ಮನೋರಂಜನೆ

ಆಟಿ ತಿಂಗೊಲ್ದ ಒಂಜಿ ದಿನ: ಆಷಾಢದ ಒಂದು ದಿನ

Pinterest LinkedIn Tumblr

Drama

 

‘ಆಟಿ ತಿಂಗೊಲ್ದ ಒಂಜಿ ದಿನ’ ಎಂಬ ತುಳು ನಾಟಕ ನೋಡಿದ ನಂತರ   ನಟಿ, ಕವಿಯತ್ರಿ, ರಂಗಭೂಮಿ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ತಮ್ಮ ಅಭಿಪ್ರಾಯವನ್ನು ಹೇಳಿದ್ದು ಹೀಗೆ :

ಮೋಹನ್ ರಾಕೇಶ್ ಅವರು ನಮ್ಮ ದೇಶದ ಒಬ್ಬ ಪ್ರಮುಖ, ಅತ್ಯುತ್ತಮ ನಾಟಕಕಾರ. ಕನ್ನಡಕ್ಕೆ ಅನುವಾದಗೊಂಡ ಅವರ ‘ಆಧೆ ಅಧೂರೆ’ ನಾಟಕದಲ್ಲಿ ಅಭಿನಯಿಸಿ ಮತ್ತು ಈ ‘ಆಷಾಢದ ಒಂದು ದಿನ’ ನಾಟಕವನ್ನು ಓದಿ ಅವರ ಸಂಭಾಷಣೆಗಳನ್ನು ಮತ್ತು ದೃಶ್ಯಗಳನ್ನು ಕಟ್ಟಿಕೊಡುವ ತಾಕತ್ತಿನ ಬಗ್ಗೆ ನಮ್ಮ ಗಿರೀಶ್ ಕಾರ್ನಾಡರ ತುಘಲಕ್, ಹಯವದನ, ಅಂಜುಮಲ್ಲಿಗೆ ಇತ್ಯಾದಿಗಳ ಕುರಿತ ರೀತಿಯಲ್ಲೇ ಬೆರಗುಗೊಂಡಿದ್ದೇನೆ. ‘ಆಷಾಢದ ಒಂದು ದಿನ’ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತಿದೆಯೇನೋ ಎಂಬಷ್ಟು ಸಂಭಾಷಣಾ ಪ್ರಧಾನ ನಾಟಕವಾದರೂ (ಆಧೆ ಅಧೂರೆ ಸಹ!) ಏನೂ ಹೇಳದೆಯೂ ಬಹಳಷ್ಟನ್ನು ಹೇಳಿಬಿಡುತ್ತಾರೆ ಮೋಹನ್ ರಾಕೇಶ್, ಥೇಟ್ ಕಾವ್ಯದಂತೆ! ಅದು ಕಾಳಿದಾಸ-ಮಲ್ಲಿಕಾರ ಪ್ರೀತಿ ಇರಬಹುದು, ಮಲ್ಲಿಕಾಳಿಗೆ ಅಮುಖ್ಯವೆನಿಸಿದರೂ ಕಾಳಿದಾಸನಷ್ಟೆ ಮುಖ್ಯವಾಗುವ ವಿಲೋಮನಿರಬಹುದು, ಬೆಳೆದ ಮಗಳ ಭಾವ ಪ್ರಪಂಚದಿಂದಾಗಿ ಹಣ್ಣಾದ ಅಂಬಿಕಾ ಇರಬಹುದು, ರಾಜಕುಮಾರಿ ಪ್ರಿಯಾಂಗು ಇರಬಹುದು, ಎಲ್ಲ ಪಾತ್ರಗಳ ವ್ಯಕ್ತಿತ್ವಗಳನ್ನೂ ನಮ್ಮ ಕಲ್ಪನಾ ಪ್ರಪಂಚದನುಸಾರ ನಮ್ಮ ನಮ್ಮ ಮನಸಿನಲ್ಲಿ ರೂಪುಗೊಳ್ಳಲ್ಲು ಅದೆಷ್ಟು ಅನುವು ಮಾಡಿಕೊಡುತ್ತಾರೆಂದರೆ, ರಂಗಮಂಚದಿಂದಾಚೆಗೂ ನಾಟಕ ಪ್ರೇಕ್ಷಕನ ಮನದ ಅಂಗಣಕ್ಕನುಗುಣವಾಗಿ ಬೆಳೆದು ಆಡ ತೊಡಗುತ್ತದೆ,ಕಾಡ ತೊಡಗುತ್ತದೆ! ‘ಆಷಾಢದ ಒಂದು ದಿನ’ವನ್ನು ರಂಗದ ಮೇಲೆ ಕಾಣುವ ಈ ಕನ್ನಡತಿಯ ಆಸೆ ಸಾಕಾರವಾಗಿದ್ದು ಮಾತ್ರ ತುಳುವಿನಲ್ಲಿ!

