ನಿರ್ದೇಶಕರೇ ನಾಯಕ ನಟರಾಗಿ ಹೆಸರು ಮಾಡಿದ ಉದಾಹರಣೆಗಳು ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟಿವೆ. ಈ ಬಗೆಯ ಟ್ರೆಂಡ್ ಈಗ ಬಾಲಿವುಡ್‌ನಲ್ಲೂ ಸದ್ದು ಮಾಡುತ್ತಿದೆ. ಈ ವರ್ಷ ತೆರೆಕಾಣಲಿರುವ ಕೆಲವು ಚಿತ್ರಗಳಲ್ಲಿ ಬಾಲಿವುಡ್‌ನ ಜನಪ್ರಿಯ ನಿರ್ದೇಶಕರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಈ ಹೊತ್ತಿನ ಬಾಲಿವುಡ್‌ನ ಹೊಸ ಟ್ರೆಂಡ್ ಆಗಿದೆ.
ಕೆಲವೊಮ್ಮೆ ಒಳ್ಳೆ ಸಿನಿಮಾ ಕೊಟ್ಟರೂ ನಾಯಕ ನಟ/ನಟಿಯರಷ್ಟು ಜನಪ್ರಿಯತೆ ಪಡೆಯದ ನಿರ್ದೇಶಕರು ತೀರಾ ಇತ್ತೀಚಿನವರೆಗೆ ತೆರೆಮರೆಯಲ್ಲೇ ಇದ್ದವರು. ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಾತ್ರ ಟೀವಿ, ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಿರ್ದೇಶಕರು ಆನಂತರ ಜನರ ಸಂಪರ್ಕಕ್ಕೆ ಬರುತ್ತಿರಲಿಲ್ಲ. ಬಾಲಿವುಡ್‌ನಲ್ಲಿ ಅಪರೂಪಕ್ಕೆ ಎಂಬಂತೆ ನಿರ್ದೇಶಕರಾದ ಫರ್ಹಾನ್ ಅಖ್ತರ್, ಮಹೇಶ್ ಮಂಜ್ರೇಕರ್, ಟಿಗ್ಮಾಂಶು ಧುಲಿಯಾ ಮತ್ತು ಸುಧೀರ್ ಮಿಶ್ರಾ ಸಿನಿಮಾಗಳಲ್ಲಿ ನಟಿಸಿದ್ದರು. ನಟರಾಗಿ ಬಣ್ಣಹಚ್ಚುತ್ತಿರುವ ನಿರ್ದೇಶಕರ ಪಟ್ಟಿಗೆ ಮಹೇಶ್ ಭಟ್, ಕರಣ್ ಜೋಹರ್, ಕುನಾಲ್ ಕೊಹ್ಲಿ ಮತ್ತು ಅನುರಾಗ್ ಕಶ್ಯಪ್ ಈಗ ಹೊಸ ಸೇರ್ಪಡೆ.
ಬಾಲಿವುಡ್‌ಗೆ ಅನೇಕ ಸುರಸುಂದರಿಯರನ್ನು ಪರಿಚಯಿಸಿದ ಹಿರಿಯ ನಿರ್ದೇಶಕ ಮಹೇಶ್ ಭಟ್ ಅವರು ಮುಕುಲ್ ಮಿಶ್ರಾ ನಿರ್ದೇಶನದ ‘ಸಿದ್ಧಾರ್ಥ’ ಚಿತ್ರದಲ್ಲಿ ಬೌದ್ಧ ಬಿಕ್ಕುವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಇನ್ನು ಮುಂದೆ ನಾನು ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬ ಭ್ರಮೆ ಹೊಂದಿಲ್ಲ. ನಿರ್ದೇಶಕ ಮುಕುಲ್ ಅವರ ಪ್ರೀತಿಗೆ ಕಟ್ಟುಬಿದ್ದು, ಅವರ ಅಣತಿಯಂತೆ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಈ ಚಿತ್ರದಲ್ಲಿ ನಾನು ನಿರ್ವಹಿಸುತ್ತಿರುವ ಪಾತ್ರ ನನಗೆ ಇಷ್ಟವಾಗಿದ್ದರಿಂದ ನಟಿಸಲು ಒಪ್ಪಿಕೊಂಡೆ’ ಎನ್ನುತ್ತಾರೆ ಭಟ್ಟರು.
