ಮನೋರಂಜನೆ

ಸಿನಿಮಾ ಕೇಸರಿಭಾತ್‌ಗೆ ಜಾಹೀರಾತಿನ ಉಪ್ಪು!

Pinterest LinkedIn Tumblr

psmec25theatre_0

ನಾನೊಬ್ಬ ಸಿನಿಮಾ ಪ್ರೇಮಿ. ನಿಯಮಿತವಾಗಿ ಸಿನಿಮಾಗಳನ್ನು ನೋಡುತ್ತಲೇ ಇರುತ್ತೇನೆ. ಹಿಂದೆಲ್ಲಾ ಏಕಪರದೆಯ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡ ದಿನದ ಅದ್ದೂರಿ ಸಮಾರಂಭ, ಹಾಲಿನ ಅಭಿಷೇಕ, ನೂಕುನುಗ್ಗಲು, ಬ್ಲಾಕ್‌ ಟಿಕೆಟ್‌ ಮಾರಾಟ ಈ ಎಲ್ಲಾ ಸಂಸ್ಕೃತಿಯನ್ನು ಹತ್ತಿರದಿಂದ ಕಂಡವನು ನಾನು. ಆದರೀಗ ಬೆಂಗಳೂರು ಸಿನಿಮಾ ಪ್ರದರ್ಶನದ ವೈಖರಿಯಲ್ಲಿ ಗಮನಾರ್ಹ ಬದಲಾವಣೆಯಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸಿನಿಮಾಗೂ ಜಾಹೀರಾತಿಗೂ ಸಲ್ಲುತ್ತಿರುವ ದೊಡ್ಡ ಸಂಬಂಧ ಗ್ರಾಹಕನಾಗಿ ನನಗೆ ತಲೆನೋವಾಗುತ್ತಿರುವ ಸಂಗತಿ ಇದು.

ಡಿಸೆಂಬರ್‌ 25ರಂದು, ಕ್ರಿಸ್‌ಮಸ್‌ ದಿನ ‘ಮಿಸ್ಟರ್‌ ಅಂಡ್‌ ಮಿಸೆಸ್‌ ರಾಮಾಚಾರಿ’ ಕನ್ನಡ ಸಿನಿಮಾ ತೆರೆಕಂಡಿತು. ಒರಾಯನ್‌ ಮಾಲ್‌ನಲ್ಲಿನ ಪಿವಿಆರ್‌ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನ ನೋಡಲು ಹೋದೆ. ಸಿನಿಮಾಗೆಂದು ಒಳಗೆ ಹೋಗಿ, ಹೊರಬಂದಾಗ ಮೂರೂಕಾಲು ತಾಸು. ಹೆಚ್ಚೂ ಕಡಿಮೆ ಮುಕ್ಕಾಲು ತಾಸು ಅವಧಿಯ ಜಾಹೀರಾತುಗಳನ್ನು ಆ ದಿನ ನಾನು ನೋಡಿದ್ದೆ.

ಆಮೇಲೆ ಕುತೂಹಲಕ್ಕೆಂದು ಐನಾಕ್ಸ್‌, ಸಿನೆಪೊಲೀಸ್‌ ಮೊದಲಾದ ಚಿತ್ರಮಂದಿರಗಳಲ್ಲಿ ಪದೇಪದೇ ಬೇರೆ ಬೇರೆ ಭಾಷೆಗಳ ಸಿನಿಮಾಗಳನ್ನು ನೋಡಿದೆ. ಐನಾಕ್ಸ್‌ ಚಿತ್ರಮಂದಿರಗಳಲ್ಲಿಯಂತೂ ಒಂದೇ ರೀತಿಯ ಜಾಹೀರಾತುಗಳು; ಅದೂ ಎರಡು ಮೂರು ‘ವರ್ಷನ್‌’ಗಳಲ್ಲಿ ಮೂಡಿಬಂದವು.  ಒಂದೆರಡು ಸಿನಿಮಾಗಳನ್ನು ನೋಡಲು ಬೇಕೆಂದೇ ಹದಿನೈದು ನಿಮಿಷ ತಡವಾಗಿ ಹೋದೆ. ಆದರೂ ಜಾಹೀರಾತು ಪ್ರಸಾರ ಮುಗಿದಿರಲಿಲ್ಲ. ಎರಡೂಕಾಲು ತಾಸಿನ ಸಿನಿಮಾ ನೋಡಲು ಹೋದರೆ ಒಟ್ಟು ಎರಡೂ ಮುಕ್ಕಾಲು ತಾಸು ಚಿತ್ರಮಂದಿರದಲ್ಲಿ ಕೂರಬೇಕಾದ ಅನಿವಾರ್ಯವನ್ನು ಈ ಜಾಹೀರಾತುಗಳು ಸೃಷ್ಟಿಸಿವೆ.

