ಇದು ಯಾವುದೇ ಗ್ರಂಥಾಲಯವೂ ಅಲ್ಲ, ಸರ್ಕಾರಿ ಕಚೇರಿಯೂ ಅಲ್ಲ. ನಮ್ಮ ನಿಮ್ಮೆಲ್ಲರ ಮನೆಗಳಂತೆ ಇರುವ ಒಂದು ಮಾಮೂಲಿ ಮನೆ. ಆದರೆ, ಈ ಮನೆಯ ಮೊದಲ ಮಹಡಿಯ ಎರಡು ಕೋಣೆಗಳು ಸಂಪೂರ್ಣವಾಗಿ ಪುಸ್ತಕ ಹಾಗೂ ಕಡತಗಳಿಂದ ತುಂಬಿ ಹೋಗಿವೆ. ಅದರಲ್ಲೂ ರಂಗಭೂಮಿಗೆ ಸೇರಿದ ಎಲ್ಲ ಮಾಹಿತಿಯೂ ಇಲ್ಲಿ ಲಭ್ಯ. ಇದರ ಜೊತೆಗೆ ಇತರ ಪ್ರದರ್ಶನ ಕಲೆಗೆ ಸಂಬಂಧಿಸಿದ ವಿವರಗಳೂ ಇಲ್ಲಿ ಇದೆ. ಇದನ್ನು ರಂಗಭೂಮಿ ಹಾಗೂ ಇತರ ಪ್ರದರ್ಶನ ಕಲೆಗಳ ಮಾಹಿತಿ ಕಣಜ ಎಂದರೂ ತಪ್ಪಾಗಲಾರದು.
ಇಂತಹ ಹಲವು ವೈಶಿಷ್ಟ್ಯತೆಗಳಿಂದ ಕೂಡಿದ ನಿವಾಸ ಮಲ್ಲೇಶ್ವರದ ಹದಿನಾಲ್ಕನೇ ಅಡ್ಡರಸ್ತೆಯಲ್ಲಿ ಇದೆ. ಅದರ ಹೆಸರು ‘ನೈಮಿಷಾ’. ಅಂದಹಾಗೆ ಇಷ್ಟೆಲ್ಲ ಮಾಹಿತಿ ಸಂಗ್ರಹಿಸಿದವರು ರಂಗನಿರ್ದೇಶಕ ಎಚ್.ವಿ. ವೆಂಕಟಸುಬ್ಬಯ್ಯನವರು.
ರಂಗಭೂಮಿ ಬೆಳೆದು ಬಂದ ಬಗೆ, ಧ್ವನಿ, ಬೆಳಕು, ವಿನ್ಯಾಸ, ನಟನೆ, ನಿರ್ದೇಶನ, ಪಾಶ್ಚಿಮಾತ್ಯ ರಂಗಭೂಮಿಯ ಸ್ವರೂಪ ಹೀಗೆ ರಂಗಕ್ಕೆ ಸಂಬಂಧಿಸಿದ ಹತ್ತು ಹಲವು ವಿಷಯಗಳನ್ನು ಒಳಗೊಂಡ ಪ್ರತ್ಯೇಕ ಕಡತಗಳನ್ನು ಮಾಡಿ ಅವುಗಳನ್ನು ಶಿಸ್ತುಬದ್ಧವಾಗಿ ವೆಂಕಟಸುಬ್ಬಯ್ಯನವರು ಜೋಡಿಸಿಟ್ಟಿದ್ದಾರೆ. ಯಾರಿಗಾದರೂ ಯಾವುದೇ ಮಾಹಿತಿ ಬೇಕಾದರೆ ಕ್ಷಣಾರ್ಧದಲ್ಲಿ ತಂದುಕೊಡುತ್ತಾರೆ.
‘ಇದು ನನ್ನ ತಿಪ್ಪೆ. ಈ ತಿಪ್ಪೆಯಲ್ಲಿ ರಂಗಭೂಮಿ ಸೇರಿದಂತೆ ಇತರ ಕಲೆಗಳ ಕುರಿತಂತೆ ಯಾರಿಗಾದರೂ ಏನಾದರೂ ಮಾಹಿತಿ ಬೇಕಿದ್ದರೆ ಅಂತಹವರಿಗೆ ಉಪಯೋಗವಾಗಲಿ ಎಂಬ ಕಾರಣಕ್ಕಾಗಿ ನನಗೆ ಸಿಕ್ಕಿರುವುದೆಲ್ಲವನ್ನೂ ಸಂಗ್ರಹಿಸಿ ಇಟ್ಟಿದ್ದೇನೆ’ ಎಂದು ಅದರ ಹಿಂದಿನ ಮರ್ಮವನ್ನು ಬಿಚ್ಚಿಡುತ್ತಾರೆ ವೆಂಕಟಸುಬ್ಬಯ್ಯನವರು.
