ಹೇಳಿಕೇಳಿ ಅಲಂಕಾರಕ್ಕೂ ಹೆಣ್ಣಿಗೂ ಬಿಟ್ಟೂ ಬಿಡದ ಸಂಬಂಧ. ಮದುಮಗಳ ಅಲಂಕಾರದ ವಸ್ತುಗಳನ್ನು ಆನ್ಲೈನ್ ಮೂಲಕವೇ ಪೂರೈಕೆ ಮಾಡುವ ವೆಬ್ಸೈಟ್ ಜನಪ್ರಿಯಗೊಳ್ಳುತ್ತಿದೆ. ಅದರ ಕುರಿತು ಒಂದು ಲೇಖನ.
ಹೆಣ್ಣು ಅಲಂಕಾರಪ್ರಿಯೆ. ಮುಖದ ಸೌಂದರ್ಯದ ಜತೆಗೆ ಕೇಶಕ್ಕೆ ಬಗೆ ಬಗೆಯ ವಿನ್ಯಾಸ, ಹೂಗಳ ಅಲಂಕಾರ, ಆಭರಣ ಮಾಡಿಕೊಳ್ಳುತ್ತಾರೆ. ಯಾವುದೇ ಸಭೆ, ಸಮಾರಂಭ ನಡೆಯುವ ಒಂದು ತಿಂಗಳು ಮೊದಲೇ ಸುಂದರವಾಗಿ ತಯಾರಾಗಲು ಸಿದ್ಧತೆ ಮಾಡಿಕೊಳ್ಳುತ್ತಾರೆ.
ಅದರಲ್ಲೂ ಮದುವೆ ನಿಶ್ಚಯವಾಗಿಬಿಟ್ಟರಂತೂ ಮದುವೆ ದಿನ ಎಲ್ಲರಿಗಿಂತಲೂ ಸುಂದರವಾಗಿ ಕಾಣಬೇಕು ಎಂದು ಮದುಮಗಳು ಹಾತೊರೆಯುತ್ತಾಳೆ. ಮುಖಕ್ಕೆ ಮೇಕಪ್ ಒಂದು ಕಡೆಯಾದರೆ ತೊಡುವ ಆಭರಣ, ಕೇಶ ವಿನ್ಯಾಸ ಎಲ್ಲರಿಗಿಂತ ವಿಭಿನ್ನವಾಗಿ ಇರಬೇಕು ಎಂದು ಹೆಚ್ಚಿನ ಗಮನ ಕೊಡುತ್ತಾಳೆ. ಅದರೊಂದಿಗೆ ಮದುವೆಯ ಮಂಟಪದಲ್ಲಿ ಬಳಸುವ ವಸ್ತುಗಳೂ ಧರಿಸಿರುವ ವಸ್ತ್ರ ಹಾಗೂ ಆಭರಣಗಳಿಗೆ ಹೊಂದುವಂತೆ ವಿನ್ಯಾಸಗೊಂಡಿರಬೇಕು ಎಂದು ಬಯಸುತ್ತಾಳೆ.
ಹೆಣ್ಣುಮಕ್ಕಳ ಇಂಥ ಅಭಿಲಾಷೆಗಳ ಪೂರೈಕೆಗಾಗಿಯೇ ನಗರದ ಬನ್ನೇರುಘಟ್ಟದಲ್ಲಿರುವ ರೇಣುಕಾ ಪ್ರಕಾಶ್ ಅವರು 130 ರೀತಿಯ ಮೊಗ್ಗಿನ ಜಡೆ, ತಾಜಾ ಹೂವಿನಿಂದ ವಿನ್ಯಾಸಗೊಳಿಸಿರುವ ಆಭರಣಗಳು, ಬಾಸಿಂಗ, ಮುತ್ತು, ಕುಂದನ್ ಹಾಗೂ ಇತರೆ ಹರಳುಗಳಿಂದ ಅಲಂಕೃತಗೊಳಿಸಿರುವ ತೆಂಗಿನ ಕಾಯಿ ಹೀಗೆ ಮದುವೆ ಮಂಟಪದಲ್ಲಿ ಬಳಸುವ ನಾನಾ ವಸ್ತುಗಳನ್ನು ವಿನೂತನವಾಗಿ ವಿನ್ಯಾಸಗೊಳಿಸಿ ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿದ್ದಾರೆ.
