ಮನೋರಂಜನೆ

ಶೋಷಣೆ, ಕ್ರೌರ್ಯಗಳ ಚಿತ್ರಣ ‘ವರಾಹಪುರಾಣ’

Pinterest LinkedIn Tumblr

psmec11drama1_0

ಬಡವರ ತುಳಿತ,- ಶೋಷಣೆಯ ರೂಕ್ಷತೆ ನಮ್ಮ ಕಣ್ಣೆದುರಿಗೇ ಘಟಿಸುತ್ತಿದೆಯೇನೋ ಅನ್ನಿಸುವಷ್ಟರಮಟ್ಟಿಗೆ ಸಹಜತೆಯ ಮಜಲಿನಲ್ಲಿ ಮನಕಲಕುವ ದೃಶ್ಯಗಳು ಬಿಚ್ಚಿಕೊಳ್ಳುತ್ತ ಹೋದದ್ದು ‘ವರಾಹಪುರಾಣ’ವೆಂಬ ನಾಟಕದಲ್ಲಿ.
ನಗರದ ಕೆ.ಹೆಚ್.ಕಲಾಸೌಧದಲ್ಲಿ ‘ನಾಟಕ ಬೆಂಗ್ಳೂರ್’ ಸಂದರ್ಭದಲ್ಲಿ ‘ರೂಪಾಂತರ’ ರಂಗತಂಡ ಈ ಪ್ರದರ್ಶನ ನೀಡಿತು. ಲೇಖಕ ಜಂಬಣ್ಣ ಅಮರಚಿಂತ ಅವರ ‘ಕುರುಮಯ್ಯ ಮತ್ತು ಅಂಕುಶದೊಡ್ಡಿ’ ಕಾದಂಬರಿ ಆಧರಿತ ಈ ನಾಟಕವನ್ನು ರಂಗಕ್ಕೆ ಸಿದ್ಧಪಡಿಸಿ, ನಿದೇರ್ಶಿಸಿದವರು ಸಿದ್ರಾಮ ಕೊಪ್ಪರ.
ಯಾವುದೇ ಹಳ್ಳಿಯಲ್ಲಿನ ಬಡವ-–ಶ್ರೀಮಂತ, ಮೇಲು ಕೀಳುಗಳ ತಾರತಮ್ಯಗಳ ಚಕಮಕಿಯ ವರ್ತುಲದಲ್ಲಿ, ಸಂಭವಿಸಬಹುದಾದ ಅಮಾನವೀಯ ನಡೆ, ಶೋಷಣೆಗಳನ್ನು ಮನಮುಟ್ಟುವ ಘಟನೆಗಳೊಂದಿಗೆ ನಿರೂಪಿಸುವ ನಾಟಕ ಈ ‘ವರಾಹಪುರಾಣ’. ಊರ ಹೊರಗೆ ಕುಲಕಸುಬು ಹಂದಿ ಸಾಕಾಣಿಕೆ, ಬುಟ್ಟಿಹೆಣೆಯುವ ಕಾಯಕದಲ್ಲಿ ತೊಡಗಿ ‘ಬಡವ ನೀ ಮಡಗಿದ ಹಾಗಿರು’ ಎಂಬಂತೆಯೇ ತಮ್ಮಪಾಡಿಗೆ ತಾವಿದ್ದರೂ ಕೊರವ ಜನಾಂಗದ ಜನರಿಗೆ ಉಳಿಗಾಲವಿಲ್ಲ.
ಅವರದೇ ಆದ ಅನೇಕ ಸಾಂಸಾರಿಕ ಸಮಸ್ಯೆ, ಮೌಢ್ಯ ಆಚರಣೆ, ಅನಾಹುತಗಳ ಘಟನೆಗಳ ಮಧ್ಯೆ ತಡಬಡಾಯಿಸುತ್ತಿದ್ದವರ ಬದುಕು ಉಳ್ಳವರ ದೌರ್ಜನ್ಯ, ಸ್ವಾರ್ಥಗಳ ಪೆಟ್ಟಿನಿಂದ ಹೈರಾಣಾಗುತ್ತದೆ. ಮಾಲೀಕರು ಎಸಗುವ ದೌರ್ಜನ್ಯ, ರಾಜಕೀಯದ ದೊಂಬರಾಟದಲ್ಲಿ ಇವರ ಬದುಕು ಎತ್ತಂಗಡಿಯಾಗುವ ವಿಪರ್ಯಾಸದ ಚಿತ್ರಣವನ್ನು, ಶೋಷಣೆಯ ಪರಮಾವಧಿಯನ್ನು ನಾಟಕ ಹೃದಯ ಸ್ಪರ್ಶಿಯಾಗಿ ಕಟ್ಟಿಕೊಡುತ್ತದೆ.
