ಮನೋರಂಜನೆ

ನಿರ್ದೇಶಕನ ಕಣ್ಣಲ್ಲಿ ಧಾರಾವಾಹಿ

Pinterest LinkedIn Tumblr

psmec25Milana_0

ಕಳೆದ ಹದಿನೈದು ವರ್ಷಗಳಿಂದ ಧಾರಾವಾಹಿ ಲೋಕದ ಸಿಹಿ–ಕಹಿಯೊಂದಿಗೆ ಹೆಜ್ಜೆ ಹಾಕಿದವರು ನಿರ್ದೇಶಕ ಬಿ.ಮಧುಸೂದನ. ಈಗ ಸುವರ್ಣ ವಾಹಿನಿಯ ‘ಮಿಲನ’ ಧಾರಾವಾಹಿಗೆ ಆ್ಯಕ್ಶನ್, ಕಟ್ ಹೇಳುತ್ತಿದ್ದಾರೆ. ಕಥೆ, ಶೈಲಿ, ನಿರೂಪಣೆ, ನಿರ್ಮಾಣ, ತಾಂತ್ರಿಕತೆ ಸೇರಿದಂತೆ ಧಾರಾವಾಹಿ ಪ್ರಪಂಚವೇ ಬದಲಾಗಿದೆ ಎನ್ನುವ ಅವರ ಮಾತಿನ ಲಹರಿ ಇಲ್ಲಿದೆ.

ಹೇಗಿತ್ತು ಅಂದಿನ ಧಾರಾವಾಹಿ ಕೆಲಸ, ಈಗ ಹೇಗಿದೆ?
ಬದಲಾಗಿದೆ, ತುಂಬಾನೇ ಬದಲಾಗಿದೆ… ಧಾರಾವಾಹಿಗೆ ಆಯ್ಕೆಯಾಗುವ ಕಥೆಗಳ ಒಡಲು ಮಾತ್ರವಲ್ಲ, ಅದನ್ನು ಹಿಡಿದಿಡುವ ಶೈಲಿ,  ಹೇಳದೆಯೂ ಅರ್ಥ ಮಾಡಿಸುವ ನಿರೂಪಣೆಯ ತಂತ್ರಗಾರಿಕೆಯೂ ಬದಲಾಗಿದೆ. ನಟ–ನಟಿಯರೂ ಬದಲಾಗಿದ್ದಾರೆ. ಆವತ್ತಿಗೂ ಈವತ್ತಿಗೂ ಅದೇ ಮನಸ್ಥಿತಿಯಲ್ಲಿ, ಅದೇ ನೆಲೆಯಲ್ಲಿ ಉಳಿದುಕೊಂಡವರೆಂದರೆ ಬಹುಶಃ ತಂತ್ರಜ್ಞರು ಎಂದು ಹೇಳಬಹುದೇನೋ?

ಮೊದಲ ಅನುಭವ…
ನಾನು ಮೊಟ್ಟ ಮೊದಲ ಬಾರಿಗೆ ಬೆರಗುಕಂಗಳಿಂದ ಧಾರಾವಾಹಿ ಜಗತ್ತಿಗೆ ಕಾಲಿಟ್ಟಿದ್ದು 1999ರ ಸಮಯದಲ್ಲಿ. ಜೋಕು–ಜೋಕಿ ಧಾರಾವಾಹಿಯ ಮೂಲಕ. ರಸ್ತೆಯಲ್ಲಿ ಒಂದು ಶೂಟಿಂಗ್ ನಡೆಸಬೇಕೆಂದರೆ ಜನರನ್ನು ನಿರ್ವಹಿಸುವುದು ಸಾಕು ಸಾಕಾಗಿ ಹೋಗುತ್ತಿತ್ತು ಆಗ. ಆದರೆ ಈಗ, ಅಲ್ಲೇ ಶೂಟಿಂಗ್ ನಡೆಯುತ್ತಿದ್ದರೂ ಜನ ಸುಮ್ಮನೇ ಪಕ್ಕದಲ್ಲಿ ಹಾಯ್ದು ಹೋಗುತ್ತಾರೆ.

