ಮನೋರಂಜನೆ

‘ಮದರಂಗಿ’ ಚಿತ್ರದ ‘ಮಳೆ ಹನಿಯೇ ಕಣ್ಣೀರ ಹಾಕಿದಂತೆ…’ ಗೀತೆಗೆ ಅತ್ಯುತ್ತಮ ಗೀತ ರಚನೆಕಾರ ಮನ್ನಣೆ

Pinterest LinkedIn Tumblr

kbec23arasu_0

‘ಲವ್‌ ಇನ್ ಮಂಡ್ಯ’ ಚಿತ್ರದಿಂದ ನಿರ್ದೇಶಕರಾಗಿಯೂ ಗುರ್ತಿಸಿಕೊಂಡವರು ಗೀತೆ ರಚನೆಕಾರ ಅರಸು ಅಂತಾರೆ. ‘ಮದರಂಗಿ’ ಚಿತ್ರದ ‘ಮಳೆ ಹನಿಯೇ ಕಣ್ಣೀರ ಹಾಕಿದಂತೆ…’ ಗೀತೆಗೆ 2013ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಗೀತ ರಚನೆಕಾರ ಮನ್ನಣೆಯೂದಕ್ಕಿದೆ.

ಇಂತಿಪ್ಪ ಅರಸು ಅವರ ಕಾಲೇಜು ದಿನಗಳ ಬುತ್ತಿಯಲ್ಲಿ ಬೇಕಾದಷ್ಟು ಸುಂದರ ಪ್ರಸಂಗಗಳಿವೆ. ಸದ್ಯ ಮತ್ತೊಂದು ಚಿತ್ರಕಥೆ ಸಿದ್ಧಮಾಡುತ್ತಿರುವ ಅರಸರು ಕಾಲೇಜು ದಿನಗಳ ಆಟ, ಹುಡುಗಾಟವನ್ನು ಇಲ್ಲಿ ಬಹಿರಂಗಪಡಿಸಿದ್ದಾರೆ.

ಒಪ್ಕಂಬುಟ್ರು ಕಣ್ಲ ಎನ್ನುವಂತೆ ‘ಲವ್ ಇನ್ ಮಂಡ್ಯ’ ಗೆದ್ದಿತ್ತು. ಮೊದಲ ಚಿತ್ರಕ್ಕೆ ಅರಸರಿಗೆ ಬಹುಪರಾಕ್ ಸಿಕ್ಕಿತು?
ನಾನು ನೋಡಿದ್ದು, ಕೇಳಿದ್ದೆ ಚಿತ್ರಕಥೆ. ಸಿನಿಮಾದಲ್ಲಿ ಒಂದು ದೃಶ್ಯವಿದೆ. ‘ಪ್ರಪಂಚದಲ್ಲಿ ಯಾರೂ ಕೊಡದಿದ್ದ ಉಡುಗೊರೆ ಕೊಡು’ ಎಂದು ನಾಯಕಿ ಕೇಳ್ತಾಳೆ. ಆಗ ಕರ್ಣ ಒಳ ಉಡುಪು ತಂದು ಕೊಡುತ್ತಾನೆ! ಕಾಲೇಜಿನಲ್ಲಿ ಓದುವಾಗ ನನ್ನ ಸ್ನೇಹಿತ ಚಂದ್ರು ಅಂತ ಒಬ್ಬ ಇದ್ದ. ಅವನು ವರುಷಕ್ಕೆ 30 ಹುಡುಗಿಯರನ್ನು ಲವ್ ಮಾಡುತ್ತಿದ್ದ. ಅವರಿಗೆಲ್ಲ ಒಳ ಉಡುಪನ್ನು ಉಡುಗೊರೆಯಾಗಿ ಕೊಡುತ್ತಿದ್ದ. ಆ ಘಟನೆ ಸಿನಿಮಾ ಸಂದರ್ಭದಲ್ಲಿ ನೆನಪಾಯಿತು. ಇನ್ನು ಶಿಳ್ಳೆ ಪಾತ್ರದ ಒಂದಿಷ್ಟು ಘಟನೆಗಳು ನನ್ನದೇ ಬದುಕಿನದ್ದು.

