ಕನ್ನಡ ವಾರ್ತೆಗಳು

ಬಿಸಿಲ ಬೇನೆ ಬಚಾವ್ ಆಗಲಿಕ್ಕೆ ಸರಳೋಪಾಯ

Pinterest LinkedIn Tumblr

cool

* ಶುಭಾ ವಿಕಾಸ್
ಸೂರ‌್ಯ ನೆತ್ತಿಗೇರಿದ್ದಾನೆ. ಬಿಸಿಲ ಝಳ ಹೆಚ್ಚಿದೆ. ಮನಸು ಹಾಗೂ ದೇಹಕ್ಕೆ ನಿತ್ರಾಣದ ಅನುಭವ.

ಬೇಸಿಗೆ ಅಂದರೆ ಬ್ಯಾಕ್ಟೀರಿಯಾಗಳಿಗೆ ಹಬ್ಬ. ಮಣ್ಣು, ಗಾಳಿ, ನೀರು ಅಷ್ಟೆ ಅಲ್ಲ, ಮಾನವ ಹಾಗೂ ಪ್ರಾಣಿಗಳ ದೇಹದಲ್ಲಿ ಕೂಡ ಕ್ರಿಯಾಶೀಲವಾಗಿರುತ್ತವೆ. ಅದ್ರಲ್ಲೂ ಆಹಾರದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳಂತೂ ಬಹುಬೇಗ ಬೆಳೆಯುತ್ತವೆ. ಹೆಚ್ಚು ಹೊತ್ತು ತಯಾರಿಸಿಟ್ಟ ಆಹಾರ, ತೆರೆದಿಟ್ಟ ಹಣ್ಣು, ಕಲುಷಿತ ನೀರಿನಲ್ಲಿ ಬ್ಯಾಕ್ಟೀರಿಯಾಗಳು ನಿಮ್ಮ ಆರೋಗ್ಯದ ಮೇಲೆ ದಾಳಿ ಮಾಡಲು ಸಿದ್ಧವಾಗಿರುತ್ತವೆ.

ಬೇಸಿಗೆ ಕಾಯಿಲೆ
ಈ ಸಮಯದಲ್ಲಿ ರೋಗಾಣುಗಳು ಕ್ರಿಯಾಶೀಲವಾಗಿರುತ್ತವೆ. ಅತಿಯಾದ ಬೆವರು, ಧೂಳು, ನೀರಿನ ಮೂಲಕ ಬ್ಯಾಕ್ಟೀರಿಯಾ ತನ್ನ ಜಾಲ ವಿಸ್ತರಿಸಲು ಸಹಕರಿಸುವುದರಿಂದ ನಾನಾ ರೋಗಗಳು ಕಾಡುವುದುಂಟು. ಬೇಸಿಗೆ ಅಂದರೆ ನೀರಿಗೆ ಹಾಹಾಕಾರ. ಇದ್ದರೂ ಕಲುಷಿತಗೊಳ್ಳುವುದು ಹೆಚ್ಚು. ಈ ಸಂದರ್ಭದಲ್ಲಿ ನೀರಿನ ಮೂಲದಿಂದ ಬರುವ ಕಾಯಿಲೆಗಳೇ ಹೆಚ್ಚು. ಉರಿಮೂತ್ರ, ರಕ್ತಸ್ರಾವ, ತಲೆನೋವು, ಟೈಫೈಡ್, ಗಂಟಲುಬೇನೆ, ಕಾಮಾಲೆ, ಕಾಲಾರ, ಮಲೇರಿಯಾ ಹೆಚ್ಚಾಗಿ ಕಾಣಿಸುತ್ತದೆ.

ಮುನ್ನೆಚ್ಚರಿಕೆ
ಬೇಸಿಗೆಯಲ್ಲಿ ಹೊರಗಡೆ ಪದೇಪದೆ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಏಕೆಂದರೆ ಈ ಸಮಯದಲ್ಲಿ ಆಹಾರ ವಿಷವಾಗಿ ಪರಿಣಮಿಸುವುದು ಹೆಚ್ಚು. ಮದುವೆ ಸಮಾರಂಭ, ಜಾತ್ರೆ, ಪಿಕ್‌ನಿಕ್ ಅಂತ ಹೊರಗಡೆ ತಿರುಗಾಟ ಕೂಡ ಇದೇ ಬೇಸಿಗೆಯಲ್ಲಿ ಜಾಸ್ತಿ. ಕಂಡಕಂಡಲ್ಲಿ ವೈವಿಧ್ಯ ಆಹಾರ ಸೇವನೆ ಅನಿವಾರ‌್ಯವೋ ಅಥವಾ ಅಭಿಲಾಷೆಯೋ ಗೊತ್ತಿಲ್ಲ. ಆದ್ರೆ ಹೊರಗಡೆ ತಿನ್ನುವ ಆಹಾರ ಅನಾರೋಗ್ಯದ ಮೂಲ. ಬೇಸಿಗೆಯಲ್ಲಿ ನೀರಿನ ಅಭಾವ, ಧೂಳು, ಬೆವರು ಇತರೇ ಕಾರಣಗಳು ಆಹಾರ ತಯಾರಿಕೆ ಮೇಲೆ ಮಾರಕ ಪರಿಣಾಮ ಬೀರುತ್ತವೆ. ಹಾಗಂತ ಬೇಸಿಗೆಯಲ್ಲಿ ಮನೆ ಬಿಟ್ಟು ಹೊರಗೆಲ್ಲೂ ತಿನ್ನಬಾರದು ಅಂತೇನೂ ಅಲ್ಲ, ಜಾಗೃತಿ ಜತೆಗಿರಲಿ ಅಷ್ಟೆ.