ಮೋಹನ್ ರಾಕೇಶ್ ಅವರ ಹಿಂದಿ ಮೂಲದ ನಾಟಕ ತುಳುವಿನಲ್ಲಿ ಬೆಂಗಳೂರಿನ (ದಿನಾಂಕ: ೨೬ ಮಾರ್ಚ್ ೨೦೧೫ ಹಾಗೂ ೨೭ ಮಾರ್ಚ್ ೨೦೧೫) ಕಲಾಗ್ರಾಮದಲ್ಲಿ ‘ಅನೇಕ’ ತಂಡ (ಸುರೇಶ ಆನಗಳ್ಳಿ ಅವರ ತಂಡ) ಮತ್ತು ದೃಶ್ಯ ತಂಡ ( ದಾಕ್ಷಾಯಣಿ ಭಟ್ ಅವರ ತಂಡ) ಆಯೋಜಿಸಿದ್ದು, ಕಲಾಗ್ರಾಮದಲ್ಲಿ ಹೌಸ್‍ಫುಲ್ ಆಗಿ ಜನಮನ ಗೆದ್ದ ಮುಂಬೈನ ‘ಕಲಾಭಾರತಿ’ ತಂಡದ ಈ ನಾಟಕ ಕಲಾಸೌಧದಲ್ಲೂ ಜನ ಮೆಚ್ಚುಗೆ ಪಡೆದುಕೊಂಡಿತು.

ಉತ್ತಮ ನಿರ್ದೇಶನ ಭರತಕುಮಾರ ಪೊಲಿಪು ಅವರದು. ಮುಂಬೈನಲ್ಲಿ ಅನೇಕ ವರ್ಷಗಳಿಂದ ನಾಟಕಗಳನ್ನು ನಿರ್ದೇಶಿಸುತ್ತಾ ಬಂದಿರುವ ಪೊಲಿಪು, ಈ ನಾಟಕದಲ್ಲಿ ಯಾವ ದೃಶ್ಯಗಳನ್ನೂ ಅತಿಶಯಕ್ಕೆಳೆಯದೆ ಹದವಾಗಿ ನಾಟಕವನ್ನು ಕಟ್ಟಿ ಕೊಟ್ಟಿದ್ದಾರೆ. ಅವರ ಉತ್ತಮ ನಿರ್ದೇಶನಗಳಲ್ಲಿ ಇದೂ ಒಂದು.
ಸಂಗೀತ ಮತ್ತು ಬೆಳಕುಗಳೂ ಉತ್ತಮವಾಗಿದ್ದವು.

