ಮನೋರಂಜನೆ

ಕಿರುತೆರೆಯ ‘ಅನುಪಮ’ ಅನುಭವ

Pinterest LinkedIn Tumblr

anupama-final

– ಅವಿನಾಶ್ ಜಿ.ರಾಮ್
ಕಿರುತೆರೆಯ ಒಂದೊಂದೇ ಕುಡಿಗಳು ಹಿರಿತೆರೆಗೆ ಪ್ರವೇಶ ಪಡೆಯುತ್ತಿವೆ. ಸದ್ಯದ ಆ ಸಾಲಿನಲ್ಲಿ ಕೇಳಿಬರುತ್ತಿರುವ ಹೆಸರು ಅನುಪಮಾ ಗೌಡ. ‘ಅಕ್ಕ’ ಧಾರಾವಾಹಿಯ ಭೂಮಿಕಾ- ದೇವಿಕಾ ಪಾತ್ರಗಳು ನಿಮಗೆ ನೆನಪಿದ್ದರೆ, ಅನುಪಮಾ ಪರಿಚಯವಿರುತ್ತದೆ. ‘ಚಿ.ಸೌ. ಸಾವಿತ್ರಿ’, ‘ಅಕ್ಕ ತಂಗಿ’ ಧಾರಾವಾಹಿಗಳ ನಂತರ ದ್ವಿಪಾತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆಯುತ್ತಿರುವ ಅನುಪಮಾ ಗೌಡ, ನಾಳೆ (ಏ.03) ಬಿಡುಗಡೆಯಾಗಲಿರುವ ‘ನಗಾರಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಜತೆಗಿನ ಹಳೇ ನಂಟು ಮತ್ತು ಹಿರಿತೆರೆಯೊಂದಿಗಿನ ಹೊಸ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ ಈ ಬಾರಿಯ ಚೆಕ್​ಬಂದಿಯಲ್ಲಿ

***
* ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಹೇಗೆ?

ನಾನು ಈ ಕ್ಷೇತ್ರಕ್ಕೆ ಬಂದು 4 ವರ್ಷಗಳಾಯಿತು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹಳ್ಳಿ ದುನಿಯಾ’ ರಿಯಾಲಿಟಿ ಶೋ ಮೂಲಕ ನಾನು ಕಿರುತೆರೆ ಪ್ರವೇಶಿಸಿದೆ. ಆ ಬಳಿಕ ಕಿರುತೆರೆಯಲ್ಲಿ ಮೂಡಿಬಂದ ‘ಅಕ್ಕ ತಂಗಿ’ ಧಾರಾವಾಹಿಯಲ್ಲೂ ನಟಿಸಿದೆ. ‘ಚಿ.ಸೌ.ಸಾವಿತ್ರಿ’ಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದೆ. ಪ್ರಸ್ತುತ ‘ಅಕ್ಕ’ ಧಾರಾವಾಹಿಯಲ್ಲಿ ದ್ವಿಪಾತ್ರ.

* ಮೊದಲಿನಿಂದಲೂ ನಟಿಯಾಗಬೇಕು ಎಂಬ ಆಕಾಂಕ್ಷೆಯಿತ್ತಾ?

-ನಿಜವಾಗಿಯೂ ನಾನು ನಟಿಯಾಗುತ್ತೇನೆ ಎಂಬ ಸಣ್ಣ ಸುಳಿವೂ ಇರಲಿಲ್ಲ. ನೃತ್ಯದಲ್ಲಿ ಹೆಸರು ಮಾಡಬೇಕು ಎಂಬ ಆಸೆ ಇತ್ತು ಅಷ್ಟೇ. ನಟನೆ ಕುರಿತಾಗಿ ಮಾತ್ರ ಎಂದೂ ಯೋಚಿಸಿರಲಿಲ್ಲ. ಆಚಾನಕ್ ಅವಕಾಶ ಒದಗಿ ಬಂತು, ಅದನ್ನು ಬಹಳ ಗಂಭೀರವಾಗಿ ತೆಗೆದುಕೊಂಡೆ. ಹಾಗೇ, ನಟಿಯಾಗಿ ಗುರುತಿಸಿಕೊಂಡೆ. ಈಗ ಮೇಲಿಂದ ಮೇಲೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

* ಬೆಳೆದಿದ್ದು, ಓದಿದ್ದು?

