ಮನೋರಂಜನೆ

‘ದಕ್ಷ’ ಚಿತ್ರದ ಗಿನ್ನೆಸ್ ದಾಖಲೆ

Pinterest LinkedIn Tumblr

vijiiii

‘ದಕ್ಷ’ನ ಬಹು ದೊಡ್ಡ ಹೆಮ್ಮೆ ಎಂದರೆ ‘ಗಿನ್ನೆಸ್ ವಿಶ್ವ ದಾಖಲೆ’ ಪಟ್ಟಿಗೆ ಸೇರುತ್ತಿರುವುದು. ಇಡೀ ಚಿತ್ರವನ್ನು ಕೇವಲ ಎರಡು ಗಂಟೆ ಇಪ್ಪತ್ತೆರಡು ನಿಮಿಷಗಳಲ್ಲಿ ಚಿತ್ರಿಕರಿಸಲಾಗಿದೆ. ಅದೇ ಕಾರಣಕ್ಕೆ ಚಿತ್ರ ಗಿನ್ನೆಸ್ ಪುಸ್ತಕ ಸೇರಲಿರುವುದು. ಮತ್ತೊಂದು ವಿಶೇಷವೆಂದರೆ ನಿರ್ದೇಶಕರು ಚಿತ್ರೀಕರಣದ ಶುರುವಿನಲ್ಲಿ ಸ್ಟಾರ್ಟ್, ಕ್ಯಾಮೆರಾ, ಆ್ಯಕ್ಷನ್ ಹೇಳಿದ್ದು ಬಿಟ್ಟರೆ ಕಟ್ ಹೇಳಿದ್ದು ಪೂರ್ತಿ ಚಿತ್ರಿಕರಣ ಮುಗಿದ ನಂತರವೇ. ಮಧ್ಯೆ ಎಲ್ಲೂ ಆ್ಯಕ್ಷನ್, ಕಟ್, ರೀ ಟೇಕ್‌ಗಳಿಲ್ಲದೇ ಒಂದೇ ಶಾಟ್‌ನಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಇನ್ನೇನು ಕೆಲ ದಿನಗಳಲ್ಲಿ ಗಿನ್ನೆಸ್ ಪ್ರಮಾಣಪತ್ರವೂ ನಿರ್ದೇಶಕರ ಕೈ ಸೇರಲಿದೆ.

ಸವಾಲು–ಸಾಧ್ಯತೆ–ಸಾಧನೆ
ಕಲಾವಿದರು ಹಾಗೂ ತಂತ್ರಜ್ಞರ ಸೂಕ್ತ ಸಹಕಾರ ದೊರೆತರೆ ಮಾತ್ರ ಇಂಥ ಸವಾಲಿನ ಕೆಲಸ ಯಶಸ್ವಿಯಾಗುವುದು ಸಾಧ್ಯ ಎಂದು ತಿಳಿದಿದ್ದ ನಿರ್ದೇಶಕರು ಚಿತ್ರೀಕರಣಕ್ಕೂ ಮುನ್ನವೇ ಎಲ್ಲರನ್ನೂ ಮಾನಸಿಕವಾಗಿ ಸಿದ್ಧಗೊಳಿಸಿದ್ದರಂತೆ. ಇಷ್ಟು ವರ್ಷ ನಿರ್ದೇಶನ ಮಾಡಿದ್ದರೂ ಯಾವ ಕಲಾವಿದರಿಗೂ ಮೊದಲೇ ಸ್ಕ್ರಿಪ್ಟ್ ಕೊಡುವ ಅಭ್ಯಾಸ ನಾರಾಯಣ್ ಅವರದಲ್ಲ. ಅವರೆಲ್ಲ ಚಿತ್ರೀಕರಣದ ಸ್ಥಳಕ್ಕೆ ಬಂದೇ ಸೀನ್ ಪೇಪರ್ ನೋಡಿ ಸಿದ್ಧರಾಗುತ್ತಿದ್ದರು. ಆದರೆ ಈ ಚಿತ್ರದ ಚಿತ್ರೀಕರಣವನ್ನು ಒಂದೇ ಶಾಟ್‌ನಲ್ಲಿ ಮುಗಿಸಿ ಸಾಧಿಸಬೇಕೆಂದು ಮೊದಲೇ ನಿರ್ಧರಿಸಿದ್ದ ನಿರ್ದೇಶಕರಿಗೆ ರೀ ಟೇಕ್ ತೆಗೆದುಕೊಳ್ಳುವಂಥ ಒಂದೇ ಒಂದು ಎಡವಟ್ಟಾದರೂ ಶ್ರಮವೆಲ್ಲ ವ್ಯರ್ಥವಾಗಿಬಿಡುವ ಭಯ. ಹಾಗಾಗಿ ಎಲ್ಲವೂ ಏಕ ಕಾಲಕ್ಕೆ ಮೇಳೈಸಬೇಕು ಎಂಬ ಉದ್ದೇಶಕ್ಕಾಗಿ ಎಲ್ಲ ಕಲಾವಿದರುಷ್ಟೇ ಅಲ್ಲದೆ ತಂತ್ರಜ್ಞರಿಗೂ 158 ಪುಟಗಳ ಸ್ಕ್ರಿಪ್ಟ್‌ನ ಒಂದೊಂದು ಪ್ರತಿ ನೀಡಿ ಸಿದ್ಧವಾಗುವಂತೆ ಸೂಚಿಸಿದ್ದರಂತೆ.