ಅದೇ ರೀತಿ, ದಕ್ಷಿಣದ ಜನಪ್ರಿಯ ನಿರ್ದೇಶಕ ಮುರುಗದಾಸ್ ನಿರ್ದೇಶನದ ಇನ್ನೂ ಹೆಸರಿಡದ ಬಾಲಿವುಡ್ ಸಿನಿಮಾ ಒಂದರಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳುವ ಸುದ್ದಿ ಹೊರಬಿದ್ದಿದೆ.
ನಿರ್ದೇಶಕರು ನಟರಾಗಿ ಕಾಣಿಸಿಕೊಳ್ಳುವ ಹೊಸ ಟ್ರೆಂಡ್ ಚಿತ್ರ ಮಾರುಕಟ್ಟೆಯ ಏಳಿಗೆಗೆ ಪೂರಕವಾಗಲಿದೆ ಎಂಬುದು ಪರಿಣತ ಚಿತ್ರ ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ. ‘ಒಬ್ಬ ಜನಪ್ರಿಯ ನಿರ್ದೇಶಕ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾನೆ ಅಂದರೆ, ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ ಮೂಡುತ್ತದೆ. ಈ ಬಗೆಯ ಕೌತುಕ ಪ್ರೇಕ್ಷಕರ ಮನಸ್ಸಿನಲ್ಲಿ ರೂಪುಗೊಳ್ಳುವುದರಿಂದ ಅದು ಚಿತ್ರ ಪ್ರಚಾರದ ಪ್ರಮುಖ ಭಾಗವಾಗಿ ರೂಪುಗೊಳ್ಳಲಿದೆ.
ಒಬ್ಬ ನಿರ್ದೇಶಕ ಮತ್ತೊಬ್ಬ ನಿರ್ದೇಶಕನ ಚಿತ್ರದಲ್ಲಿ ನಟಿಸುವುದರಿಂದ ಆತನ ನಿರ್ದೇಶನ ಕೌಶಲ ಮತ್ತಷ್ಟು ಪಕ್ವಗೊಳ್ಳುತ್ತದೆ’ ಎನ್ನುತ್ತಾರೆ ವಿಶ್ಲೇಷಕ ಅತುಲ್ ಮೋಹನ್.
‘ಟೀವಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ನಿರ್ದೇಶಕ ಕರಣ್ ಜೋಹರ್ ಅವರನ್ನು ಜನರು ಸುಲಭವಾಗಿ ಗುರ್ತಿಸುತ್ತಾರೆ. ನಿಜ ಹೇಳಬೇಕೆಂದರೆ, ಕರಣ್‌ಗೆ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ. ಹಾಗಾಗಿ, ಸಹಜವಾಗಿಯೇ ಆತನ ಅಭಿಮಾನಿಗಳಿಗೆ ತಮ್ಮ ಅಚ್ಚುಮೆಚ್ಚಿನ ನಿರ್ದೇಶಕ ಬೆಳ್ಳಿತೆರೆಯ ಮೇಲೆ ಹೇಗೆ ನಟಿಸುತ್ತಾನೆ ಎಂಬ ಕುತೂಹಲ ಇದ್ದೇ ಇರುತ್ತದೆ. ಈ ಕಾರಣದಿಂದಲೇ ನಿರ್ದೇಶಕರನ್ನು ಮೆಚ್ಚುವ ಅಭಿಮಾನಿಗಳು ಆತನನ್ನು ತೆರೆಯ ಮೇಲೆ ನೋಡಲು ಬಯಸುತ್ತಾರೆ’ ಎನ್ನುತ್ತಾರೆ ಮತ್ತೊಬ್ಬ ಮಾರುಕಟ್ಟೆ ವಿಶ್ಲೇಷಕ ಗಿರೀಶ್ ಜೋಹರ್.