ನಿಶ್ಚಿತಾರ್ಥ, ಮೆಹೆಂದಿ, ಮದುವೆ, ಆರತಕ್ಷತೆ, ಸೀಮಂತ, ಹುಟ್ಟು ಹಬ್ಬಗಳಂತಹ ಸಮಾರಂಭಗಳಲ್ಲಿ ವಯಸ್ಸಿನ ಭೇದವಿಲ್ಲದೆ ಪುಟಾಣಿಗಳಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರೂ ಮೊಗ್ಗಿನ ಜಡೆ ಇಷ್ಟಪಡುತ್ತಾರೆ. ಅಂತಹವರಿಗಾಗಿ ತಾಜಾ ಹೂವಿನಿಂದ ನಾನಾ ರೀತಿ ವಿನ್ಯಾಸಗೊಳಿಸಿರುವ ರೆಡಿಮೇಡ್ ಜಡೆ, ನೆಟ್ಟೆಡ್ ಜಡೆ, ಮಿಕ್ಸ್ ಮ್ಯಾಚ್ ಜಡೆ ಹೀಗೆ ಗ್ರಾಹಕರು ಬಯಸುವ ಬಣ್ಣ ಬಣ್ಣದ ಹರಳುಗಳು ಹಾಗೂ ಮತ್ತುಗಳ ಜಡೆ ಲಭ್ಯವಿದೆ.
ನೂರಾರು ವಿಧದ ಮೊಗ್ಗಿನ ಜಡೆ
‘ಮದುಮಗಳು ಮದುವೆ ದಿನ ತೊಡುವ ಸೀರೆಯ ಬಣ್ಣ, ಸೀರೆ ತೊಡುವ ಶೈಲಿ ಹಾಗೂ ಧರಿಸುವ ಆಭರಣಗಳಿಗೆ ತಕ್ಕಂತೆ ಮೊಗ್ಗಿನ ಜಡೆಗಳನ್ನು ವಿನ್ಯಾಸಗೊಳಿಸುತ್ತೇವೆ. ಅದಕ್ಕಾಗಿ ಗ್ರಾಹಕರು ನಮ್ಮ ವೆಬ್ ವಿಳಾಸ hhttp://www. pellipoolajada.com/ನಲ್ಲಿ ಆರ್ಡರ್ ಕೊಡಬೇಕು. ಅದರೊಂದಿಗೆ ವಧು ತೊಡುವ ಸೀರೆ ಹಾಗೂ ಆಭರಣಗಳ ಫೋಟೊಗಳನ್ನು ಕಳುಹಿಸಬೇಕು. ಒಂದು ವೇಳೆ ಅವರ ಬಳಿ ಯಾವುದೇ ರೀತಿಯ ವಿನ್ಯಾಸಗಳು ಇದ್ದಲ್ಲಿ, ಅದನ್ನೂ ಅವರು ಕಳುಹಿಸಬಹುದು. ಅದಕ್ಕೆ ತಕ್ಕಂತೆ ಗ್ರಾಹಕರಿಗೆ ಮೊಗ್ಗಿನ ಜಡೆಗಳನ್ನು ತಯಾರಿಸಿ, ಮದುವೆ ಮನೆಗೆ ಕಳುಹಿಸಿಕೊಡುತ್ತೇವೆ’ ಎನ್ನುತ್ತಾರೆ ರೇಣುಕಾ ಪ್ರಕಾಶ್.
ಹೂವಿನ ಜಡೆ ಬಯಸದವರಿಗೆ ಜಡೆ ಬಿಲ್ಲೆ, ಮುತ್ತು, ಕುಂದನ್ ಹಾಗೂ ಇತರೆ ವಸ್ತುಗಳನ್ನು ಬಳಸಿ ಮೊಗ್ಗಿನ ಜಡೆಗಳನ್ನು ತಯಾರಿಸುತ್ತಾರೆ. ಇಲ್ಲಿ ತಯಾರಿಸುವ ರೆಡಿಮೇಡ್ ಜಡೆಗಳನ್ನು ಸುಲಭವಾಗಿ ಯಾರೂ ಬೇಕಾದರೂ ಫಿಕ್ಸ್ ಮಾಡಬಹುದು. ಅದಕ್ಕೆ ವಿಶೇಷ ತರಬೇತಿ ಪಡೆಯಬೇಕಾದ ಅಗತ್ಯವಿಲ್ಲ.
