ಶಾಲೆಯಲ್ಲಿ ಏನು ಓದಿದ್ರೂ ನೆನಪಿನಲ್ಲಿ ಉಳಿಯಲ್ಲ. ಟ್ಯೂಷನ್ ಕ್ಲಾಸಿಗೆ ಕಳಿಸಿದ್ರೂ ಅಷ್ಟೇ.. ಮನೆಗೆ ಬಂದಾಗ ಕಲಿತದ್ದನ್ನು ಎಲ್ಲ ಮರೆತು ಬಿಡ್ತಾರೆ ಎಂದು ದೂರು ಹೇಳುವ ಹೆತ್ತವರನ್ನು ನಾವು ನೋಡಿರುತ್ತೇವೆ. ಮಕ್ಕಳು ಕಲಿತದ್ದು ನೆನಪಿನಲ್ಲಿ ಉಳಿಯುವಂತೆ ಮಾಡಲು ಸಾಕಷ್ಟು ಕಸರತ್ತುಗಳನ್ನೂ ಅವರು ಮಾಡಿರುತ್ತಾರೆ. ಒಳ್ಳೆಯ ಶಾಲೆಗೆ ಕಳುಹಿಸುವುದು, ನಿಪುಣ ಅಧ್ಯಾಪಕರಿಂದ ಟ್ಯೂಷನ್ ಕೊಡಿಸುವುದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂಬ ಧೋರಣೆ ಹಲವರಲ್ಲಿದೆ. ಆದರೆ ಮಕ್ಕಳ ನೆನಪಿನ ಶಕ್ತಿ ಉತ್ತೇಜಿಸುವಲ್ಲಿ ಆಹಾರಗಳೂ ಪ್ರಧಾನ ಪಾತ್ರವಹಿಸುತ್ತವೆ. ಮಕ್ಕಳ ನೆನಪಿನ ಶಕ್ತಿ ಉತ್ತೇಜಿಸಲು ಪೋಷಕಾಂಶಯುಕ್ತ ಆಹಾರಗಳನ್ನು ನೀಡುವ ಜತೆಗೆ ಕಲಿಕೆಯ ರೀತಿ, ಕಲಿಸುವ ವಾತಾವರಣವೂ ಉತ್ತಮವಾಗಿರಬೇಕು.
ಮಕ್ಕಳ ನೆನಪಿನ ಶಕ್ತಿ ಉತ್ತೇಜಿಸುವ ಆಹಾರಗಳು ಇಂತಿವೆ
ಬೆಳಗ್ಗೆ ಫಲಾಹಾರವಾಗಿ ನೇಂದ್ರ ಬಾಳೆಹಣ್ಣು ತಿನ್ನಲು ಕೊಡಿ
ತೌಡು ಇರುವ ಧಾನ್ಯಗಳು, ಗೋಧಿಯಿಂದ ಮಾಡಿದ ಉಪಾಹಾರಗಳು, ಬ್ರೌನ್ ಬ್ರೆಡ್, ಕಾರ್ನ್‌ಫ್ಲೇಕ್ಸ್ ಮೊದಲಾದವುಗಳನ್ನು ಬೆಳಗ್ಗಿನ ಉಪಾಹಾರ (ಬ್ರೇಕ್ ಫಾಸ್ಟ್)ವಾಗಿ ನೀಡಿ
ಬೆಳಗ್ಗಿನ ಆಹಾರದೊಂದಿಗೆ ಸ್ವಲ್ಪ ಬಾದಾಮಿ, ಗೋಡಂಬಿ, ನೆಲಕಡಲೆ ಧಾನ್ಯಗಳನ್ನು ಮೊದಲಾದವುಗಳನ್ನು ನೀಡಬಹುದು
ಒಮೇಗಾ ತ್ರೀ ಫ್ಯಾಟಿ ಆ್ಯಸಿಡ್ ಇರುವ ಬೂತಾಯಿ, ಬಂಗುಡೆ ಮೀನುಗಳು, ಸೋಯಾಬೀನ್ ನೆನಪಿನ ಶಕ್ತಿ ವರ್ಧಿಸಲು ಸಹಾಯ ಮಾಡುತ್ತವೆ. ಮಧ್ಯಾಹ್ನದ ಊಟಕ್ಕೆ ಇವುಗಳನ್ನು ಸೇವಿಸಲು ನೀಡಿ.
ಟೊಮ್ಯಾಟೋ, ಗಿಣ್ಣು (ಚೀಸ್), ಆಲಿವ್ ಆಯಿಲ್, ಹಸಿರೆಲೆಗಳನ್ನು ಸೇರಿಸಿ ಸಲಾಡ್ ಮಾಡಿಕೊಡಿ
ವಿಟಾಮಿನ್ ಸಿ ಇರುವ ಪೇರಳೆ ಹಣ್ಣು, ನೆಲ್ಲಿಕಾಯಿ, ಮೂಸಂಬಿ, ಕಿತ್ತಳೆ ಮೊದಲಾದವುಗಳನ್ನು ತಿನ್ನುವುದು ಅಥವಾ ಜ್ಯೂಸ್ ಮಾಡಿ ಕುಡಿದರೆ ಒಳ್ಳೆಯದು
ಅನೇಕ ಪೋಷಕಾಂಶಗಳಿರುವ ಮೊಟ್ಟೆ (ಪ್ರೋಟೀನ್, ಜಿಂಕ್, ವಿಟಾಮಿನ್ ಎ,ಡಿ,ಇ, ಬಿ12 ) ಸೇವಿಸುವುದು ಆರೋಗ್ಯಕ್ಕೂ, ನೆನಪಿನ ಶಕ್ತಿಗೂ ಉತ್ತಮ.
ಆಹಾರದಲ್ಲಿ ಹಸಿರೆಲೆ ತರಕಾರಿಗಳು, ಧಾನ್ಯಗಳು ಯಥೇಚ್ಛವಾಗಿರಲಿ
ಶುದ್ಧ ನೀರಿನ ಸೇವನೆಯಿಂದ ದೇಹ ಲವಲವಿಕೆಯಲ್ಲಿರುತ್ತದೆ. ಮಕ್ಕಳಿಗೆ ಹೆಚ್ಚು ನೀರು ಕುಡಿಯುವಂತೆ ಹೇಳಿ.