ಅಂದಹಾಗೆ ಈ ವಿಶೇಷ ಆಸಕ್ತಿಗೆ ಪ್ರಮುಖ ಕಾರಣ ಬಾಲ್ಯದ ದಿನಗಳಿಂದ ರಂಗಭೂಮಿ ಬಗ್ಗೆ ಅವರಿಗಿದ್ದ ಒಲವು. ಇದನ್ನು ಅವರು ಕಾಲೇಜು ದಿನಗಳಲ್ಲಿ ತಾಂತ್ರಿಕ ವಿದ್ಯಾಭ್ಯಾಸದ ಜೊತೆಗೂ ಮುಂದುವರೆಸಿಕೊಂಡು ಬಂದರು. ಆದರೆ, ಯಾವಾಗ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ.ಆರ್.ಡಿ.ಒ) ಎಲೆಕ್ಟ್ರಾನಿಕ್ಸ್ ಅಂಡ್ ರಡಾರ್ ಡೆವಲಪ್‌ಮೆಂಟ್ ಎಸ್ಟ್ಯಾಬ್ಲಿಷ್‌ಮೆಂಟ್ (ಎಲ್.ಆರ್.ಡಿ.ಇ) ತಾಂತ್ರಿಕ ವಿಭಾಗದಲ್ಲಿ ನೌಕರಿಗೆ ಸೇರಿದ್ದರೊ ರಾಷ್ಟ್ರೀಯ ನಾಟಕ ಶಾಲೆ (ಎನ್.ಎಸ್.ಡಿ) ಸೇರಬೇಕೆಂಬ ಅವರ ಕನಸು ಈಡೇರಲಿಲ್ಲ. ಆಗ ಇನ್ನೇನು ರಂಗಭೂಮಿ ಜೊತೆಗಿನ ನಂಟು ಕಳಚಿ ಹೋಯಿತು ಅಂದುಕೊಳ್ಳುತ್ತಿರುವಾಗಲೇ ಸಂಸ್ಥೆಯಲ್ಲಿ ಮತ್ತೆ ರಂಗದೊಂದಿಗೆ ಒಡನಾಟ ಬೆಳೆಸಿಕೊಳ್ಳುವ ಅವಕಾಶ ಒಲಿದು ಬಂತು.
ವೆಂಕಟಸುಬ್ಬಯ್ಯನವರು ಸೌಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಸ್ಥೆಯಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಾಟಕಕ್ಕೆ ಸಂಬಂಧಿಸಿದಂತೆ ಬೆಳಕು, ವಿನ್ಯಾಸ ಸೇರಿದಂತೆ ಇತರ ಕೆಲಸಗಳನ್ನು ನೋಡಿಕೊಳ್ಳಲು ತಂಡವೊಂದಿತ್ತು. ಆ ತಂಡದಲ್ಲಿ ವೆಂಕಟಸುಬ್ಬಯ್ಯನವರನ್ನು ಸೇರಿಸಿಕೊಳ್ಳಲಾಯಿತು. ಆಗ ಪರಿಣತರ ಜೊತೆ ಕೆಲಸ ನಿರ್ವಹಿಸಿದ್ದರಿಂದ ರಂಗದ ವಿನ್ಯಾಸ, ಬೆಳಕು, ನಟನೆ ಸೇರಿದಂತೆ ಹಲವು ವಿಷಯಗಳ ಕುರಿತಂತೆ ತಿಳಿದುಕೊಳ್ಳಲು ಸಹಾಯವಾಯಿತು.