ತಾಜಾ ಹೂವಿನ ಆಭರಣ
‘ಮದುವೆಗೆ ಮುನ್ನ ಮಾಡುವ ಅರಿಶಿಣ ಹಚ್ಚುವ ಶಾಸ್ತ್ರದಲ್ಲಿ ಕೆಲವೊಂದು ಸಮುದಾಯಕ್ಕೆ ಸೇರಿದವರು ಅರಿಶಿಣದ ದಿನ ವಧುವಿಗೆ ಚಿನ್ನದ ಆಭರಣಗಳ ಬದಲಾಗಿ ತಾಜಾ ಹೂವಿನ ಆಭರಣಗಳನ್ನು ಹಾಕುತ್ತಾರೆ. ಅದಕ್ಕಾಗಿಯೇ ತಾಜಾ ಹೂವಿನಿಂದ ಫ್ಯಾಷನೆಬಲ್ ಕತ್ತಿನಹಾರ, ಕಿವಿಯೋಲೆ, ಬಳೆ, ಉಂಗುರ, ಬೈತಲೆ ಬೊಟ್ಟು, ಬ್ರೇಸ್ಲೆಟ್ ಹೀಗೆ ವಿವಿಧ ರೀತಿಯ ಆಭರಣಗಳನ್ನು ತಯಾರಿಸುತ್ತೇವೆ. ಕೆಲವರಂತೂ ಅರಿಶಿಣ ಶಾಸ್ತ್ರದೊಂದಿಗೆ ಮೆಹೆಂದಿ ಶಾಸ್ತ್ರಕ್ಕೂ ಹೂವಿನ ಆಭರಣಗಳನ್ನು ಬಯಸುತ್ತಾರೆ. ಇತ್ತೀಚೆಗೆ ಹೂವಿನ ಆಭರಣಗಳಿಗೆ ಬೇಡಿಕೆ ಹೆಚ್ಚಿದ್ದು, ವಿವಾಹ, ಹುಟ್ಟು ಹಬ್ಬದ ಸಮಾರಂಭಗಳಲ್ಲಿ ಮಕ್ಕಳಿಗಾಗಿ ಆಭರಣಗಳನ್ನು ಮಾಡಿಸಲು ಬೇಡಿಕೆ ಬರುತ್ತಿದೆ’ ಎಂದು ವಿವರಿಸುತ್ತಾರೆ ಅವರು.
ಇಂತಹ ಆಭರಣಗಳನ್ನು ಮಾಡಲು ಸದಾ ತಾಜಾ ಹೂಗಳನ್ನೇ ಬಳಸುತ್ತಾರೆ. ಹೆಚ್ಚು ಸಮಯ ತಾಜಾತನದಿಂದ ಇರುವ ಹೂವುಗಳನ್ನು ಆಯ್ಕೆ ಮಾಡಿಕೊಂಡು ಆಭರಣಗಳನ್ನು ಸಿದ್ಧ ಪಡಿಸಲಾಗುವುದು. ಇದರಲ್ಲಿ ಎರಡರಿಂದ ಆರು ಗಂಟೆವರೆಗೆ ತಾಜಾತನ ಉಳಿಸಿಕೊಂಡಿರುವ ಹೂಗಳಿಂದ ಆಭರಣಗಳನ್ನು ಸಿದ್ಧಪಡಿಸುತ್ತಾರೆ.
