ಡಿ.ಕೆ. ರವಿ ಅವರ ಸಾವಿನ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು ರವಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ದೊಡ್ಡಕೊಪ್ಪಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರ ಕಾರನ್ನು ಸ್ಥಳೀಯರು ಜಖಂಗೊಳಿಸಿದ ಘಟನೆ ನಡೆದಿದೆ.
ರವಿ ಅವರ ಕುಟುಂಬಕ್ಕೆ ಸಮಾಧಾನ ಹೇಳಿದ ಪರಮೇಶ್ವರ್ ರವಿ ಅವರ ಸಮಾಧಿಗೆ ಗೌರವ ಸಲ್ಲಿಸಿ ತಮ್ಮ ಇನೋವಾ ಕಾರಿನಲ್ಲಿ ಮರಳಿ ಹೊರಟಿದ್ದರು. ಈ ಸಮಯದಲ್ಲಿ ಏಕಾಏಕಿ ಬಂದ ಉದ್ರಿಕ್ತರ ಗುಂಪು ಕಾರಿಗೆ ಕಲ್ಲು ಎತ್ತಿ ಹಾಕಿ ಆಕ್ರೋಶ ವ್ಯಕ್ತಪಡಿಸಿತಲ್ಲದೇ, ಕಾಂಗ್ರೆಸ್ ಅಧ್ಯಕ್ಷರಾದ ನೀವು ಸಿಬಿಐ ತನಿಖೆಗೆ ಒತ್ತಾಯ ಮಾಡುವುದನ್ನು ಬಿಟ್ಟು ಏನು ಮಾಡುತ್ತಿದ್ದೀರಿ ಎಂದು ಖಡಕ್ ಆಗಿ ಪ್ರಶ್ನಿಸಿದರು.
ಈ ಸಮಯದಲ್ಲಿ ಉತ್ತರಿಸಿದ ಪರಮೇಶ್ವರ್ ಸೋಮವಾರ ಮರಣೋತ್ತರ ವರದಿ ಬರಲಿದ್ದು ಅದನ್ನು ಪರಿಶೀಲಿಸಿ ಸಿಬಿಐ ಗೆ ಒಪ್ಪಿಸುತ್ತೇವೆ. ಅಲ್ಲದೇ ರಾಜ್ಯದ ಜನತೆಯ ಒಕ್ಕೊರಲ ಒತ್ತಾಯ ತಮ್ಮ ಗಮನಕ್ಕೂ ಬಂದಿದೆ ಎನ್ನುವ ಮೂಲಕ ರಾಜ್ಯ ಸರ್ಕಾರ ಸಿಬಿಐ ಗೆ ವಹಿಸಲಿದೆ ಎಂಬ ಸೂಚನೆ ನೀಡಿದ್ದಾರೆ.