ಹೊಸದಿಲ್ಲಿ: ವೃತ್ತಿಜೀವನದಲ್ಲೇ ಅಮೋಘ ಫಾರ್ಮ್‌ನಲ್ಲಿರುವ ಮೂಗುತಿ ಸುಂದರಿ ಭಾರತದ ಸಾನಿಯಾ ಮಿರ್ಜಾ ಮಹಿಳಾ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ಧಾರೆ.
ಸ್ವಿಜರ್ಲೆಂಡ್‌ನ ಮಹಾನ್ ಟೆನಿಸ್ ತಾರೆ ಮಹಾನ್ ಮಾರ್ಟಿನಾ ಹಿಂಗಿಸ್ ಜತೆಗೂಡಿ ಬಿಎನ್‌ಪಿ ಪರಿಬಾಸ್ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಂತರ ಅತ್ಯುತ್ತಮ ಶ್ರೇಣಿ ಹಾರಿರುವ ಮಿರ್ಜಾ ಜೀವನಶ್ರೇಷ್ಠ ಮೂರನೇ ಸ್ಥಾನದಲ್ಲಿ ಮಿಂಚುತ್ತಿದ್ದಾರೆ.
ಒಟ್ಟಾರೆ 6885 ಅಂಕಗಳನ್ನು ಸಂಪಾದಿಸಿರುವ ಭಾರತದ ಟೆನಿಸ್ ಮಿನುಗು ತಾರೆ ಸಾನಿಯಾ ಮಿರ್ಜಾ ಅವರಿಗಿಂತ ಅಧಿಕ ಅಂಕಗಳನ್ನು ಪಡೆದಿರುವ ಇಟಲಿಯ ರಾಬರ್ಟಾ ವಿನ್ಸಿ ಮತ್ತು ಸಾರಾ ಇರಾನಿ ನಂ.1 ಹಾಗೂ ನಂ.2 ಸ್ಥಾನದಲ್ಲಿದ್ದಾರೆ. ಅವರಿಬ್ಬರೂ ತಲಾ 7640 ಅಂಕಗಳನ್ನು ಪಡೆದಿದ್ದಾರೆ.
ಇಂಡಿಯನ್ ವೆಲ್ಸ್‌ನಲ್ಲಿ ಸಾನಿಯಾ ಗೆಲುವು ಸಾಧಿಸುವ ಮೂಲಕ 1000 ಪಾಯಿಂಟ್‌ಗಳನ್ನು ತನ್ನದಾಗಿಸಿಕೊಂಡಿದ್ದರು. ಇದರಿಂದ ಡಬ್ಲುಟಿಎ ಪಟ್ಟಿಯಲ್ಲಿ ಎರಡು ಸ್ಥಾನ ಮೇಲಕ್ಕೇರಲು ಸಾಧ್ಯವಾಗಿದೆ. ಕಳೆದ ವರ್ಷ ಕ್ಯಾರಾ ಬ್ಲಾಕ್ ಜತೆಗೆ ಸಾನಿಯಾ ಮಿರ್ಜಾ ಇದೇ ಟೂರ್ನಮೆಂಟ್‌ನ ಫೈನಲ್‌ಗೇರಿದ್ದರು.
ನನ್ನ ವೃತ್ತಿಜೀವನದ ಅತ್ಯುತ್ತಮ ಶ್ರೇಣಿಯನ್ನು ತಲುಪಲು ಸಾಧ್ಯವಾಗಿದ್ದಕ್ಕೆ ರೋಮಾಂಚನವಾಗಿದೆ. ನಂ.1 ಆಗುವುದು ನನ್ನ ಕನಸು. ಅದನ್ನು ನಾನು ಕೆಲವೇ ಸಮಯದಲ್ಲಿ ಸಾಧಿಸಬಲ್ಲೆ ಎಂಬ ವಿಶ್ವಾಸವಿದೆ ಎಂದು ಅಮೆರಿಕದಿಂದ ಮಾತನಾಡಿದ ಸಾನಿಯಾ ತಿಳಿಸಿದ್ದಾರೆ.
ಡಬ್ಲುಟಿಎ ಮಹಿಳಾ ಸಿಂಗಲ್ಸ್ ಪಟ್ಟಿಯಲ್ಲಿ ಭಾರತದ ಅಂಕಿತಾ ರೈನಾ ಎರಡು ಸ್ಥಾನ ಮೇಲೆರಿದ್ದ 253ನೇ ಶ್ರೇಯಾಂಕ ಪಡೆದಿದ್ದಾರೆ. ಸದ್ಯ ಭಾರತದ ಟಾಪ್ ಸಿಂಗಲ್ಸ್ ಆಟಗಾರ್ತಿ ಇವರಾಗಿದ್ದು, ಇದು ಸದ್ಯ ಭಾರತದ ಶ್ರೇಷ್ಠ ಮಹಿಳಾ ಶ್ರೇಯಾಂಕ.
ಪುರುಷರ ಸಿಂಗಲ್ಸ್‌ನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸೋಮದೇವ್ 176ನೆಯ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರ ಬಳಿಕ 247ನೇ ಸ್ಥಾನದಲ್ಲಿ ರಾಮಕುಮಾರ ರಾಮನಾಥನ್ ಇದ್ದಾರೆ. ಅವರು ದೇಶದ ನಂ.2ನೇ ಆಟಗಾರ. ಅವರ ನಂತರದ ಸ್ಥಾನದಲ್ಲಿ ಯೂಕಿ ಭಾಂಬ್ರಿ(257) ಇದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ 25ನೇ ಸ್ಥಾನದಲ್ಲಿದ್ದರೆ, ಒಂದು ಸ್ಥಾನ ಕಳೆದುಕೊಂಡ ರೋಹನ್ ಬೋಪಣ್ಣ ಇದ್ದಾರೆ.