ಹಾಡು ಬರೆದುಕೊಂಡಿದ್ದ ನೀವು ಮೊದಲ ಚಿತ್ರವನ್ನೇ ಗೆಲ್ಲಿಸಿಕೊಂಡು ‘ಅರಸ’ರೂ ಆಗಿದ್ದೀರಿ?
ಚಿಕ್ಕಂದಿನಿಂದ ವಿಶೇಷವಾಗಿ ಗುರ್ತಿಸಿಕೊಳ್ಳುವ ಆಸೆ–ಹಂಬಲ. ಮೂರನೇ ಕ್ಲಾಸಿನಲ್ಲಿರುವಾಗ ‘ಅನುಕೂಲಕ್ಕೊಬ್ಬ ಗಂಡ’ ಚಿತ್ರದ ‘ಸುರಿವ ಮಳೆಯ ಕೊರೆವ ಚಳಿಯ…’ ಹಾಡನ್ನು ಎಲ್ಲರ ಮುಂದೆ ಹೇಳಿ ಮೆಚ್ಚುಗೆ ಪಡೆದಿದ್ದೆ. ಅಪ್ಪನಿಂದ ನಾನು ‘ಅರಗಿಣಿ’, ‘ರೂಪತಾರಾ’ ಸಿನಿಮಾ ಸಂಚಿಕೆಗಳನ್ನು ತೆಗೆಸಿಕೊಂಡು ಓದುತ್ತಿದ್ದೆ.

ಫಸ್ಟ್‌ ಲವ್ವು, ಸೆಕೆಂಡ್ ಲವ್ವು ಜಸ್ಟ್‌ ಲವ್ವು ಏನಾದರೂ ಇತ್ತೇ?
ಲವ್ ಮಾಡಬೇಕು ಎಂದು ಗಂಭೀರವಾಗಿ ಅನಿಸಲಿಲ್ಲ. ಬೇರೆಯವರ ಪ್ರೀತಿ ನೋಡಿ ನಾನು ಲವ್ ಮಾಡಬೇಕು ಎನ್ನುವ ಪುಳಕ ಅಷ್ಟೇ. ನಾವು ಕಾಲೇಜಿನಲ್ಲಿ ನೋಟೆಡ್ ಪರ್ಸನ್‌, ಹಾಗೆಂದು ಕ್ರಿಮಿನಲ್‌ ಅಲ್ಲ. ಚೆನ್ನಾಗಿ ಓದುತ್ತಿದ್ದೆ, ಹಾಡುತ್ತಿದ್ದೆ, ತರ್ಲೆಯನ್ನೂ ಮಾಡುತ್ತಿದ್ದೆ. 98–99ನೇ ಇಸವಿ. ಮೊದಲ ವರ್ಷದ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ. ನಾನು ಇಷ್ಟಪಟ್ಟಿದ್ದ ಹುಡುಗಿ ಕೊನೆಯಿಂದ ಎರಡನೇ ಬೆಂಚಿನಲ್ಲಿ ಕುಳಿತಿದ್ದಳು.