ಕೀಳುಜಾತಿಯೆಂದು ದಮನಿಸಲ್ಪಟ್ಟ ಇವರ ಸೇವೆ, ದುಡಿತಗಳಿಗೆ ಮಾತ್ರ ಮೈಲಿಗೆ, ಹೊಲಸಿನ ಲೇಪನವಿಲ್ಲ, ಬೆವರಿನ ಬೆಲೆಗೆ ದುರ್ಗಂಧವಿಲ್ಲ ಎನ್ನುವ ತಾತ್ಪರ್ಯ ಹೊಮ್ಮಿಸುವ ಈ ಕಥಾನಕದ ನೆಲೆಗಟ್ಟು ಶಕ್ತಿಶಾಲಿಯಾಗಿದೆ. ಕೊರವರ ಜನಜೀವನ, ಸಂಸ್ಕೃತಿ, ನೋವು ನಲಿವುಗಳನ್ನು ಅನಾವರಣಗೊಳಿಸುತ್ತ, ಅವರ ಶೋಷಣೆಯನ್ನು ಎಳೆಎಳೆಯಾಗಿ ಬಿಚ್ಚಿಡುವ ಕರುಳಿರಿವ ಸತ್ವಯುತ ಕಥೆಯ ಹಂದರದ ಮೇಲೆ ನಾಟಕ ರೂಪಿತವಾಗಿರುವುದರಿಂದ ಪ್ರದರ್ಶನ ಪರಿಣಾಮಕಾರಿಯಾಗಿತ್ತು.
ಕೊರವರದೊಡ್ಡಿಯ ನೈಜ ಚಿತ್ರಣ ಕಣ್ಣಿಗೆ ಕಟ್ಟುವಂತೆ ರೂಪಿಸಲಾಗಿದ್ದ ರಂಗಸಜ್ಜಿಕೆ (ಕೆಎಸ್‌ಡಿಎಲ್ ಚಂದ್ರು)ಯ ಆವರಣದೊಳಗೆ ಬಹು ಸಹಜ ರೀತಿಯಲ್ಲಿ ಘಟನೆಗಳು ಬಿಚ್ಚಿಕೊಳ್ಳುತ್ತ ಸಾಗಿ ಕಥೆಗೆ ಒಳ್ಳೆಯ ‘ಟೆಂಪೋ’ ಸೃಷ್ಟಿಯಾಗಿತ್ತು. ಕೊರವರ ಓಣಿಯ ಜನಗಳೆಲ್ಲ ಎಷ್ಟು ಸಹಜವಾಗಿ ನಡೆದುಕೊಳ್ಳುತ್ತಿದ್ದರೆಂದರೆ ಅವರೆಲ್ಲ ಪಾತ್ರಧಾರಿಗಳೆನಿಸಲೇ ಇಲ್ಲ.
ಅವರುಟ್ಟ ಬಟ್ಟೆ-ಬರೆ, ಮೇಕಪ್ಪು ಥೇಟ್ ಅವರೆಲ್ಲ ಹಂದಿ ಹಿಡಿಯಲು ಹೆಣಗುತ್ತ, ಹೊಲಸಲ್ಲಿ ಉರುಳಾಡಿದ, ಮಸಿ ಹತ್ತಿಸಿಕೊಂಡ ಬಡಬಗ್ಗರೇ ಎನಿಸುವಂತಿತ್ತು.‌ಉತ್ತರ ಕರ್ನಾಟಕದ ಭಾಷೆಯ ಸೊಗಡು, ಬೈಗಳು, ಒರಟುತನ ಅವರ ಪರಿಸರದ ಸಂಸ್ಕೃತಿಯನ್ನು ಪರಿಚಯಿಸುತ್ತ ಕಥಾನಕ ಇನ್ನಷ್ಟು ಪರಿಣಾಮಕಾರಿಯಾಯ್ತು.