ಅಂದಿನ ಧಾರಾವಾಹಿಗೂ, ಇಂದಿನ ಧಾರಾವಾಹಿಗೂ ಎಂಥ ವ್ಯತ್ಯಾಸ?
ಆಗ ಇಷ್ಟೊಂದು ಚಾನೆಲ್‌ಗಳೂ ಇರಲಿಲ್ಲ, ಇಷ್ಟು ಅವಕಾಶಗಳೂ ಇರಲಿಲ್ಲ. ಆದರೆ ಇರುವ ಸೀಮಿತ ಅವಕಾಶದಲ್ಲಿ ಅತ್ಯುತ್ತಮ ಧಾರಾವಾಹಿಗಳು ಮೂಡಿ ಬರುತ್ತಿದ್ದವು. ಶ್ರೀಮಂತ ಕಥಾ ವಸ್ತುಗಳಿದ್ದವು. ಐತಿಹಾಸಿಕ ಧಾರಾವಾಹಿಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಜನ ಮಕ್ಕಳನ್ನೂ ಟೀವಿ ಮುಂದೆ ಕೂಡಿಸಿ ಅಂತಹ ಕಥೆಗಳನ್ನು ತೋರಿಸುತ್ತಿದ್ದರು. ಈಗ ಗುಣಮಟ್ಟದ ಬಗ್ಗೆ ಒಲವು ಕಡಿಮೆ ಆಗುತ್ತಿದೆ.

ಧಾರಾವಾಹಿಗೂ ರಿಮೇಕ್ ಬೇಕೆ?
ಖಂಡಿತ ಬೇಡ, ಹೊಸ ಕಥೆಗಳಿಗೇನೂ ಬರವಿಲ್ಲ. ಅವುಗಳನ್ನು ಹುಡುಕುವ ಪ್ರಯತ್ನ, ಸಮಯ, ಮನಸ್ಸು ಬೇಕಷ್ಟೇ.
ಎಲ್ಲಾ ಚಾನೆಲ್‌ನಲ್ಲೂ ಒಂದೇ ಮಾದರಿಯ ಕಥೆಗಳು…. ಯಾಕೆ ಎಲ್ಲರಿಗೂ ಸಿದ್ಧ ಸೂತ್ರದ ಹಿಂದೆ ಓಡುವ ಧಾವಂತ?
ಅದು ಸುಲಭ ಮತ್ತು ಅದಕ್ಕೇ ಬೇಡಿಕೆ. ನಾವು ಹಾಗೂ ಚಾನೆಲ್‌ನವರು ಇಬ್ಬರೂ ಟಿಆರ್‌ಪಿ ಎನ್ನುವ ತೂಗು ಕತ್ತಿಯ ಅಡಿಯಲ್ಲಿ ಕುಳಿತು ಕೆಲಸ ಮಾಡಬೇಕಾ ಗುತ್ತದೆ.

ವಿವಾಹೇತರ ಸಂಬಂಧಗಳು, ಮುರಿದ ಮದುವೆಗಳು, ದಾಂಪತ್ಯದಲ್ಲಿ ವಿರಸ, ವಂಚನೆ… ಬಹುತೇಕ ಎಲ್ಲಾ ಕನ್ನಡ ಧಾರಾವಾಹಿಗಳಲ್ಲಿಯೂ ಯಾಕೆ ಇಂಥದ್ದೇ ವಿಷಯಗಳು ರಾರಾಜಿಸುತ್ತಿವೆ?
ವೀಕ್ಷಕರು ಬಯಸುತ್ತಾರೆ ಎನ್ನುವ ಅದೇ ಉತ್ತರವನ್ನು ಹೇಳಲಾರೆ. ಆದರೆ ‘ಮಿಲನ’ ಧಾರಾವಾಹಿಯಲ್ಲಿ ಅದೇ ವಿಷಯವನ್ನು ಭಿನ್ನ ರೀತಿಯಲ್ಲಿ ಹೇಳಲು ಪ್ರಯತ್ನಿಸುತ್ತಿದ್ದೇನೆ. ಗಂಡ–ಹೆಂಡಿರ ನಡುವೆ ‘ಇಗೊ’ ಇತ್ತೀಚೆಗೆ ಖಳನ ಪಾತ್ರ ವಹಿಸುತ್ತಿದೆ. ಮುಖ್ಯವಾಗಿ ಮಗುವಿನ ಮನಸ್ಸಿನ ಮೇಲೆ ಇದು ಹೇಗೆ ಪರಿಣಾಮ ಬೀರಬಹುದು ಎನ್ನುವುದನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಪ್ರಯತ್ನವದು.

