ಮನೋರಂಜನೆ

ಚೆಸ್‌: ವಿಶ್ವನಾಥನ್ ಆನಂದ್‌ ನಂತರ ಯಾರು?

Pinterest LinkedIn Tumblr

pvec18xchess

-ಬಿ. ಪ್ರಸನ್ನ ರಾವ್‌

ವಿಶ್ವನಾಥನ್ ಆನಂದ್ ಬೆಂಗಳೂರಿಗೆ ಬಂದಿದ್ದಾಗ ಎಳೆಯ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ಆರ್‌. ಶ್ರೀಕಂಠ ಶರ್ಮ

ಭಾರತದಲ್ಲಿ ಚೆಸ್‌ ಎಂದರೆ ವಿಶ್ವನಾಥನ್‌ ಆನಂದ್‌ ಎನ್ನುವಂತಿದೆ. ಈಗ ಅವರು ನಿವೃತ್ತಿಯ ಅಂಚಿನಲ್ಲಿ ದ್ದಾರೆ. ಮುಂದೆ ಯಾರು ಎನ್ನುವ ಪ್ರಶ್ನೆ ಚೆಸ್‌ ಪ್ರಿಯ ರನ್ನು ಕಾಡುತ್ತಿದೆ. ಚೆಸ್‌ ಕ್ಷೇತ್ರ ಹಲವು ಗೊಂದಲಗಳ ಗೂಡಾಗಿದೆ. ಈ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

ರಷ್ಯಾದ ಸೋಚಿಯಲ್ಲಿ  ನಡೆದ  ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ  ವಿಶ್ವನಾಥನ್ ಆನಂದ್ ಸೋತಾಗ ಭಾರತದ ಚೆಸ್‌  ವಲಯದಲ್ಲಿ ನಿರಾಸೆಯ ಕಾರ್ಮೋಡ ಕವಿದಿದ್ದು  ಸಹಜವೇ. ತಿಂಗಳ ಹಿಂದೆ ಜರ್ಮನಿಯಲ್ಲಿ ನಡೆದ ಗ್ರಿಂಕೆ ಚೆಸ್‌ ಕ್ಲಾಸಿಕ್‌ ಟೂರ್ನಿಯಲ್ಲಿಯೂ ಅವರು ನಿರಾಸೆ ಕಂಡರು. ಹಿಂದೆ  ಐದು ಸಲ ವಿಶ್ವ ಪ್ರಶಸ್ತಿ ಗೆದ್ದಿರುವ ಆನಂದ್‌ ಜಾಗತಿಕ ಚೆಸ್‌ನಲ್ಲಿ ತಮ್ಮ ಪ್ರಾಬಲ್ಯ ಕಳೆದುಕೊಳ್ಳುತ್ತಿರುವಾಗ ಭಾರತದಲ್ಲಿ ಅವರ ನಂತರ ಯಾರು ಎಂಬ ಪ್ರಶ್ನೆ ಕಾಡತೊಡಗಿದೆ.

45 ವರ್ಷ ವಯಸ್ಸಿನ ಆನಂದ್ ಇನ್ನೇನು ನಿವೃತ್ತರಾಗಲಿದ್ದಾರೆ ಎಂಬ ಮಾತು ಚೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ . ಕಳೆದ ಮೂರು ದಶಕಗಳಿಂದಲೂ ಭಾರತದ ಚೆಸ್‌ ಲೋಕದಲ್ಲಿ ಚಿರಪರಿಚಿತರಾಗಿರುವ ಆನಂದ್ ಅವರ ನಿವೃತ್ತಿಯ ನಂತರ ಇನ್ನಾರು ಎಂಬ ಯಕ್ಷಪ್ರಶ್ನೆ ಕೇಳಿ ಬರುತ್ತಿದೆ.

