ಇತ್ತೀಚೆಗೆ ಮಲ್ಲತ್ತಹಳ್ಳಿಯಲ್ಲಿ ‘ಮಲೆಗಳಲ್ಲಿ ಮದುಮಗಳು’ ನಾಟಕವು 60ನೇ ಪ್ರದರ್ಶನ ಪೂರೈಸಿತು. ಈ ನಾಟಕದಲ್ಲಿ ಗುತ್ತಿನಾಯಿ ಹುಲಿಯನ ಪಾತ್ರ ನಿರ್ವಹಿಸಿರುವ ಅನಿಲ್ ತಮ್ಮ ಸುದೀರ್ಘ ನಟನಾ ಪಯಣವನ್ನು ‘ಮೆಟ್ರೊ’ ಜತಗೆ ಹಂಚಿಕೊಂಡಿದ್ದಾರೆ.
ಅದು 2010ನೇ ಇಸವಿ. ಮಂಡ್ಯ ರಮೇಶ್ ಅವರ ‘ನಟನ’ ತಂಡದ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿ ರಂಗಭೂಮಿಯ ರುಚಿ ಹತ್ತಿಸಿಕೊಂಡಿದ್ದ ಆ ಹುಡುಗ ಅವಕಾಶಕ್ಕಾಗಿ ಮೈಸೂರಿನ ಬೀದಿಗಳಲ್ಲಿ ಅಲೆದಾಡುತ್ತಿದ್ದ. ಆಗಲೇ ದಿನಪತ್ರಿಕೆಯಲ್ಲಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ನಾಟಕ ಮಾಡುತ್ತಿರುವ ಸುದ್ದಿ ತಿಳಿದು ರಂಗಾಯಣದತ್ತ ಓಡಿದ. ಈ ಹುಡುಗನ ಪಾಲಿಗೆ ಬಂದದ್ದು ನಾಯಿಯ ಪಾತ್ರ. ಮೈಪೂರ್ತಿ ಕಪ್ಪು ಬಟ್ಟೆಯಲ್ಲಿ ಮುಚ್ಚಿಕೊಳ್ಳುವ, ಮುಖವೂ ಕಾಣಿಸದ ನಾಯಿಯ ಪಾತ್ರ ಮಾಡಬೇಕು ಎಂದಾಗ ಉತ್ಸಾಹದಿಂದ ಓಡಿಬಂದಿದ್ದ ಹುಡುಗನ ಮುಖದಲ್ಲಿ ನಿರಾಸೆಯ ನೆರಳು. ನಾಟಕದ ನಿರ್ದೇಶಕ ಸಿ. ಬಸವಲಿಂಗಯ್ಯ ಸಮಾಧಾನ ಪಡಿಸಿದಾಗ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ. ನಾಯಿಯ ಹೆಸರು ಹುಲಿಯ. ನಾಟಕದ ತಾಲೀಮು ನಡೆಸುವಾಗಲೂ ‘ಎಲ್ಲರ ಪಾತ್ರಗಳಿಗೂ ಅವರದೇ ಆದ ಗುರುತಿದೆ. ಜನರು ಅವರನ್ನು ಗುರ್ತಿಸುತ್ತಾರೆ. ಆದರೆ ತನ್ನದು ಯಕಃಶ್ಚಿತ್ ಒಂದು ನಾಯಿಯ ಪಾತ್ರ. ಯಾರಾದರೂ ಕೇಳಿದರೆ ಏನು ಹೇಳುವುದು?’ ಎಂಬ ಕೊರಗು ಕಾಡುತ್ತಲೇ ಇತ್ತು.
ಮೊದಲ ಪ್ರದರ್ಶನದಲ್ಲಿ ಪಾಲ್ಗೊಳ್ಳುವಾಗಲೂ ಈ ಅಳುಕು ಅವನನ್ನು ಬಿಟ್ಟಿರಲಿಲ್ಲ. ಆದರೆ ನಾಟಕ ಮುಗಿದ ಮೇಲೆ ಪಾತ್ರಧಾರಿಗಳೆಲ್ಲ ವೇದಿಕೆಯ ಮೇಲೆ ಬಂದಾಗ ಪ್ರೇಕ್ಷರೆಲ್ಲ ಎದ್ದು ನಿಂತು ‘ಹುಲಿಯಾ ಹುಲಿಯಾ…’ ಎಂದು ಕೂಗುತ್ತಾ ಚಪ್ಪಾಳೆ ತಟ್ಟತೊಡಗಿದ್ದೇ ಹುಡುಗನ ಕಣ್ಣಿನಿಂದ ಎರಡು ಹನಿ ಉದುರಿತು.
–ಇದು ‘ಮಲೆಗಳಲ್ಲಿ ಮದುಮಗಳು’ ನಾಟಕದ ಗುತ್ತಿಯ ನಾಯಿ ‘ಹುಲಿಯ’ನ ಪಾತ್ರ ನಿರ್ವಹಿಸಿರುವ ಅನಿಲ್ ಕಥೆ.