ತಮ್ಮ ನಿರೀಕ್ಷೆಯಂತೆ ಎಲ್ಲರೂ ಅಚ್ಚುಕಟ್ಟಾಗಿ ಸಿದ್ಧತೆ ನಡೆಸಿಕೊಂಡಿದ್ದನ್ನು ನೋಡಿ ನಿರ್ದೇಶಕರಿಗೆ ಅರ್ಧ ಯುದ್ಧ ಗೆದ್ದ ಸಂಭ್ರಮ. ಆದರೂ ಸಾಧನೆಗೆ ಶ್ರಮ ಬೇಕು ಎಂಬ ಮಾತಿನಂತೆ ಇಡೀ ಚಿತ್ರತಂಡ ನಾಲ್ಕು ದಿನಗಳ ಕಾಲ ಸತತ ಅಭ್ಯಾಸ ನಡೆಸಿ ಐದನೇ ದಿನಕ್ಕೆ ಒಂದೇ ಶಾಟ್‌ನಲ್ಲಿ ಪೂರ್ತಿ ಚಿತ್ರೀಕರಣವನ್ನೂ ಮುಗಿಸಿದೆ. ‘ಇದು ಸಾಧ್ಯವೇ’ ಎಂದು ಅಪ್ಪನನ್ನು ಕೇಳಿದ್ದ ಪಂಕಜ್ ಅವರ ಚಾಣಾಕ್ಷತೆ ನೋಡಿ ಮೂಗಿನ ಮೇಲೆ ಬೆರಳಿಟ್ಟಿದ್ದಾರಂತೆ.