ಚಾಕೊಲೇಟ್ ಕೊಡುವಾಗ ಒಂದು ಪೆನ್‌ ಸೇರಿಸಿಕೊಟ್ಟು ಪ್ರಪೋಸ್ ಮಾಡಿದೆ. ಅಯ್ಯೋ… ಆ ಹುಡುಗಿ ಕಣ್ಣಿನಲ್ಲಿ ಧಾರಾಕಾರ ನೀರ ಸುರಿಮಳೆ. ಅವಳ ಸ್ನೇಹಿತೆಯ ಹತ್ತಿರ ಹೋಗಿ ಇಷ್ಟವಿಲ್ಲದಿದ್ದರೆ ವಾಪಸು ಕೊಡಲಿ ಎಂದು ಹೇಳಿ ಪೆನ್‌ ತೆಗೆದುಕೊಂಡು ಬಂದೆ. ಬಸ್ಸಿನಲ್ಲಿ ಹೋಗುವಾಗ ಆ ಪೆನ್ನು ಮತ್ತೊಬ್ಬಳ ಪಾಲಾಗಿತ್ತು! ಅದಾದ ಒಂದು ವರುಷದ ನಂತರ ‘360 ದಿನಗಳ ಹಿಂದೆ ನಾನೊಂದು ಉಡುಗೊರೆ ಕೊಟ್ಟೆ, ನೀನದನ್ನು ತ್ಯಜಿಸಿಬಿಟ್ಟೆ’ ಎಂದು ಹಾಡು ಬರೆದು ಹಾಡಿದ್ದೆ. ಈ ಹಾಡನ್ನೇ ‘ಪ್ರೀತ್ಸೆ ಪ್ರೀತ್ಸೆ’ ಚಿತ್ರದಲ್ಲಿ ಬಳಸಿದ್ದು. ಇದೇ ನನ್ನ ಸಿನಿಮಾ ಪ್ರವೇಶದ ಮೊದಲ ಗೀತೆ.

ನಿಮ್ಮ ಪ್ರೇಮಾಹ್ವಾನ ಕಿಮ್ಮತ್ತಿಲ್ಲ.  ಪದಪುಂಜಕ್ಕೆ ಫಿದಾ ಆಗಿ ಪ್ರಪೋಸ್ ಮಾಡಿದ ಹುಡುಗಿಯರು ಇದ್ದಾರೆಯೇ?
ಅವರಾಗಿಯೇ ಬಂದಿದ್ದು ತೀರಾ ಕಡಿಮೆ. ಈಗ ಮದುವೆಯಾಗಿ ಇನ್ನೂ ಒಂದು ತಿಂಗಳಾಗಿದೆ. ನಿರ್ದೇಶಕನಾದ ನಂತರವೇ ಮದುವೆಯಾಗಬೇಕು ಎಂದುಕೊಂಡಿದ್ದೆ.

ಗೊತ್ತಾಯ್ತು ಬಿಡಿ, ಹಿಂದನದ್ದೆಲ್ಲವೂ ನಿಮ್ಮಾಕೆಗೆ ಗೊತ್ತಾದರೆ ಎಂದು ಮುಚ್ಚಿಡುತ್ತಿದ್ದೀರಾ?
ಹ್ಹ ಹ್ಹ ಹ್ಹ… ಹಾಗೇನೂ ಇಲ್ಲ. ನಮ್ಮದು ಲವ್ ಕಂ ಅರೇಂಜ್ ಮ್ಯಾರೇಜ್. ನಾನೇ ಮೊದಲು ಪ್ರಪೋಸ್ ಮಾಡಿದ್ದು. ನನ್ನ ತರ್ಲೆ, ಪೋಲಿತನ, ಹೃದಯವಂತಿಕೆ ನನ್ನಾಕೆಗೆ ಗೊತ್ತು. ಅವಳಿಂದ ಏನನ್ನೂ ಮುಚ್ಚಿಟ್ಟಿಲ್ಲ.

ಮದುವೆಯಾದ ನಂತರ ಬದಲಾಗಿದ್ದೀರಾ?
ಮದುವೆಯಾಗದಿದ್ದರೆ ಏನನ್ನೋ ಕಳೆದುಕೊಳ್ಳುತ್ತಿದ್ದೆ ಎಂದು ಈಗ ಅನಿಸುತ್ತಿದೆ.