ಏಕ್ತಾ ಕಪೂರ್ ಪ್ರಭಾವದಿಂದ ಕನ್ನಡ ಧಾರಾವಾಹಿಗಳು ಆಚೆ ಬರುವುದು ಯಾವಾಗ?
ಬರುತ್ತಿವೆ. ಕಳೆದ ಐದು ವರ್ಷಗಳ ಹಿಂದೆ ಇದ್ದಷ್ಟು ಅನುಕರಣೆ ಈಗಿಲ್ಲ.

ಧಾರಾವಾಹಿಗಳಲ್ಲಿ ತಂತ್ರಜ್ಞರು ಮತ್ತು ಕಲಾವಿದರ ಬದುಕು ಹೇಗಿದೆ?
ಇಲ್ಲಿ ಕಲಾವಿದರೇ ರಾಜ–ರಾಣಿಯರು. ಎಲ್ಲವೂ ಅವರು ಹೇಳಿದಂತೆಯೇ ನಡೆಯುತ್ತದೆ. ಕಲಾವಿದರಲ್ಲಿ ಹಿಂದಿದ್ದ ಬದ್ಧತೆ–ಜವಾಬ್ದಾರಿ ಈಗ ಕಡಿಮೆ ಆಗುತ್ತಿದೆ. ಹೊಸದಾಗಿ ಬಂದಾಗ ಇದ್ದ ಕಾಳಜಿ ನಂತರದ ದಿನಗಳಲ್ಲಿ ಇರುವುದಿಲ್ಲ. ನಾಲ್ಕೇ ದಿನದಲ್ಲಿ ತಮ್ಮನ್ನು ತಾವು ಸ್ಟಾರ್ ಎಂದುಕೊಂಡು ಭಂಡತನ ತೋರಿಸಲು ಆರಂಭಿಸುತ್ತಾರೆ. ಆದರೆ ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತೆ ನಿಜವಾದ ಕಲಾವಿದ/ಕಲಾವಿದೆ ಇಂತಹ ವರ್ತನೆ ತೋರುವುದಿಲ್ಲ.

ತಂತ್ರಜ್ಞರ ಬದುಕು ಮಾತ್ರ 10–15 ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹಾಗೇ ಇದೆ. ಕ್ಯಾಮೆರಾ ಆನ್ ಆಗುವ ಮೊದಲೇ ಅವರು ಸ್ಥಳದಲ್ಲಿರಬೇಕು, ಲೈಟ್ಸ್ ಆಫ್ ಆದ ಮೇಲೂ ಅವರ ಕೆಲಸಗಳು ಉಳಿದುಕೊಂಡಿರುತ್ತವೆ.

ಧಾರಾವಾಹಿ ಯಾವಾಗ ಮುಗಿಯುತ್ತದೊ ಎಂದು ಜನ ಪರಿತಪಿಸುವಂತಾಗುತ್ತಿದೆ… ಇದಕ್ಕೆ ಪರಿಹಾರ?
ಕೊನೆಯ ಕಂತಿನವರೆಗೂ ಅದೇ ಕುತೂಹಲ, ಅದೇ ಆಸಕ್ತಿ ಉಳಿಸಿಕೊಂಡು ಹೋಗುವುದೇ ಒಂದು ಧಾರಾವಾಹಿಯ ಯಶಸ್ಸು. ಅದನ್ನು ಸಾಧಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ‘ಮಿಲನ’ವನ್ನು ಹಾಗೆ ಅನವಶ್ಯಕವಾಗಿ ಎಳೆಯುವುದಿಲ್ಲ.

