ಮೆಲ್ಬರ್ನ್: ಕ್ರಿಕೆಟ್ ಪಿಚ್ನಲ್ಲಿ ಮಾತ್ರವಲ್ಲ ಅದರ ಹೊರಗೂ ಭಾರತದ ಬ್ಯಾಟಿಂಗ್ ಸೆನ್ಸೇಷನ್ ವಿರಾಟ್ ಕೊಹ್ಲಿ ಸುದ್ದಿ ಮಾಡುತ್ತಿದ್ದಾರೆ. ವಿಶ್ವಕಪ್ ಪಂದ್ಯದ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಶತಕ ಸಿಡಿಸಿದ ವಿರಾಟ್, ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯವನ್ನು ಎದುರಿಸಲಿದ್ದಾರೆ.
ಭಾರತ ವಿಶ್ವಕಪ್ ಪಂದ್ಯಗಳಲ್ಲಿ ದ. ಆಫ್ರಿಕಾ ವಿರುದ್ಧ ಇಲ್ಲಿಯವರೆಗೆ ಯಾವುದೇ ಪಂದ್ಯಗಳನ್ನು ಗೆದ್ದಿಲ್ಲ. ನಾಳೆ ಭಾರತ ಪಂದ್ಯ ಗೆಲ್ಲುವ ಮೂಲಕ ದಾಖಲೆ ಸೃಷ್ಟಿಸಲಿದೆಯೆ? ಎಂದು ಕುತೂಹಲ ಕ್ರಿಕೆಟ್ ಪ್ರೇಮಿಗಳದ್ದು.
ನಾಳೆಯ ಪಂದ್ಯದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿರುವ ಈ ಹೊತ್ತಲ್ಲಿ ಇದೀಗ ಟೀಂ ಇಂಡಿಯಾದ ಉಪ ನಾಯಕ ವಿರಾಟ್ ಕೊಹ್ಲಿಯ ಹೊಸ ಹೇರ್ ಸ್ಟೈಲ್ ಸುದ್ದಿಯಾಗುತ್ತಿದೆ.
ಪೋರ್ಚುಗೀಸ್ ಪುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೋನಾಲ್ಡೋ ಅವರ ಹೇರ್ ಸ್ಟೈಲ್ನ್ನು ಹೋಲುವ ಹೇರ್ ಸ್ಟೈಲ್ ಮೂಲಕ ವಿರಾಟ್ ಈಗ ಸುದ್ದಿಗೆ ಗ್ರಾಸವಾಗಿದ್ದಾರೆ. ತರಬೇತಿ ಪಂದ್ಯದಲ್ಲಿ ಹೊಸ ಹೇರ್ ಸ್ಟೈಲ್ ನೊಂದಿಗೆ ಕಾಣಿಸಿಕೊಂಡ ವಿರಾಟ್ನ ಹೊಸ ಲುಕ್ ಸಾಮಾಜಿಕ ತಾಣವಾದ ಟ್ವೀಟರ್ನಲ್ಲಿ ಸಂಚಲನ ಸೃಷ್ಟಿಸಿದೆ.
ತಾನು ಕ್ರಿಸ್ಟಿಯಾನೋ ಅವರ ಆರಾಧಕ ಎಂದು ಕೊಹ್ಲಿ ಈ ಹಿಂದೆಯೇ ಹೇಳಿದ್ದರು.