ಚಿತ್ರೀಕರಣಕ್ಕೆ ಆಯ್ದುಕೊಂಡ ಮನೆ ಚಿಕ್ಕದಾಗಿದ್ದ ಕಾರಣ ಕೆಲ ಅಡೆತಡೆಗಳೂ ಇದ್ದವು. ಒಂದೇ ಶಾಟ್‌ನಲ್ಲಿ ಚಿತ್ರೀಕರಿಸುವಾಗ ಕ್ಯಾಮೆರಾ ಫ್ರೇಮ್‌ನಲ್ಲಿ ಯಾವುದೇ ಅನವಶ್ಯಕ ವಸ್ತುಗಳು ಮತ್ತು ಸಂಬಧವಿಲ್ಲದವರು ಕಾಣಿಸಿಕೊಳ್ಳುವಂತಿಲ್ಲ. ಕನಿಷ್ಠ ಒಂದು ನೆರಳೂ ಬೀಳುವಂತಿಲ್ಲ. ಅವುಗಳನ್ನೆಲ್ಲ ನಿವಾರಿಸಿಕೊಂಡು ‘ಫೀಲ್ಡ್’ ನಿರ್ಧರಿಸಿ ಕೆಲಸ ಮಾಡುವುದು ಕ್ಯಾಮೆರಾಮನ್ ರೇಣುಕುಮಾರ್ ಅವರಿಗೆ ಸವಾಲಿನ ಕೆಲಸವೇ ಆಗಿತ್ತು. ಆದರೆ ನಿರ್ದೇಶಕರ ಬಯಕೆಯಂತೆ ಅವನ್ನೆಲ್ಲ ನಿವಾರಿಸಿಕೊಂಡ ಛಾಯಾಗ್ರಾಹಕ ರೇಣುಕುಮಾರ್, ನಾರಾಯಣ್ ಅವರ ಪ್ರಶಂಸೆ ಗಳಿಸಿದ್ದಾರೆ. ನೃತ್ಯ ಸಂಯೋಜಕ ತ್ರಿಭುವನ್ ಕೂಡ ಎರಡು ಹಾಡುಗಳನ್ನು ಸರಾಗವಾಗಿ ಚಿತ್ರೀಕರಿಸಿಕೊಟ್ಟಿದ್ದಾರಂತೆ.

ಚಿತ್ರ ಇದೇ ಶುಕ್ರವಾರ (ಏಪ್ರಿಲ್ 24) ತೆರೆಗೆ  ಬರುತ್ತಿದೆ. ಚಿತ್ರ ಸೆಟ್ಟೇರಿ ವರ್ಷವೇ ಕಳೆದಿದ್ದರೂ ಬಿಡುಗಡೆ ವಿಳಂಬವಾಗುತ್ತಿರುವುದಕ್ಕೆ ವಿವರಣೆ ನೀಡುವ ನಾರಾಯಣ್, ‘ವಿಜಯ್ ಅಭಿನಯದ ಬೇರೆ ಎರಡು ಚಿತ್ರಗಳು ಬಿಡುಗಡೆಯಾದ ನಂತರವೇ ನಮ್ಮ ಚಿತ್ರ ತೆರೆಗೆ ತರುವುದೆಂದು ಒಪ್ಪಂದವಾಗಿತ್ತು. ಹಾಗಾಗಿ ‘ದಕ್ಷ’ನ ಕೆಲಸವನ್ನು ನಿಧಾನವಾಗಿ ಕೆಲಸ ಮುಗಿಸಿಕೊಂಡೆವು. ಅಲ್ಲದೇ ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಿದ್ದರಿಂದ ಸಂಕಲನದ ಕೆಲಸ ಒಂದಷ್ಟು ಹೆಚ್ಚಾಗಿಯೇ ಇತ್ತು’ ಎನ್ನುತ್ತಾರೆ.
*
ಹಿಂದಿಯತ್ತ…
ನಕ್ಸಲಿಸಂಗೆ ಸಂಬಂಧಿಸಿದ ‘ದಕ್ಷ’ನ ಕಥೆಯನ್ನು ಹಿಂದಿಗೂ ತೆಗೆದುಕೊಂಡು ಹೋಗಲು ನಾರಾಯಣ್ ಸಿದ್ಧತೆ ನಡೆಸಿದ್ದಾರೆ. ಅವರೇ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಬುಲೆಟ್ ಪ್ರಕಾಶ್, ರಂಗಾಯಣರಘು, ಸುಚೇಂದ್ರ ಪ್ರಸಾದ್, ಶೋಭರಾಜ್, ಅಭಿಜಿತ್, ಪದ್ಮಜಾ ರಾವ್, ಪಂಕಜ್, ನೇಹಾ ಪಾಟೀಲ್ ಹೀಗೆ ಕಲಾವಿದರ ದಂಡೇ ಇದೆ. ಆದರೆ ಹಿಂದಿಯಲ್ಲಿ ಪೂರ್ತಿಯಾಗಿ ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಎಲ್ಲ ಅಲ್ಲಿನವರೇ ಇರುತ್ತಾರೆ. ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Write A Comment