ಕ್ಷಯರೋಗಿ ಗಂಡನನ್ನು ಬಿಟ್ಟು ಕಟ್ಟಾಮಸ್ತಾದ ಆಸಾಮಿಯ ಸಂಗಮಾಡಿ ಸಿಕ್ಕಿಬಿದ್ದ ಗುಡ್ಡೆಮ್ಮನ ಪೇಚಿನ ಪ್ರಸಂಗ, ಹಟ್ಟಿಜನಗಳ ನಾನಾ ಪ್ರತಿಕ್ರಿಯೆ, ಪಂಚಾಯಿತಿಕಟ್ಟೆಯ ತೀರ್ಮಾನದ ಅಂಕಗಳು ಸ್ವಾರಸ್ಯಕರವಾಗಿತ್ತು. ಏನೇ ಘಟನೆಗಳು ಸಂಭವಿಸಲಿ ಅದಕ್ಕೆ ಹಟ್ಟಿ ಮಂದಿಯ ಎಗರಾಟದ ಸಾಮೂಹಿಕ ಪ್ರತಿಕ್ರಿಯೆ, ಅನಂತರ ತಣ್ಣಗೆ ಸ್ವೀಕರಿಸುವ ಜಾಯಮಾನಗಳನ್ನು ನಾಟಕ ಸೂಕ್ಷ್ಮವಾಗಿ ಚಿತ್ರಿಸುವುದರಲ್ಲಿ ಯಶಸ್ವಿಯಾಯಿತು. ಕೈಯಿಂದ ಕೈಗೆ ಬದಲಾಗುವ ಹೆಣ್ಣಿನ ಅಭದ್ರ ಪರಿಸ್ಥಿತಿಗೆ ರೂಪಕದಂತಿದ್ದ ಗುಡ್ಡೆಮ್ಮಳ ಪಾತ್ರಚಿತ್ರಣ ಮನಕಲಕುವಂತಿತ್ತು.
ಮೇಲ್ನೋಟಕ್ಕೆ ರೂಕ್ಷ ಭಾವನೆಗಳ ಅಭಿವ್ಯಕ್ತಿ, ಪೆಡಸುನಡೆಯಂತೆ ತೋರುತ್ತಿದ್ದ ಆ ಜನಗಳ ಮೃದು ಮನಸ್ಸಿನ ಧೋರಣೆಗಳೂ ಗುಪ್ತಗಾಮಿನಿಯಾಗಿ ಸ್ರವಿಸುತ್ತಿದ್ದುದನ್ನು ಗಮನಿಸಬಹುದಿತ್ತು. ಕಥೆಯ ಇಷ್ಟೆಲ್ಲ ಸಂಕೀರ್ಣ ಸನ್ನಿವೇಶಗಳ ಸರಮಾಲೆಯ ನಡುವೆ ಮನಕಲಕಿದ್ದು ಪರಿತ್ಯಕ್ತ ಹೆಣ್ಣು ತನ್ನ ಮೊದಲ ಗಂಡನ ಹೊಟ್ಟೆಯ ಹಸಿವೆಗಾಗಿ ಮಿಡುಕಿದ್ದು, ತನ್ನ ಹಸುಗೂಸಿಗಾಗಿ ಹಂಬಲಿಸಿದ್ದು, ಹಣಕ್ಕಾಗಿ ಮುದಿ ಶ್ರೀಮಂತನ ವಸ್ತುವಾಗಲೊಲ್ಲದೆ ಕ್ರೂರಿ ಗಂಡನ ಕಾಲು ಕಟ್ಟಿಕೊಂಡು ಮನಕರಗುವಂತೆ ಬೇಡಿಕೊಂಡ ದೃಶ್ಯಗಳು.