ತೆಂಗಿನ ಕಾಯಿ ಮೇಲೆ ಚಿತ್ತಾರ
ಮದುವೆಗಳಲ್ಲಿ ವಧು ಮಂಟಪಕ್ಕೆ ಬರುವಾಗ ಕೈಯಲ್ಲಿ ತರುವ ತೆಂಗಿನ ಕಾಯಿಗೂ ಹೊಸ ಲುಕ್ ನೀಡುತ್ತಾರೆ. ತೆಂಗಿನ ಕಾಯಿ ಮೇಲೆ ವಧುವರರ ಚಿತ್ರ, ಇಷ್ಟ ದೇವರ ಚಿತ್ರ ಅಥವಾ ಲೋಹ ಹಾಗೂ ಚಿಕ್ಕ ಚಿಕ್ಕ ಆಕರ್ಷಕ ಕಲ್ಲುಗಳಿಂದ ಅಲಂಕಾರ ಮಾಡಿ ಕೊಡುತ್ತಾರೆ.
ಅಂತರ್ಪಟಕ್ಕೆ ನ್ಯೂ ಲುಕ್
ಮಂಟಪದಲ್ಲಿ ಬಳಸುವ ಅಂತರ್ಪಟದ ಮೇಲೂ ವಧುವರರ ಚಿತ್ರಗಳು, ದೇವರ ಚಿತ್ರಗಳು ಅಥವಾ ಮದುವೆ ದಿಬ್ಬಣದ ಚಿತ್ರಗಳನ್ನು ಬಿಡಿಸಿ ಅದನ್ನು ಮತ್ತಷ್ಟು ಆಕರ್ಷಕ ಹಾಗೂ ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಹೀಗೆ ಮಾಡುವ ಚಿತ್ತಾರಗಳನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಮಾಡಿಕೊಡುತ್ತಾರೆ.
ಮುತ್ತಿನ ಅಕ್ಷತೆ
ವಿವಾಹದ ಸಮಯದಲ್ಲಿ ವಧು ವರರು ಮಾಡುವ ಅಕ್ಕಿ ಸುರಿಯುವ ಶಾಸ್ತ್ರದಲ್ಲಿ ಕೆಲವರು ಈ ಅಕ್ಕಿಯೊಂದಿಗೆ ಚಿನ್ನ, ಬೆಳ್ಳಿಯ ಪುಟ್ಟ ಪುಟ್ಟ ಆಭರಣಗಳನ್ನೂ ಸೇರಿಸುತ್ತಾರೆ. ಅದರ ಬದಲಾಗಿ ಮುತ್ತುಗಳು ಹಾಗೂ ಕುಂದನ್ಗಳಿಂದ ಮಾಡಿದ ಅಕ್ಷತೆಯನ್ನು ಇವರು ನೀಡುತ್ತಾರೆ.
ಸಿಂಗರಿಸಿದ ಬುಟ್ಟಿ, ಕುಡಿಕೆ
ಮದುಮಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಮಂಟಪಕ್ಕೆ ಕರೆ ತರುವ ಸಮುದಾಯದವರಿಗಾಗಿ ಬಣ್ಣ ಬಣ್ಣದ ಬಟ್ಟೆ, ಲೇಸ್, ಮುತ್ತುಗಳಿಂದ ಸಿಂಗರಿದ ಬುಟ್ಟಿಗಳನ್ನು ಸಿದ್ಧಪಡಿಸುತ್ತಾರೆ. ಜತೆಗೆ ಮದುವೆ ಮಂಟಪದಲ್ಲಿ ಬಳಸುವ ಮಣ್ಣಿನ ಕುಡಿಕೆಗಳೂ ಇಲ್ಲಿ ಲಭ್ಯ. ಅವುಗಳಿಗೆ ನಾನಾ ರೀತಿಯ ಬಣ್ಣಗಳನ್ನು ಬಳಸಿ ವಿನ್ಯಾಸ ಮಾಡಿರುತ್ತಾರೆ.
ದರಗಳ ವಿವರ
ಮೊಗ್ಗಿನ ಜಡೆ ದರ ರೂ2,200ರಿಂದ 4,500ರ ವರೆಗೆ ಇದೆ. ಅಲಂಕರಿಸಿದ ತೆಂಗಿನಕಾಯಿ ದರ ರೂ800 ರಿಂದ ರೂ2 ಸಾವಿರದ ವರೆಗೆ, ಅಂತರ್ಪಟ ಹಾಗೂ ಹೂವಿನ ಆಭರಗಳ ಬೆಲೆ ಅಂದಾಜು ರೂ2 ಸಾವಿರದಿಂದ ಮೂರು ಸಾವಿರದ ವರೆಗೆ ಇದೆ.