ಮನೆಯಲ್ಲಿ ತಯಾರಿಸಿದ ಆಹಾರದ ಬಗ್ಗೆಯೂ ಕಾಳಜಿ ಇರಲಿ. ಊಟ ಅಥವಾ ಉಪಹಾರಕ್ಕೆ ಎರಡು ತಾಸಿಗಿಂತ ಮೊದಲು ತಯಾರಿಸಿದ ಆಹಾರ ಪದಾರ್ಥ ಒಳ್ಳೆಯದಲ್ಲ. ಅನಿವಾರ‌್ಯವಾದರೆ ಪ್ರಿಜ್‌ನಲ್ಲಿ ಅಥವಾ ನೀರು ತುಂಬಿದ ಪಾತ್ರೆಯಲ್ಲಿ ಆಹಾರದ ಪಾತ್ರವನ್ನಿಡಿ. ಪ್ರಿಜ್‌ನಲ್ಲಿಟ್ಟಿದ್ದರೆ ತಿನ್ನುವ ಪೂರ್ವದಲ್ಲಿ ಬಿಸಿ ಮಾಡುವುದನ್ನು ಮರೆಯಬೇಡಿ.
—–

ಬೇಸಿಗೆಯಲ್ಲಿ ನೀರಿನ ಮೂಲದಿಂದ ಬರುವ ಕಾಯಿಲೆಗಳು ಹೆಚ್ಚು. ವಾತಾವರಣದಲ್ಲಿ ಹೆಚ್ಚು ಉಷ್ಣತೆ ಇರುವುದರಿಂದ ಸನ್‌ಸ್ಟ್ರೋಕ್ ಸಾಧ್ಯತೆ ಇರಬಹುದು. ಕಾಯಿಲೆಗಳು ಬಂದ ನಂತರ ಪರದಾಡುವ ಬದಲು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
* ಡಾ.ಕರವೀರ ಪ್ರಭು, ಕ್ಯಾಲಕೊಂಡ

ಟಿಪ್ಸ್:
* ಬೀದಿ ಬದಿಯಲ್ಲಿ ಆಹಾರ ಸೇವಿಸುತ್ತೀರ ಅಂದರೆ ಅದು ಬಿಸಿಬಿಸಿಯಾಗಿದ್ದರೆ ಮಾತ್ರ ಸೇವಿಸಿ.

* ಹೊರಗಡೆ ನೀರು ಕುಡಿಯಬೇಡಿ. ನಿಮ್ಮ ಜತೆ ಕಾಯಿಸಿ ಆರಿಸಿದ ನೀರು ಸದಾ ಇರಲಿ.

* ಪ್ರತಿ ಬಾರಿ ಆಹಾರ ಸೇವಿಸುವಾಗ ಕೈ ತೊಳೆಯಿರಿ.

* ಪೌಷ್ಟಿಕಾಂಶವಿರುವ ಆಹಾರ ಸೇವನೆ ಉತ್ತಮ.

* ನೀವು ಭೇಟಿ ನೀಡುವ ಹೋಟೆಲ್‌ನ ಸ್ವಚ್ಛತೆ, ವಾತಾವರಣದ ಬಗ್ಗೆ ಪೂರ್ವ ಮಾಹಿತಿ ಇರಲಿ.

* ಸಾಂಕ್ರಮಿಕ ರೋಗಗಳ ಕಾಲ ಇದು. ಹೊರಗಡೆ ಹೆಚ್ಚು ತಿನ್ನುವುದು ಬೇಡ.

* ತೆರೆದಿಟ್ಟ ಹಣ್ಣು, ತಿನಿಸುಗಳಿಂದ ದೂರವಿರಿ.

* ಜ್ಯೂಸ್ ಬದಲು ಎಳೆನೀರು ಕುಡಿಯುವುದು ಒಳ್ಳೆಯದು.

* ವಾಟರ್ ಪಾರ್ಕ್, ಸ್ವಿಮ್ಮಿಂಗ್‌ಪೂಲ್‌ನಲ್ಲಿ ಹೆಚ್ಚು ಹೊತ್ತು ಕಳೆಯಬೇಡಿ.

* ಪದೇಪದೆ ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.

Write A Comment