ಸಂಗೀತ (ರಾಮಚಂದ್ರ ಹಡಪದ) ಸಂಭಾಷಣೆ ಜೊತೆ ಇನ್ನಷ್ಟು ಮಿಳಿತವಾಗಿದ್ದಲ್ಲಿ ಅಂದರೆ ವಾಕ್ಯಗಳ ನಡು ನಡುವೆ ಸಂಭಾಷಣೆಯ ಹಿನ್ನೆಲೆಯಾಗಿ ಬರಬೇಕಾದ ಆಲಾಪಗಳು, ಸ್ವರಗಳು,‘ಕೆಲವೆಡೆ’ಯಲ್ಲಿ ಜೊತೆಜೊತೆಗೆ ಬರುತ್ತಿದುದು ಮಾತುಗಳು ಪ್ರೇಕ್ಷಕರನ್ನು ತಲುಪುವಲ್ಲಿ ಸೋಲಿಸುತ್ತಿದ್ದವು. ತುಂಬಾ ಒಳ್ಳೆಯ ಸಂಗೀತ ಸಂಯೋಜನೆ, ಹಾಡುಗಾರಿಕೆ ಮತ್ತು ಧ್ವನಿ ರಾಮಚಂದ್ರ ಹಡಪದ್ ಅವರದು ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲನೇಯ ಬ್ಲಾಕ್ ಔಟ್‍ ಹೊತ್ತಲ್ಲಿ ಶುರುವಾಗುವ ಹಾಡು ಇನ್ನಷ್ಟು ವಿಷಾದದ ಧಾಟಿಯಲ್ಲಿರಬೇಕಿತ್ತು ಅಥವಾ ನನ್ನಂತೆ ಅಭಿಪ್ರಾಯ ಪಟ್ಟ, ತುಳು ಬಲ್ಲ ರಂಗಕರ್ಮಿಯೊಬ್ಬರ ಪ್ರಕಾರ ಹಾಡಿನ ಬದಲಿಗೆ ಹಮ್ಮಿಂಗ್ ಇದ್ದಿದ್ದರೆ ಸರಿಯಾಗಿರೋದು. (ಭಾಷೆ ಬಲ್ಲವರಿಗೆ ಹಾಡಿನ ಅರ್ಥ ಗೊತ್ತಾಗುವುದರಿಂದ ಗಮನ ಆ ಕಡೆ ಹರಿಯುವುದು ಸಹಜ. ಆದರೆ ಭಾಷೆ ಗೊತ್ತಿಲ್ಲದವರಿಗೆ ಅಷ್ಟೊತ್ತಿನ ದೃಶ್ಯ ಮಲ್ಲಿಕಾಳ ಅಗಲಿಕೆಯ ನೋವನ್ನೇ ಬದಿಗೊತ್ತಿದ ಸಂಭ್ರಮವನ್ನೂ ಮೀರಿಸಿ ಅಂಬಿಕಾಳ ವಿಷಾದ ಗಾಢವಾಗುವುದು ಅನುಭವಕ್ಕೆ ಬರುತ್ತಾದ್ದರಿಂದ ದೃಶದ ಕೊನೆಯಲ್ಲಿ ಶುರುವಾಗುವ ಹಾಡಿನ ರಾಗ ಮತ್ತು ಲಯ ವಿಷಾದಕ್ಕೆ ವ್ಯತಿರಿಕ್ತ ಅನಿಸುತ್ತವೆ ಮತ್ತು ಬ್ಲಾಕ್‍ಔಟ್‍ನಲ್ಲೇ ಹಾಡನ್ನು ಮೊಟಕುಗೊಳಿಸಿದಲ್ಲಿ ಬ್ಲಾಕ್‍ಔಟ್ ದೀರ್ಘವಾಗುವುದನ್ನು ತಪ್ಪಿಸಬಹುದು ಅನಿಸಿತು ನನಗೆ. ತಬಲಾ ಮತ್ತು ರಿದಂ‍ನಲ್ಲಿ ಹಡಪದ ಅವರಿಗೆ ಚೆಂದದಿಂದ ಸಾಥ್ ಕೊಟ್ಟವರು ಮುಂಬೈನ ಕಲಾವಿದ ಮನೋಜ್ ರಾವ್.