ಇದೇ ಏಪ್ರಿಲ್‌ ಮೊದಲ ವಾರದಲ್ಲಿ ಪ್ರಕಟಗೊಂಡಿರುವ ಜಾಗತಿಕ ಫಿಡೆ ರೇಟಿಂಗ್‌ನಲ್ಲಿ ಆನಂದ್ (2863 ರೇಟಿಂಗ್‌)  ಆರನೇ ಸ್ಥಾನದಲ್ಲಿದ್ದರೆ, ಪೆಂಟ್ಯಾಲ ಹರಿಕೃಷ್ಣ (2731)  25 ನೇ ಸ್ಥಾನದಲ್ಲಿದ್ದಾರೆ. ನಂತರ ಪರಿಮಾರ್ಜನ್ ನೇಗಿ (2664)  77 ನೇ ಸ್ಥಾನದಲ್ಲಿದ್ದರೆ,  ಶಶಿಕಿರಣ್ (2654)  98ನೇ ಸ್ಥಾನದಲ್ಲಿದ್ದಾರೆ. ಈ ಅಗಾಧ ಅಂತರಗಳನ್ನು ನೋಡುವಾಗ ಈ ಭಾರತೀಯ ಕ್ರೀಡೆಯಲ್ಲಿ ನಾವು ಇಷ್ಟೊಂದು ಹಿಂದಿರುವುದು ಏಕೆ ಎಂದೆನಿಸುವುದು ಸಹಜ. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದಂತೆ ಯಥಾ ಪ್ರಕಾರ ಕ್ರಿಕೆಟ್‌ ಹೊರತು ಪಡಿಸಿ ಇತರ ಕ್ರೀಡೆಗಳು ಎದುರಿಸುತ್ತಿರುವ ಸಮಸ್ಯೆಗಳೇ ಎದ್ದು ಕಾಣುತ್ತವೆ. ಇದಲ್ಲದೆ ಕೆಲವು ತಾಂತ್ರಿಕ ಕಾರಣಗಳೂ ಇವೆ.

ಓರ್ವ ಚೆಸ್ ಆಟಗಾರ, ಗ್ರಾಂಡ್ ಮಾಸ್ಟರ್ ಹಂತಕ್ಕೇರಲು ನಾರ್ಮ್‌ ಪಂದ್ಯಾವಳಿಗಳನ್ನು ಆಡಬೇಕಾಗುತ್ತದೆ. ಇಂತಹ ಪಂದ್ಯಾವಳಿಗಳಲ್ಲಿ ಕಡಿಮೆ ಎಂದರೂ ಇಂತಿಷ್ಟು ಸಂಖ್ಯೆಯ ಗ್ರ್ಯಾಂಡ್‌ಮಾಸ್ಟರ್‌ಗಳು ಮತ್ತು ಇಂಟರ್‌ನ್ಯಾಷನಲ್‌ ಮಾಸ್ಟರ್‌ ಮಟ್ಟಕ್ಕೆ ಏರಿದವರು ಆಡಬೇಕೆನ್ನುವ ನಿಯಮಗಳಿವೆ. ಯೂರೋಪ್‌ ಖಂಡದ ಪುಟ್ಟ ರಾಷ್ಟ್ರವೊಂದೂ ಇಂತಹ ಟೂರ್ನಿ ಯನ್ನು ಸಂಘಟಿಸಲು ಸುಲಭಸಾಧ್ಯ. ಆದರೆ ಭಾರತದಂತಹ ದೊಡ್ಡ ದೇಶದಲ್ಲಿ ದೂರ ದೇಶಗಳಿಂದ ಅಂತಹ ಅತಿರಥ ಮಹಾರಥ ಆಟಗಾರರನ್ನು ಆಹ್ವಾನಿಸಿ ಆಡಿಸುವುದು ಬಲು ಕಷ್ಟ.

ಇಂತಹ ತಾಂತ್ರಿಕ ಸಮಸ್ಯೆಯನ್ನು  ಅರಿತ ಫಿಡೆ (ಅಂತರ ರಾಷ್ಟ್ರೀಯ ಚೆಸ್ ಫೆಡರೇಶನ್) ಇತ್ತೀಚೆಗೆ ಭಾರತವನ್ನು ವಿಶೇಷ ವಲಯ ಎಂದು ಘೋಷಿಸಿದೆ. ಮೇಲಿನ ನಿಯಮಾವಳಿ ಗಳನ್ನು ಸಡಿಲಗೊಳಿಸಲು ಇದರಲ್ಲಿ ಅನುಕೂಲವಾಗುತ್ತದೆ. ಆನಂದ್ ಅವರಂತಹ ಆಟಗಾರರು ಸ್ಪೇನ್‌ನಂತಹ ದೇಶಗಳಲ್ಲಿ ನೆಲೆಸಿ  ವೃತ್ತಿಪರರಾಗಿ ಆಡಬೇಕಾದ ಅನಿವಾರ್ಯತೆ ಇದರಿಂದ ತಪ್ಪುತ್ತದೆ.

