ಸೌಂದರ್ಯದ ರಕ್ಷಣೆ ಮಾಡಿಕೊಳ್ಳುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸೌಂದರ್ಯ ಕಾಪಾಡಿಕೊಳ್ಳುವುದು ಕೇವಲ ಹೆಣ್ಣು ಮಕ್ಕಳಿಗೆ ಸೀಮಿತವಲ್ಲ. ಗಂಡಸರು ಕೂಡ ತಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಹೆಣ್ಣು ಮಕ್ಕಳಿಗೆ ಸರಿಸಾಟಿಯಾಗಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಮಾಡಬೇಕಾದ ಎಲ್ಲ ರೀತಿಯ ಕಸರತ್ತುಗಳನ್ನೂ ಮಾಡುತ್ತಾ ಬಂದಿದ್ದಾರೆ. ಆದ್ದರಿಂದಲೇ ಹಿಂದಿನಿಂದಲೂ ಸೌಂದರ್ಯ ವರ್ಧಕಗಳು ಹಾಗೂ ಸೌಂದರ್ಯ ತಜ್ಞರಿಗೆ ಎಲ್ಲಿಲ್ಲದ ಬೇಡಿಕೆ.
ಪ್ರಕೃತಿದತ್ತವಾಗಿ ಆನುವಂಶಿಕ ಬಳುವಳಿಯಾಗಿ ಬಂದ ದೇಹದ ಆಕಾರವನ್ನು ಹೊರತುಪಡಿಸಿ ಉಳಿದೆಲ್ಲಾ ರೀತಿಯ ವಿರೂಪಗಳನ್ನು ಸುರೂಪಗೊಳಿಸುವ ತಂತ್ರಜ್ಞಾನ, ವಿಜ್ಞಾನ ಇಂದು ಲಭ್ಯ. 19 ವರ್ಷದಿಂದ 40 ವರ್ಷದ ಪುರುಷರು ಹಾಗೂ ಮಹಿಳೆಯರು ಬ್ಯೂಟಿ ಪಾರ್ಲರ್‌ಗಳ ಗ್ರಾಹಕರು. ಅದರಲ್ಲೂ ಮುಂಬೈನಂತಹ ಗ್ಲಾಮರ್ ನಗರಿಯಲ್ಲಿ ಗಂಡು ಮಕ್ಕಳೇ ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿ ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ಹಣ ಸುರಿಯುತ್ತಿದ್ದಾರೆ.
ಹಣೆಯಲ್ಲಿನ ನೆರಿಗೆ, ನಕ್ಕಾಗ ಕಾಣಿಸಿಕೊಳ್ಳುವ ನೆರಿಗೆ, ಕಪ್ಪಾಗಿರುವ ಬಣ್ಣವನ್ನು ತಿಳಿಗೊಳಿಸಿಕೊಳ್ಳುವುದು ಹೀಗೆ ತಮಗೆ ಬೇಕಾದ ರೀತಿಯಲ್ಲಿ ರೂಪವನ್ನು ತಿದ್ದಿಕೊಳ್ಳಲು ಹಣ ಇರುವವರು ಆಗಿನಿಂದ ಬ್ಯೂಟಿ ಪಾರ್ಲರ್‌ಗಳ ಮೊರೆಹೋಗುತ್ತಿದ್ದಾರೆ. ಹೀಗಾಗಿಯೇ ಈ ಬ್ಯೂಟಿ ಬ್ಯುಸಿನೆಸ್‌ನಲ್ಲಿ ₹ 800ರಿಂದ ₹ 1000 ಕೋಟಿಯಷ್ಟು ವಾರ್ಷಿಕ ವರಮಾನವಿದೆ. ₹ 3,500 ಕೋಟಿಯಷ್ಟು ವ್ಯವಹಾರ ನಡೆಸುವ ಕಾಸ್ಮೆಟಿಕ್ ಉದ್ಯಮವಿದೆ.