ಈ ಕನಸಿನ ಬೆನ್ನು ಹತ್ತಿದ್ದು?
ನಾನು ನಟನಾಗಬೇಕು ಎಂದು ಬಂದವ. ನಿರ್ದೇಶನದ ಗಂಧ–ಗಾಳಿಯೂ ಇರಲಿಲ್ಲ. ಆಕಸ್ಮಿಕವಾಗಿ ‘ಧಣಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಆ ಚಿತ್ರವನ್ನು ನೋಡಲು ಹೋದಾಗ ಒಬ್ಬ ಪ್ರಜ್ಞಾವಂತ ವೀಕ್ಷಕ ಅದರಲ್ಲಿನ ತಪ್ಪುಗಳನ್ನು ಗುರುತಿಸಿ ‘ನಿರ್ದೇಶಕನಿಗೆ ಇಷ್ಟೂ ಗೊತ್ತಾಗಬಾರದೇ?’ ಎಂದು ಬೈದುಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡೆ. ಆಗಲೇ ನಾನು ನಿರ್ದೇಶಕನಾಗಬೇಕು ಎಂದು ನಿರ್ಧರಿಸಿದ್ದು.

ಆದರೆ ಅಪ್ಪನಿಗೆ ಇದೆಲ್ಲ ಇಷ್ಟ ಇರಲಿಲ್ಲ. ಎಲ್ಲರಂತೆ ನನ್ನ ಅಪ್ಪನೂ ತನ್ನ ಮಗ ಸಾಫ್ಟ್‌ವೇರ್ ಎಂಜಿನಿಯರ್ ಆಗಬೇಕು ಅಂದುಕೊಂಡಿದ್ದರು. ಸಿನಿಮಾದಲ್ಲಿ ಕೆಲಸ ಮಾಡುವವರಿಗೆ ಗೌರವ ಇಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು.

ಅಂದರೆ ನಿಮ್ಮ ಪ್ರಕಾರ ಸಿನಿಮಾದಲ್ಲಿ  ಕೆಲಸ ಮಾಡುವ ಎಲ್ಲರಿಗೂ ಗೌರವ ಇದೆಯೇ?
ಇಲ್ಲ, ಎಲ್ಲಾ ಕೆಲಸಗಳನ್ನು ಸಮಾನವಾಗಿ ಕಾಣುವ ಪ್ರವೃತ್ತಿ ನಮ್ಮಲ್ಲಿ ಇನ್ನೂ ಬೆಳೆಯಬೇಕಿದೆ. ಸಣ್ಣ–ಪುಟ್ಟ ಕೆಲಸ ಮಾಡುವವರನ್ನು ನಾವು ಕೀಳಾಗಿ ಕಾಣಬಾರದು. ಅವರು ಮಾಡುವ ಚಿಕ್ಕ ಚಿಕ್ಕ ಕೆಲಸಗಳೂ ಅಷ್ಟೇ ಮುಖ್ಯ ಅಲ್ಲವೇ? ಒಂದು ದಿನ ಲೈಟ್ ಬಾಯ್ ಬರದೇ ಹೋದರೆ, ಕ್ಯಾಮೆರಾ ಅಸಿಸ್ಟೆಂಟ್ ಇಲ್ಲದೇ ಹೋದರೆ… ಕೆಲಸ ಹೇಗೆ ನಡೆಯುತ್ತದೆ? ಇದನ್ನೆಲ್ಲ ಆಲೋಚಿಸಿದಾಗ ಖಂಡಿತವಾಗಿಯೂ ಎಲ್ಲರನ್ನೂ ಗೌರವಿಸುವ ಪ್ರಜ್ಞೆ ಬೆಳೆಯುತ್ತದೆ.

Write A Comment