ನಟನೆಗೂ ನಿರ್ದೇಶನಕ್ಕೂ ಸೈ
ವೆಂಕಟಸುಬ್ಬಯ್ಯನವರು ಪ್ರಾರಂಭದಲ್ಲಿ ಎಲ್ಲ ಚಟುವಟಿಕೆಗಳನ್ನು ರಂಗದ ಹಿಂದೆ ನಿಂತೇ ನಿರ್ವಹಿಸುತ್ತಿದ್ದರು. ಅವರು ಪ್ರಮುಖವಾಗಿ ಬೆಳಕು ಹಾಗೂ ವಿನ್ಯಾಸದ ಹೊಣೆ ಹೊತ್ತಿದ್ದರು. ಸುಮಾರು ಹತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಈ ಕೆಲಸ ಮಾಡಿದ ಅವರು, ೧೯೫೩ರಲ್ಲಿ ‘ಗದಾಯುದ್ಧ’ ನಾಟಕದ ಮೂಲಕ ನಟನೆಗೂ ಕಾಲಿಟ್ಟರು. ‘ಗಂಡಸಲ್ವೇ ಗಂಡ್ಸು’, ‘ಗುಮಾಸ್ತ’, ‘ಸಾಹುಕಾರ’, ‘ಮೀನಾ ಮದುವೆ’, ‘ಯಮನ ಸೋಲು’ ಹೀಗೆ ಇಪ್ಪತ್ತಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಇದಲ್ಲದೇ ‘ಯಮನ ಸೋಲು’, ‘ಸುಂದ್ರೋಪಸುಂದ್ರು’, ‘ಏಕೀಕರಣ’, ‘ಸಮಗ್ರ ಮಂಥನ’ ‘ಉತ್ತಮ ಪ್ರಭುತ್ವ’, ‘ಲೊಳಲೊಟ್ಟೆ’, ‘ಮಹಾಪ್ರಸ್ಥಾನ’ ನಾಟಕಗಳನ್ನು ನಿರ್ದೇಶಿಸಿ ರಂಗಭೂಮಿಯಲ್ಲಿ ವಿಶೇಷ ಛಾಪು ಮೂಡಿಸಿದರು.
‘ಮಹಾಪ್ರಸ್ಥಾನ’, ‘ಸಮಗ್ರ ಮಂಥನ’ ನಾಟಕಗಳಂತೂ ಅವರಿಗೆ ಅಪಾರ ಹೆಸರು ತಂದುಕೊಟ್ಟವು. ಚಿಕ್ಕಮಗಳೂರಿನಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ನಾಟಕವನ್ನು ಬೀದಿಗಳಲ್ಲಿ ಪ್ರದರ್ಶಿಸಿದರು. ಇದು ಪ್ರಭುತ್ವ ವಿರೋಧಿ ನಾಟಕವಾಗಿತ್ತು. ಇದರ ಜೊತೆಗೇ ಕನ್ನಡ ರಂಗಭೂಮಿಯ ಕಂಪನ್ನು ನಾಡಿನಾಚೆಗೂ ಪಸರಿಸಿದರು. ನವದೆಹಲಿಯಲ್ಲಿ ನಡೆದ ನಾಟಕೋತ್ಸವದಲ್ಲಿ ‘ಶ್ರೀರಂಗರ’ ನಾಟಕಗಳು ಹಾಗೂ ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಾಟಕ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ರಂಗಭೂಮಿಯ ಜೊತೆಗೆ ಚಿತ್ರಕಲೆ, ಫೋಟೊಗ್ರಫಿ ಹಾಗೂ ಕವನ ಬರೆಯುವುದು ವೆಂಕಟಸುಬ್ಬಯ್ಯನವರ ಇತರ ಹವ್ಯಾಸ. ‘ವನ್ ಡೇ ಮಾತರಂ’ ಹಾಗೂ ‘ಬನದ ಹೂ’ ಅವರ ಕವನ ಸಂಕಲನಗಳು. ಪದ್ಯಗಳನ್ನು ಅವರು ‘ಸಾರಂಗ’ ಹೆಸರಿನಲ್ಲಿ ಬರೆದಿದ್ದಾರೆ. ಮಯೂರ ಫಿಲ್ಮ್ ಸೊಸೈಟಿ ಜೊತೆ ಸೇರಿ ಇವರು ಮಾಡಿದ್ದ ‘ಕಂಕಣ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿಯೂ ಬಂದಿದೆ.