ಅಖಿಲ ಭಾರತ ಚೆಸ್‌ ಫೆಡರೇಷನ್‌ ಹಿಂದಿನಿಂದಲೂ ವಿವಾದಗಳ ಸುಳಿಯಲ್ಲಿದೆ. ಈಗಲೂ ಚೆನ್ನೈ ಹೈಕೋರ್ಟ್‌ ಮತ್ತು ದೆಹಲಿಯಲ್ಲಿರುವ ಸುಪ್ರೀಂಕೋರ್ಟ್‌ಗಳಲ್ಲಿ ಹತ್ತು ಹಲವು ವಿಚಾರಣೆಗಳು ನಡೆಯುತ್ತಲೇ ಇವೆ.  ಕ್ರೀಡಾ ಸಂಸ್ಥೆಗಳು ಆಟಕ್ಕಿಂತ ಇಂತಹ ವಿಚಾರಗಳಲ್ಲಿ ಮಗ್ನಗೊಂಡಾಗ ಆಟ ಮತ್ತು ಪ್ರತಿಭೆಗಳು ಸೊರಗುವುದು ಸಹಜ.

ಚೆಸ್‌ನಲ್ಲಿ ಆಟಗಾರನೋರ್ವ ವೃತ್ತಿಪರನಾಗಬೇಕಾದರೆ ಮೊದಲ ಹಂತವಾಗಿ ರೇಟಿಂಗ್ ಗಳಿಸಬೇಕು. ಭಾರತದಲ್ಲಿ ಅಸಂಖ್ಯಾತ ರೇಟಿಂಗ್ ಪಂದ್ಯಾವಳಿಗಳು ಜರುಗುತ್ತಿವೆ. ಹೀಗಾಗಿ ರೇಟಿಂಗ್ ಗಳಿಸುವ ಅವಕಾಶ ಬೇಕಷ್ಟಿವೆ. ಆದರೆ ಉತ್ತಮ ರೇಟಿಂಗ್‌ ಆಟಗಾರರಿಗೆ ಬೇಕಾದ ಪೂರಕ ಪಂದ್ಯಾವಳಿಗಳ ಕೊರತೆ ಇದೆ. ಕಡಿಮೆ ರೇಟಿಂಗ್‌ ಪಂದ್ಯಾವಳಿಗಳು ಜಾಸ್ತಿ ನಡೆಯುತ್ತಿದ್ದು, ಉತ್ತಮ ರೇಟಿಂಗ್‌ ಆಟಗಾರರಿಗೆ ಬೇಕಾದಂತಹ ಅಂತರಾಷ್ಟ್ರೀಯ  ಹಾಗೂ ರಾಷ್ಟ್ರೀಯ ಮುಕ್ತ ಪಂದ್ಯಾವಳಿಗಳು ಅಪರೂಪವೆನಿಸಿವೆ.  ನಾರ್ಮ್‌ ಆಟಗಾರರಿಗೆ ಅಗತ್ಯವಿರುವ ಕೆಟಗರಿ ಪಂದ್ಯಾವಳಿಗಳು ಬಹುತೇಕ ನಡೆಯುತ್ತಲೆ ಇಲ್ಲ. ಹೀಗಾಗಿ ಉತ್ತಮ ಆಟಗಾರರು ಯೂರೋಪ್‌ಗೆ ವಲಸೆ ಹೋಗುತ್ತಿದ್ದಾರೆ.