-ಬೆಂಗಳೂರು ನಾನು ಹುಟ್ಟಿ ಬೆಳೆದ ಊರು. ಫ್ಯಾಷನ್ ಡಿಸೈನಿಂಗ್​ನಲ್ಲಿ ಪದವಿ ಮಾಡಿದ್ದೇನೆ.

* ಕಿರುತೆರೆಯಿಂದ ಶುರುವಾದ ಪಯಣ ಇದೀಗ ಗಾಂಧಿನಗರಕ್ಕೂ ಕಾಲಿಟ್ಟಿದೆ..

-ಹೌದು, ‘ನಗಾರಿ’ ಚಿತ್ರದ ಮೂಲಕ ಅದು ಈಡೆರಿದೆ. ಚಿತ್ರೀಕರಣದ ಅನುಭವ ಚೆನ್ನಾಗಿತ್ತು. ಹೊಸಬರ ಜತೆ ನಾನೂ ಕೂಡ ಹೊಸಬಳಾಗಿ ನಟಿಸಿದೆ. ಒಂದೊಳ್ಳೆಯ ಚಿತ್ರದಲ್ಲಿ ನಟಿಸಿದ ತೃಪ್ತಿ ನನ್ನಲ್ಲಿದೆ. ‘ನಗಾರಿ’ ತಂಡದ ಎಲ್ಲರೂ ಉತ್ಸಾಹದ ಚಿಲುಮೆಗಳಿಂತಿದ್ದರು. ನಾನಿಲ್ಲಿ ಗಯ್ಯಾಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಹುಡುಗರ ಜತೆಗೆ ಸದಾ ಜಗಳ ಆಡುವ ಪಾತ್ರ. ಗ್ರಾಮೀಣ ಭಾಗದ ಪಕ್ಕಾ ಲೋಕಲ್ ಹುಡುಗಿಯ ಫೀಲ್ ಇರುವಂತಹ ಪಾತ್ರ ನನಗೆ ‘ನಗಾರಿ’ಯಲ್ಲಿ ಸಿಕ್ಕಿದೆ. ಒಳ್ಳೆಯ ಪಾತ್ರ ಮತ್ತು ಕಥೆ ಸಿಕ್ಕಿದ್ದರಿಂದಲೇ ಈ ಚಿತ್ರದಲ್ಲಿ ನಾನು ನಟಿಸಿದ್ದು.

* ಕಿರುತೆರೆಯಲ್ಲಿ ನಟಿಸುವ ಮೊದಲು ಸಿನಿಮಾದಲ್ಲಿ ಅವಕಾಶಗಳಿಗೆ ಪ್ರಯತ್ನ ಮಾಡಿರಲಿಲ್ಲವೇ?

– ನಾನು ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇಟ್ಟುಕೊಂಡಿರಲಿಲ್ಲ. ಧಾರಾವಾಹಿಯಲ್ಲಿ ನಟಿಸುವ ಅವಕಾಶ ಆಕಸ್ಮಿಕ. ಅದೇ ರೀತಿ, ಸಿನಿಮಾದಲ್ಲೂ ನಾಯಕಿಯಾಗುವ ಅವಕಾಶ ಕೂಡ. ಸಿಕ್ಕಿದ ಅವಕಾಶವನ್ನು ಮನಸ್ಪೂರ್ತಿಯಿಂದ ಒಪ್ಪಿಕೊಂಡಿದ್ದೇನೆ. ಮುಂದಿನ ಹಾದಿ ಹೇಗಿದೆಯೋ ಗೊತ್ತಿಲ್ಲ.

* ಕಿರುತೆರೆ ಮತ್ತು ಹಿರಿತೆರೆ ನಡುವೆ ನೀವು ಕಂಡ ವ್ಯತ್ಯಾಸ?

