ವೆಲ್ಲಿಂಗ್ ಟನ್: ವಿಶ್ವಕಪ್ ಕ್ರಿಕೆಟ್ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ ತಂಡ ಭರ್ಜರಿ 143 ರನ್ ಗಳ ಜಯ ದಾಖಲಿಸಿದೆ.
ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯ ನಾಲ್ಕನೇ ಕ್ವಾರ್ಟರ್ ಫೈನಲ್ ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿತು. ನಾಯಕ ಮೆಕ್ಕಲಮ್ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಆಡಿದ ನ್ಯೂಜಿಲೆಂಡ್ ಬ್ಯಾಟ್ಸಮನ್ ಗಳು ಉತ್ತಮವಾಗಿ ಆಡಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಮೆಕ್ಕಲಮ್ ಮತ್ತು ಮಾರ್ಟಿನ್ ಗಪ್ಟಿಲ್ ತಂಡಕ್ಕೆ ಉತ್ತಮ ಆರಂಭ ನೀಡುವ ಭರವಸೆ ಮೂಡಿಸಿದರಾದರೂ, ತಂಡದ ಮೊತ್ತ 27 ರನ್ ಗಳಾಗಿದ್ದಾಗ ಮೆಕ್ಕಲಮ್ ಟೇಲರ್ ಗೆ ವಿಕೆಟ್ ಒಪ್ಪಿಸಿದರು. ಆಗ ಅವರು ಕೇವಲ 12 ರನ್ ಗಳಿಸಿದ್ದರು.
ಬಳಿಕ ಬಂದ ಕ್ರೀಸ್ ಗೆ ಬಂದ ವಿಲಿಯಮ್ಸನ್ ಅವರು ಮಾರ್ಟಿನ್ ಗಪ್ಟಿಲ್ ಅವರ ಜೊತೆಗೂಡಿ ನ್ಯೂಜಿಲೆಂಡ್ ತಂಡದ ರನ್ ಗಳಿಕೆ ವೇಗವನ್ನು ಹೆಚ್ಚಿಸ ತೊಡಗಿದರು. ಭರ್ಜರಿ ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿಯನ್ನು ರಸೆಲ್ ಅವರು ಬೇರ್ಪಡಿಸಿದರು. 33 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ವಿಲಿಯಮ್ಸನ್ ರಸೆಲ್ ಅವರ ಎಸೆತವನ್ನು ತಪ್ಪಾಗಿ ಆರ್ಥೈಸಿಕೊಂಡು ಗೇಯ್ಲ್ ಕ್ಯಾಚಿತ್ತು ಹೊರನಡೆದರು. ಬಳಿಕ ಗಪ್ಟಿಲ್ ಅವರನ್ನು ಸೇರಿಕೊಂಡ ಟೇಲರ್ ವಿಂಡೀಸ್ ಬೌಲರ್ ಗಳನ್ನು ಕಾಡಿದರು. ಭರ್ಜರಿ 143 ರನ್ ಗಳ ಜೊತೆಯಾಟ ವಾಡಿದ ಈ ಜೋಡಿ ತಂಡಕ್ಕೆ ಬೃಹತ್ ಮೊತ್ತ ಪೇರಿಸುವ ಕುರಿತು ಸೂಚನೆ ನೀಡಿದರು.
ಈ ವೇಳೆ ಇಲ್ಲದ ರನ್ ಕದಿಯಲು ಹೋಗಿ ಟೇಲರ್ ರನ್ ಔಟ್ ಗೆ ಬಲಿಯಾದರು. ಆಗ ಅವರ ವೈಯುಕ್ತಿಕ ಮೊತ್ತ 42 ರನ್ ಗಳಾಗಿತ್ತು. ಈ ಹೊತ್ತಿಗಾಗಲೇಮಾರ್ಟಿನ್ ಗಪ್ಟಿಲ್ ಶತಕ ಸಿಡಿಸಿ ಮುನ್ನುಗ್ಗಿದರು. ಬಳಿಕ ಬಂದ ಮಧ್ಯಮ ಕ್ರಮಾಂಕದ ಆಟಗಾರರು ಗಪ್ಟಿಲ್ ಗೆ ಉತ್ತಮ ಸಾಥ್ ನೀಡಲಿಲ್ಲವಾದರೂ. ದೃತಿಗೆಡದ ಗಪ್ಟಿಲ್ ವೆಸ್ಟ್ ಇಂಡೀಸ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಅವರು ಕೇವಲ 223 ಎಸೆತಗಳಲ್ಲಿ 237 ರನ್ ಸಿಡಿಸಿದರು. ಔಟಾಗದೇ ಕೊನೆಯ ಎಸೆತದವರೆಗೂ ಕ್ರೀಸ್ ನಲ್ಲಿದ್ದ ಗಪ್ಟಿಲ್ ನ್ಯೂಜಿಲೆಂಡ್ ತಂಡದ ಬೃಹತ್ ಮೊತ್ತಕೆ ಕಾರಣರಾದರು. ನಿಗದಿತ 50 ಓವರ್ ಗಳಲ್ಲಿ ನ್ಯೂಜಿಲೆಂಡ್ ತಂಡ ಕೇವಲ 6 ವಿಕೆಟ್ಗಳನ್ನು ಕಳೆದುಕೊಂಡು ಬರೊಬ್ಬರಿ 393 ರನ್ ಗಳನ್ನು ಸಿಡಿಸಿದೆ. ಆ ಮೂಲಕ ವೆಸ್ಟ್ ಇಂಡೀಸ್ ಗೆ ಗೆಲ್ಲಲು 394 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಬೃಹತ್ ಮೊತ್ತದ ಗುರಿ ಬೆನ್ನು ಹತ್ತಿ ಮುಗ್ಗರಿಸಿದ ವಿಂಡೀಸ್