ಮೂಲತಃ ಮೈಸೂರಿನವರೇ ಆದ ಅನಿಲ್ ‘ನಟನ’ ರಂಗತಂಡದ ಸಹವಾಸದಿಂದ ನಾಟಕದ ಬಗ್ಗೆ ಅಭಿರುಚಿ ಬೆಳೆಸಿಕೊಂಡವರು. ಮಲೆಗಳಲ್ಲಿ ಮದುಮಗಳು ನಾಟಕದ ಹುಲಿಯನ ಪಾತ್ರದ ಮೂಲಕ ನಟನೆಯ ಬಗ್ಗೆ ಆಳವಾದ ಆಸಕ್ತಿ ಬೆಳಸಿಕೊಂಡರು. ಮುಂದೆ ರಂಗಾಯಣದಲ್ಲಿಯೇ ಎರಡು ವರ್ಷದ ರಂಗಭೂಮಿ ಡಿಪ್ಲೊಮಾ ಮಾಡಿದರು.
ಈಗ ಬೆಂಗಳೂರಿನಲ್ಲಿಯೇ ನೆಲೆಸಿರುವ ಅನಿಲ್ ಪೂರ್ಣ ಪ್ರಮಾಣದಲ್ಲಿ ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
‘ನಾಟಕದ ನಿರ್ದೇಶಕ ಬಸವಲಿಂಗಯ್ಯ ಅವರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ಈ ಪಾತ್ರದಲ್ಲಿ ತೊಡಗಿಕೊಂಡಿದ್ದೆ. ಮೊದಲ ಪ್ರದರ್ಶನ ಮುಗಿದಾಗ ಬಸವಲಿಂಗಯ್ಯ ಅವರೇ ‘ಈ ನಾಟಕದ ನಿಜವಾದ ನಾಯಕ ಹುಲಿಯ’ ಎಂದು ಎಲ್ಲರ ಎದುರೂ ಹೇಳಿದಾಗ ನನ್ನ ಪಾತ್ರದ ಮಹತ್ವ ತಿಳಿಯಿತು. ಜನರಿಂದ ಬಂದ ಅಪೂರ್ವ ಪ್ರತಿಸ್ಪಂದನಕ್ಕೆ ಮೂಕವಿಸ್ಮಿತನಾಗಿ ನಿಂತಿದ್ದೆ’ ಎಂದು ಖುಷಿಯಿಂದ ನೆನೆಯುತ್ತಾರೆ ಅನಿಲ್.
ಸಿದ್ಧತೆಯ ಪರಿಶ್ರಮ
ಅನಿಲ್ ಮನೆಯಲ್ಲಿ ದೀಪು ಮತ್ತು ಟೈಗರ್ ಎಂಬ ಎರಡು ನಾಯಿಗಳಿದ್ದವು. ಅವುಗಳೊಂದಿಗೆ ಆಡುವುದು ಅವರಿಗೆ ತುಂಬ ಇಷ್ಟದ ಸಂಗತಿ. ಅವರ ಈ ಶ್ವಾನಪ್ರೀತಿಯೇ ‘ಹುಲಿಯ’ನ ಪಾತ್ರ ಪೋಷಣೆಗೆ ನೆರವಾಯಿತು.
‘ಮೊದಲಿನಿಂದಲೂ ನಾಯಿಗಳ ಒಡನಾಟ ಇತ್ತು. ಈ ನಾಟಕದ ಪಾತ್ರ ತಾಲೀಮಿನ ಸಂದರ್ಭದಲ್ಲಿ ನಾಯಿಗಳ ಆಂಗಿಕ ಚಲನೆಗಳನ್ನು ಗಮನಿಸತೊಡಗಿದೆ. ಅವು ಖುಷಿಯಾದಾಗ, ಬೇಸರವಾದಾಗ, ಸಿಟ್ಟು ಬಂದಾಗ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಅನುಕರಿಸಲು ಪ್ರತ್ನಿಸಲು ಶುರು ಮಾಡಿದೆ. ನಿರ್ದಿಷ್ಟ ಭಾವಕ್ಕನುಗುಣವಾಗಿ ಅವು ಕೂಗುವ ರೀತಿಯೂ ಬೇರೆ ಬೇರೆಯಾಗಿರುತ್ತದೆ. ಅದನ್ನೂ ಅನುಕರಿಸಿದೆ. ಇದರಿಂದಾಗಿ ಆ ಪಾತ್ರವನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಜೀವಂತವಾಗಿ ಕಟ್ಟಿಕೊಡಲು ಸಾಧ್ಯವಾಯಿತು’ ಎಂದು ಅನಿಲ್ ವಿವರಿಸುತ್ತಾರೆ.