– ಎರಡೂ ಕ್ಷೇತ್ರಗಳ ಮಧ್ಯೆ ವ್ಯತ್ಯಾಸವಿದೆ. ಅದನ್ನು ನಾನು ಕಂಡುಕೊಂಡಿದ್ದೇನೆ. ಕಿರುತೆರೆಯಲ್ಲಿ ಸಿಕ್ಕಿದಷ್ಟು ಖುಷಿ ಮತ್ತು ಸ್ವಾತಂತ್ರ್ಯ ಹಿರಿತೆರೆಯಲ್ಲಿ ಸಿಗುವುದಿಲ್ಲ. ಅಂದರೆ, ಧಾರಾವಾಹಿಯಲ್ಲಿ ಸಾಕಷ್ಟು ಸಮಯಾವಕಾಶ ಸಿಗುತ್ತದೆ. ವರ್ಷಗಟ್ಟಲೇ, ಒಂದೇ ಪಾತ್ರದಲ್ಲಿ ಕಾಣಿಸಿಕೊಂಡು ಮನೆ ಮಂದಿಗೆಲ್ಲಾ ಹತ್ತಿರವಾಗಬಹುದು. ಆದರೆ, ಸಿನಿಮಾ ಹಾಗಲ್ಲ. ಒಂದಷ್ಟು ಸೀಮಿತ ಕಾಲಾವಧಿಯಲ್ಲಿ ಚಿತ್ರೀಕರಣ ಮಾಡಿ ಮುಗಿಸಬೇಕು. ಎರಡು ಗಂಟೆಗಳಲ್ಲೇ ಆ ಸಿನಿಮಾದ ಹಣೆಬರಹ ಬದಲಾಗುತ್ತೆ. ಜತೆಗೆ ನಮ್ಮದೂ ಕೂಡ. ಒಂದೇ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು.

* ನಿಮ್ಮ ಚಿತ್ರ ತೆರೆಗೆ ಬರುತ್ತಿದೆ. ಏನು ಹೇಳುವುದಕ್ಕೆ ಬಯಸುತ್ತೀರಾ?

– ಸರಿಯಾಗಿ ಒಂದು ವರ್ಷಕ್ಕೆ ಚಿತ್ರ ತೆರೆಕಾಣುತ್ತಿರುವುದು ವಿಶೇಷ. ಮಂಗಳೂರು, ಸಕಲೇಶಪುರ, ಉಡುಪಿ, ಮದ್ದೂರು, ಮಂಡ್ಯದಲ್ಲಿ ಚಿತ್ರೀಕರಣ ನಡೆದಿದೆ. ಶೂಟಿಂಗ್​ನ ಪ್ರತಿ ಕ್ಷಣವೂ ಹೊಸ ಹೊಸ ಅನುಭವವಾಗಿದೆ. ಒಂದೇ ಕುಟುಂಬದವರ ಹಾಗೆ ಎಲ್ಲರೂ ಜತೆಗೂಡಿ ಕೆಲಸ ಮಾಡಿದ್ದೇವೆ. ನಿರ್ದೇಶಕ ನಂದೀಶ್ ಅವರಂತೂ ಬಹಳ ಹುರುಪಿನಿಂದ ಕೆಲಸ ಮಾಡಿದ್ದಾರೆ. ಒಳ್ಳೆಯ ತಂಡದಲ್ಲಿ ನಾನೂ ಇದ್ದೇನೆ ಎಂಬುದೇ ನನ್ನಲ್ಲಿ ಸಾರ್ಥಕ.

* ಸರಿ, ಹೊಸ ಸಿನಿಮಾದ ಅವಕಾಶಗಳೇನಾದರೂ…

– ಹೌದು, ಸಿನಿಮಾಗಳಲ್ಲಿ ನಟಿಸುವಂತೆ ಅವಕಾಶಗಳು ಬರುತ್ತಿವೆ. ಆದರೆ, ಯಾವುದೂ ಅಂತಿಮಗೊಂಡಿಲ್ಲ. ಎಲ್ಲವೂ ಮಾತುಕತೆಯ ಹಂತದಲ್ಲೇ ಇದೆ. ಧಾರಾವಾಹಿ ಮತ್ತು ಸಿನಿಮಾ ಎರಡನ್ನೂ ಸರಿದೂಗಿಸಿಕೊಂಡು ಕೆಲಸ ಮಾಡುವುದು ತುಸು ತ್ರಾಸದಾಯಕ. ಆದರೂ, ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತ ಸಿನಿಮಾಗಳಲ್ಲಿ ನಟಿಸುತ್ತೇನೆ. ಚಿತ್ರದ ಕಥೆ ಮತ್ತು ಪಾತ್ರ ಇಷ್ಟವಾಗುವುದು ಮುಖ್ಯ.

Write A Comment