ಮೈಸೂರು: ಚಾಮುಂಡಿಬೆಟ್ಟದಲ್ಲಿ ಮತ್ತೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆಯಲ್ಲಿರುವ ಅರಣ್ಯ ಸುಟ್ಟು ಭಸ್ಮವಾಗಿದೆ.
ನಂಜನಗೂಡು ರಸ್ತೆಯ ಗೌರಿಶಂಕರ ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಚಾಮುಂಡಿ ಬೆಟ್ಟದ ಪಾದದ ಬಳಿ ಶುಕ್ರವಾರ ಮಧ್ಯಾಹ್ನ 2.15ರ ಹೊತ್ತಿಗೆ ಕಾಣಿಸಿಕೊಂಡಿದ್ದ ಬೆಂಕಿ ಇಡೀ ಬೆಟ್ಟವನ್ನು ಆವರಿಸಿಕೊಂಡಿದೆ. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಗಾಳಿಯ ವೇಗ ಹೆಚ್ಚಾಗಿರುವುದರಿಂದ ಬೆಂಕಿ ಜ್ವಾಲೆ ತೀವ್ರವಾಗಿ ಹರಡ ತೊಡಗಿದೆ. ಬೆಟ್ಟದ ಬುಡದಲ್ಲಿ ನಿನ್ನೆ ಸಂಜೆ 5 ಗಂಟೆ ಹೊತ್ತಿಗೆ ಬೆಂಕಿ ನಂದಿಸಲಾಯಿತಾದರೂ, ಮತ್ತೆ ಆರು ಗಂಟೆಯ ಹೊತ್ತಿಗೆ ಬೆಟ್ಟದ ಮಧ್ಯಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅನಾಹುತಕ್ಕೆ ಕಿಡಿಗೇಡಿಗಳೆ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಉಂಟಾದ ಕಾಡ್ಗಿಚ್ಚಿಗೂ ಇದೇ ಕಾರಣವಾಗಿತ್ತು. ಇದು ಮತ್ತೆ ಪುನರಾವರ್ತನೆ ಆಗಿರುವುದರಿಂದ ಮತ್ತಷ್ಟು ಅರಣ್ಯ ಸಂಪತ್ತು ಹಾಳಾಗಿದೆ.
ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ
ಕಳೆದ ಫೆಬ್ರವರಿ ವೇಳೆಯಲ್ಲಿ ಇದೇ ನಂಜನಗೂಡು ರಸ್ತೆಯ ಮಾರ್ಗದಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ನಾಶವಾಗಿತ್ತು. ಇದರ ಬೆನ್ನಲ್ಲೇ ಮತ್ತೆ ಬೆಂಕಿ ಅನಾಹುತ ಸಂಭವಿಸಿರುವುದು ಹಾನಿ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿದೆ. ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ದಳ ಸತತ ಕಾರ್ಯಚರಣೆ ಬಳಿಕ ಬೆಟ್ಟದ ಪಾದದ ಬಳಿಯ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರಾದರೂ, ಸಂಜೆ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಕಾಡ್ಗಿಚ್ಚು ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.