ಓದು ತಂದ ಸಮಗ್ರತೆ
‘ಇಡೀ ಕಾದಂಬರಿ ಓದಿದಾಗ ನನಗೆ ಬೇರೆ ರೀತಿಯ ಹಿಡಿತ ಸಿಕ್ಕಿತು. ಕುವೆಂಪು ಆ ಕಾದಂಬರಿಯಲ್ಲಿ ಚಿಕ್ಕಪುಟ್ಟ ಕ್ರಿಮಿಗಳಿಗೂ ನೀಡಿರುವ ಮಹತ್ವ ನೋಡಿ ಆಶ್ಚರ್ಯವಾಯಿತು. ಕಾದಂಬರಿಯ ಪೂರ್ತಿ ಓದು ನನ್ನಲ್ಲಿ ಒಂದು ಸಮಗ್ರ ದೃಷ್ಟಿ ನೀಡಿತು’ ಎಂದು ಅನಿಲ್ ವಿವರಿಸುತ್ತಾರೆ.
ಚೈತನ್ಯದ್ದೇ ಸವಾಲು
‘ನಾಟಕ ರಾತ್ರಿ ಒಂಬತ್ತು ಗಂಟೆಗೆ ಆರಂಭವಾದರೆ ಮುಗಿಯುವುದು ಬೆಳಿಗ್ಗೆ ಆರು ಗಂಟೆಗೆ. ಅಷ್ಟು ದೀರ್ಘ ಅವಧಿಯವರೆಗೆ ನನ್ನ ಚೈತನ್ಯ ಕಾಪಾಡಿಕೊಳ್ಳುವುದು ಎದುರಿಗೆ ಇದ್ದ ಸವಾಲು. ಆ ಸವಾಲನ್ನು ನಾನು ವಿವಿಧ ಮಾರ್ಗಗಳಿಂದ ಯಶಸ್ವಿಯಾಗಿ ನೀಗಿಕೊಂಡೆ. ಆದ್ದರಿಂದಲೇ ಈ ಪಾತ್ರದಲ್ಲಿ ನಾನು ಯಶಸ್ವಿಯಾದೆ’ ಎಂದು ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಡುವ ಅನಿಲ್ ಅವರಿಗೆ ತಾವು ಎಲ್ಲವನ್ನೂ ಕಲಿತಿದ್ದೇನೆ ಎಂಬ ಹಮ್ಮಿಲ್ಲ.
ಅರವತ್ತನೇ ಪ್ರದರ್ಶನದಲ್ಲೂ ಮೊದಲ ಪ್ರದರ್ಶನದಲ್ಲಿ ಇದ್ದಂಥ ದುಗುಡವೇ ಅವರಲ್ಲಿ ಇದ್ದು, ಕಲಿಯುವ ಹಸಿವಿಗೆ ಸಾಕ್ಷಿಯಂತೆ ಕಾಣುತ್ತದೆ.
ಸ್ಪಂದನ ತಂದ ಆನಂದ
‘ಮದುಮಗಳು’ ನಾಟಕ ನೋಡಿದ ಕುವೆಂಪು ಮಗಳು ತಾರಿಣಿ, ಅಳಿಯ ಚಿದಾನಂದಗೌಡ, ಕಡಿದಾಳು ಶಾಮಣ್ಣ ಅವರಂತಹ ಅನೇಕರು ‘ಕಾದಂಬರಿ ಓದಿದಾಗ ಕಾಡುವಷ್ಟೇ ನಾಟಕ ನೋಡಿದಾಗಲೂ ಹುಲಿಯ ಕಾಡುತ್ತಾನೆ. ಅಷ್ಟು ಚೆನ್ನಾಗಿ ಪಾತ್ರ ನಿರ್ವಹಿಸಿದ್ದೀಯಾ’ ಎಂದು ಬೆನ್ನುತಟ್ಟಿದ್ದಾರೆ. ಈ ಬೆಂಬಲ ಅನಿಲ್‌ಗೆ ಅಪಾರ ಆನಂದ ತಂದಿರುವುದಲ್ಲದೇ ವಿಶ್ವಾಸ ಹೆಚ್ಚಿಸಿದೆ.
ನಟನೆಯೇ ಬದುಕು
ಸದ್ಯಕ್ಕೆ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಅನಿಲ್ ನಟನೆಯನ್ನೇ ತನ್ನ ವೃತ್ತಿಯಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವುದೂ ಅಲ್ಲದೇ ಕೆಲವು ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ‘ಕಬೀರ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರಂಥ ಹಿರಿಯ ನಟನೊಂದಿಗೆ ನಟಿಸುವ ಅವಕಾಶ ಸಿಕ್ಕಿದ ಖುಷಿಯಲ್ಲಿದ್ದಾರೆ ಅನಿಲ್. ಅಂದಹಾಗೆ, ಇಲ್ಲೀವರೆಗೆ ನಡೆದಿರುವ 60 ಪ್ರದರ್ಶನಗಳಲ್ಲಿಯೂ ‘ಹುಲಿಯ’ನ ಪಾತ್ರ ನಿರ್ವಹಿಸಿದ್ದು ಇದೇ ಅನಿಲ್.