ಗೌರೀಶ್ ಅಕ್ಕಿ ಚಿತ್ರಕ್ಕೆ ಗುರುಬಲ ಬಂದಿದೆ. ಹೌದು. ಚಿತ್ರಕ್ಕೊಂದ್ ಕಿಕ್ ಇರಲಿ ಅಂತ ಡೈರೆಕ್ಟರ್ ಸ್ಪೆಷಲ್ ತಂದಿದ್ದಾರೆ ಗೌರೀಶ್. ಲೈಫ್ ಸೂಪರ್ ಗುರೂ ರಿಯಾಲಿಟಿ ಶೋ ನಂತರ ಸದ್ಯಕ್ಕೆ ಇನ್ನು ಬೇರೆ ಕಡೆ ಚಿತ್ತ ಹರಿಸೋಲ್ಲ ಎಂದು ಎರಡನೇ ಸಲ ಚಿತ್ರದ ಸ್ಕ್ರಿಪ್ಟ್ ಗೆ ಕೂತಿದ್ದ ಗುರುಪ್ರಸಾದ್.
ಗೌರೀಶ್ ಅಕ್ಕಿ ಮಾತಿಗೆ ಕರಗಿ ಮಾತು ಮುರಿದಿದ್ದಾರೆ. ಮಾತಿಗೆ ಅನ್ನೋದಕ್ಕಿಂತ, ಸ್ಕ್ರಿಪ್ಟ್ ಮತ್ತು ಅವರ ಪಾತ್ರಕ್ಕೆ ಮರುಳಾಗಿದ್ದಾರೆ. ಗುರುಪ್ರಸಾದ್‍ಗೆ ಈ ಚಿತ್ರದಲ್ಲಿ ನಿರ್ದೇಶಕನ ಪಾತ್ರವೇ ಒಲಿದಿದೆ. ಡೈರೆಕ್ಟರ್ ಸ್ಪೆಷಲ್ ಚಿತ್ರದ ಕಟೌಟಿನಲ್ಲಿ ಲಾಂಗ್ ಸ್ಟೈಲಿನಲ್ಲಿ ಪೆನ್ ಹಿಡಿದಿದ್ದ ಗುರುಪ್ರಸಾದ್, ಈ ಚಿತ್ರದಲ್ಲಿ ನಿಜವಾಗಿಯೂ ಲಾಂಗ್ ಹಿಡಿದಿದ್ದಾರೆ.
ಇದನ್ನು ಲಾಂಗ್ ಅಂತ ಪ್ರೂವ್ ಮಾಡೋಕಾಗಲ್ಲ. ಯಾಕಂದ್ರೆ ಅವರು ಕೈಲಿಹಿಡಿದಿರುವುದು ರಾಜರ ಕಾಲದ ಖಡ್ಗ! ಅದನ್ನಾದ್ರೂ ಯಾಕೆ ಹಿಡಿದಿದಾರೆ ಅನ್ನೋದು ಗೊತ್ತಾಗೋಕೆ ನೀವು ಸಿನೆಮಾ ಮೈ ಡಾರ್ಲಿಂಗ್ ಬರೋ ತನಕ ಕಾಯಬೇಕು. ಗುರುಪ್ರಸಾದ್ ಆಗಿಯೇ ಕಾಣಿಸಿಕೊಂಡಿರುವ ಅವರು ಈ ಚಿತ್ರದ ನಾಯಕನೊಂದಿಗೆ ಕೆಲವು ಮಹತ್ವದ ದೃಶ್ಯಗಳಲ್ಲಿ ನಟಿಸಿದ್ದಾರೆ. ತಮಾಷೆಯೆಂದರೆ, ಈ ಕೆಲವು ದೃಶ್ಯಗಳಲ್ಲಿ ಗುರುಪ್ರಸಾದ್ ಅವರ ನಿರ್ದೇಶನದ ಚಿತ್ರಗಳನ್ನು ಕುರಿತು ನಾಯಕ ಕಿಂಡಲ್ ಮಾಡುವ ಕೆಲವು ಸಂಭಾಷಣೆಗಳನ್ನು ಇಟ್ಟಿದ್ದಾರಂತೆ.
ಗುರುಪ್ರಸಾದ್ ಪದೇಪದೆ ಪತ್ರಿಕಾಗೋಷ್ಠಿಗಳಲ್ಲಿ ಹೇಳುತ್ತಿದ್ದ ಹತಾಶ ಪ್ರೇಕ್ಷಕನ ಭಾವದ ಡೈಲಾಗುಗಳೂ ಈ ಚಿತ್ರದಲ್ಲಿ ಕೇಳಿಸಲಿವೆಯಂತೆ. ಈ ಮೊದಲು ಹಿಂದಿಯ ರಾಮಗೋಪಾಲ್ ವರ್ಮಾ ಮತ್ತು ಕನ್ನಡದ ಯೋಗರಾಜ್ ಭಟ್ ತಮ್ಮ ಚಿತ್ರಗಳಲ್ಲಿ ತಮ್ಮನ್ನು ತಾವೇ ಗೇಲಿ ಮಾಡಿಕೊಂಡಿದ್ದುಂಟು. ಆದರೆ ಗುರುಪ್ರಸಾದ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮನ್ನು ಇನ್ನೊಬ್ಬರು ಕಾಲೆಳೆಯುವುದಕ್ಕೆ ತಾವೇ ಒಪ್ಪಿಗೆ ನೀಡಿದ್ದಾರೆ. ಇದೊಂಥರ ಆರೋಗ್ಯಕರ ಬೆಳವಣಿಗೆ ಅನ್ನಬಹುದು.
