ಡಿ ಕೆ ರವಿ ಅವರ ಸಾವಿನ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಳ್ಳಲಿದ್ದು ಪ್ರಕರಣದ ಸುತ್ತ ಇರುವ ಸಾಕಷ್ಟು ರಹಸ್ಯಗಳನ್ನು ಬೇಧಿಸಲು ತಂತ್ರ ರೂಪಿಸಲಿದೆ.
ಪ್ರಕರಣವನ್ನು ಹೊರರಾಜ್ಯದ ಅಧಿಕಾರಿಗಳು ತನಿಖೆ ನಡೆಸಲಿದ್ದು ಮೊದಲನೆಯದಾಗಿ ಘಟನೆಯ ಪ್ರಾಥಮಿಕ ವರದಿ ಪಡೆಯಲಿದ್ದಾರೆ. ನಂತರ ಮಡಿವಾಳ ಪೊಲೀಸರಿಂದ ಕ್ರೈಂ ಆಫ್ ಸೀನ್ ಬಗ್ಗೆ ಮಾಹಿತಿ ಪಡೆಯಲಿರುವ ಸಿಬಿಐ ಅಧಿಕಾರಿಗಳು ಈಗಾಗಲೇ ಸ್ವಲ್ಪ ಮಟ್ಟಿಗೆ ತನಿಖೆ ನಡೆಸಿರುವ ಸಿಐಡಿ ಬಳಿ ಇರುವ ಎಲ್ಲ ದಾಖಲೆಗಳನ್ನು ಪಡೆಯಲಿದ್ದಾರೆ.
ಅಲ್ಲದೇ ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಂದ ರವಿ ಅವರ ಮರಣೋತ್ತರ ಪರೀಕ್ಷೆಯ ಚಿತ್ರೀಕರಣದ ಸಾಕ್ಷ್ಯಪಡೆದು ಅದರ ಜತೆಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಂದ ಮರಣೋತ್ತರ ಪರೀಕ್ಷೆ ಅಂತಿಮ ವರದಿ ಹಾಗೂ ಸಿಐಡಿ ಪಡೆದಿರುವ ಎಲ್ಲರ ಹೇಳಿಕೆಗಳ ದಾಖಲೆಯನ್ನು ಪಡೆಯುವ ಸಾಧ್ಯತೆ ಇದೆ.
ಈಗಾಗಲೇ ರವಿ ಅವರ ದೇಹದಿಂದ ಸಂಗ್ರಹಿಸಲಾದ ಮಾದರಿಗಳನ್ನು ವಿಶೇಷ ಲ್ಯಾಬ್’ಗೆ ಕಳಿಸಿ ಪರೀಕ್ಷೆ ನಡೆಸಬಹುದಾಗಿದ್ದು ಅಗತ್ಯ ಬಿದ್ದರೆ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ರವಿ ಹಾಗೂ ಅವರ ಪತ್ನಿ ಕುಸುಮಾ, ರವಿ ಬ್ಯಾಚ್ ಮೆಟ್ ಅಧಿಕಾರಿ ಪೋನ್ ಕಾಲ್ ಲಿಸ್ಟ್, ಇ-ಮೇಲ್ ಪರಿಶೀಲನೆ ನಡೆಸಲಿರುವ ಸಿಬಿಐ ಅಧಿಕಾರಿಗಳು ರವಿ ಪತ್ನಿ, ಮಾವ, ಕುಟುಂಬದವರ ಹಾಗೂ ರವಿ ಕಚೇರಿ ಸಿಬ್ಬಂದಿಗಳು ಮತ್ತು ರವಿ ಡ್ರೈವರ್ ಅವರನ್ನೂ ವಿಚಾರಣೆ ನಡೆಸಲಿದ್ದಾರೆ.
ಇನ್ನು ರವಿ ಸ್ನೇಹಿತೆ ಐಎಎಸ್ ಅಧಿಕಾರಿ ಸಂಪರ್ಕ ಹೊಂದಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವುದರಿಂದ ಅವರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದ್ದು , ಜತೆಗೆ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರನ್ನೂ ವಿಚಾರಣೆಗೊಳಪಡುವ ಸಾಧ್ಯತೆ ಹೆಚ್ಚಿದೆ.
ವಿಶೇಷವಾಗಿ ರವಿಗೆ ಪೋನ್ ಮಾಡಿದ್ದರೆನ್ನಲಾದ ಸಚಿವರು ಶಾಸಕರು ,ರವಿ ರೇಡ್ ಮಾಡಿದ್ದ ರಿಯಲ್ ಎಸ್ಟೇಟ್ ಕಂಪನಿ ಮಾಲೀಕರು , ಕೋಲಾರದಲ್ಲಿನ ಲ್ಯಾಂಡ್ ಮಾಫಿಯಾದವರು ಸೇರಿದಂತೆ ಗೃಹ ಸಚಿವ, ಮುಖ್ಯಮಂತ್ರಿಯವರನ್ನೂ ವಿಚಾರಣೆಗೊಳಪಡಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.