ನವದೆಹಲಿ: ‘ಭಾರತೀಯರು ವಿದೇಶಗಳಲ್ಲಿರುವ ಇರಿಸಿರುವ ಎಲ್ಲ ಕಪ್ಪುಹಣವನ್ನು ಹೊರಗೆಳೆದರೆ ದೇಶದ ಪ್ರತಿಯೊಬ್ಬ ಪ್ರಜೆಗೂ ₨ 15 ಲಕ್ಷ ನೀಡಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ವೇಳೆ ಹೇಳಿದ್ದು ಹಲವರು ಮಾಡಿರುವ ಅಂದಾಜುಗಳನ್ನು ಆಧರಿಸಿದ ಅಂಕಿ ಅಂಶ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸಮರ್ಥಿಸಿಕೊಂಡಿದೆ.
ಮೋದಿ ಅವರ ಈ ಹೇಳಿಕೆ ಸಂಬಂಧ ಕೇಳಿಬಂದಿರುವ ಪ್ರಶ್ನೆಗಳಿಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿ ಹೀಗೆ ಹೇಳಿದರು.
ವಿವಿಧ ತನಿಖಾ ಸಂಸ್ಥೆಗಳು ಇದುವರೆಗೆ ವಿದೇಶಗಳಲ್ಲಿ ಇರಿಸಿರುವ ₨ 3250 ಕೋಟಿ ಮೊತ್ತಕ್ಕೆ ತೆರಿಗೆ ವಂಚನೆ ಆಗಿರುವುದನ್ನು ಪತ್ತೆ ಹಚ್ಚಿವೆ. ಈ ಪ್ರಕರಣಗಳಲ್ಲಿ ವಂಚಕರ ವಿರುದ್ಧ ಈಗಾಗಲೇ ಕಾನೂನು ಕ್ರಮ ಆರಂಭಿಸಲಾಗಿದೆ ಎಂದರು.
‘ನಮ್ಮ ದೇಶದ ಪ್ರಜೆಗಳು ವಿದೇಶಗಳಲ್ಲಿ ಇರಿಸಿರುವ ಕಪ್ಪುಹಣದ ಮೊತ್ತ ಎಷ್ಟಿರಬಹುದೆಂಬ ಬಗ್ಗೆ ಹಲವು ಸಂಸ್ಥೆಗಳು/ ವ್ಯಕ್ತಿಗಳಿಂದ
ಲೆಕ್ಕಾಚಾರ ನಡೆದಿದೆ. ಈ ಅಂದಾಜುಗಳಲ್ಲಿ ಯಾವುದನ್ನೇ ಸರಿ ಎಂದು ಒಪ್ಪಿಕೊಂಡರೂ ಕಪ್ಪುಹಣವನ್ನೆಲ್ಲಾ ವಾಪಸ್ ತಂದ ಪರಿಸ್ಥಿತಿಯಲ್ಲಿ ಪ್ರತಿ ಪ್ರಜೆಗೆ ₨ 15 ಲಕ್ಷ ಬರುತ್ತದೆ. ಹಲವರು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಮೋದಿ ಅವರು ನೀಡಿದ್ದ ಹೇಳಿಕೆಯನ್ನು ಕೂಡ ಅಂತಹುದೇ ಒಂದು ಸಾಂದರ್ಭಿಕ ಹೇಳಿಕೆ ಎಂದು ಪರಿಗಣಿಸಬೇಕು’ ಎಂದರು.
ಸ್ವೀಡನ್ನಿನ ಎಚ್‌ಎಸ್‌ಬಿಸಿ ಬ್ಯಾಂಕ್ ಪಟ್ಟಿಯಲ್ಲಿರುವ 628 ಕಪ್ಪುಹಣ ಖಾತೆದಾರರ ವಿರುದ್ಧ ಕಾನೂನು |ಕ್ರಮ ಜರುಗಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಈಗಾಗಲೇ ತೆರಿಗೆಯನ್ನು ಕಟ್ಟಿಸಿಕೊಳ್ಳಲಾಗಿದೆ. ಉಳಿದಿರುವವರ ಅಂದಾಜನ್ನು ಮಾರ್ಚ್ 31ರೊಳಗೆ ಪತ್ತೆಹಚ್ಚಲು ಗಡುವು ಹಾಕಿಕೊಳ್ಳಲಾಗಿದೆ.
ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆದಾರರಾಗಿದ್ದು ಆ ಬಗ್ಗೆ ನಮಗೆ ಮಾಹಿತಿ ನೀಡದೆ ತೆರಿಗೆ ವಂಚಿಸುವವರ ವಿರುದ್ಧ ಕ್ರಮ
ಜರುಗಿಸುವಿಕೆ ಈಗಾಗಲೇ ಆರಂಭವಾಗಿದೆ.
ದಾಖಲಾತಿಗಳಿಗಾಗಿ ಶೋಧನೆ, ಶಂಕಿತ ಖಾತೆದಾರರನ್ನು ಪ್ರಶ್ನೆಗಳಿಗೆ ಒಳಪಡಿಸುವಿಕೆ, ಆದಾಯದ ಅಂದಾಜು, ತೆರಿಗೆ ವಿಧಿಸುವಿಕೆ, ದಂಡ ವಿಧಿಸುವಿಕೆ, ವಿಚಾರಣೆಗೆ ಗುರಿ ಪಡಿಸುವಿಕೆ ಇತ್ಯಾದಿಗಳನ್ನು ಈ ಕ್ರಮ ಒಳಗೊಂಡಿದೆ.
ಆದರೆ ಭಾರತೀಯರು ಹೀಗೆ ವಿದೇಶಿ ಬ್ಯಾಂಕುಗಳಲ್ಲಿ ಖಾತೆ ಹೊಂದುವುದನ್ನು ನಿಷೇಧಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ
– ಅರುಣ್ ಜೇಟ್ಲಿ