ಅಂದ ಹಾಗೆ ಗೌರೀಶ್ ಅಕ್ಕಿ, ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೇನಿದ್ದರೂ ಹಾಡುಗಳ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡೆಕ್ಷನ್ ಕೆಲಸ ಬಾಕಿ ಅಂತೆ. ಮೊದಲ ಸಿನಿಮಾದಲ್ಲೇ ನೂರು ಸಿನಿಮಾಗಾಗೋಷ್ಟು ಅನುಭವ, ಸಂತಸ ಸಂಕಟ ಎಲ್ಲವನ್ನೂ ಪಡೆದುಕೊಂಡಿರುವ ಗೌರೀಶ್‍ಗೆ ಹೊಸಬರಾದರೂ ಅನುಭವಿ ಪೋಷಕ ನಟನಟಿಯರ ತಂಡ, ಉತ್ಸಾಹದ ಯುವನಾಯಕ ನಾಯಕಿಯರು ಎಲ್ಲರಿಂದ ಕೆಲಸ ಸಾಗಿದ್ದೇ ಗೊತ್ತಾಗಿಲ್ಲವಂತೆ.
ಸಂಗೀತ ಪ್ರಿಯರ ಗಮನಕ್ಕೊಂದು ಮಾಹಿತಿ. ಚಿತ್ರ ಶುರು ಮಾಡಿದಾಗ ಸಿನಿಮಾ ಮೈ ಡಾರ್ಲಿಂಗ್‍ಗೆ ರಘು ದೀಕ್ಷಿತ್ ಸಂಗೀತ ನೀಡಲಿದ್ದಾರೆ ಎಂಬ ಅಧಿಕೃತ ಪ್ರಕಟಣೆಯಿತ್ತು. ಆದರೆ ಈ ಏಳೆಂಟು ತಿಂಗಳ ಅವಧಿಯಲ್ಲಿ ಸಿನಿಮಾ ತಂಡದಲ್ಲಾದ ಹಲವಾರು ಬದಲಾವಣೆಗಳಲ್ಲಿ ಸಂಗೀತ ನಿರ್ದೇಶಕರೂ ಬದಲಾಗಿದ್ದಾರೆ. ಉಳಿದವರು ಕಂಡಂತೆ ಚಿತ್ರದ ಭಾಗವಾಗಿದ್ದ ಗೌರೀಶ್, ಆ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‍ರ ಹಾಡುಗಳು ಮತ್ತು ಹಿನ್ನೆಲೆ ಸಂಗೀತಕ್ಕೆ ಮಾರುಹೋಗಿ, ಸಂಗೀತ ನಿರ್ದೇಶನವನ್ನು ಅವರಿಗೆ ಒಪ್ಪಿಸಿದ್ದಾರೆ.
ಈಗಾಗಲೇ ಟ್ಯೂನ್‍ಗಳು ಸಿದ್ಧವಾಗಿದ್ದು, ತುಂಬ ಚೆಂದದ ಹಾಡುಗಳು ಸಂಗೀತಪ್ರಿಯರಿಗೆ ಸಿಗಲಿದೆಯಂತೆ. ಸಿನಿಮಾದಲ್ಲಿ ಗುರುಪ್ರಸಾದ್ ಅಲ್ಲದೆ ಇನ್ಯಾವ ಕಲಾವಿದರು ಮಿಂಚಲಿದ್ದಾರೆ ಅಂದ್ರೆ, ರಂಗಭೂಮಿ ನಟ ಸಂಪತ್ ಕಡೆಗೆ ಕೈ ತೋರಿಸುತ್ತಾರೆ ಗೌರೀಶ್. ಈಗಾಗಲೇ ಬೆಂಕಿಪಟ್ಣ, ಮುದ್ದುಮನಸೇ ಮುಂತಾದ ಚಿತ್ರಗಳಲ್ಲಿ ಚಿಕ್ಕಪಾತ್ರದಲ್ಲಿ ಕಾಣಿಸಿರುವ ಸಂಪತ್‍ಗೆ ಈ ಚಿತ್ರದಲ್ಲಿ ವಿಲನ್ ಪಾತ್ರವಂತೆ. ಮಿಕ್ಕಂತೆ ಸಿದ್ಲಿಂಗು ಚಿತ್ರದ ಶ್ರೀಧರ್, ರಾಜು ತಾಳಿಕೋಟೆ, ಸುಂದರ್ ಮುಂತಾದವರಿಂದ ಚೊಚ್ಚಲ ಚಿತ್ರನಿರ್ದೇಶನ ಸುಲಭ ಅನಿಸುವಂತಾಯಿತು ಎನ್ನುತ್ತಾರೆ ಗೌರೀಶ್.