ಇನ್ನು ನ್ಯೂಜಿಲೆಂಡ್ ತಂಡ ನೀಡಿದ ಬೃಹತ್ ಮೊತ್ತದ ಗುರಿಯನ್ನು ಬೆನ್ನುಹತ್ತಿದ ವೆಸ್ಟ್ ಇಂಡೀಸ್ ತಂಡ ಕೇವಲ 30.3 ಓವರ್ ಗಳಲ್ಲಿ 250 ರನ್ ಗಳಿಗೇ ಆಲ್ ಔಟ್ ಆಯಿತು. ಆ ಮೂಲಕ ನ್ಯೂಜಿಲೆಂಡ್ 144 ರನ್ ಗಳ ಜಯ ದಾಖಲಿಸಿತು. ಬೃಹತ್ ಮೊತ್ತವನ್ನು ಬೆನ್ನುಹತ್ತಿದ ವಿಂಡೀಸ್ ಆಟಗಾರರು ಆತ್ಮವಿಶ್ವಾಸದಿಂದಲೇ ಕಣಕ್ಕಿಳಿದರಾದರೂ ಕಿವೀಸ್ ಪಡೆಯ ಪ್ರಭಾವಿ ಬೌಲಿಂಗ್ ನಿಂದಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಕ್ರೀಸ್ ಗೇಯ್ಲ್ (61 ರನ್)ಮತ್ತು ನಾಯಕ ಹೋಲ್ಡರ್(42 ರನ್) ಅವರನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಆಟಗಾರರು ಹೊಡಿ-ಬಡಿ ಆಟಕ್ಕೆ ಮುಂದಾಗಿ ಅನಗತ್ಯವಾಗಿ ಬೇಗನೇ ವಿಕೆಟ್ ಕಳೆದುಕೊಂಡರು. ಸಿಮಾನ್ಸ್ (12 ರನ್), ಚಾರ್ಲ್ಸ್ (3 ರನ್), ಸ್ಯಾಮುಯೆಲ್ಸ್ (27 ರನ್), ರಾಮ್ ದಿನ್ (ಶೂನ್ಯ), ಕಾರ್ಟರ್ (32 ರನ್), ಸ್ಯಾಮಿ (27 ರನ್), ರಸೆಲ್ (20 ರನ್), ಟೇಲರ್ (11), ಬೆನ್ನ್ (ಅಜೇಯ 9 ರನ್) ವೇಗವಾಗಿ ರನ್ ಗಳಿಸುವ ಆತುರದಲ್ಲಿ ತಮ್ಮ-ತಮ್ಮ ವಿಕೆಟ್ ಕಳಿದುಕೊಂಡರು.
ಇನ್ನು ಕೊಂಚ ದುಬಾರಿ ಎನಿಸಿಕೊಂಡರೂ ನ್ಯೂಜಿಲೆಂಡ್ ಬೌಲರ್ ಗಳು ನಿಯಮಿತವಾಗಿ ವೆಸ್ಟ್ ಇಂಡೀಸ್ ತಂಡ ವಿಕೆಟ್ ಗಳನ್ನು ಪಡೆಯುವ ಮೂಲಕ ವಿಂಡೀಸ್ ಸೋಲಿಗೆ ಕಾರಣರಾದರು. ಈ ಪೈಕಿ ಪ್ರಭಾವಿ ಬೌಲಿಂಗ್ ದಾಳಿ ನಡೆಸಿದ ಬೌಲ್ಟ್ 44 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಉಳಿದಂತೆ ಟಿಮ್ ಸೌಥಿ 2 ವಿಕೆಟ್, ಡೇನಿಯಲ್ ವೆಟ್ಟೋರಿ 2 ವಿಕೆಟ್ ಮತ್ತು ಮಿಲ್ನೆ ಮತ್ತು ಆ್ಯಂಡರ್ ಸನ್ ತಲಾ 1 ವಿಕೆಟ್ ಪಡೆದರು.
ದಾಖಲೆ ವೀರ ಗಪ್ಟಿಲ್ ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ
ಇನ್ನು ಈ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಮಾರ್ಟಿನ್ ಗಪ್ಟಿಲ್ ದಾಖಲೆಯ ಪುಟ ಸೇರಿದ್ದು, ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ನ್ಯೂಜಿಲೆಂಡ್ ನ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ ವಿಂಡೀಸ್ ವಿರುದ್ಧ 237 ದಾಖಲೆ ರನ್ ಸಿಡಿಸಿದ ಅವರು ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.