ಟೀವಿ ವಾಹಿನಿಗಳಲ್ಲಿ ಸಿನಿಮಾಗಳನ್ನು ನೋಡಲು ಪ್ರೇಕ್ಷಕರಿಗೆ ಕಿರಿಕಿರಿ ಒಡ್ಡುತ್ತಿರುವುದು ಜಾಹೀರಾತುಗಳು ಎನ್ನುವುದು ಈಗ ಸ್ಪಷ್ಟ. ಆದರೆ, ಅಲ್ಲಿ ಪುಕ್ಕಟೆಯಾಗಿ ಸಿನಿಮಾ ನೋಡುವ ಅವಕಾಶ ಇರುವುದರಿಂದ ಕಿರಿಕಿರಿಯನ್ನು ಸಹಿಸಿಕೊಳ್ಳಲೇಬೇಕು. ಆದರೆ, ಇನ್ನೂರು ರೂಪಾಯಿಗೂ ಹೆಚ್ಚು ಹಣ ತೆತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಸಿನಿಮಾ ನೋಡಲು ಹೋಗುವವರು ಅಷ್ಟು ಸುದೀರ್ಘ ಅವಧಿಯ ಜಾಹೀರಾತುಗಳ ಕಿರಿಕಿರಿ ಸಹಿಸಿಕೊಳ್ಳಬೇಕಾಗುತ್ತಿರುವುದು ಪ್ರಶ್ನಾರ್ಹ.

ಇತ್ತೀಚಿನವರೆಗೆ ಚಿತ್ರಮಂದಿರಗಳಲ್ಲಿ ಅರಿವು ಮೂಡಿಸುವ ಯಾವುದಾದರೂ ಒಂದು ಸಾಕ್ಷ್ಯಚಿತ್ರ ಪ್ರದರ್ಶಿಸುವುದು ಕಡ್ಡಾಯವಿತ್ತು. ಈಗಲೂ ಆ ನಿಯಮದಲ್ಲಿ ಸಡಿಲಿಕೆ ಆಗಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸಾಕ್ಷ್ಯಚಿತ್ರಗಳ  ಪ್ರದರ್ಶನವನ್ನು ಕೈಬಿಟ್ಟು ಬರೀ ಜಾಹೀರಾತುಗಳನ್ನು ತೋರಿಸಿ, ಮಲ್ಟಿಪ್ಲೆಕ್ಸ್‌ಗಳು ಇನ್ನಷ್ಟು ಹಣ ಮಾಡುತ್ತಿವೆ.

ಹಣ ಮಾಡುವುದು, ಲಾಭ ಮಾಡುವುದು ಉದ್ಯಮ ಪ್ರಣೀತ ವ್ಯವಸ್ಥೆಯ ಮುಖ್ಯ ಉದ್ದೇಶ ಎನ್ನುವುದು ನಿಜ. ಸಿನಿಮಾ ಟಿಕೆಟ್‌ ದರವನ್ನು ಮಲ್ಟಿಪ್ಲೆಕ್ಸ್‌ ಏರಿಸಿರುವುದು ಅದೇ ಕಾರಣಕ್ಕೆ ಅಲ್ಲವೇ. ವರ್ಷದ ಹಿಂದೆ ಟ್ರೇಲರ್‌ಗಳ ಪ್ರಸಾರ ಚಿತ್ರಮಂದಿರಗಳಲ್ಲಿ ಸಾಮಾನ್ಯವಾಗಿತ್ತು. ಈಗಲೂ ಕೆಲವೆಡೆ ಟ್ರೇಲರ್‌ಗಳನ್ನು ಪ್ರದರ್ಶಿಸುವ ಸಂಪ್ರದಾಯ ಉಳಿದುಕೊಂಡಿದೆ. ಜಾಹೀರಾತುಗಳ ಸಂಖ್ಯೆಯನ್ನು ತಗ್ಗಿಸಿ, ಟ್ರೇಲರ್‌ಗಳನ್ನಾದರೂ ತೋರಿಸಿದರೆ ಸಿನಿಮಾ ಅಭಿಮಾನಿಗಳಿಗೆ ಬೋನಸ್ಸು ಸಿಕ್ಕಂತಾಗುತ್ತದೆ.
ಹೋಗಲಿ, ಜಾಹೀರಾತುಗಳಾದರೂ ತಿಂಗಳಿನಿಂದ ತಿಂಗಳಿಗೆ ಬದಲಾಗುತ್ತವೆಯೇ ಎಂದರೆ ಅದೂ ಆಗುವುದಿಲ್ಲ. ನೋಡಿದ ಜಾಹೀರಾತುಗಳನ್ನೇ ಪ್ರತಿ ವಾರವೂ ನೋಡುವುದು ಬಲು ಕಷ್ಟ.

ಈ ವಿಷಯವಾಗಿ ಇನ್ನಷ್ಟು ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರೆ ಸಮಸ್ಯೆಗೆ ಪರಿಹಾರ ಸಿಕ್ಕೀತು ಎಂಬ ವಿಶ್ವಾಸದೊಂದಿಗೆ ಇಷ್ಟೆಲ್ಲಾ ಹಂಚಿಕೊಂಡಿದ್ದೇನೆ.

ಇಂಥ ಅನುಭವ ನಿಮ್ಮದೂ ಆಗಿದ್ದರೆ ಅಥವಾ ಇದೇ ವಿಷಯಕ್ಕೆ ಸಂಬಂಧಿಸಿದ ಬೇರೆ ಒಳನೋಟಗಳಿದ್ದರೆ ಬರಹ, ನುಡಿ ಅಥವಾ ಯೂನಿಕೋಡ್‌ ತಂತ್ರಾಂಶ ಬಳಸಿ ಬರೆದು ಕಳುಹಿಸಿ.
ಇ–ಮೇಲ್: metropv@prajavani.co.in

Write A Comment