ಚೆಸ್ ತರಬೇತಿ ಮತ್ತು ಪಂದ್ಯಾವಳಿಗಳಿಗೆ ಭಾಗವಹಿಸಲು ಬೇಕಾದಂತಹ ಖರ್ಚು ವೆಚ್ಚಗಳು  ಹೆಚ್ಚುತ್ತಿವೆ. ಅದೇ ಪ್ರಮಾಣದಲ್ಲಿ ಬಹುಮಾನ ಧನ ಹೆಚ್ಚುತ್ತಿಲ್ಲ. ಇದರಿಂದಾಗಿ ಕಿರಿಯ ವಯಸ್ಸಿನಲ್ಲಿ ಚೆಸ್ ಆರಂಭಿಸಿ ಜಾಗತಿಕ ಮಟ್ಟದಲ್ಲಿ ಉತ್ತಮ ನಿರ್ವಹಣೆ ನೀಡಿದ ಆಟಗಾರರು ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಕ್ರೀಡೆಯನ್ನು ತ್ಯಜಿಸಿ ವೃತಿಪರ ಶಿಕ್ಷಣಕ್ಕೆ ಮೊರೆ ಹೋಗು ತ್ತಿದ್ದಾರೆ. ಇದು ನಮ್ಮ ದೇಶದ ಚೆಸ್ ವಲಯಕ್ಕೆ ಆಗುತ್ತಿರುವ ಬಹು ದೊಡ್ಡ ನಷ್ಟ. ಬೆಂಗಳೂರಿನ ಗಿರೀಶ್ ಕೌಶಿಕ್‌ ನಂತಹ ಆಟಗಾರರು ವಿಶ್ವ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದರೂ ಪ್ರಾಯೋಜಕರ ಕೊರತೆಯಿಂದ ಬಳಲುತ್ತಿರುವುದೇ ಸ್ಪಷ್ಟ ನಿದರ್ಶನ.

ಕ್ರೀಡಾ ಸಚಿವಾಲಯವು ಇತ್ತೀಚಿಗೆ ಚೆಸ್ ಅನ್ನು ಅತಿ ಪ್ರಾಶಸ್ತ್ಯದ ಕ್ರೀಡೆಯಿಂದ ಹಿಂಬಡ್ತಿ ನೀಡಿ ಎರಡನೇ ದರ್ಜೆಗೆ ಇಳಿಸಿದೆ. ಈ ಅಪ್ಪಟ ಭಾರತೀಯ ಕ್ರೀಡೆಯ  ಬಗ್ಗೆ ಕೇಂದ್ರ ಸರ್ಕಾರ ಈ ಧೋರಣೆ ತಾಳಬೇಕಾದರೆ ಅದಕ್ಕೆ ಕೇಂದ್ರ ಸರ್ಕಾರವನ್ನಷ್ಟೇ ದೂಷಿಸಿದರೆ ಸಾಲದು, ಆಟದ ಬೆಳವಣಿಗೆಗೆ ಪೂರಕವಾಗ ಬೇಕಾದ ಅಖಿಲ ಭಾರತ ಚೆಸ್‌ ಫೆಡರೇಷನ್‌ನವರ ತಪ್ಪೂ ಇಲ್ಲಿದೆ ಎಂದೆನಿಸದಿರದು.

ವಿಶೇಷ ವ್ಯಕ್ತಿಗಳನ್ನೂ ಕೋಟಿಗೊಬ್ಬ ಎಂದು ಉದಹರಿಸುವುದನ್ನು ಕೇಳಿದ್ದೇವೆ. ಭಾರತದ ಮಟ್ಟಿಗೆ ವಿಶ್ವನಾಥನ್‌ ಆನಂದ್‌ ನೂರು ಕೋಟಿಗೊಬ್ಬ ಎನ್ನುವಂತಹ ಸ್ಥಿತಿ ಇನ್ನೂ ಮುಂದುವರಿದಿರುವುದೊಂದು ವಿಪರ್ಯಾಸವೇ ಹೌದು. ಅರ್ಮೇನಿಯಾದಂತಹ ಸಣ್ಣ ದೇಶವೂ ಹಲವು ಬಾರಿ ವಿಶ್ವ ಚೆಸ್‌ ಒಲಿಂಪಿಯಾಡ್‌ನಲ್ಲಿ ಗೆದ್ದಿರುವುದು ಮಹತ್ವದ ಸಂಗತಿಯೇ ಆಗಿದೆ.  ಭಾರತ ಕೇವಲ ಒಂದು ಬಾರಿ ಮಾತ್ರ ಕಂಚಿನ ಪದಕವನ್ನು ಗೆದ್ದಿದೆ, ಅಷ್ಟೆ.

ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಭಾರತದಲ್ಲಿ ಪ್ರತಿಭಾವಂತರ ಕೊರತೆ ಇಲ್ಲ. ಆದರೆ ಅರ್ಪಣಾ ಮನೋಭಾವ ಮತ್ತು ಛಲದ ಕೊರತೆ ಇದೆ ಎಂದೆನಿಸುತ್ತದೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟೂ ಆನಂದ್‌ ಅವರಂತಹವರು ಹೊಳೆಯಬೇಕಾದರೆ  ಈ ನಾಡಿನ ಚೆಸ್‌ ಆಡಳಿತ ಮತ್ತು ತರಬೇತಿ ಮುಂತಾದ ಕ್ಷೇತ್ರಗಳು ಹೊಸ ಆಯಾಮವನ್ನೇ ಕಂಡು ಕೊಳ್ಳಬೇಕಿದೆ.

ಶಿಕ್ಷಣದಲ್ಲಿ ಚೆಸ್: ಅರ್ಮೇನಿಯಾ ಮತ್ತು ಟರ್ಕಿ ಮುಂತಾದ ಮುಂತಾದ ರಾಷ್ಟ್ರಗಳು ಶಾಲೆಗಳಲ್ಲಿ ಚೆಸ್ ಅನ್ನು   ಪಠ್ಯದ ಒಂದು ಭಾಗವಾಗಿ ಅಳವಡಿಸಿಕೊಂಡಿವೆ.  ಸಣ್ಣ ವಯಸ್ಸಿನಲ್ಲಿ ಚೆಸ್ ಕಲಿಸುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಚೆಸ್‌ಗೆ ಯೋಗದಷ್ಟೇ ಪ್ರಾಶಸ್ತ್ಯ ನೀಡುವುದು ಒಳ್ಳೆಯದು. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲೂ ಸಾಧ್ಯವಿದೆ.   ದೈಹಿಕ ಶಿಕ್ಷಣದಷ್ಟೇ ಮಾನಸಿಕ ಶಿಕ್ಷಣ ತರಬೇತಿಯೂ ಮುಖ್ಯವಾದುದು ಎಂದು ಮನಗಾಣಬೇಕು.

ಸ್ವತಂತ್ರ ಕ್ರೀಡೆ: ಚೆಸ್ ಅನ್ನು ಅಖಿಲ ಭಾರತ ಚೆಸ್‌ ಫೆಡರೇಷನ್‌ ಮತ್ತು ಅದರ ಅಂಗಸಂಸ್ಥೆಗಳಿಂದ ಮುಕ್ತಗೊಳಿಸಬೇಕಾದ ಅಗತ್ಯವಿದೆ.  ಈ ಕ್ರೀಡೆಯನ್ನು ಪೋಷಿಸಬೇಕಾದ ಮತ್ತು ಈ ಕ್ರೀಡೆಯ ಬೆಳವಣಿಗೆಗೆ ಶಕ್ತಿ ಮೀರಿ ಪ್ರಯತ್ನಿಸಬೇಕಾದ ಈ ಆಡಳಿತ ಸಂಸ್ಥೆ ಇವತ್ತು ಈ ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೂ ಕಡಿವಾಣ ಹಾಕಿ ಹಿಡಿದು ಕೊಳ್ಳುವುದಕ್ಕಷ್ಟೇ ಗಮನ ನೀಡಿದೆ ಎಂದೆನಿಸ ತೊಡಗಿದೆ. ಕ್ರಿಕೆಟ್‌ನಲ್ಲಿ ನಡೆಯುವಂತೆ ಚೆಸ್‌ನಲ್ಲಿಯೂ ಸ್ಥಳೀಯ ಮಟ್ಟದಲ್ಲಿ ನೂರೆಂಟು ಟೂರ್ನಿಗಳನ್ನು ಸಂಘಟಿಸಲು ಸಾಧ್ಯವಿದೆ. ಆದರೆ ಅಂತಹ ಸ್ಥಳೀಯ ಟೂರ್ನಿಗಳು ಚೆಸ್‌ನಲ್ಲಿ ಅಪರೂಪ ಎನಿಸಿವೆ. ಏಕೆಂದರೆ ಅಂತಹ ಟೂರ್ನಿಗಳನ್ನು ಸಂಘಟಿಸಿದವರು ಅಖಿಲ ಭಾರತ ಚೆಸ್‌ ಫೆಡರೇಷನ್‌ನ ಕೆಂಗಣ್ಣಿಗೆ ಗುರಿಯಾಗಬೇಕಾ ಗುತ್ತದೆ ! ಯಾರು ಏನೇ ಹೇಳಿದರೂ, ಇದು ವಾಸ್ತವದ ಸಂಗತಿ. ಪರಿಸ್ಥಿತಿ ಈ ರೀತಿ ಇರುವಾಗ ದೇಶದಾದ್ಯಂತ ಈ ಕ್ರೀಡೆಗೆ ಸಂಬಂಧಿಸಿದಂತೆ ವೃತ್ತಿಪರರನ್ನು ರೂಪಿಸುವುದಾದರೂ ಹೇಗೆ ?

