃಶ್ಯಗಳೂ ಇವೆ. ನನ್ನದು ಒಂದು ರೀತಿ ಸ್ಪಿಲ್ಟ್‌ ಪರ್ಸನಾಲಿಟಿ ಹೊಂದಿರುವ ಹುಡುಗಿಯ ಪಾತ್ರ. ತುಂಬಾ ಭಯವಾಗುವ ಪಾತ್ರವಿದು. ಇನ್ನೂ ಹೆಚ್ಚಾಗಿ ಹೇಳಲು ಸಾಧ್ಯವಿಲ್ಲ. ಇನ್ನೂ ಒಂದು ಸಿನಿಮಾದಲ್ಲಿ ಅಭಿನಯಿಸುವ ಬಗ್ಗೆ ಮಾತುಕತೆ ನಡೆಯುತ್ತಿದ್ದೆ. ಸದ್ಯಕ್ಕೆ ಪಾಪ್‌ ಸಿಂಗಿಂಗ್‌ನಲ್ಲಿ ಭವಿಷ್ಯವಿಲ್ಲ. ಹೀಗಾಗಿ ನಾನು ಅಭಿನಯದತ್ತ ಗಮನ ಹರಿಸುತ್ತಿದ್ದೇನೆ. ಹಾಗೆಂದು ಸಂಗೀತವನ್ನು ಸಂಪೂರ್ಣವಾಗಿ ಬಿಡುವುದಿಲ್ಲ. ಅದನ್ನು ಮುಂದುವರೆಸುತ್ತೇನೆ’ ಎಂದರು.

ಸಾಮಾನ್ಯವಾಗಿ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಹೆಚ್ಚು ತಿಂದಾಗ ದೇಹವನ್ನು ಹೆಚ್ಚಾಗಿ ದಂಡಿಸಬೇಕು. ನಿತ್ಯ ವರ್ಕ್‌ಔಟ್‌, ಡಯಟ್ ಮಾಡಲೇಬೇಕು. ಅದಕ್ಕಾಗಿ ತಿನ್ನುವ, ತಿರುಗುವ ಹಾಗೂ ಸ್ವಾತಂತ್ರ್ಯದಿಂದ ಜೀವಿಸುವ ಅವಕಾಶದಿಂದ ವಂಚಿತರಾಗುತ್ತೇವೆ. ನಮಗೆ ಬೇಕಾದಂತೆ ಜೀವಿಸಲು ನಿಜಕ್ಕೂ ಸಾಧ್ಯವಿಲ್ಲ ಎನ್ನುತ್ತಾರೆ ಸರು.
*
‘ಹಸಿಬಿಸಿ ದೃಶ್ಯಗಳಲ್ಲಿ ಒಂದು ಹಂತದವರೆಗೆ (ಕಂಫರ್ಟಬಲ್‌) ಮಾತ್ರ ಅಭಿನಯಿಸುತ್ತೇನೆ. ಅದಕ್ಕಿಂತ ಹೆಚ್ಚಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಈ ಚಿತ್ರದಲ್ಲಿ ಬಾಡಿ ಡಬ್ಲಿಂಗ್‌ ಮಾಡಲಾಗುತ್ತದೆ.’

Write A Comment