ನಾಟಕದ ಹೆಚ್ಚಿನ ಭಾಗ ಪ್ರಖರವಲ್ಲದ, ಹಳದಿ ಬೆಳಕೇ ಇತ್ತಾದರೂ ಅದು ಇಡೀ ನಾಟಕಕ್ಕೆ ಪೂರಕವಾಗಿತ್ತು (ಸಂಯೋಜನೆ: ಅರುಣಮೂರ್ತಿ, ನಿರ್ವಹಣೆ ರಜನಿಕಾಂತ್). ಕಿಟಕಿಯನ್ನು ತುಂಬಾ ಚೆಂದವಾಗಿ, ಆಕರ್ಷಕವಾಗಿ ತೋರಿಸುತ್ತಿದ್ದ ಬೆಳಕು, ಪಾತ್ರಧಾರಿಗಳೆಲ್ಲ ಕಿಟಕಿ ಬಳಿ ಬಂದು ಮಾತನಾಡುವಾಗಲೆಲ್ಲ ಅವರ ಮುಖ ಸರಿ ಕಾಣದಂತೆ ಮಾಡಿಬಿಡುತ್ತಿತ್ತು. ಅಲ್ಲಿ ಬಂದಾಗಲೆಲ್ಲ ಪಾತ್ರಧಾರಿಗಳು ಬೆಳಕನ್ನು ತೆಗೆದುಕೊಳ್ಳಲು ಕಷ್ಟಪಡಬೇಕಿತ್ತು. ಅದಿಷ್ಟನ್ನು ಸರಿ ಮಾಡಿಕೊಂಡದ್ದಾದರೆ ಅಲ್ಲಿ ನಿಂತು ಮಾತಾಡುವ ಪತ್ರಧಾರಿಗಳ ಎಲ್ಲ ಮುಖ್ಯ ಮಾತುಗಳ ಜೊತೆಗಿನ ಮುಖಭಾವವೂ ಪ್ರೇಕ್ಷಕನಿಗೆ ತಲುಪಿ ಇನ್ನೂ ಗಾಢ ಅನುಭವವನ್ನು ಕೊಡಬಲ್ಲವು.

ಒಂದೇ ಸ್ಥಳದಲ್ಲಿ (ಮಲ್ಲಿಕಾಳ ಮನೆ) ಇಡೀ ನಾಟಕ ನಡೆಯುತ್ತದೆ. ವಿಶ್ವೇಶ್ವರ ಪರ್ಕಳ ಅವರ ಕಲಾತ್ಮಕತೆಯ ಕುರಿತು ಎರಡು ಮಾತಿಲ್ಲ. ಅವರ ಮುಂಚಿನ ಹಲವಾರು ರಂಗವಿನ್ಯಾಸಗಳನ್ನೂ ನೋಡಿರುವೆ ನಾನು. ಚೆಂದವಾಗಿ, ನಾಟಕಕ್ಕೆ ಪೂರಕವಾಗಿ ವಿನ್ಯಾಸ ಮಾಡುತ್ತಾರೆ. ಈ ನಾಟಕದ ಮಲ್ಲಿಕಾಳ ಮನೆಯ ಬಡತನವನ್ನು ಇದೇ ವಿನ್ಯಾಸದಲ್ಲಿ ಬಿಂಬಿಸಬಹುದಾದ ಸಾಧ್ಯತೆಗಳಿನ್ನೂ ಇವೆ. ಪರ್ಕಳರಿಗೆ ಇದು ಅಸಾಧ್ಯವಾದುದೇನಲ್ಲ.

ಪ್ರಸಾಧನ (ಮೋಹನ್) ಮತ್ತು ವೇಷ-ಭೂಷಣ (ದಾಕ್ಷಾಯಿಣಿ ಭಟ್) ಪಾತ್ರಕ್ಕೆ ತಕ್ಕುದಾಗಿದ್ದವು. (ಬಡತನದ ಮಲ್ಲಿಕಾಳ ಕೊರಳಲ್ಲಿ ಹೊಳೆಯುವ ಕಲ್ಲಿನ ಹಾರ ಮಾತ್ರ ಬೇಡವಾಗಿತ್ತು ಎನಿಸಿತು)

ಮುಂಬೈನ ಈ ಕಲಾವಿದರ ಅಭಿನಯದ ತಾಕತ್ತಿನ ಕುರಿತು ಎರಡು ಮಾತಿಲ್ಲ! ಬೆಂಗಳೂರಿನ ಎರಡೂ ದಿನದ ಪ್ರಯೋಗಗಳನ್ನು ನೋಡಿದವರಿಗೆ ಇದು ಮನದಟ್ಟಾಗಿರುತ್ತದೆ.