ಕ್ರಿಯಾಶೀಲ ವ್ಯಕ್ತಿತ್ವ
ವಯಸ್ಸು ೭೯ ಆಗಿದ್ದರೂ ಇಂದಿಗೂ ಅವರು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ. ರಂಗಭೂಮಿಗೆ ಸಂಬಂಧಿಸಿದ ಯಾವುದೇ ಹೊಸ ವಿಷಯ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡರೆ ಅದನ್ನು ಕತ್ತರಿಸಿ ಫೈಲ್‌ಗಳಲ್ಲಿ ಜೋಡಿಸಿಡುತ್ತಾರೆ. ಮುಂದಿನ ತಲೆಮಾರಿನವರಿಗೆ ಇದರ ಉಪಯೋಗವಾಗಲಿ ಎಂಬುದು ಅವರ ಸದಾಶಯ.
ಸೇವೆಗೆ ಸಂದ ಗೌರವ
ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಇವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ನಾಟಕ ಅಕಾಡೆಮಿ, ಮಾನು ಪ್ರತಿಷ್ಠಾನ, ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟ, ಭಾರತ ಯಾತ್ರಾ ಕೇಂದ್ರ, ಅಂತರಂಗ ಸಂಸ್ಥೆ, ರಂಗಪ್ರಪಂಚ, ನಾಟಕ ಮನೆ ರಂಗ ಪುರಸ್ಕಾರ, ನಾಟ್ಯಶ್ರೀ ಪ್ರಶಸ್ತಿ ಇವುಗಳಲ್ಲಿ ಪ್ರಮುಖವಾದವು.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಹಂಪಾಪುರದಲ್ಲಿ ೧೯೩೬ರಲ್ಲಿ ಜನಿಸಿದ ವೆಂಕಟಸುಬ್ಬಯ್ಯನವರಿಗೆ ಜೀವನದ ವಿವಿಧ ಹಂತಗಳಲ್ಲಿ ನಿರಂತರವಾಗಿ ರಂಗಭೂಮಿ ಜೊತೆ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ಅದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಂತರ ಮತ್ತಷ್ಟು ಗಟ್ಟಿಯಾಯಿತು. ‘ನಾಟ್ಯರಂಗ’ ಸಂಸ್ಥೆಯಲ್ಲಿ ನಟನೆಯ ತರಬೇತಿ ಪಡೆದಿದ್ದ ಪತ್ನಿ ಶಾರದಾ ಅವರಿಗೂ ರಂಗಭೂಮಿ ಬಗ್ಗೆ ವಿಶೇಷ ಒಲವು. ಅಂದಹಾಗೆ ಅವರ ಪತ್ನಿ ವೃತ್ತಿಯಿಂದ ಹೋಮಿಯೊಪತಿ ವೈದ್ಯೆ.
ವಿವಿಧೆಡೆ ಸೇವೆ
ವೆಂಕಟಸುಬ್ಬಯ್ಯನವರು ನಟನೆ, ನಿರ್ದೇಶನದ ಜೊತೆಗೆ ಕೇರಳದ ಕ್ಯಾಲಿಕಟ್, ತೆಲಂಗಾಣದ ಉಸ್ಮಾನಿಯಾ, ಮೈಸೂರಿನ ಫೈನ್ ಆರ್ಟ್ಸ್ ಕಾಲೇಜು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
ನಾಟಕಕ್ಕೆ ಸಂಬಂಧಿಸಿದ ಡಿಪ್ಲೋಮಾ ಕೋರ್ಸ್ ಪಠ್ಯಪುಸ್ತಕ ಸಮಿತಿಯಲ್ಲಿ ವಿಷಯ ತಜ್ಞ ಹಾಗೂ ಕೇಂದ್ರ ಸಂಗೀತ ನಾಟಕ ವಿಭಾಗಕ್ಕೆ ಕಲಾವಿದರ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
‘ಶ್ರೀರಂಗರಿಗೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿ ಸಂಗ್ರಹಿಸಿ, ಅದರಲ್ಲಿ ನನ್ನ ಅನುಭವಗಳನ್ನು ದಾಖಲಿಸಿ ಪುಸ್ತಕ ಹೊರತರುವ ಯೋಚನೆ ಇದೆ’ ಎಂದು ಭವಿಷ್ಯದ ಯೋಜನೆಯನ್ನು ತೇಲಿಬಿಡುತ್ತಾರೆ.
ಮನೋರಂಜನೆ
