ಮನೋರಂಜನೆ

ಕಾಟನ್ ಸೀರೆಗಳ ಝಲಕ್…

Pinterest LinkedIn Tumblr

saree

* ಸುಮನಾ ಉಪಾಧ್ಯಾಯ

ಬೇಸಿಗೆ ಕಾಲಿಟ್ಟಾಗಿದೆ. ಬಿರು ಬಿಸಿಲು ಮೈ ಸುಡುತ್ತಿದೆ. ಹಾಗೆಂದು ಮನೆಯೊಳಗೆ ಇಡೀ ಕಾಲ ಕೂರಲು ಸಾಧ್ಯವೇ? ಆಫೀಸಿಗೆ, ಸಮಾರಂಭಕ್ಕೆ, ಇತರ ಕೆಲಸಕ್ಕೆಂದು ಮಹಿಳೆಯರಿಗೆ, ಯುವತಿಯರಿಗೆ ಹೊರಗೆ ಹೋಗಲೇ ಬೇಕಾಗುತ್ತದೆ.

ಇಂತಹ ಸಂದರ್ಭದಲ್ಲಿ ಮಹಿಳೆಯರ ದೇಹಕ್ಕೆ, ಮನಸ್ಸಿಗೆ ಒಪ್ಪುವ, ಆಕರ್ಷಕ ವ್ಯಕ್ತಿತ್ವ ನೀಡುವ ಬಟ್ಟೆ ಯಾವುದು ಎಂದರೆ ಥಟ್ಟನೆ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವುದು ಕಾಟಲ್ ಸೀರೆಗಳು ಮತ್ತು ಡ್ರೆಸ್‌ಗಳು. ಹೌದು, ಬೇಸಿಗೆಯಲ್ಲಿ ಕಾಟನ್ ಡ್ರೆಸ್‌ಗಳಿಗೆ ಎಲ್ಲಿಲ್ಲದ ಬೇಡಿಕೆ. ಮಾರುಕಟ್ಟೆಗೆ ಯಾವ ಹೊಸ ಡಿಸೈನಿನ ಕಾಟನ್ ಸೀರೆ ಬಂದಿದೆ ಎಂದು ಮಹಿಳೆಯರ ಕಣ್ಣು ಓಡುತ್ತದೆ.

ಕಾಲಕ್ಕೆ, ಹವಾಮಾನಕ್ಕೆ ತಕ್ಕಂತೆ ಬಟ್ಟೆಗಳನ್ನು ಧರಿಸುವುದು ಇತ್ತೀಚಿನ ಟ್ರೆಂಡ್. ಮಳೆಗಾಲಕ್ಕೆ ಸಿಂಥಟಿಕ್ ಬಟ್ಟೆಗಳಾದರೆ, ಚಳಿಗಾಲಕ್ಕೆ ಉಣ್ಣೆಯ, ಖಾದಿಯ ಬಟ್ಟೆಗಳು, ಬೇಸಿಗೆಗೆ ಹತ್ತಿಯ ಉಡುಪುಗಳೇ ಶ್ರೇಷ್ಠ ಎಂಬ ತೀರ್ಮಾನಕ್ಕೆ ಹಲವರು ಬಂದಿದ್ದಾರೆ.

ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಆಯಾ ಪ್ರದೇಶದ ಕಾಟನ್ ಸೀರೆಗಳು ಜನಪ್ರಿಯವಾಗಿದೆ. ಅವುಗಳನ್ನು ಉಟ್ಟುಕೊಂಡರೆ ಮಹಿಳೆಯರ ‘ಖದರೇ’ ಬೇರೆ. ನಮ್ಮ ದೇಶದ ಜನಪ್ರಿಯ ಕಾಟನ್ ಸೀರೆಗಳತ್ತ ಒಂದು ನೋಟ:

ಟಂಟ್ ಸೀರೆ: ಪಶ್ಚಿಮ ಬಂಗಾಳದ ಟಂಟ್ ಸೀರೆ ಅದರ ಗರಿಗರಿಯಾದ ವಿನ್ಯಾಸಕ್ಕೆ ಹೆಸರುವಾಸಿ. ಈ ಸೀರೆಗೆ ಚೆನ್ನಾಗಿ ಗಂಜಿ ಹಾಕಿ ತೊಳೆದು ಇಸ್ತ್ರಿ ಮಾಡಿ ಉಟ್ಟರೆ ಅಷ್ಟೇ ಖುಷಿಯಾಗುತ್ತದೆ.