ವಿಲೋಮನಾಗಿ ಅಭಿನಯಿಸಿದ ಅವಿನಾಶ್ ಕಾಮತ್ ಅವರಿಗೆ ತುಳು ಬಾರದು. ತುಳು ಬಲ್ಲವರೂ, ‘ಊಂಹೂಂ ತುಳು ಬರೊಲ್ಲ ಅಂತ ಮಜಾಕ್ಮಾಡ್ತಿದ್ದೀರಿ ನೀವು!’ ಅನ್ನುವಷ್ಟರ ಮಟ್ಟಿಗೆ ಸುಲಲಿತವಾಗಿ ಮಾತನಾಡಿ ತುಳುವನ್ನು ಈ ನಾಟಕದಲ್ಲಿ ತಮ್ಮದಾಗಿಸಿಕೊಂಡ ಅವಿನಾಶ್, ಅದೇ ವಿಲೋಮನನ್ನು ಎರಡೂ ದಿನ ಭಿನ್ನ ಭಿನ್ನ ಆಯಾಮದಲ್ಲಿ ನೋಡುವಂತೆ ಅಭಿನಯಿಸಿ ಬೆರಗು ಮೂಡಿಸಿದರು!

ಕಾಳಿದಾಸನಾಗಿ ಮೋಹನ್ ಮಾರ್ನಾಡ್ ಅವರದು ಸುಂದರ ಅಭಿನಯ. ಅಭಿನಯ ಇವರಿಗೆ ನೀರು ಕುಡಿದಷ್ಟು ಸರಾಗ! ಧ್ವನಿಯ ಏರಿಳಿತವನ್ನು ಚೆನ್ನಾಗಿ ಬಲ್ಲ ಮೋಹನ್ ಸ್ವಲ್ಪ ಗಟ್ಟಿಯಾಗಿ (ಧ್ವನಿಯ ವಾಲ್ಯೂಮ್ ಹೆಚ್ಚು ಮಾಡಿ) ಮಾತನಾಡಿದ್ದರೆ ಕಾಳಿದಾಸನ ಗೊಣಗುವಿಕೆಯೂ ಪ್ರೇಕ್ಷಕರನ್ನು ತಲುಪುತಿತ್ತು.

ಮಲ್ಲಿಕಾ ಆಗಿ ಸುಧಾ ಶೆಟ್ಟಿ ಮೂರನೇಯ ಅಂಕದಲ್ಲಿ ಸೂಪರ್ಬ್ (ಇವರೂ ಸಹ ಧ್ವನಿಯ ವಾಲ್ಯೂಮ್ ಎತ್ತರಿಸಿಕೊಳ್ಳಬೇಕು).

ಅಂಬಿಕಾ ಆಗಿ ಶೈಲಿನಿ ರಾವ್ ತುಂಬಾ ಚೆನ್ನಾಗಿ ಅಭಿನಯಿಸಿದರು. ಬೆಳದ ಮಗಳಿಗೆ ಹೆಚ್ಚಿಗೆ ಹೇಳಲಾಗದ ಸಂಕಟ, ಅವಳ ಬಾಳು ಕಲ್ಪನಾಲೋಕದಲ್ಲೇ ಕಳೆದು ಹೋಗುತ್ತಿರುವುದನ್ನು ನೋಡಲಾಗದ ತಳಮಳ, ಅಸಹಾಯಕತೆಗಳನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸಿದರು.