ಕಾಲೇಜು ದಿನಗಳಲ್ಲಿ ಸಾಹಿತ್ಯ ಸೊಬಗಿನಿಂದ ಯಾರನ್ನಾದರೂ ಮರಳು ಮಾಡಿದ್ದೀರಾ?
ನಮ್ಮ ಶಾಲೆಯಲ್ಲಿ ಇಬ್ಬರು ಟೀಚರ್‌ಗಳಿದ್ದರು. ಪ್ರಾಕ್ಟಿಕಲ್ ಪರೀಕ್ಷೆಗಳಲ್ಲಿ 20ಕ್ಕೆ 4–5 ಅಂಕ ಕೊಡುತ್ತಿದ್ದರು. ಕನಿಷ್ಠ 13 ಕೊಡಬೇಕು ಎನ್ನುವುದು ನಮ್ಮ ವಾದ. ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ‘ಕರಿಯಾ’ ಚಿತ್ರದ ಹಾಡನ್ನು ‘13 ಸಾಕು ನಮಗಿನ್ನೇನು ಬೇಕು ಲಾಯರ್– ಜಡ್ಜ್ ಆಗುವ ಮನಸ್ಸಿದೆ 13 ಕೊಡಿ ಸಾಕು’ ಎಂದು ಹಾಡಿದ್ದೆ. ಸ್ನೇಹಿತರು ನನ್ನನ್ನು ಮೇಲೆತ್ತಿಕೊಂಡು ಕುಣಿದಿದ್ದರು.

ಹೆಸರಲ್ಲಿಯೇ ಅರಸುತನವಿದೆ. ರಾಜ್ಯಭಾರ ಮಾಡುವ ಆಸೆ?
ನಾನು ಸಿನಿಮಾ ಕ್ಷೇತ್ರಕ್ಕೆ ಹೊಸದಾಗಿ ಬಂದ ಸಮಯ. ಯಾರೂ ಕೆಲಸ ಕೊಡುತ್ತಿರಲಿಲ್ಲ. ಎಲ್ಲರೂ ಅನುಭವ ಕೇಳುತ್ತಿದ್ದರು. ಕೆಲಸ ಕೊಟ್ಟರೇ ಅಲ್ಲವೇ ಅನುಭವ! ನಾನೇ ಒಂದು ತೀರ್ಮಾನ ಮಾಡಿ ಅರಸು ಮುಂದೆ ಅಂತಾರೆ ಎಂದು ಸೇರಿಸಿಕೊಂಡೆ. ಹೆಸರು ಕೇಳುವ ನಿರ್ದೇಶಕರು ‘ಇದೇನು ನಿನ್ನ ಹೆಸರು ಹೀಗಿದೆ’ ಇವನಲ್ಲಿ ಏನೋ ಕ್ರಿಯೇಟಿವಿಟಿ ಇದೆ ಎಂದು ಕೆಲಸ ಕೊಟ್ಟರು. ಈ ಹೆಸರಿನಿಂದ ಚಿತ್ರರಂಗದಲ್ಲಿ ಸಿಕ್ಕಿದ್ದು ಅವಕಾಶ.

ಚಿಕ್ಕಂದಿನಲ್ಲಿ ಹಾಡುಗಳನ್ನೆಲ್ಲ ರೀಮೇಕ್ ಮಾಡಿದ್ದೀರಿ. ರೀಮೇಕ್ ರಾಜ ಎನಿಸಿಕೊಳ್ಳವ ಆಸೆ ಇದೆಯೇ?
ಬಹಳ ಚಿತ್ರಗಳನ್ನು ರೀಮೇಕ್‌ ಮಾಡಲು ನನಗೆ ಅವಕಾಶ ಬಂದಿತ್ತು. ಆದರೆ ನಿರಾಕರಿಸಿದೆ. ಒಬ್ಬ ಬರಹಗಾರನಿಗೆ ರೀಮೇಕ್ ಮೆಚ್ಚುಗೆಯಾಗುವುದಿಲ್ಲ. ಅದು ಮತ್ತೊಬ್ಬನ ಸೃಜನಶೀಲತೆ ಅಲ್ಲವೇ.