ಖಾದಿ ಸೀರೆ : ಖಾದಿಯನ್ನು ಜನಪ್ರಿಯಗೊಳಿಸಿದವರು ನಮಗೆಲ್ಲಾ ತಿಳಿದಿರುವಂತೆ ಮಹಾತ್ಮ ಗಾಂಧಿಯವರು. ಇಂದು ಎಷ್ಟರ ಮಟ್ಟಿಗೆ ಈ ಖಾದಿ ಜನಪ್ರಿಯವಾಗಿದೆಯೆಂದರೆ ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವವರು, ದೊಡ್ಡ, ದೊಡ್ಡ ಕಾರ್ಯಕ್ರಮಗಳಲ್ಲಿ ಸಹ ಖಾದಿ ಸೀರೆಯನ್ನು ಉಡುತ್ತಾರೆ.

ದಕೈ : ಈ ಹತ್ತಿ ಬಟ್ಟೆಯ ಸೀರೆ ಅದರ ವಿನ್ಯಾಸ, ಬಣ್ಣಕ್ಕೆ ಫೇಮಸ್ಸು. ಇದರ ಮೂಲ ಬಾಂಗ್ಲಾದೇಶದ ಢಾಕಾ. ಈ ವಿನ್ಯಾಸ ಕಲ್ಕತ್ತಾದಲ್ಲಿ ಜನಪ್ರಿಯವಾಗಿ ಈಗ ನಮ್ಮ ದೇಶದ ಸಾರಿಯಾಗಿ ಮಾರುಕಟ್ಟೆಗೆ ಬರುತ್ತಿದೆ.

ಕೊಟ್ಕಿ: ಬಂಗಾಳದ ಸೀರೆಯಾದ ಕೊಟ್ಕಿ ಸೀರೆಯ ಟೆಂಪಲ್ ಬಾರ್ಡರ್‌ನಿಂದ ಸ್ಟೈಲಿಶ್ ಲುಕ್ ನೀಡುತ್ತದೆ. ಆಫೀಸಿಗೆ, ಸಮಾರಂಭಗಳಿಗೆ ಉಡಲು ಈ ಸೀರೆ ಉತ್ತಮ.

ಲಕ್ನೊ ಚಿಕನ್: ಲಕ್ನೋ ಮೂಲದ ಈ ಕಾಟನ್ ಸೀರೆಯಲ್ಲಿ ಕುಸುರಿ ಕೆಲಸ ಹೆಚ್ಚು. ಸೀರೆಯ ಮೈ ಬಣ್ಣ ಒಂದಾದರೆ ಅದರ ವಿರುದ್ಧದ ಬಣ್ಣದ ನೂಲಿನಲ್ಲಿ ಎಂಬ್ರಾಯಿಡರಿ ಕಸೂತಿ ಮಾಡಲಾಗುತ್ತದೆ.

ಸಂಬಲ್ಪುರಿ: ಒಡಿಶ್ಶಾ ರಾಜ್ಯದ ಜನಪ್ರಿಯ ಸಂಬಲ್ಪುರಿ ಕಾಟನ್ ಸೀರೆಯ ಸೆರಗು ಆಕರ್ಷಕವಾಗಿರುತ್ತದೆ.

ಬೊಮ್ಕೈ: ಈ ಸೀರೆ ಕೂಡ ಒಡಿಶಾದ ಸಂಬಲ್ಪುರ ಜಿಲ್ಲೆಯದ್ದು. ಸೀರೆಯ ಮೈ ಭಾಗವಿಡೀ ಚಿಕ್ಕ ಚಿಕ್ಕ ಚುಕ್ಕೆಗಳಿರುತ್ತವೆ. ಸಣ್ಣದಾದ ಅಂಚು, ಸಾಂಪ್ರದಾಯಿಕ ಶೈಲಿಯ ಸೆರಗು ಈ ಸೀರೆಯ ವಿಶೇಷ.