ಅವಳು ತನ್ನ ಕಂದನೊಡನೆ ಬಾವಿಗೆ ಹಾರಿಕೊಂಡಾಗ ಹಟ್ಟಿಯ ಮುದಿ ಹೆಂಗಸರಿಬ್ಬರು ಎದೆಬಡಿದುಕೊಂಡು ರಾಗವಾಗಿ ಅತ್ತ ದೃಶ್ಯ ದುಃಖ ತೋರ್ಪಡಿಕೆಯ ನೋಟಕ್ಕೆ ಕನ್ನಡಿಯಾಗಿತ್ತು. ಈ ಭಾಗದಲ್ಲಿ ಅವರಿಬ್ಬರ ಅಭಿನಯವಂತೂ ಅಮೋಘ. ಹನುಮಕ್ಕನ (ಸಿತಾರ) ಸಿಟ್ಟು, ಅಕ್ಕರೆ, ಕರುಣೆಯ ಭಾವನೆಗಳ ಅಭಿವ್ಯಕ್ತಿ ಅಪ್ಪಟ ಹಳ್ಳಿಯ ಹೆಂಗಸಿನ ಎರಕದಲ್ಲಿತ್ತು. ನೆಟಿಕೆ ಮುರಿಯುವುದು, ಮಣ್ಣುತೂರಿ ಬಾಯಿಂದ ಮೌನಭಾಷೆಯಲ್ಲಿ ಹಿಡಿ ಶಾಪಹಾಕುವ ನಟನೆ ಅತ್ಯುತ್ತಮವಾಗಿತ್ತು.
ಹಿನ್ನಲೆಯಲ್ಲಿ ವಿಷಾದಭಾವ ಕೆನೆಗಟ್ಟುವಂತೆ ಮೂಡಿಬರುತ್ತಿದ್ದ ‘ಸಿಗ್ನೇಚರ್ ಹಾಡು’ (ಸಂಗೀತ -ರಾಮಚಂದ್ರ ಹಡಪದ) ನಾಟಕದ ಭಾವತೀವ್ರತೆಗೆ ಪುಷ್ಟಿನೀಡಿತ್ತು. ಅದಕ್ಕೆ ತಕ್ಕಂತೆ ರಂಗದಮೇಲೆ ಚಲಿಸುತ್ತಿದ್ದ ಪೆಟ್ರೊಮ್ಯಾಕ್ಸ್ ಹೊತ್ತ ಯುವಕರ ಸಾಲು ಅವರ ಅಸಹಾಯಕತೆಯನ್ನು ಪ್ರತಿನಿಧಿಸುವಂತೆ ಸಾಂಕೇತಿಕವಾಗಿದ್ದು ಅರ್ಥಪೂರ್ಣವೆನಿಸಿತ್ತು. ಇಡೀ ನಾಟಕ ಸಹಜತೆಯ ನೆಲೆಯಲ್ಲಿ ಸಾಗಿದ್ದರಿಂದ ಪ್ರತಿಯೊಬ್ಬ ನಟರಿಗೂ ಇದರ ಯಶಸ್ಸು ಸಲ್ಲಬೇಕು.
ತಾಂಡ್ಯದ ವೃದ್ಧನಾಯಕ (ಕುರುಮಯ್ಯ-ಸೂರ್‍ಯಕಾಂತ ಗುಣಕೀಮಠ) ತಮ್ಮ ನುರಿತ ಸಹಜ ನಟನೆಯಿಂದ ಪಾತ್ರಕ್ಕೆ ಜೀವತುಂಬಿ ಮನಸೂರೆಗೊಂಡರೆ, ಗೌಡ (ಹರೀಶ್) ಸೊಗಸಾದ ಅಭಿನಯ, ಆಂಗಿಕಭಾಷೆಯಿಂದ ಗಮನಾರ್ಹರಾದರು. ಸಾಂಶಲಪ್ಪ (ಅಜಯ್), ಮಾರ್‍ಯ (ಯಶವಂತ್), ಗುಡ್ಡೆಮ್ಮ (ಮಹಾಲಕ್ಷ್ಮಿ), ಜಂಬಲಮ್ಮ (ಸುಧಾ ಪೂಜಾರಿ) ಮುಂತಾದವರು ಉತ್ತಮವಾಗಿ ನಟಿಸಿದರು. ಬೆಳಕು ಮಂಜು ನಾರಾಯಣ್ ಕೆಲಸ ಅಚ್ಚುಕಟ್ಟಾಗಿತ್ತು. ನಿರ್ದೇಶಕ ಸಿದ್ರಾಮಕೊಪ್ಪರವರ ನಿರ್ದೇಶನ ಹರಿತವಾಗಿದ್ದು ತನ್ನ ಉತ್ತಮಿಕೆಯನ್ನು ತೋರಿತ್ತು.

Write A Comment