ಮನೋರಂಜನೆ

ದಿಗ್ಭಯಂ ಕನ್ನಡ ಚಿತ್ರ: ಅಮಿತ್ ಐಸ್‍ಕ್ರೀಮ್!; ಫಾರಿನ್ನಲ್ಲಿ ಭಯಂಕರ ಹಿಟ್!!

Pinterest LinkedIn Tumblr

Digbhayam-Ice-Candy-Song

ಐಸ್ ಕ್ಯಾಂಡಿ ಸಾಂಗ್ ನೋಡಿದೀರಾ? ಇಲ್ವಾ? ನೀವು ಇಂಡಿಯನ್ಸ್ ತುಂಬ ಸ್ಲೋ ಕಣ್ರಿ ಅಂತಿದಾರೆ… ಒಂದಷ್ಟು ವಿದೇಶೀ ಮ್ಯೂಸಿಕ್ ಪ್ರಿಯರು! ನಂಬಿದ್ರೆ ನಂಬಿ ಬಿಟ್ರೆ ಬಿಡಿ. ಐಸ್ ಕ್ಯಾಂಡಿ ತಿನ್ನೋ ಸ್ಟೈಲ್  ನೋಡಿ… ಮುಖದಲ್ಲಿ ಸ್ಮೈಲ್  ಬರ್ಲಿ.. ಎಂಬ ಸಾಲಿನಿಂದ ಶುರುವಾಗುವ ಕನ್ನಡದ ರ್ಯಾಪ್ ಗೀತೆಯೊಂದು ಯೂಟ್ಯೂಬಿನಲ್ಲಿ ಭಾರತಕ್ಕಿಂತ ಹೆಚ್ಚು ವಿದೇಶಿಯರಿಂದಲೇ ವೀಕ್ಷಿಸಲ್ಪಟ್ಟಿದೆ ಎಂಬುದು ಕನ್ನಡ ಸಿನಿಮಾಗೆ ಸಿಕ್ಕಿರುವ ಹೆಗ್ಗಳಿಕೆ!

ಈ ರೀತಿಯ ರೆಕಾರ್ಡು ಹಿಂದೆಯೂ ಆಗಿತ್ತೋ ಏನೋ.. ಯಾರೂ ಗಮನಿಸಿರಲಿಕ್ಕಿಲ್ಲ. ಇದು ದಿಗ್ಭಯಂ ಎಂಬ ಕನ್ನಡ ಚಿತ್ರದ ಹಾಡು. ಹೊಸ ಚಿತ್ರತಂಡವಾದ್ದರಿಂದ ಪ್ರತಿಯೊಂದನ್ನೂ ಗಮನಿಸಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ವಿದೇಶೀಯರು ನೋಡುವಂಥಾದ್ದು ಈ ಹಾಡಿನಲ್ಲಿ ಏನಿದೆ ಎಂದು ನೀವೂ ಯೂಟ್ಯೂಬ್ ಹೊಕ್ಕುನೋಡಿದರೆ, ನಿಮಗೆ ನಿರಾಸೆಯಂತೂ ಆಗುವುದಿಲ್ಲ. ಗೀತಸಾಹಿತ್ಯ ಕನ್ನಡದ್ದು ಎಂಬುದು ಅರ್ಥ ಆಗೋಕೆ ಹಾಡನ್ನು ಎರಡೆರಡು ಬಾರಿ ಕೇಳಬೇಕಾಗಬಹುದು. ಆದರೆ ಹಾಡಿನ ದೃಶ್ಯ ತಾಂತ್ರಿಕವಾಗಿ ಗಮನ ಸೆಳೆಯುವುದು ಖಂಡಿತಾ. ರ್ಯಾಪ್ ಶೈಲಿಯ ಈ ಹಾಡನ್ನು ನೋಡುತ್ತಿದ್ದರೆ ನಿಮಗೆ ಎಂಟಿವಿಯೋ ವಿಹೆಚ್‍ಟಿ ಚಾನೆಲ್ಲಿನ ಯಾವುದೋ ಆಲ್ಬಮ್ ಸಾಂಗ್ ನೋಡುತ್ತಿರುವಂತೆ ಭಾಸವಾಗುತ್ತದೆ.

ಹೊಸಬರ ಚಿತ್ರದಲ್ಲಿ ಇಂಥದೊಂದು ಪ್ರಯತ್ನವಾಗಿದೆಯಲ್ಲ ಎಂದು ಈ ಹಾಡಿನ ಹಿಂದಿನ ಮಾಸ್ಟರ್ ಮೈಂಡ್, ನಾಯಕ ನಿರ್ದೇಶಕ ಅಮಿತ್‍ರನ್ನೇ ಮಾತನಾಡಿಸಿದಾಗ ಅವರು

ಹೇಳಿದ್ದು ಹೀಗೆ. `ಈ ಗೀತೆಯನ್ನು ನೂರಾ ಐವತ್ತೆರಡು ದೇಶಗಳು ವೀಕ್ಷಿಸಿವೆ. ವಿಯೆಟ್ನಾಂ, ಪೆರು, ಕೊಲಂಬಿಯಾ ದೇಶದವರು ಇದನ್ನು ಹೆಚ್ಚು ವೀಕ್ಷಿಸಿದ್ದಾರೆ. ಭಾರತ ಹನ್ನೆರಡನೇ