ಮಾತುಲಾ ಆಗಿ ಹಿರಿಯ ಕಲಾವಿದರಾದ ಕೆ.ವಿ.ಆರ್ ಐತಾಳ್ ತಮ್ಮ ಎಂದಿನ ಸಹಜ ನಟನೆಯ ಮೂಲಕ ಪುಟ್ಟ ಪಾತ್ರವಾದರೂ ಮನ ಗೆಲ್ಲುತ್ತಾರೆ.

ದಂತುಲ ಮತ್ತು ಅನುಸ್ವಾರನಾಗಿ ಸುರೇಂದ್ರಕುಮಾರ ಮಾರ್ನಾಡ್: ನಿರ್ದೇಶಕರ ನಟರು ಸುರೇಂದ್ರ. ಹೇಗೆ ಮೋಲ್ಡ್ ಮಾಡ್ತಾರೊ ಹಾಗೆ ಹೊಂದಿಕೊಳ್ಳುವ ತಾಕತ್ತಿನ ಫ್ಲೆಗ್ಸಿಬಲ್ ನಟ. (ವಿಭಿನ್ನ ಪಾತ್ರಗಳು ಸಿಗಬೇಕಿದೆ ಇವರಿಗೆ) , ನಿಕ್ಷೇಪ ಮತ್ತು ಅನುಸಾರನಾಗಿ ಲತೇಶ್ ಪೂಜಾರಿ (ಇವರ ಅಭಿನಯದ ಬಗ್ಗೆ ಕೇಳಿದ್ದೆ, ಈ ನಾಟಕದಲ್ಲಿ ಇರುವ ಇಷ್ಟಿಷ್ಟೇ ಅವಕಾಶಗಳನ್ನೂ ಚೆಂದವಾಗಿ ಬಳಸಿಕೊಂಡು ನಾನು ಕೇಳಿದ್ದು ಸರಿ ಅನ್ನುವುದನ್ನು ಮನದಟ್ಟು ಮಾಡಿಸಿದರು) ಇಬ್ಬರೂ ತಮ್ಮ ಎರಡೂ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು.

ರಾಜಕುಮಾರಿ ಪ್ರಿಯಾಂಗುಮಂಜರಿಯಾಗಿ ಕೃಪಾ ಪೂಜಾರಿ ಅವರು, ಮಾತುಗಳಲ್ಲಿ ನೋಟದಲ್ಲಿ ಗೆದ್ದರೂ ಇನ್ನೊಂಚೂರು ಗತ್ತು ಮತ್ತು ನಡಿಗೆಯ ಗಾಂಭಿರ್ಯ ಇದ್ದಿದ್ರೆ ಇನ್ನೂ ಚೆನ್ನಾಗಿರೋದು ಅನಿಸಿತು. ಸಂಭಾಷಣಾ ಪ್ರಧಾನ ನಾಟಕಗಳು ಭಾಷೆ ಗೊತ್ತಿಲ್ಲದವರನ್ನು ತಲುಪುವುದು ಅಪರೂಪ ಮತ್ತು ಕಷ್ಟ ಸಾಧ್ಯ. ಹಾಗೆ ಅಪರೂಪವಾಗಿ ತುಳು ಗೊತ್ತಿಲ್ಲದ ಪ್ರೇಕ್ಷಕರನ್ನೂ ಈ ನಾಟಕ ತಲುಪಿದ್ದು, ತಟ್ಟಿದ್ದು ಮುಂಬೈ ಕಲಾವಿದರ ಸಶಕ್ತ ಅಭಿನಯದಿಂದಾಗಿ ಮತ್ತು ತನ್ನ ಅಚ್ಚುಕಟ್ಟುತನದಿಂದಾಗಿ. “ವಿಲೋಮ ಯಾರು? ಒಬ್ಬ ಅಯಶಸ್ವಿ ಕಾಳಿದಾಸ…. ಕಾಳಿದಾಸ ಯಾರು? ಒಬ್ಬ ಯಶಸ್ವೀ ವಿಲೋಮ!” (ಇದೇ ನಾಟಕದಲ್ಲಿನ ಸಾಲು ಇದು)

– ಜಯಲಕ್ಷ್ಮೀ ಪಾಟೀಲ್

Write A Comment