ಪಸಪಲ್ಲಿ: ಒಡಿಶಾದ ಬಾರ್ಗಾ ಜಿಲ್ಲೆಯ ಸೀರೆಯಾದ ಪಸಪಲ್ಲಿ ಅದರ ಚೌಕಾಕಾರದ ರಚನೆಗೆ ಫೇಮಸ್ಸು. ಈ ಸೀರೆಯ ಮತ್ತೊಂದು ವಿಶೇಷ ಅಂದರೆ ಇದನ್ನು ಸಂಪೂರ್ಣವಾಗಿ ಕೈಯಿಂದಲೇ ನೇಯಲಾಗುತ್ತದೆ. ಹಾಗಾಗಿ ಒಂದು ಸೀರೆಯನ್ನು ತಯಾರಿಸಲು ತಿಂಗಳುಗಳೇ ಬೇಕು.

ಕಾಂಜೀವರಂ ಕಾಟನ್ ಸೀರೆ : ತಮಿಳುನಾಡಿನ ಜನಪ್ರಿಯ ಕಾಂಜೀವರಂ ರೇಷ್ಮೆ ಸೀರೆಗೆ ಮರುಳಾಗದವರು ಯಾರು ಹೇಳಿ? ಕಾಂಜೀವರಂ ಸಿಲ್ಕ್ ಸೀರೆಯ ಜೊತೆಗೆ ಕಾಟನ್ ಸೀರೆಗಳೂ ಸಿಗುತ್ತವೆ.

ಪೊಚಂಪಲ್ಲಿ ಸೀರೆ: ದಕ್ಷಿಣ ಭಾರತದ ಜನಪ್ರಿಯ ಪೊಚಂಪಲ್ಲಿ ಸೀರೆ ಅನೇಕ ಯುವತಿಯರನ್ನು ಸೆಳೆಯುತ್ತದೆ. ಬಣ್ಣ ಬಣ್ಣದ ವಿನ್ಯಾಸಗಳಲ್ಲಿ ಇರುವ ಈ ಸೀರೆ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆಂಧ್ರಪ್ರದೇಶ ಈ ಸೀರೆಗೆ ಫೇಮಸ್ಸು.

ಜಾಮ್‌ದಾನಿ: ಕಾಟನ್ ಸೀರೆಗೆ ವಿಶೇಷವಾಗಿ ಚಿನ್ನದ ಬಣ್ಣದ ನೂಲಿನಲ್ಲಿ ವಿನ್ಯಾಸಗೊಳಿಸುವ ಸೀರೆಯಿದು.

ಕೋಟಾ: ಈ ಸೀರೆ ರಾಜಸ್ತಾನದ್ದು. ಗ್ರ್ಯಾಂಡ್ ಲುಕ್ ಕೊಡುವ ಈ ಸೀರೆಯನ್ನು ಮದುವೆ, ಸಮಾರಂಭಗಳಿಗೂ ಉಡಲಾಗುತ್ತದೆ.

ಚಂದೇರಿ ಮತ್ತು ಸುಪರ್‌ನೆಟ್: ಅರೆ ಪಾರದರ್ಶಕ ರಚನೆಯ ಈ ಸೀರೆ ಹಗುರುವಾಗಿದ್ದು, ಹೊಳೆಯುತ್ತಿರುತ್ತದೆ.ಸುಪರ್‌ನೆಟ್ ಸೀರೆ ಇತ್ತೀಚಿನ ದಿನಗಳಲ್ಲಿ ಹರೆಯದ ಯುವತಿಯರನ್ನು, ಮಹಿಳೆಯರನ್ನು ಹೆಚ್ಚಾಗಿ ಆಕರ್ಷಿಸುತ್ತವೆ.

Write A Comment