ಮನೋರಂಜನೆ

ತಮಿಳು ಚಿತ್ರದಲ್ಲಿ ಶ್ರೀದೇವಿ ಜೊತೆ ಲಿಪ್‌ಲಾಕ್ ಗಾಸಿಪ್‌ಗೆ ಸುದೀಪ್ ತೆರೆ

Pinterest LinkedIn Tumblr

sridevi

* ಎಚ್. ಮಹೇಶ್

ಸುದೀಪ್ ಮತ್ತು ಬಾಲಿವುಡ್ ಲೇಡಿ ಬಿಗ್ ಬಿ ಶ್ರೀದೇವಿ ತಮಿಳು ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಅಲ್ಲದೇ ಆ ಚಿತ್ರದಲ್ಲಿ ಇವರಿಬ್ಬರೂ ಲಿಪ್‌ಲಾಕ್ ಮಾಡಿದ್ದಾರೆ. ಶ್ರೀದೇವಿ ಜತೆ ಲಿಪ್‌ಲಾಕ್ ಮಾಡಲು ಸುದೀಪ್ ಐದು ಕೋಟಿ ರೂಪಾಯಿ ಕೇಳಿದ್ದಾರೆ ಎಂದೆಲ್ಲ ಸುದ್ದಿ ಆಗಿತ್ತು. ಅದರಲ್ಲೂ ದಕ್ಷಿಣ ಭಾರತದ ಅಷ್ಟೂ ಪ್ರೇಕ್ಷಕರು ಈ ಸುದ್ದಿಯನ್ನು ರಸಗವಳದಂತೆ ಸವಿದಿದ್ದರು. ಆದರೆ, ಈ ಬಗ್ಗೆ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಸುದೀಪ್.

‘ನಾವಿಬ್ಬರೂ ಲಿಪ್‌ಲಾಕ್ ಮಾಡಿದ್ದೇವೆ ಎಂಬ ಸುದ್ದಿ ಕೇಳಿ ನಾವಷ್ಟೇ ಅಲ್ಲ, ನಮ್ಮ ಚಿತ್ರತಂಡಕ್ಕೆ ಆಘಾತವಾಗಿದ್ದು ಸುಳ್ಳಲ್ಲ. ನಾವು ಎಲ್ಲೂ ಲಿಪ್‌ಲಾಕ್ ಮಾಡಿದ್ದೇವೆ ಎಂದು ಮಾತನಾಡಿರಲಿಲ್ಲ. ಆದರೆ ಈ ಸುದ್ದಿ ಕೇಳಿ ನನಗೂ ಹಾಗೂ ಶ್ರೀದೇವಿ ಅವರಿಗೂ ಆಶ್ಚರ್ಯ ಆಯಿತು. ಆ ರೀತಿಯ ದೃಶ್ಯಗಳಲ್ಲಿ ನಾವು ನಟಿಸಿಲ್ಲ’ ಎಂದಿದ್ದಾರೆ ಸುದೀಪ್.

ಎರಡು ದಶಕಗಳ ಕಾಲ ಶ್ರೀದೇವಿ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅಂತಹ ಹಿರಿಯ ನಟಿ ಈಗ ಸುದೀಪ್ ಜತೆ ಲಿಪ್‌ಲಾಕ್ ಮಾಡುತ್ತಾರಾ? ಎಂದು ಯೋಚಿಸಬಾರದೇ ಎನ್ನುವುದು ಸುದೀಪ್ ಮಾತು. ‘ಅವರ ಜತೆ ನಟಿಸುತ್ತಿರುವುದೇ ಒಂದು ಅದೃಷ್ಟ. ಅವರು ನನ್ನ ತೆಲುಗಿನ ಈಗ ಚಿತ್ರವನ್ನು ನೋಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಆ ಚಿತ್ರದ ಬಗ್ಗೆ, ನನ್ನ ನಟನೆ ಬಗ್ಗೆ ಮಾತನಾಡಿದ್ದರು. ಅವರ ಸಿನಿಮಾಗಳನ್ನು ನೋಡಿ ಬೆಳೆದವನು ನಾನು. ಅವರ ಜತೆ ನಾನು ಸ್ಕ್ರೀನ್ ಶೇರ್ ಮಾಡಿದ್ದು ಎಂದೂ ಮರೆಯದ ಅನುಭವ. ಅವರ ಮೇಲೆ ತುಂಬಾ ಗೌರವ ಇದೆ. ಅವರ ಜತೆ ನಾನು ಹೇಗೆ ಲಿಪ್‌ಲಾಕ್ ಮಾಡಲಿ? ಈ ರೀತಿ ಸುದ್ದಿ ಹಬ್ಬಿಸುವವರಿಗೆ ಸ್ವಲ್ಪವಾದರೂ ಬುದ್ಧಿ ಬೇಡವೇ’ ಎಂದು ವದಂತಿ ಬಗ್ಗೆ ಬೇಸರ ವ್ಯಕ್ತಪಡಿಸಿದರು ಸುದೀಪ್.