ಪುನೀತ್ ರಾಜ್‌ಕುಮಾರ್‌ಗೆ ಸಿನಿಮಾ ಮಾಡಲು ಚಿತ್ರರಂಗಕ್ಕೆ ಬಂದವರು ನೀವು?
ಹೌದು. ‘ಬುದ್ಧ’ ಎಂದು ಟೈಟಲ್ ಹಾಡು ಎಲ್ಲವನ್ನೂ ಸಿದ್ಧಮಾಡಿಕೊಂಡಿದ್ದೆ. ಆ ಸಮಯದ ಆಲೋಚನೆ ಬೇರೆ ಈ ಸಮಯದ ಆಲೋಚನೆ ಬೇರೆ. ಆದರೆ ಅಪ್ಪು ಸರ್‌ಗೆ ಒಂದು ಸಿನಿಮಾ ಮಾಡುವ ಆಸೆ ಬಹಳ ಇದೆ.
*
ಬದುಕು ತೀಡಿದ ಕಷ್ಟ
ನಮ್ಮದು ಮಧ್ಯಮ ವರ್ಗದ ಕುಟುಂಬ. ಆದರೆ ಕಷ್ಟಗಳು ನನ್ನ ಅನುಭವಕ್ಕೆ ತಾಗದಂತೆ ಸಾಕಿದ್ದರು. ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಗಾಂಧಿನಗರ ಓಣಿಯೊಂದರಲ್ಲಿನ ಟ್ರಾವೆಲ್ಸ್‌ನಲ್ಲಿ ಕೆಲಸಕ್ಕೆ ಸೇರಿದೆ. ಆಗಲೇ ತುತ್ತು ಅನ್ನ, ಹಣದ ಬೆಲೆ ಗೊತ್ತಾಗಿದ್ದು. ಒಂದು ಹೊತ್ತಿನ ಅನ್ನಕ್ಕೂ ಕಷ್ಟ. ನಾನು ಓದುತ್ತಿದ್ದಾಗ ಗಾಳಿಗೆ ಪುಸ್ತಕ ಹಾರುತ್ತದೆ ಎಂದು ಪುಟವನ್ನು ತೆರೆದು ಎರಡೂ ಬದಿಗಳಿಗೆ ಚಪ್ಪಲಿ ಇಡುತ್ತಿದ್ದೆ. ಅದು ದುರಹಂಕಾರಕ್ಕಲ್ಲ.

‘ತಾಯಿ ನಾನು ಮಾಡಿದ್ದು ತಪ್ಪು ನನ್ನ ಬೆಳವಣಿಗೆಗೆ ಅವಕಾಶ ಕೊಡು’ ಎಂದು ಸರಸ್ಪತಿಗೆ ಅರ್ಧಪುಟದ ಪತ್ರ ಬರೆದಿದ್ದೆ. ಅದೆಲ್ಲ ಈಗ ನೆನಪಾದರೆ ಬೇಸರವೂ ಆಗುತ್ತದೆ ನಾನು ಹೀಗೆಲ್ಲ ಮಾಡಿದ್ದೆ ಎಂದು ನಗುವೂ ಬರುತ್ತದೆ.

ಶಿವರಾತ್ರಿ ಸಂದರ್ಭದಲ್ಲಿ ಜಾಗರಣೆ ಮತ್ತು ಉಪವಾಸ. ನಾವು ಹಳ್ಳಿಯಲ್ಲಿದ್ದ ಪೆಟ್ಟಿಗೆ ಅಂಗಡಿಗಳನ್ನು ಆ ದಿನ ರಾತ್ರಿ ನಡುರಸ್ತೆಗೆ ತಂದು ಇಡುತ್ತಿದ್ದೆವು. ಜನರಿಗೂ ಪೀಕಲಾಟ. ಎಳನೀರನ್ನು ಕದ್ದು ಕಿತ್ತಿದ್ದು, ರಾತ್ರಿ ಮನೆಗಳ ಬಳಿ ಪಟಾಕಿ ಹೊಡೆದು ನಿದ್ರಾಭಂಗ ಮಾಡಿದ್ದು ಇತ್ಯಾದಿ ನಾವು ಮಾಡಿದ ತರ್ಲೆಗಳು ಒಂದೆರಡಲ್ಲ.

Write A Comment