ಐಸ್ಬಾಕ್ಸ್ ಸೌಲಭ್ಯ
ಒಂದುವೇಳೆ ಗ್ರಾಹಕರು ಬೆಂಗಳೂರಿನಿಂದ ಹೊರಗಡೆ ಇದ್ದಲ್ಲಿ ಐಸ್ ಬಾಕ್ಸ್ ಸೌಲಭ್ಯ ಸಹ ನೀಡುತ್ತಾರೆ. ಹೂವಿನ ಆಭರಣ ಹಾಗೂ ಮೊಗ್ಗಿನ ಜಡೆಗಳನ್ನು ಐಸ್ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ಅದನ್ನು ಮದುವೆ ನಡೆಯುವ ಮಂಟಪಕ್ಕೆ ತಲುಪಿಸುತ್ತಾರೆ. ಗ್ರಾಹಕರು ಒಂದು ವಾರ ಅಥವಾ 15 ದಿನ ಮುಂಚಿತವಾಗಿ ಆರ್ಡರ್ ನೀಡಬೇಕು. ಆರ್ಡರ್ ಕಡಿಮೆ ಇರುವ ವೇಳೆ ಮಾತ್ರ ಒಂದು ಅಥವಾ ಎರಡು ದಿನ ಮುಂಚಿತವಾಗಿ ನೀಡುವ ಆರ್ಡರ್ಗಳನ್ನು ಸ್ವೀಕರಿಸುತ್ತಾರೆ.
ಒಮ್ಮೆ ಗ್ರಾಹಕರು ತಮ್ಮ ಬೇಡಿಕೆಯನ್ನು ಸಲ್ಲಿಸಿ, ಆರ್ಡರ್ ಅನ್ನು ಖಚಿತಪಡಿಸಿಕೊಂಡ ನಂತರ ಆನ್ಲೈನ್ನಲ್ಲೇ ಪೂರ್ತಿ ಹಣವನ್ನು ನೀಡಬೇಕು. ಬೆಂಗಳೂರು ಸೇರಿದಂತೆ ರಾಜ್ಯ ಯಾವುದೇ ಭಾಗಕ್ಕಾದರೂ ಸೇವೆ ನೀಡುತ್ತಾರೆ.
ಸಂಪರ್ಕಕ್ಕೆ: +919980345829
ವೆಬ್ ವಿಳಾಸ: http://www.pellipoolajada.com
ಹೈದರಾಬಾದಿನ ಕಲ್ಪನಾ ರಾಜೇಶ್ ನನ್ನ ಸ್ನೇಹಿತೆ ಅವರು ಈ ಆನ್ಲೈನ್ ಪರಿಕಲ್ಪನೆಗೆ ಜನ್ಮ ನೀಡಿದವರು. ನಂತರ ನಾವೆಲ್ಲ ಸೇರಿಕೊಂಡು ಇದನ್ನು ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇವೆ. ಸದ್ಯಕ್ಕೆ ಬೆಂಗಳೂರಿಲ್ಲಿ 8 ಮಂದಿಯ ತಂಡ ಇದೆ. ಗ್ರಾಹಕರು ನೀಡುವ ಡಿಜೈನ್ಗಳ ಜತೆಗೆ ನಮ್ಮದೇ ಆದ ವಿನ್ಯಾಸಗಳನ್ನೂ ಮಾಡುತ್ತೇವೆ. ನಗರದಲ್ಲಿ ಆನ್ಲೈನ್ ಮೂಲಕ ಆರ್ಡರ್ ಕೊಡುವ ಜನರು ಹೆಚ್ಚಾಗಿ ಖುದ್ದು ತಾವೇ ಬಂದು ಆರ್ಡರ್ ಅನ್ನು ಪಡೆಯುತ್ತಾರೆ.
ರೇಣುಕಾ ಪ್ರಕಾಶ್, ಮುಖ್ಯಸ್ಥೆ , ಬೆಂಗಳೂರು ಶಾಖೆ