ನಾಲ್ಕು ದಿನ ಶೂಟಿಂಗ್ ಮುಗಿದರೆ ತಮಿಳು ಚಿತ್ರದ ಕೆಲಸ ಮುಗಿಯುತ್ತದೆ. ಮೇ ತಿಂಗಳಲ್ಲಿ ಕೆ.ಎಸ್.ರವಿಕುಮಾರ್ ಪ್ರಾಜೆಕ್ಟ್ ಶುರುವಾಗಲಿದೆ.

ದೇವಿಶ್ರೀ ಪ್ರಸಾದ್ ಹಾಡು ಹೇಳಿದಾಗ
ತಮಿಳು ಚಿತ್ರದ ಶೂಟಿಂಗ್ ಮುಗಿಸಿ, ತಾವು ಅಭಿನಯಿಸುತ್ತಿರುವ ಕನ್ನಡ ಚಿತ್ರ ‘ರನ್ನ ‘ಗಾಗಿ ಹೊಸ ರೀತಿಯ ಹಾಡು ಮಾಡಬೇಕೆಂದು ಯೋಚಿಸಿದ್ದರಂತೆ ಸುದೀಪ್. ಹಾಗಾಗಿ ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ರಿಂದ ಹಾಡು ಹಾಡಿಸಿದ್ದಾರೆ. ಈಗ ಸುದೀಪ್ ತೆಲುಗು ಚಿತ್ರರಂಗದಲ್ಲೂ ಪರಿಚಿತರಾಗಿದ್ದಾರೆ. ಹೀಗಾಗಿ ದೇವಿಶ್ರೀ ಪ್ರಸಾದ್ ‘ರನ್ನ’ ಚಿತ್ರದಲ್ಲಿ ಹಾಡೊಂದನ್ನು ಹಾಡಿದ್ದಾರೆ. ಈ ಹಿಂದೆ ದೇವಿಶ್ರೀ ಅವರು ಗಣೇಶ್ ಅಭಿನಯದ ಸಂಗಮ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಆ ನಂತರ ಅವರು ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿರಲಿಲ್ಲ. ಈಗ ಸುದೀಪ್‌ಹಾಗಾಗಿ ಹಾಡಿದ್ದಾರೆ. ‘ದೇವಿಶ್ರೀ ಈಗ ತುಂಬಾ ಬಿಝಿ ಮ್ಯೂಸಿಕ್ ಡೈರೆಕ್ಟರ್. ಬಿಗ್ ಸ್ಟಾರ್ ಸಿನಿಮಾಗಳಿಗೆ ಅವರು ಕೆಲಸ ಮಾಡುತ್ತಿದ್ದಾರೆ. ನನ್ನ ಚಿತ್ರದ ಹಾಡಿಗೆ ಅವರ ಧ್ವನಿ ಬೇಕಿತ್ತು. ಅವರಿಗೆ ಕರೆ ಮಾಡಿದೆ. ಎರಡು ಮಾತಿಲ್ಲದೇ ಒಪ್ಪಿಕೊಂಡರು’ ಎಂದರು ಸುದೀಪ್.

Write A Comment