ವೃತ್ತಿಪರತೆ: ಈಗ ನಮ್ಮ ದೇಶದಲ್ಲಿ ಹಲವು ಕ್ರೀಡೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಲೀಗ್‌ಗಳು ನಡೆಯುತ್ತಿದ್ದು, ವೃತ್ತಿಪರ ಆಟಗಾರರ ಸಂಖ್ಯೆ ಹೆಚ್ಚುತ್ತಿದೆ. ಚೆಸ್‌ನಲ್ಲಿಯೂ ಇಂತಹದ್ದೊಂದು ಪರಿಸ್ಥಿತಿ ಇದ್ದಿದ್ದರೆ ಅತ್ಯುತ್ತಮ ಆಟಗಾರರೂ ಈ ಕ್ರೀಡೆಯಿಂದ ದೂರವಾಗುತ್ತಿರಲಿಲ್ಲ.

ಇವತ್ತಿಗೂ ಅಸಂಖ್ಯಾತ ಮಕ್ಕಳು ಚೆಸ್‌ನ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಕಷ್ಟವೇನಲ್ಲ.  ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರೀಡಾ ಸಚಿವಾಲಯಗಳು, ಚೆಸ್‌ ಸಂಘಟನೆಗಳು ಮನಸ್ಸು ಮಾಡಬೇಕಷ್ಟೆ. ಚೆಸ್‌ ಕ್ರೀಡೆಗೆ ಸಂಬಂಧಿಸಿದಂತೆ ಖಾಸಗಿ ಉದ್ಯಮ ಕ್ಷೇತ್ರಗಳಲ್ಲಿ ಪ್ರೋತ್ಸಾಹದ ಕೊರತೆ,  ಮಾದ್ಯಮಗಳಲ್ಲಿ ಉತ್ತೇಜನ ಕಡಿಮೆ ಇರುವುದು ಇತ್ಯಾದಿಗಳ ಬಗ್ಗೆಯೇ ದೂರುವ ಬದಲು,   ಚೆಸ್‌ ಆಡಳಿತಗಾರರಲ್ಲಿಯೇ ಇರುವ ಪ್ರಾದೇಶಿಕ ಮನೋಭಾವ, ಭ್ರಷ್ಟಾಚಾರ ಇತ್ಯಾದಿಗಳನ್ನು ತೊಲಗಿಸಿದರೆ ಈ ನಾಡಿನಲ್ಲಿ ಚೆಸ್‌ ಕ್ರೀಡೆ ಎತ್ತರದಿಂದ ಎತ್ತರಕ್ಕೇರಲು ಸಾಧ್ಯವಿದೆ. ವಿಶ್ವನಾಥನ್‌ ಆನಂದ್‌ ಅವರಂತಹ ನೂರಾರು ಆಟಗಾರರು ಎದ್ದು ನಿಲ್ಲಲು ಸಾಧ್ಯವಿದೆ. ಅಂತಹದ್ದೊಂದು ಆಶಯ ನಮ್ಮದಾಗಬೇಕಿದೆ.

ಲೇಖಕರು: ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಚೆಸ್‌ ತರಬೇತುದಾರರು

Write A Comment