ಇನ್ನು ದೇಹವನ್ನು ಬೇಕಾದ ಆಕಾರಕ್ಕೆ ತರಲು ಜಿಮ್, ಬಾಡಿ ಬಿಲ್ಡಿಂಗ್‌ನಂತಹ ಕಸರತ್ತಿನ ವ್ಯಾಪಾರದಲ್ಲಿ ₹ 1,600 ಕೋಟಿ ವರಮಾನ ಇದೆ. ಒಟ್ಟಾರೆ ಈ ಉದ್ಯಮದಲ್ಲಿ ₹ 6 ಸಾವಿರ ಕೋಟಿ ವ್ಯವಹಾರ ನಡೆಯುತ್ತಿತ್ತು. ಕೇವಲ ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿದ್ದ ಖಾಸಗಿ ಕಂಪೆನಿಗಳು ನಂತರದಲ್ಲಿ ತಮ್ಮದೇ ಆದ ಬ್ಯೂಟಿ ಸಲೂನ್ ಹಾಗೂ ಪಾರ್ಲರ್‌ಗಳನ್ನು ತೆರೆದವು.
ಹಿಂದೆ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದ ‘ಆಫ್‌ಘಾನ್ ಸ್ನೋ’ ಮಹಿಳೆಯರ ಅಚ್ಚುಮೆಚ್ಚಿನ ಪಾರ್ಲರ್ ಆಗಿತ್ತು. ನಂತರ ಬಂದದ್ದು ಲ್ಯಾಕ್ಮೆ, ಶಹನಾಜ್ ಹುಸೇನ್, ಬಯೋಟೆಕ್ ಸಂಸ್ಥೆ, ಕೆವಿನ್ ಕ್ಲೈನ್, ಹಿಂದೂಸ್ತಾನ್ ಲಿವರ್ ಲ–ಒರಿಯಲ್, ಮರಿಕೋ, ವೆಲ್ಲಾ ಇತ್ಯಾದಿ ಸಂಸ್ಥೆಗಳು ಬ್ಯೂಟಿ ಕ್ಲಿನಿಕ್‌ಗಳನ್ನು ತೆರೆದವು.
ಬೆಂಗಳೂರಿನ ದಂಡು ಪ್ರದೇಶದಲ್ಲಿ 1970ರ ಹೊತ್ತಿಗೆ ಈವ್ಸ್ ಬ್ಯೂಟಿ ಪಾರ್ಲರ್ ಪ್ರಾರಂಭವಾಗಿತ್ತು. 1972ರ ಹೊತ್ತಿಗೆ ಲೀಂಗ್ ಬ್ಯೂಟಿ ಪಾರ್ಲರ್, 1977ರ ಸಮಯಕ್ಕೆ ಮನಿಷಾ ಬ್ಯೂಟಿ ಕ್ಲಿನಿಕ್ ಹಾಗೂ 1983ರ ಕಾಲಕ್ಕೆ ಲಿಯಾಂಗ್ ಬ್ಯೂಟಿ ಪಾರ್ಲರ್ ಪ್ರಾರಂಭವಾಗಿತ್ತು. ಈಗ ಸೌಂದರ್ಯ ಕಾಪಾಡಿಕೊಳ್ಳಲು ಸಿನಿಮಾ ನಟಿಯರಿಂದ ಹಿಡಿದು ಆಟೊ ಚಾಲಕರ ಪತ್ನಿಯರವರೆಗೆ ಎಲ್ಲರೂ ಪಾರ್ಲರ್‌ಗಳ ಮೊರೆಹೋಗುತ್ತಾರೆ. ಹೀಗಾಗಿಯೇ ಸೌಂದರ್ಯ ಉದ್ಯಮ ಈಗ ಬೃಹತ್ ಆಗಿ ಬೆಳೆದು ನಿಂತಿದೆ. ದಿನೇ ದಿನೇ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಲೇ ಇವೆ.
ಕರ್ನಾಟಕ
