ಮನೋರಂಜನೆ

‘ಕಿಲಾಡಿ’ ಅಕ್ಷಯ್‌ ಕುಮಾರ್‌ ಈಗ ‘ಗಬ್ಬರ್‌ ಈಸ್‌ ಬ್ಯಾಕ್‌’

Pinterest LinkedIn Tumblr

Psmec25Akshay-kumar

‘ಗಬ್ಬರ್‌ ಈಸ್‌ ಬ್ಯಾಕ್‌’ ಸಂಪೂರ್ಣವಾಗಿ ನಾಯಕ ಪ್ರಧಾನವಾಗಿರುವ ಚಿತ್ರವಾಗಿದ್ದು, ಇದರಲ್ಲಿ ನಟ ಅಕ್ಷಯ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಇದು ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ‘ಶೋಲೆ’ ಚಿತ್ರದ ಮುಂದುವರಿದ ಭಾಗವಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

‘ಈ ಚಿತ್ರದ ಗಬ್ಬರ್‌ ಸಂಪೂರ್ಣ ಭಿನ್ನ. ಆ ಚಿತ್ರದಲ್ಲಿ ಗಬ್ಬರ್‌ ವಿಲನ್‌ ಆಗಿದ್ದ. ಆದರೆ, ಇದರಲ್ಲಿ ಗಬ್ಬರ್‌ ಚಿತ್ರದ ನಾಯಕ. ಈ ಚಿತ್ರವನ್ನು ಆ ಚಿತ್ರದೊಂದಿಗೆ ತಳಕು ಹಾಕುವುದು ಸರಿಯಲ್ಲ. ಎರಡೂ ಚಿತ್ರಗಳಲ್ಲಿರುವ ಪಾತ್ರಗಳು ಸಂಪೂರ್ಣ ಭಿನ್ನ’ ಎಂದು ಮುಂಬೈನಲ್ಲಿ ಇತ್ತೀಚಿಗೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ ಬಳಿಕ ಅಕ್ಷಯ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ನಿರ್ಮಾಪಕ ಸಂಜಯ್‌ ಲೀಲಾ ಬನ್ಸಾಲಿ ಮತ್ತು ವಿಯಾ ಕಾಮ್‌ 18 ಮೋಷನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರವನ್ನು ದಕ್ಷಿಣದ ಖ್ಯಾತ ನಿರ್ದೇಶಕ ಕ್ರಿಶ್‌ ಅವರು ನಿರ್ದೇಶನ ಮಾಡಿದ್ದಾರೆ. ಶ್ರುತಿ ಹಾಸನ್‌ ಅವರು ಅಕ್ಷಯ್‌ ಕುಮಾರ್‌ ಅವರಿಗೆ ಸಹ ನಟಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಮೇ 1ರಂದು ತೆರೆಗೆ ಬರಲಿದೆ.

‘ಗಬ್ಬರ್‌ ಈಸ್‌ ಬ್ಯಾಕ್‌’ ತಮಿಳಿನ ‘ರಾಮಣ್ಣ’ ಚಿತ್ರದ ರಿಮೇಕ್‌.  ಈ ಚಿತ್ರ 2002ರಲ್ಲಿ ತೆರೆ ಕಂಡಿತ್ತು. ಹಿಂದಿ ಭಾಷೆಯಲ್ಲಿ ತೆರೆ ಕಾಣಲಿರುವ ‘ಗಬ್ಬರ್‌ ಈಸ್‌ ಬ್ಯಾಕ್‌’ ಚಿತ್ರದಲ್ಲಿ ‘ಕಿಲಾಡಿ’ ನಾಯಕನೆಂದೇ ಗುರುತಿಸಿಕೊಂಡಿರುವ ಅಕ್ಷಯ್‌ ಕುಮಾರ್‌ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆತ ಭ್ರಷ್ಟಾಚಾರದ ವಿರುದ್ಧ  ಹೋರಾಟ ನಡೆಸುತ್ತಾನೆ.

‘ನಾನು ಯಾವುದೇ ಪಾತ್ರಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವುದಿಲ್ಲ. ನಾನು  ನಿರ್ದೇಶಕರು ಹೇಳಿದಂತೆ ನಟಿಸುತ್ತೇನೆ. ಏಕೆಂದರೆ ಚಿತ್ರದ ಕಥೆಯ ಬಗ್ಗೆ ಅವರು ಚೆನ್ನಾಗಿ ತಿಳಿದುಕೊಂಡಿರುವುದರಿಂದ ಹೀಗೆಯೇ ನಟಿಸಿದರೆ ಉತ್ತಮವಾಗಿರುತ್ತದೆ ಎನ್ನುವುದು ನನಗಿಂತ ಅವರಿಗೆ ಗೊತ್ತಿರುತ್ತದೆ. ಹಾಗಾಗಿ ನಿರ್ದೇಶಕರು ಹೇಳಿದ ಹಾಗೆ ನಟಿಸುತ್ತೇನೆ. ಒಂದು ವೇಳೆ ನಾನು ಹಲವು ಜನರ ಮಾತನ್ನು ಕೇಳಿದರೆ  ಗೊಂದಲ ನಿರ್ಮಾಣವಾಗುವ ಸಾಧ್ಯತೆ ಇರುತ್ತದೆ. ಒಂದು ಚಿತ್ರ ಒಬ್ಬ ವ್ಯಕ್ತಿಯ ದೂರದೃಷ್ಟಿ ಹೊಂದಿರುತ್ತದೆಯೇ ಹೊರತು ಹಲವರದ್ದಲ್ಲ ಎಂಬುವುದು ನನ್ನ ನಂಬಿಕೆ’ ಎಂದು ಈ ಪಾತ್ರಕ್ಕೆ ಬಣ್ಣ ಹಚ್ಚುವ ಮುನ್ನ ಯಾವ ರೀತಿಯ ತಯಾರಿ ಮಾಡಿಕೊಂಡಿದ್ದೀರಿ ಎಂಬ ಪ್ರಶ್ನೆಗೆ ಅಕ್ಷಯ್‌  ಮೇಲಿನಂತೆ ಪ್ರತಿಕ್ರಿಯಿಸಿದರು.

‘ಚಿತ್ರದಲ್ಲಿ ನನ್ನ ಪಾತ್ರ ಪ್ರಮುಖವಾದದ್ದು. ಅಕ್ಷಯ್‌ ಕುಮಾರ್‌ ಜೊತೆ ನಟಿಸಿದ ಅನುಭವ ಉತ್ತಮವಾಗಿತ್ತು. ಅವರೊಬ್ಬ ಅತ್ಯುತ್ತಮ ಸಹನಟ’ ಎಂದು ಚಿತ್ರದ ನಾಯಕಿ ಶ್ರುತಿ ಹಾಸನ್‌ ಇದೇ ವೇಳೆ ಹೇಳಿದರು.

Write A Comment