ಸ್ಥಾನದಲ್ಲಿದೆ. ಒಂದೇ ತಿಂಗಳಲ್ಲಿ ತೊಂಬತ್ತೈದು ಸಾವಿರ ಹಿಟ್ಸ್ ಪಡೆದಿದೆ. ಹೊಸಬರ ಚಿತ್ರ ಅಂತ ನೋಡೋದಾದ್ರೆ ಇದು ನಮ್ಮ ಮಟ್ಟಿಗೊಂದು ಸಾಧನೆ ಅನ್ಕೊಳ್ತೀನಿ. ಫ್ರೇಮ್ ಬೈ ಫ್ರೇಮ್ ವರ್ಕ್ ಮಾಡಿರೋ ಹಾಡಿದು. ಈ ಹಾಡಿಗಾಗಿ ಆರು ತಿಂಗಳು ಕೆಲಸ ಮಾಡಿದೀವಿ. ಸಂಪೂರ್ಣವಾಗಿ ವಿಶ್ಯುಲ್ಸ್ ಎಫೆಕ್ಟ್  ಬಳಸಿ ಮಾಡಿರೋ ಈ ಹಾಡಿಗೆ ಹತ್ತು ಲಕ್ಷ ಖರ್ಚಾಗಿದೆ.

ಇದು ನನ್ನ ಇಂಟ್ರೊಡಕ್ಷನ್ ಸಾಂಗ್ ಆಗಿರೋದ್ರಿಂದ ಏನಾದ್ರೂ ಹೊಸತನ ತೋರೋಣ ಎಂಬ ಉದ್ದೇಶದಿಂದ ಮಾಡಿದ್ದು. ಈ ರೀತಿಯ ಗ್ರಾಫಿಕ್ಸ್ ಮಾಡಿರೋ ಹಾಡು ಬಹುಶಃ ಭಾರತದಲ್ಲಂತೂ ಹೊಸತು. ಬೇರೆ ಭಾಷೆಯಲ್ಲೂ ನಾನಂತೂ ನೋಡಿಲ್ಲ. ನಮ್ಮದು ಹಾರರ್ ಚಿತ್ರ ಅನ್ನೋದಕ್ಕಿಂತ ಹಾರರ್ ಫೀಲ್  ಇರೋ ಸಸ್ಪೆನ್ಸ್ ಥ್ರಿಲ್ಲರ್. ಆದರೂ ಹಾಡಿಗೆ ಮಹತ್ವ ಕೊಟ್ಟಿದ್ದೀನಿ. ಪವರ್ ಚಿತ್ರದ ಟೈಟಲ್ ಸಾಂಗ್ ರಿಮಿಕ್ಸ್  ವೀಡಿಯೋ ಮಾಡಿದ್ದ ಚಂದನ್ ಶೆಟ್ಟಿ ನಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶಕರು. ಈ ಹಾಡು ಚಿತ್ರವನ್ನು ಪ್ರಮೋಟ್ ಮಾಡೋಕಂತೂ ಸಹಾಯ ಆಗ್ತಿದೆ. ಈಗಾಗಲೇ ಈ ಹಾಡನ್ನು ನೋಡಿ ಆಲ್ಬಮ್ ಮಾಡಿಕೊಡಿ ಎಂಬ ಆಫರ್ ಬಂದಿದೆ. ಎಲ್ಲಕ್ಕಿಂತ ಖುಷಿ ಅಂದ್ರೆ, ಈ ಗೀತೆ ಸದ್ಯದಲ್ಲೇ ವಿಹೆಚ್‍ಟಿ ಚಾನೆಲ್ಲಲ್ಲಿ ಪ್ರಸಾರವಾಗಲಿದ್ದು, ಆ ವಾಹಿನಿಗೆ ಎಂಟ್ರಿ ಪಡೆದ ಮೊದಲ ಕನ್ನಡ ಗೀತೆ ಅನಿಸಿಕೊಳ್ಳಲಿದೆ.’ ಸಾಲ್ಸಾ ಡ್ಯಾನ್ಸು, ಬ್ರೆಜಿಲಿಯನ್ ಮಾರ್ಷಿಯಲ್ ಆಟ್ರ್ಸ್ ಎಲ್ಲ ಕಲಿತಿರುವ ರಂಗಭೂಮಿ ಪ್ರತಿಭೆ ಅಮಿತ್ ಹೀಗೆ ಅಮಿತ ಉತ್ಸಾಹದಲ್ಲಿ ಮಾತನಾಡುತ್ತಿದ್ದರೆ, ಯೂಟ್ಯೂಬ್  ಹೊಕ್ಕು ಮತ್ತೊಮ್ಮೆ ಹಾಡು ನೋಡಿ ಬರೋಣ ಅನಿಸದಿರದು. ಹಾಲಿವುಡ್ ಶೈಲಿಯಲ್ಲಿ ಸಿನಿಮಾ ಮಾಡುವ ಕನಸಿಟ್ಟುಕೊಂಡಿರುವ ಹಾಡಿನಲ್ಲಿ ಮೆರೆದಿರುವ ವಿಭಿನ್ನತೆಯನ್ನು ಚಿತ್ರದಲ್ಲೂ ಮೆರೆದಿರುತ್ತಾರಾ ನೋಡಲು ಸಿನಿಮಾ ಬಿಡುಗಡೆಗೆ ಕಾಯಬೇಕು.

Write A Comment